ಮೌಲ್ಯಮಾಪನ ಮೊನ್ನೆ ಇಪ್ಪತ್ತರಂದು ಕೊನೆಗೊಂಡಿದೆ. ಮುಂದಿನ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಿಸಿಲಿನ ಬೇಗೆಯ ನಡುವೆ, ಕಾಯುವಿಕೆ ವಿದ್ಯಾರ್ಥಿಗಳಿಗೂ, ನಮಗೂ ಅವರ್ಣನೀಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ಮುಂದಿನ ಕಲಿಯುವಿಕೆಯ ದಾರಿಯನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು...
24 April 2012
ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಮುಂದಿನ ವಾರ
ಮೌಲ್ಯಮಾಪನ ಮೊನ್ನೆ ಇಪ್ಪತ್ತರಂದು ಕೊನೆಗೊಂಡಿದೆ. ಮುಂದಿನ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಿಸಿಲಿನ ಬೇಗೆಯ ನಡುವೆ, ಕಾಯುವಿಕೆ ವಿದ್ಯಾರ್ಥಿಗಳಿಗೂ, ನಮಗೂ ಅವರ್ಣನೀಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ಮುಂದಿನ ಕಲಿಯುವಿಕೆಯ ದಾರಿಯನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು...
30 March 2012
ನಾಳೆಯಿಂದ ರಜೆ...
ಬೇಸಗೆ ಪರೀಕ್ಷೆಗಳು ಇಂದು ಕೊನೆಗೊಳ್ಳುತ್ತವೆ. ಇನ್ನು ಅಧ್ಯಾಪಕ ಮಿತ್ರರಿಗೆ ‘ಉತ್ತರಕಾಂಡ’ ಆರಂಭವಾಗುತ್ತದೆ. ನಡುವೆಯೇ ಅಧ್ಯಾಪಕರಿಂದ ‘ಸೋಶಿಯೋ ಇಕೊನೊಮಿಕ್ ಸರ್ವೇ’ ಮತ್ತು ಜಾತಿವಾರು ಜನಗಣತಿ ಆರಂಭವಾಗಲಿದೆ. ಕಾಸರಗೋಡಿನ ಕನ್ನಡ ನೆಲದಲ್ಲಿ ಕನ್ನಡದ ಹೊಸ ಪೀಳಿಗೆಯನ್ನು ಹುಡುಕುತ್ತಾ ಮನೆ - ಮನೆ ಭೇಟಿ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಹೊಸ ಅನುವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅಂತಹ ಒಂದು ಪ್ರಯತ್ನವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ದರ್ಜಿಯನ್ನು ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡ ಸಂದರ್ಭದ ಫೋಟೋ ಒಂದನ್ನು ನಮ್ಮ ಕಡತದಿಂದ ಆರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ.ವಸಂತ ಕಾಲ ನಮ್ಮ ಮುಂದೆ ಇದೆ...
ಎಲ್ಲ ಚಿಂತೆ - ಚಿಂತನೆಗಳ ನಡುವೆ ನಮ್ಮ ಶುಭಾಶಯಗಳನ್ನೂ ಸ್ವೀಕರಿಸಿ...
23 March 2012
ಚಾಂದ್ರಮಾನ ಯುಗಾದಿಯ ಶುಭಾಶಯಗಳು...

ನಮ್ಮ ಶಾಲೆಯ ಪಡು ಸಭಾಂಗಣದಲ್ಲಿ ಇಂದು ಒಂದು ಆತ್ಮೀಯ ಕಾರ್ಯಕ್ರಮ. ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರ ಪ್ರಾಯೋಜಕತ್ವದಲ್ಲಿ ನಂದನ ಸಂವತ್ಸರದ ಆರಂಭದ ಈ ಸುದಿನದಂದು ಗಣಪತಿ ಪೂಜೆ ನಡೆಯಿತು. ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖಾ ಪ್ರಬಂಧಕ ಶಿವಕುಮಾರ್ ದೀಪ ಬೆಳಗಿಸಿ ‘ಮಹಾಜನ’ ಸಂಸ್ಥೆಯ ಶತಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು.
05 March 2012
ರಾಷ್ಟ್ರಪತಿ ಸ್ಕೌಟ್ ಪ್ರಶಸ್ತಿ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ೨೦೧೧-೧೨ನೇ ಸಾಲಿನಲ್ಲಿ ನೀಡುವ ‘ರಾಷ್ಟ್ರಪತಿ ಸ್ಕೌಟ್’ ಪ್ರಶಸ್ತಿಗೆ ನಮ್ಮ ಶಾಲೆಯ ಮೂರು ಮಂದಿ ಸ್ಕೌಟ್ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ಹತ್ತನೇ ತರಗತಿಯ ಗುರುವಿನಯಕೃಷ್ಣ. ಕೆ.ಆರ್ ( ಕಡವ ರಾಮಚಂದ್ರ ಭಟ್ ಮತ್ತು ನಮ್ಮ ಶಾಲಾ ಹಿಂದಿ ಶಿಕ್ಷಕಿ ಸಿ.ಎಚ್.ಸರಸ್ವತಿ ಇವರ ಪುತ್ರ), ನಂದನ.ಎ ( ಆರೋಳಿ ಕೃಷ್ಣ ಭಟ್ ಮತ್ತು ಮೂಕಾಂಬಿಕಾ ಇವರ ಪುತ್ರ) ಹಾಗೂ ಪೂರ್ವ ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ( ನಮ್ಮ ಶಾಲಾ ಶಿಕ್ಷಕ ಎಚ್.ಸೂರ್ಯನಾರಾಯಣ ಮತ್ತು ಶ್ಯಾಮಲಾ ಇವರ ಪುತ್ರ). ಇವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು...
07 February 2012
ಶಾಲಾ ವಾರ್ಷಿಕೋತ್ಸವ
“ಜೀವನದಲ್ಲಿ ನಿಷ್ಟೆಯಿಂದ,ಕಷ್ಟ ಪಟ್ಟು ನಾವು ಆದರ್ಶಪ್ರಾಯರಾಗಿ ಬೆಳೆಯಬೇಕು. ಸತ್ಯವನ್ನೇ ಉಸಿರಾಗಿಸಿಕೊಂಡು ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮರ್ಪಕ ವಿದ್ಯಾಭ್ಯಾಸವನ್ನು ಪಡೆಯುವುದು ವಿದ್ಯಾರ್ಥಿಗಳ ಹಕ್ಕು, ಅದನ್ನು ಒದಗಿಸುವುದು ಹಿರಿಯರ ಕರ್ತವ್ಯ. ಅಂತಹ ಅನುಪಮ ಸೇವೆ ಸಲ್ಲಿಸಿದ ನಾಡಿನ ಈ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಕೇರಳ ಸರಕಾರದ ಶಿಕ್ಷಣ ಇಲಾಖೆಯಿಂದ ಕಳೆದ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ಗೋಪಾಲ ಭಟ್ ಚುಕ್ಕಿನಡ್ಕ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಶುಭಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನ ವಿತರಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಚೇತನ ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಿತು.
06 February 2012
ನಾಳೆ ವಾರ್ಷಿಕೋತ್ಸವ, ಬನ್ನಿ...
ಈ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಔಪಚಾರಿಕ ಕಾರ್ಯಕ್ರಮಗಳನ್ನು ಮಾತ್ರ ಏರ್ಪಡಿಸಲಾಗಿದೆ. ಆದರ್ಶ ಶಿಕ್ಷಕರಿಗಾಗಿ ಕೇರಳ ಸರಕಾರ ಶಿಕ್ಷಣ ಇಲಾಖೆ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕನ್ನಡಿಗ ಶ್ರೀ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನಗಳನ್ನು ವಿತರಿಸಲಿದ್ದಾರೆ. ನಿಮಗೆಲ್ಲರಿಗೂ ಇದು ಆತ್ಮೀಯ ಹೇಳಿಕೆ, ಬನ್ನಿ...
03 February 2012
ಸಾಬೂನು ತಯಾರಿ ಪ್ರಾತ್ಯಕ್ಷಿಕೆ
26 January 2012
ಗಣತಂತ್ರ ದಿನದ ಶುಭಾಶಯಗಳು...
ಭಾರತ ಇಂದು ಗಣತಂತ್ರದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಶಿಕ್ಷಕರಾದ ವಿ.ಮಹಾಲಿಂಗ ಭಟ್, ಡಿ.ರಾಮಕೃಷ್ಣ ಭಟ್ ಮತ್ತು ಅಧ್ಯಾಪಕ ಬಂಧುಗಳು ಉಪಸ್ಥಿತರಿದ್ದರು.ನಿಮಗೆಲ್ಲರಿಗೂ ಗಣತಂತ್ರ ದಿನದ ಶುಭಾಶಯಗಳನ್ನು ಕೋರುತ್ತೇವೆ.
25 January 2012
ಪ್ರಸೀದಾ. ಕೆ ಬಿಡಿಸಿದ ಚಿತ್ರ
21 January 2012
ಗಜಮುಖನಿಗೆ ಪ್ರಣಾಮಗಳು...
19 January 2012
ನಾಲ್ಕರ ಹರೆಯಕ್ಕೆ ನಮ್ಮ ಪಾದಾರ್ಪಣೆ...
ಧನ್ಯವಾದಗಳು. ಶೈಶವ ಹಂತವನ್ನು ದಾಟಿ ಬಾಲ್ಯಕ್ಕೆ ಕಾಲಿಡುತ್ತಿದ್ದೇವೆ. ಈ ಹಂತದಲ್ಲಿ ಮಗು ನಡೆದಾಡಲು ಆರಂಭಿಸುತ್ತದೆ. ೨೦೦೯ ಜನವರಿ ೧೯ ರಂದು ಆರಂಭವಾದ ಈ ‘ಮಹಾಜನ’ ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ೧೫೦ ಮಂದಿ ಫಾಲೋವರುಗಳ ಜೊತೆ ನಡೆಯಲು ನಮಗೆ ಈಗ ಹೆಮ್ಮೆ ಎನಿಸುತ್ತಿದೆ. ಈ ‘ಬ್ಲಾಗ್’ ಶಿಶುವಿಗೆ ನೀವೇ ದಾರಿದೀಪ. ನಮ್ಮನ್ನು ಕೈಹಿಡಿದು ಮುನ್ನಡೆಸಿ...
`ಮಹಾಜನ’ದ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲ್ಲರಿಗೂ ನಮ್ಮ ನಮನಗಳು...
`ಮಹಾಜನ’ದ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲ್ಲರಿಗೂ ನಮ್ಮ ನಮನಗಳು...
06 January 2012
ಕಲೋತ್ಸವ ಪ್ರತಿಭೆಗಳು
ಚೆರ್ಕಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕಲೋತ್ಸವದಲ್ಲಿ ಸಾಧನೆ ಮೆರೆದ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಈ ತಿಂಗಳ ಕೊನೆಗೆ ತ್ರಿಶ್ಶೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.ರಂಜನಾ. ಕೆ - ಜಾನಪದ ನೃತ್ಯ - ಪ್ರಥಮ ಸ್ಥಾನ
( ಈಕೆ ನಮ್ಮ ಶಾಲಾ ಹಿರಿಯ ಶಿಕ್ಷಕ ಕೆ.ಶಂಕರನಾರಾಯಣ ಶರ್ಮ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ)
ಭಾಗ್ಯಶ್ರೀ .ಕೆ.ಎಸ್ - ಕಥಕ್ಕಳಿ ಸಂಗೀತ - ಪ್ರಥಮ ಸ್ಥಾನ
( ಈಕೆ ಮುಳ್ಳೇರಿಯಾದ ಅಧ್ಯಾಪಕ ದಂಪತಿಗಳಾದ ಸತ್ಯಶಂಕರ.ಕೆ ಮತ್ತು ಶ್ರೀಕಲಾ ಇವರ ಪುತ್ರಿ)
ಶಾಂತಿ.ಕೆ - ಸಮಸ್ಯಾಪೂರಣಂ - ಪ್ರಥಮ ಸ್ಥಾನ
( ಈಕೆ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಗಣೇಶ್ ಭಟ್ ಮತ್ತು ಉಮಾಮಹೇಶ್ವರಿ ಇವರ ಪುತ್ರಿ)
ಎಲ್ಲರಿಗೂ ಶುಭಾಶಯಗಳು.
02 January 2012
“ಸಾಹಿತ್ಯ ಸಂಸ್ಕೃತಿಗೆ ಖಂಡಿಗೆ ಶಾಮ ಭಟ್ಟರ ಕೊಡುಗೆ ಅನನ್ಯ''
“ಹಿರಿಯ ಚೇತನ ಖಂಡಿಗೆ ಶಾಮ ಭಟ್ಟರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿದ್ದಾಗ ಇಳಿವಯಸ್ಸಿನಲ್ಲಿಯೂ ಅವರು ಶಾಲೆಗೆ ಸುತ್ತು ಬರುತ್ತಿದ್ದ ದೃಶ್ಯ; ಆಗ ಶಾಲಾ ಪರಿಸರ ಮತ್ತು ಮಕ್ಕಳ ಮೇಲೆ ವ್ಯಕ್ತವಾಗುತ್ತಿದ್ದ ಅವರ ಒಲವು ಈಗ ನೆನಪಾಗಿ ಮಾತ್ರ ಉಳಿದಿದೆ. ಸಂಸ್ಥೆಯಲ್ಲಿ ಕಾರ್ಯಕ್ರಮವೇನಾದರೂ ನಡೆಯುತ್ತಿದ್ದರೆ ಐದು ನಿಮಿಷ ಮೊದಲೇ ಹಾಜರಾಗಿ ವ್ಯವಸ್ಥೆಯ ಬಗ್ಗೆ ವಿಚಾರಿಸುವುದು ಅವರ ರೂಢಿ. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಸಂದೇಹಗಳನ್ನೇನಾದರೂ ಮುಂದಿಟ್ಟರೆ ಮಾಹಿತಿ ಸಹಿತವಾಗಿ ವಿವರಣೆಯನ್ನು ನೀಡುವ ಸೊಗಸು ಅನನ್ಯ, ಅನುಪಮ” ಎಂದು ನಮ್ಮ ಶಾಲಾ ನಿವೃತ್ತ ಶಿಕ್ಷಕ ವಿ. ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ‘ಶ್ರೀ ಖಂಡಿಗೆ ಶಾಮ ಭಟ್ಟರ ಸಂಸ್ಮರಣಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲಕೃಷ್ಣ ಮುಖಾರಿ ಪೆರ್ಣೆ, ಶಾಲಾ ಅಧ್ಯಾಪಕರಾದ ಎಸ್.ವಿ.ಭಟ್, ಕನ್ನೆಪ್ಪಾಡಿ ನಾರಾಯಣ ಭಟ್, ಕೆ.ಶಂಕರನಾರಾಯಣ ಶರ್ಮ, ವಾಣಿ ಪಿ.ಎಸ್, ಚಂದ್ರಶೇಖರ ರೈ ಮತ್ತು ಶಾಲಾ ವಿದ್ಯಾರ್ಥಿಗಳಾದ ವರ್ಷಾ.ಕೆ, ಶಾಂತಿ.ಕೆ, ಅನುಶ್ರೀ.ಕೆ, ಸ್ವಾತಿ ಮಯ್ಯ, ಗುರುವಿನಯಕೃಷ್ಣ.ಕೆ, ಶಶಾಂಕ ಶರ್ಮ.ಎಸ್, ಕೃಷ್ಣಮೂರ್ತಿ ಪಿ.ವಿ, ಕ್ಷಮಾದೇವಿ.ಕೆ, ಶ್ರದ್ಧಾ.ಎಸ್, ಶ್ರೀಶ.ಕೆ, ಮಂದಸ್ಮಿತ.ಎ ಇವರು ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ನುಡಿನಮನಗಳನ್ನು ಸಲ್ಲಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...
30 December 2011
ಡಾ|ಕಲ್ಲಡ್ಕ ಪ್ರಭಾಕರ ಭಟ್ ಭೇಟಿ...
ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಡಾ|ಕಲ್ಲಡ್ಕ ಪ್ರಭಾಕರ ಭಟ್ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಸ್ವಾಗತಿಸಿದರು.
21 December 2011
ಅದಮ್ಯ ಚೈತನ್ಯ - ಶ್ರೀ ಖಂಡಿಗೆ ಶಾಮ ಭಟ್ಟ

ಬರಹ: ವಾಣಿ.ಪಿ.ಎಸ್ ಬೊಳುಂಬು
ನೀರ್ಚಾಲು.
ನೀರ್ಚಾಲು.
ಶ್ರೀ ಖಂಡಿಗೆ ಶಾಮ ಭಟ್ಟರು ಜ್ಞಾನದಲ್ಲಿ, ವಿದ್ವತ್ತಿನಲ್ಲಿ, ಕಾರ್ಯಪ್ರವೃತ್ತಿಯಲ್ಲಿ, ದೈವಭಕ್ತಿಯಲ್ಲಿ ಮತ್ತು ಜೀವನಾನುಭವದಲ್ಲಿ ‘ತುಂಬಿದ ಕೊಡ’. ಶುಭ್ರ ಶ್ವೇತ ವಸ್ತ್ರ ಅವರ ಅಂತರಂಗದ ಬಿಂಬ. ತೆಳ್ಳನೆಯ ಕಾಯ ಕಟ್ಟುನಿಟ್ಟಿನ ಶಿಸ್ತಿನಾಚರಣೆಯ ಪ್ರತೀಕ. ವಾರ್ಧಕ್ಯದ ಕಾರಣದಿಂದ ‘ಪ್ರಾಂಶುಪಾಲ’ರು ಇತ್ತೀಚೆಗೆ ಸಾರ್ವಜನಿಕ ವೇದಿಕೆಗೆ ಬರುವುದನ್ನು ನಿಲ್ಲಿಸಿದ್ದರು. ಆದರೆ ಅವರ ಮರಣದ ವಾರ್ತೆ ಹಬ್ಬಿದೊಡನೆ ನಿವಾಸಕ್ಕೆ ಜನರ ಪ್ರವಾಹವೇ ಹರಿದು ಬಂದಿತ್ತು! ಜನಾನುರಾಗಕ್ಕೆ ಜಾತಿ, ಮತದ ಎಲ್ಲೆಯಿಲ್ಲ, ಬಡವ ಬಲ್ಲಿದ ಭೇದವಿಲ್ಲ, ರಾಜಕೀಯ ಪಕ್ಷಗಳ ಚೌಕಟ್ಟಿಲ್ಲ. ಇದಕ್ಕೆ ಕಾರಣ ಅವರ ವ್ಯಕ್ತಿತ್ವ.
೯೨ ವರ್ಷಗಳ ತುಂಬಿದ ಬಾಳು ಅವರದು. ವಯಸ್ಸಿನ ಕಾರಣದಿಂದ ಶರೀರ ದುರ್ಬಲವಾದರೂ, ಅನಾರೋಗ್ಯ ಅವರನ್ನು ಕಾಡಿರಲಿಲ್ಲ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿದ್ದು ಇಳಿವಯಸ್ಸಿನಲ್ಲಿಯೂ ಅವರು ಶಾಲೆಗೆ ಸುತ್ತು ಬರುತ್ತಿದ್ದ ದೃಶ್ಯ; ಆಗ ಶಾಲಾ ಪರಿಸರ ಮತ್ತು ಮಕ್ಕಳ ಮೇಲೆ ವ್ಯಕ್ತವಾಗುತ್ತಿದ್ದ ಅವರ ಒಲವು ಈಗ ನೆನಪಾಗಿ ಮಾತ್ರ ಉಳಿದಿದೆ. ಸಂಸ್ಥೆಯಲ್ಲಿ ಕಾರ್ಯಕ್ರಮವೇನಾದರೂ ನಡೆಯುತ್ತಿದ್ದರೆ ಐದು ನಿಮಿಷ ಮೊದಲೇ ಹಾಜರಾಗಿ ವ್ಯವಸ್ಥೆಯ ಬಗ್ಗೆ ವಿಚಾರಿಸುವುದು ಅವರ ರೂಢಿ. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಸಂದೇಹಗಳನ್ನೇನಾದರೂ ಮುಂದಿಟ್ಟರೆ ಮಾಹಿತಿ ಸಹಿತವಾಗಿ ವಿವರಣೆಯನ್ನು ನೀಡುವ ಸೊಗಸೇ ಬೇರೆ.
ಅವರ ಆಶ್ರಯದಲ್ಲಿ ಬೆಳೆದವರು ಹಲವರು. ಆದರೆ, ಅವರು ಸ್ವಂತಕ್ಕಾಗಿ ಏನನ್ನೂ ಬೆಳೆಸಿಕೊಳ್ಳಲಿಲ್ಲ. ವೃತ್ತಿ ಜೀವನದಲ್ಲಿದ್ದಾಗ ವೇತನವನ್ನು ತೆಗೆದುಕೊಳ್ಳಲಿಲ್ಲ! ಮತ್ತೆ ನಿವೃತ್ತಿ ವೇತನವನ್ನೂ ಮುಟ್ಟಲಿಲ್ಲ! ಜ್ಞಾನ, ಅನುಭವ ಮತ್ತು ವಿದ್ವತ್ತು ಮಾತ್ರ ಅವರ ಸಂಪಾದನೆ. ‘ಪರೋಪಕಾರಾರ್ಥಮಿದಂ ಶರೀರಂ’ ಎಂಬುದಕ್ಕೆ ಅವರು ಪ್ರತ್ಯಕ್ಷ ಪ್ರಮಾಣ.
‘ವಿನಾದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಇದು ಎಲ್ಲರ ಇಚ್ಛೆ. ಅವರು ತಮ್ಮ ನಿದ್ದೆಯಲ್ಲಿಯೇ ಸಹಜವಾಗಿ ಚಿರನಿದ್ರೆಯತ್ತ ನಡೆದಿದ್ದರು. ದಶಂಬರ ೧೪ರಂದು ಅವರು ದೈವಾಧೀನರಾಗಿ, ಇಂದಿಗೆ ದಿನಗಳು ಕಳೆದವು, ಆದರೆ ನೆನಪುಗಳು ಹಸುರಾಗಿ ಉಳಿದವು. ಇಂತಹ ಸರಳ, ಪ್ರೇಮಮಯಿ, ತ್ಯಾಗಿ, ಜನಪ್ರಿಯ, ಸಜ್ಜನ, ‘ಮಹಾಜನ’ ವ್ಯಕ್ತಿಯ ಚೈತನ್ಯಕ್ಕೆ ಗೌರವಪೂರ್ವಕವಾಗಿ ಭಾವತುಂಬಿದ ನಮನಗಳು.
14 December 2011
ಯುಗಪುರುಷ ಖಂಡಿಗೆ ಶಾಮ ಭಟ್ ಅಸ್ತಂಗತ
‘ಮಹಾಜನ’ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರ ಹೆಸರು ಕನ್ನಡ ನಾಡಿಗೆ ಚಿರಪರಿಚಿತ. ೧೯೧೯ ಸೆ.೨೮ ರಂದು ಖಂಡಿಗೆ ಮಹಾಲಿಂಗ ಭಟ್ಟ ಮತ್ತು ಶಂಕರಿ ದಂಪತಿಯರ ಪುತ್ರನಾಗಿ ಜನಿಸಿದ ಖಂಡಿಗೆ ಶಾಮ ಭಟ್ಟರು ಕನ್ನಡ ನಾಡಿನ ಶಿಕ್ಷಣಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಗಡಿನಾಡು ನೆಲದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಅವರು ಪೆರಡಾಲ ಮಹಾಜನ ಸಂಸ್ಕೃತ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ಪ್ರಾಥಮಿಕ ಕನ್ನಡ ಸಂಸ್ಕೃತ ಶಿಕ್ಷಣ, ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್, ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪಡೆದ ನಂತರ ಖಾಸಗಿಯಾಗಿ ಅಧ್ಯಯನ ಮಾಡಿ ಕನ್ನಡ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದವರು.ಮುಂದೆ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪನ ಸೇವೆಯನ್ನು ಆರಂಭಿಸಿದ ಅವರು ಮದರಾಸು, ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸದಸ್ಯ, ಕೇರಳ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಫಾಕಲ್ಟಿ ಓಫ್ ಓರಿಯೆಂಟಲ್ ಸ್ಟಡೀಸ್ ಸದಸ್ಯ, ಸಂಸ್ಕೃತ ವಿದ್ಯಾಭ್ಯಾಸ ಸಮಿತಿ ಸದಸ್ಯ, ಕನ್ನಡ ಪಠ್ಯಪುಸ್ತಕ ತಯಾರಿಕೆಗಾಗಿ ನೇಮಿಸಿದ ಸಮಿತಿ ಅಧ್ಯಕ್ಷ, ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ, ಪ್ರತಿಷ್ಟಿತ ಕರ್ನಾಟಕ ಬ್ಯಾಂಕ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಕಾಸರಗೋಡು ಕೃಷಿಕರ ಸಹಕಾರೀ ಮಾರಾಟ ಸಂಘದ ಅಧ್ಯಕ್ಷ, ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ವ್ಯವಸ್ಥಾಪಕ ಹೀಗೆ ಹತ್ತು ಹಲವು ವಿಭಾಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿದವರು. ೧೯೪೬ರಿಂದ ೧೯೬೬ ರ ತನಕ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಿದ್ವಜ್ಜನರಿಂದ ಶ್ಲಾಘಿಸಲ್ಪಟ್ಟ ಮಹಾನುಭಾವರು ಖಂಡಿಗೆ ಶಾಮ ಭಟ್ಟರು. ೨೭.೦೮.೧೯೭೩ ರಿಂದ ೨೬.೦೧.೨೦೧೧ ರ ತನಕ ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಖಂಡಿಗೆ ಶಾಮ ಭಟ್ಟರ ಪುತ್ರರು ಡಾ| ಸುಬ್ರಹ್ಮಣ್ಯ ಭಟ್, ಡಾ| ಪತಂಜಲಿ, ರಾಮಚಂದ್ರ ಭಟ್, ಕೃಷ್ಣರಾಜ, ಜಯದೇವ ಖಂಡಿಗೆ, ಡಾ| ಗಣೇಶ ಹಾಗೂ ಪುತ್ರಿಯರಾದ ಶಂಕರಿ, ಸುಧಾ, ಪ್ರಭಾ ಮತ್ತು ಮಾಯಾ. ಗಡಿನಾಡು ನೆಲ ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ, ಸಂಸ್ಕೃತ ವಿದ್ವಾಂಸ, ತೊಂಭತ್ತೆರಡರ ಹರೆಯದ ಜ್ಞಾನವೃದ್ಧ, ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರು, ತಮ್ಮ ಪತ್ನಿ ಇಹಲೋಕವನ್ನು ತ್ಯಜಿಸಿ ವರ್ಷ ಕಳೆಯುವುದರ ಮುನ್ನ ೧೪.೧೨.೨೦೧೧ ಬುಧವಾರ ಮುಂಜಾನೆ ೬.೩೦ಕ್ಕೆ ವಿಧಿವಶರಾಗಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಇಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಶಾಲೆಗೆ ರಜೆ ಸಾರಲಾಯಿತು. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ನೀರ್ಚಾಲು ಪೇಟೆಯ ಸಂಸ್ಥೆಗಳು ಖಂಡಿಗೆ ಶಾಮ ಭಟ್ಟರಿಗೆ ಗೌರವ ಸಲ್ಲಿಸಿದವು.
ಶಾಮ ಭಟ್ಟರ ಆತ್ಮಕ್ಕೆ ನಮ್ಮ ಶ್ರದ್ಧಾಂಜಲಿಗಳು...
13 December 2011
ಮಧ್ಯಾವಧಿ ಪರೀಕ್ಷೆ...
ಸರಕಾರ ಪುನಃ ಕಾಲುವಾರ್ಷಿಕ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳನ್ನು ಚಾಲ್ತಿಗೆ ತಂದಿದೆ. ಈ ಬಾರಿಯ ಪರೀಕ್ಷಗಳು ನಾಳೆ ಆರಂಭವಾಗುತ್ತವೆ. ಎಲ್ಲ ವಿದ್ಯಾರ್ಥಿಗಳಿಗೂ ಶುಭಾಶಯಗಳು.
07 December 2011
ಶಾಸ್ತ್ರ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಐವರು...
ಕಾಞಂಗಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಶಾಸ್ತ್ರ ಮೇಳದ ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಕೇರಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.ಅಭಿಶೇಕ್ - ವಿಜ್ಞಾನ ಮೇಳದ ಇಂಪ್ರೊವೈಸ್ಡ್ ಎಕ್ಸ್ಪೆರಿಮೆಂಟ್ - ದ್ವಿತೀಯ ಸ್ಥಾನ
ಶ್ರೀನಿವಾಸ ಪ್ರಸಾದ್ - ವಿಜ್ಞಾನ ಮೇಳದ ಇಂಪ್ರೊವೈಸ್ಡ್ ಎಕ್ಸ್ಪೆರಿಮೆಂಟ್ - ದ್ವಿತೀಯ ಸ್ಥಾನ
ಅನ್ವಿತ್. ಎಸ್ - ವೃತ್ತಿ ಪರಿಚಯ ಮೇಳದ ಮೆಟಲ್ ಎನ್ಗ್ರೇವಿಂಗ್ - ದ್ವಿತೀಯ ಸ್ಥಾನ
ಮನೋಜ್. ಯು - ವೃತ್ತಿ ಪರಿಚಯ ಮೇಳದ ಕೊಡೆ ತಯಾರಿ - ಪ್ರಥಮ ಸ್ಥಾನ
ನಿಖಿಲ್ ಎಂ.ಡಿ - ವೃತ್ತಿ ಪರಿಚಯ ಮೇಳದ ಇಲೆಕ್ಟ್ರಿಕಲ್ ವಯರಿಂಗ್ - ಪ್ರಥಮ ಸ್ಥಾನ
ಈ ವಿದ್ಯಾರ್ಥಿಗಳು ಮುಂದಿನ ತಿಂಗಳು ಪಾಲಕ್ಕಾಡಿನಲ್ಲಿ ಜರಗಲಿರುವ ಕೇರಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಶುಭಾಶಯಗಳು.
06 December 2011
ಕಾವ್ಯಶ್ರೀ ಮತ್ತು ವಿಶ್ವ ರಾಜ್ಯ ಮಟ್ಟಕ್ಕೆ...
ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ಎ.ಜೆ ಜ್ಯೂನಿಯರ್ ಹುಡುಗಿಯರ ಜ್ಯಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮತ್ತು ಎಂಟನೇ ತರಗತಿ ವಿದ್ಯಾರ್ಥಿನಿ ವಿಶ್ವ ಸಿ.ಎಚ್ ಸಬ್ ಜೂನಿಯರ್ ಹುಡುಗಿಯರ ೧೦೦ ಮೀ. ಓಟ, ೨೦೦ ಮೀ. ಓಟ ಹಾಗೂ ಲಾಂಗ್ ಜಂಪ್ ವಿಭಾಗದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರು ಇತ್ತೀಚೆಗೆ ನೀಲೇಶ್ವರದಲ್ಲಿ ಜರಗಿದ ಕಂದಾಯ ಜಿಲ್ಲಾ ಶಾಲಾ ಕ್ರೀಡಾಮೇಳದಲ್ಲಿ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.
29 November 2011
ಚಿತ್ರ - ರಮೇಶ ನಾಯಕ್
Subscribe to:
Posts (Atom)



