Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

27 August 2014

ಹೈಯರ್ ಸೆಕೆಂಡರಿ ವಿಭಾಗ ಆರಂಭ

   
“ಬದಿಯಡ್ಕ ಗ್ರಾಮ ಪಂಚಾಯತು ಆಡಳಿತದ ಪ್ರದೇಶದಲ್ಲಿ ಕೇವಲ ಒಂದು ಶಾಲೆಯಲ್ಲಿ ಮಾತ್ರ ಇಲ್ಲಿಯ ತನಕ ಹೈಯರ್ ಸೆಕೆಂಡರಿ ವಿಭಾಗವಿದ್ದು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಪ್ರದೇಶಕ್ಕೆ ತೆರಳುವ ಕಷ್ಟ ಅನುಭವಿಸಬೇಕಾಗಿತ್ತು. ಪ್ರಸ್ತುತ ಶತಮಾನೋತ್ಸವ ವರ್ಷ ಆಚರಿಸಿ ಸಹಸ್ರಾರು ಮಂದಿಗೆ ವಿದ್ಯಾದಾನ ನೀಡಿದ ಮಹಾಜನ ಸಂಸ್ಥೆಗೆ ಈ ವರ್ಷ ಸರಕಾರವು ಹೊಸತಾಗಿ ಹೈಯರ್ ಸೆಕೆಂಡರಿ ಆರಂಭಿಸಲು ಅನುಮತಿ ನೀಡಿದ್ದು ಸಂತಸ ತಂದಿದೆ. ಕೇರಳ ರಾಜ್ಯ ಸರಕಾರವು ಈ ರೀತಿಯಲ್ಲಿ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಸುಧಾ ಜಯರಾಮ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯ ಹೈಯರ್ ಸೆಕೆಂಡರಿ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಸೌಮ್ಯಾ ಮಹೇಶ್, ಮಂಜುನಾಥ ಮಾನ್ಯ, ಗಂಗಾಧರ ಗೋಳಿಯಡ್ಕ, ಶೀಲಾ ಕೆ.ಎನ್. ಭಟ್, ಸಮಾಜ ಸೇವಕ ಅಬ್ದುಲ್ಲ ಮುಗು, ನೀರ್ಚಾಲು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಂಕರ ಸ್ವಾಮಿಕೃಪಾ ಶುಭ ಹಾರೈಸಿದರು.
    ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರಭಾರ ಪ್ರಾಂಶುಪಾಲ ಎಚ್.ಸೂರ್ಯನಾರಾಯಣ ವಂದಿಸಿದರು. ಶಾಲಾ ಶಿಕ್ಷಕಿ ಶೈಲಜಾ.ಬಿ ಪ್ರಾರ್ಥಿಸಿದರು. ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ. ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ಹೂ ರಂಗವಲ್ಲಿ 2014

ಓಣಂ ಹಬ್ಬದ ಅಂಗವಾಗಿ ಇತ್ತೀಚೆಗೆ ನಮ್ಮ ಶಾಲೆಯ ಗಣಿತ ಸಂಘದ ಆಶ್ರಯದಲ್ಲಿ ಗಣಿತ ಆಕೃತಿಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ರಚಿಸಿದ ಹೂ ರಂಗವಲ್ಲಿ...

22 August 2014

‘ಬ್ಲೆಂಡ್ - ಬ್ಲಾಗ್ ತಯಾರಿ ಮತ್ತು ತರಬೇತಿ’



              
  “ಜಗತ್ತು ಸಂವಹನ ವ್ಯವಸ್ಥೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಿದೇಶಗಳಲ್ಲಿರುವ ಪ್ರತಿಯೊಬ್ಬರ ನಡುವೆಯೂ ಪ್ರಸ್ತುತ ಕ್ಷಣಮಾತ್ರದಲ್ಲಿ ಆಶಯ ವಿನಿಮಯ ಸಾಧ್ಯವಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಕಂಡು ಬರುತ್ತಿದೆ. ಈ ವಿದ್ಯಮಾನಕ್ಕೆ ಶಿಕ್ಷಣ ಸಂಸ್ಥೆಗಳೂ ಹೊರತಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆಯಲ್ಲಿ ಮುಖ್ಯವಾಹಿನಿಯ ವಿದ್ಯಾಸಂಸ್ಥೆಗಳು ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತಿದೆ. ಈ ಸಂದರ್ಭದಲ್ಲಿ ಶಾಲೆಗಳು ಸಮಾಜದೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಬ್ಲಾಗ್ಗಳು ಸುಲಭ ವ್ಯವಸ್ಥೆಗಳಾಗಿವೆ. ಎಲ್ಲ ಶಾಲೆಗಳು ಬ್ಲಾಗ್ ಮೂಲಕ ಶಾಲೆಯ ಚಟುವಟಿಕೆಗಳನ್ನು ಜಗತ್ತಿನ ಜೊತೆ ಹಂಚಿಕೊಳ್ಳಬಹುದು. ಎಂದು ಡಯಟ್ ಮಾಯಿಪ್ಪಾಡಿಯ ಉಪನ್ಯಾಸಕ ಡಾ|ರಘುರಾಮ ಭಟ್ ಕೋಂಗೋಟು ಅಭಿಪ್ರಾಯಪಟ್ಟರು. ಅವರು ಇಂದು ಕುಂಬಳೆ ಉಪಜಿಲ್ಲಾ ಮಟ್ಟದ ಅಧ್ಯಾಪಕರಿಗಾಗಿ ಡಯಟ್ಸಂಸ್ಥೆಯ ನೇತೃತ್ವದಲ್ಲಿ ನಮ್ಮ ಶಾಲೆಯಲ್ಲಿ ಕೊನೆಯ ಹಂತದ ಬ್ಲೆಂಡ್ - ಬ್ಲಾಗ್ ತಯಾರಿ ಮತ್ತು ತರಬೇತಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
                ಶಾಲಾ ಹಿರಿಯ ಶಿಕ್ಷಕ ಸಿ.ಎಚ್. ವೆಂಕಟರಾಜ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅನಿಲ್ ಕುಮಾರ್ ಮತ್ತು ನಮ್ಮ ಶಾಲೆಯ ರವಿಶಂಕರ ದೊಡ್ಡಮಾಣಿ ಉಪಸ್ಥಿತರಿದ್ದರು. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಂದ್ರನ್ ಸ್ವಾಗತಿಸಿ, ಸೂರಂಬೈಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಇಸ್ಮಾಯಿಲ್ ಕೆ.ಎಂ ವಂದಿಸಿದರು. ಕುಂಟಿಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಹೈಯರ್ ಸೆಕೆಂಡರಿ - ಕನ್ನಡಕ್ಕೆ ಅನುಮತಿ


                ಶತಮಾನೋತ್ಸವ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ ಆಶ್ವಾಸನೆಯಂತೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಗೆ ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಅನುಮತಿ ನೀಡಿ ಕೇರಳ ಸರಕಾರ ಆದೇಶ ಹೊರಡಿಸಿದೆ. ಮೊದಲು ನೀಡಿದ ಆದೇಶದಲ್ಲಿ ಸರಕಾರವು ಭಾಷಾ ಕಲಿಕೆಗಾಗಿ ಮಲಯಾಳವನ್ನು ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳ, ಹಿತೈಷಿಗಳ ಮತ್ತು ಶಾಲಾ ಆಡಳಿತ ಮಂಡಳಿಯ ಬೇಡಿಕೆಯನ್ನು ಗಮನಿಸಿ 21.08.2014 ರಂದು ಕೇರಳ ಸರಕಾರವು ಮಲಯಾಳದ ಬದಲು ಕನ್ನಡ ತರಗತಿಗಳನ್ನು ಆರಂಭಿಸಲು ಸೂಚಿಸಿದೆ. ಆದೇಶದ ಪ್ರಕಾರ ಇಂಗ್ಲಿಷ್, ಕನ್ನಡ ಭಾಷೆಗಳ ಹೊರತಾಗಿ ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) ತರಗತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ 23.08.2014 ರಂದು ಅಪರಾಹ್ನ 4 ಗಂಟೆಯ ಮೊದಲು ಶಾಲಾ ಕಛೇರಿಯಲ್ಲಿ ಅರ್ಜಿಗಳನ್ನು ಸಮರ್ಪಿಸಬಹುದಾಗಿದೆ.
                ಶಾಲೆಯ ಬೇಡಿಕೆಯನ್ನು ಮನ್ನಿಸಿ ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಮತ್ತು ಸೂಕ್ತ ಕೋರ್ಸುಗಳಿಗೆ ಅನುಮತಿ ನೀಡಿ ಸರಕಾರವು ಆದೇಶವನ್ನು ಹೊರಡಿಸಲು ಪ್ರಯತ್ನಿಸಿದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್..ನೆಲ್ಲಿಕುನ್ನು, ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಪಕ್ಷಗಳ ಪ್ರತಿನಿಧಿಗಳು ಮತ್ತು ಎಲ್ಲ ಹಿತೈಷಿಗಳಿಗೆ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

19 August 2014

ಸಂಸ್ಕೃತ ದಿನಾಚರಣೆ - ಬಹುಮಾನಗಳು

ಮೊನ್ನೆ 13.08.2014 ಬುಧವಾರ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದ ಸಂಘಗಾನ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಪ್ರಶ್ನೋತ್ತರಿಯಲ್ಲಿ ತೃತೀಯ ಸ್ಥಾನ ಗಳಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳು ಇವರು. ಶುಭಾಶಯಗಳು...

17 August 2014

ಶ್ರೀಕೃಷ್ಣ ಜಯಂತಿ ಉತ್ಸವ - 2014



            


    “ಕೃಷ್ಣ ಎಂದರೆ ಸೆಳೆತ, ಸಂಭ್ರಮ, ಸಂತೋಷ, ಆತ್ಮೀಯತೆ, ನಮ್ಮವನೆಂಬ ವ್ಯಾಮೋಹ. ಕೃಷ್ಣನ ಹೆಸರು ಅನುಪಮ ಆನಂದದ ಅನುಭವ. ಅವನ ವ್ಯಕ್ತಿತ್ವ ಅನುಪಮ, ಆದರ್ಶ. ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹಾಪುರುಷರ ಜನ್ಮದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದುಕೊಡುತ್ತದೆಎಂದು ನಿವೃತ್ತ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ವಿದ್ಯೋದಯ ಸಭಾಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ಶ್ರೀಕೃಷ್ಣ ಜಯಂತಿಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

                ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ಉಪನಾಯಕಿ ರಮ್ಯಾ.ಕೆ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕಿ ವಾಣಿ.ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

                ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೋಹನ ನೀರ್ಚಾಲು, ಗಣೇಶ್ ನೀರ್ಚಾಲು, ಮನಮೋಹನ ಸೂರಂಬೈಲು ಇವರಿಂದ ಭಕ್ತಿಗಾನ ಸುಧಾಕಾರ್ಯಕ್ರಮ ಜರಗಿತು. ಹಾರ್ಮೋನಿಯಂನಲ್ಲಿ ಶಿವಾನಂದ ಮಾಯಿಪ್ಪಾಡಿ, ತಬ್ಲಾದಲ್ಲಿ ಅಚ್ಯುತಾನಂದ ಕೂಡ್ಲು ಮತ್ತು ಮೌನೇಶ್ ನೀರ್ಚಾಲು ಸಹಕರಿಸಿದರು.

15 August 2014

ಸ್ವಾತಂತ್ರ್ಯ ದಿನಾಚರಣೆ - 2014

ಇಂದು ಸ್ವಾತಂತ್ರ್ಯ ದಿನ. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ಅವರಿಂದ ಧ್ವಜಾರೋಹಣ ಮತ್ತು ಸ್ವಾತಂತ್ರ್ಯ ಮೆರವಣಿಗೆಯ ನೇತೃತ್ವ. ವಿದ್ಯಾರ್ಥಿಗಳ ಭಾಗವಹಿಸುವಿಕೆ ಭವ್ಯ ಭಾರತದ ಕನಸನ್ನು ನನಸು ಮಾಡುವ ಉತ್ತಮ ದೃಷ್ಟಿಕೋನ ಹೊಂದಿತ್ತು. ಎಲ್ಲರಿಗೂ ಶುಭಾಶಯಗಳು...

11 August 2014

ಇನ್‌ಸ್ಪೈರ್ ಅವಾರ್ಡ್ - ಕೇರಳ ರಾಜ್ಯ ಮಟ್ಟಕ್ಕೆ ಆಯ್ಕೆ


ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಚಿನ್ಮಯ ಭಟ್.ಕೆ.ಕೆ 07.08.2014 ಗುರುವಾರ ಕಣ್ಣನ್ನೂರಿನಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಇದೇ ತಿಂಗಳ 14 ರಂದು ಕೊಲ್ಲಂನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಈತ ಕಿದೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ ಮತ್ತು ಪರಮೇಶ್ವರಿ ಇವರ ಪುತ್ರ.

06 August 2014

‘ಸಾಕ್ಷರ 2014’ ಯೋಜನೆಗೆ ಚಾಲನೆ

   
“ಅಕ್ಷರ ಜ್ಞಾನ ಮತ್ತು ಭಾಷಾ ಜ್ಞಾನ ನಿರ್ಣಯ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಭವಿಷ್ಯದ ಕಡೆಗೆ ಉತ್ತಮ ನಡೆಯನ್ನು ಹಾಕಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅಗತ್ಯ. ಆದ್ದರಿಂದ ಸಾಕ್ಷರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಅಭಿಪ್ರಾಯಪಟ್ಟರು. ಅವರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತು ಮತ್ತು ಡಯಟ್ ಕಾಸರಗೋಡು ಕೈಗೊಂಡಿರುವ ‘ಸಾಕ್ಷರ’ ಯೋಜನೆಯನ್ನು ಇಂದು ನಮ್ಮ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
    ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಮೀನಾಕ್ಷಿ ಎಚ್.ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರಾದ ಶಿವಕುಮಾರ ಎಚ್. ಸ್ವಾಗತಿಸಿ ಗೋವಿಂದ ಶರ್ಮ ವಂದಿಸಿದರು. ತಲೆಂಗಳ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.