Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 June 2012

ಮಾದಕ ದ್ರವ್ಯ ವಿರುದ್ಧ ದಿನ

ಇಂದು 26.06.2012 ಮಂಗಳವಾರ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನ. ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಗೃತಿಯನ್ನು ಬೆಳೆಸುವ ದೃಷ್ಟಿಯಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ನೀರ್ಚಾಲು ಪೇಟೆಯಲ್ಲಿ ಮೆರವಣಿಗೆ ನಡೆಸಿದರು.

ವಾಚನ ಸಪ್ತಾಹ

ಓದುವ ಅಭ್ಯಾಸವನ್ನು ಬೆಳಿಸಿಕೊಳ್ಳುವ ದೃಷ್ಟಿಯಿಂದ ನಮ್ಮ ಶಾಲಾ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ತಾಳೆಗರಿ ಸಹಿತ ವಿವಿಧ ಗ್ರಂಥಗಳ ಪ್ರದರ್ಶನ ಕಳೆದ ವಾರ ಜರಗಿತು.

11 June 2012

‘ಪ್ರಾಂಶುಪಾಲ’ರ ತೈಲ ವರ್ಣ ಚಿತ್ರ

ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾಗಿದ್ದು, ‘ಪ್ರಾಂಶುಪಾಲರೆಂದೇ ಖ್ಯಾತರಾಗಿದ್ದ ಶ್ರೀ ಖಂಡಿಗೆ ಶಾಮ ಭಟ್ಟರ ಚಿರಸ್ಮರಣೆಗಾಗಿ ಬೋವಿಕ್ಕಾನ ಪ್ರೌಢಶಾಲೆಯ ಖ್ಯಾತ ಚಿತ್ರ ಕಲಾವಿದ ಶ್ರೀ ರವಿ ಪಿಲಿಕ್ಕೋಡ್ ತಾವು ಚಿತ್ರಿಸುತ್ತಿರುವ ತೈಲವರ್ಣ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಈ ಚಿತ್ರವನ್ನು ಶಾಲಾ ಶಿಕ್ಷಕ ವರ್ಗವು ಶಾಲೆಗೆ ಸಮರ್ಪಿಸಲಿದೆ.

05 June 2012

ವಿಶ್ವ ಪರಿಸರ ದಿನ

ಇಂದು ವಿಶ್ವ ಪರಿಸರ ದಿನ. ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರಾಮುಖ್ಯತೆಯನ್ನು ನೆನಪಿಸಿಕೊಡುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಅರಣ್ಯ ಬೆಳೆಸುವ ‘ನನ್ನ ಮರ’ ಯೋಜನೆಗೆ ಪೂರಕವಾದ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ವಿದ್ಯಾರ್ಥಿಗಳಿಗೆ ವಿತರಿಸಿದರು.

04 June 2012

ಶಾಲಾ ಪ್ರವೇಶೋತ್ಸವ 2012

ಬೇಸಿಗೆ ರಜಾ ಕಾಲ ಕಳೆದಿದೆ, ಮುಂಗಾರು ಕೇರಳಕ್ಕೆ ಕಾಲಿಡುವ ಹೊತ್ತಿನಲ್ಲೇ ಹೊಸ ಅಧ್ಯಯನ ವರ್ಷ ಆರಂಭವಾಗಿದೆ. ಹೊಸ ಹೊಸ ಕನಸನ್ನು ಕಟ್ಟಿಕೊಂಡು ಶಾಲೆಯ ಕಡೆಗೆ ಬಂದ ಚಿಣ್ಣರನ್ನು ಸ್ವಾಗತಿಸುವ ಕಾರ್ಯವೂ ಇಂದು ನಡೆದಿದೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಸಿಹಿತಿಂಡಿ ವಿತರಿಸಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಆದರದಿಂದ ಬರಮಾಡಿಕೊಂಡಿದ್ದಾರೆ. ಈಗ ವಿದ್ಯಾರ್ಥಿಗಳ ಕನಸುಗಳು ಗರಿಗೆದರುತ್ತಿವೆ...

02 May 2012

ಎಲ್ಲ ವಿಷಯಗಳಲ್ಲೂ ಎ+ ಪಡೆದವರು

ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂಸ್ಕೃತ, ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಮಾಹಿತಿ ವಿನಿಮಯ ತಂತ್ರಜ್ಞಾನ ಪರೀಕ್ಷೆಗಳಲ್ಲಿ ಎ+ ಗ್ರೇಡ್ ಪಡೆದ ವಿದ್ಯಾರ್ಥಿಗಳು ಇವರು, ಅವರ ಮುಂದಿನ ಹಾದಿಗೆ ಶುಭಾಶಯಗಳು...

27 April 2012

ಎಸ್ ಎಸ್ ಎಲ್ ಸಿ ಫಲಿತಾಂಶ ಬಂತು...

98% ಫಲಿತಾಂಶ ದಾಖಲಿಸಿದ್ದೇವೆ. ಈ ಬಾರಿಯ ಕೇರಳ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆ ಬರೆದ ೧೫೮ ಮಂದಿಯಲ್ಲಿ ೧೫೫ ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಲು ಸಂತೋಷಪಡುತ್ತಿದ್ದೇವೆ. ಕೇರಳ ರಾಜ್ಯ ಮಟ್ಟದ ಸರಾಸರಿ 93% ಆಗಿದ್ದು, ಅದಕ್ಕಿಂತ ಹೆಚ್ಚು ಫಲಿತಾಂಶ ನಮ್ಮ ಶಾಲೆಗೆ ಬಂದಿರುವುದು ಸಂತಸದ ಇನ್ನೊಂದು ವಿಷಯ. ಶಾಂತಿ.ಕೆ, ರಂಜನಾ.ಕೆ, ರಂಜಿತಾ.ಬಿ, ಗುರುವಿನಯ ಕೃಷ್ಣ ಕೆ.ಆರ್, ನಂದನ.ಎ, ಶಶಾಂಕ ಶರ್ಮ. ಎಸ್ ಈ ಆರು ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ+ ಗ್ರೇಡ್ ಪಡೆದು ಗೆಲುವಿನ ಕಿರೀಟಕ್ಕೆ ಗರಿಯನ್ನು ಸೇರಿಸಿದ್ದಾರೆ. ಶುಭಾಶಯಗಳು...

24 April 2012

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಮುಂದಿನ ವಾರ


ಮೌಲ್ಯಮಾಪನ ಮೊನ್ನೆ ಇಪ್ಪತ್ತರಂದು ಕೊನೆಗೊಂಡಿದೆ. ಮುಂದಿನ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಿಸಿಲಿನ ಬೇಗೆಯ ನಡುವೆ, ಕಾಯುವಿಕೆ ವಿದ್ಯಾರ್ಥಿಗಳಿಗೂ, ನಮಗೂ ಅವರ್ಣನೀಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ಮುಂದಿನ ಕಲಿಯುವಿಕೆಯ ದಾರಿಯನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು...

30 March 2012

ನಾಳೆಯಿಂದ ರಜೆ...

ಬೇಸಗೆ ಪರೀಕ್ಷೆಗಳು ಇಂದು ಕೊನೆಗೊಳ್ಳುತ್ತವೆ. ಇನ್ನು ಅಧ್ಯಾಪಕ ಮಿತ್ರರಿಗೆ ‘ಉತ್ತರಕಾಂಡ’ ಆರಂಭವಾಗುತ್ತದೆ. ನಡುವೆಯೇ ಅಧ್ಯಾಪಕರಿಂದ ‘ಸೋಶಿಯೋ ಇಕೊನೊಮಿಕ್ ಸರ್ವೇ’ ಮತ್ತು ಜಾತಿವಾರು ಜನಗಣತಿ ಆರಂಭವಾಗಲಿದೆ. ಕಾಸರಗೋಡಿನ ಕನ್ನಡ ನೆಲದಲ್ಲಿ ಕನ್ನಡದ ಹೊಸ ಪೀಳಿಗೆಯನ್ನು ಹುಡುಕುತ್ತಾ ಮನೆ - ಮನೆ ಭೇಟಿ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಹೊಸ ಅನುವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅಂತಹ ಒಂದು ಪ್ರಯತ್ನವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ದರ್ಜಿಯನ್ನು ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡ ಸಂದರ್ಭದ ಫೋಟೋ ಒಂದನ್ನು ನಮ್ಮ ಕಡತದಿಂದ ಆರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ವಸಂತ ಕಾಲ ನಮ್ಮ ಮುಂದೆ ಇದೆ...
ಎಲ್ಲ ಚಿಂತೆ - ಚಿಂತನೆಗಳ ನಡುವೆ ನಮ್ಮ ಶುಭಾಶಯಗಳನ್ನೂ ಸ್ವೀಕರಿಸಿ...

23 March 2012

ಚಾಂದ್ರಮಾನ ಯುಗಾದಿಯ ಶುಭಾಶಯಗಳು...


ನಮ್ಮ ಶಾಲೆಯ ಪಡು ಸಭಾಂಗಣದಲ್ಲಿ ಇಂದು ಒಂದು ಆತ್ಮೀಯ ಕಾರ್ಯಕ್ರಮ. ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರ ಪ್ರಾಯೋಜಕತ್ವದಲ್ಲಿ ನಂದನ ಸಂವತ್ಸರದ ಆರಂಭದ ಈ ಸುದಿನದಂದು ಗಣಪತಿ ಪೂಜೆ ನಡೆಯಿತು. ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖಾ ಪ್ರಬಂಧಕ ಶಿವಕುಮಾರ್ ದೀಪ ಬೆಳಗಿಸಿ ‘ಮಹಾಜನ’ ಸಂಸ್ಥೆಯ ಶತಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು.

05 March 2012

ರಾಷ್ಟ್ರಪತಿ ಸ್ಕೌಟ್ ಪ್ರಶಸ್ತಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ೨೦೧೧-೧೨ನೇ ಸಾಲಿನಲ್ಲಿ ನೀಡುವ ‘ರಾಷ್ಟ್ರಪತಿ ಸ್ಕೌಟ್’ ಪ್ರಶಸ್ತಿಗೆ ನಮ್ಮ ಶಾಲೆಯ ಮೂರು ಮಂದಿ ಸ್ಕೌಟ್ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ಹತ್ತನೇ ತರಗತಿಯ ಗುರುವಿನಯಕೃಷ್ಣ. ಕೆ.ಆರ್ ( ಕಡವ ರಾಮಚಂದ್ರ ಭಟ್ ಮತ್ತು ನಮ್ಮ ಶಾಲಾ ಹಿಂದಿ ಶಿಕ್ಷಕಿ ಸಿ.ಎಚ್.ಸರಸ್ವತಿ ಇವರ ಪುತ್ರ), ನಂದನ.ಎ ( ಆರೋಳಿ ಕೃಷ್ಣ ಭಟ್ ಮತ್ತು ಮೂಕಾಂಬಿಕಾ ಇವರ ಪುತ್ರ) ಹಾಗೂ ಪೂರ್ವ ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ( ನಮ್ಮ ಶಾಲಾ ಶಿಕ್ಷಕ ಎಚ್.ಸೂರ್ಯನಾರಾಯಣ ಮತ್ತು ಶ್ಯಾಮಲಾ ಇವರ ಪುತ್ರ). ಇವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು...

07 February 2012

ಶಾಲಾ ವಾರ್ಷಿಕೋತ್ಸವ

“ಜೀವನದಲ್ಲಿ ನಿಷ್ಟೆಯಿಂದ,ಕಷ್ಟ ಪಟ್ಟು ನಾವು ಆದರ್ಶಪ್ರಾಯರಾಗಿ ಬೆಳೆಯಬೇಕು. ಸತ್ಯವನ್ನೇ ಉಸಿರಾಗಿಸಿಕೊಂಡು ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮರ್ಪಕ ವಿದ್ಯಾಭ್ಯಾಸವನ್ನು ಪಡೆಯುವುದು ವಿದ್ಯಾರ್ಥಿಗಳ ಹಕ್ಕು, ಅದನ್ನು ಒದಗಿಸುವುದು ಹಿರಿಯರ ಕರ್ತವ್ಯ. ಅಂತಹ ಅನುಪಮ ಸೇವೆ ಸಲ್ಲಿಸಿದ ನಾಡಿನ ಈ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಕೇರಳ ಸರಕಾರದ ಶಿಕ್ಷಣ ಇಲಾಖೆಯಿಂದ ಕಳೆದ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ಗೋಪಾಲ ಭಟ್ ಚುಕ್ಕಿನಡ್ಕ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಶುಭಹಾರೈಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನ ವಿತರಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಚೇತನ ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಿತು.

06 February 2012

ನಾಳೆ ವಾರ್ಷಿಕೋತ್ಸವ, ಬನ್ನಿ...

ಈ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಔಪಚಾರಿಕ ಕಾರ್ಯಕ್ರಮಗಳನ್ನು ಮಾತ್ರ ಏರ್ಪಡಿಸಲಾಗಿದೆ. ಆದರ್ಶ ಶಿಕ್ಷಕರಿಗಾಗಿ ಕೇರಳ ಸರಕಾರ ಶಿಕ್ಷಣ ಇಲಾಖೆ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕನ್ನಡಿಗ ಶ್ರೀ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನಗಳನ್ನು ವಿತರಿಸಲಿದ್ದಾರೆ. ನಿಮಗೆಲ್ಲರಿಗೂ ಇದು ಆತ್ಮೀಯ ಹೇಳಿಕೆ, ಬನ್ನಿ...

03 February 2012

ಸಾಬೂನು ತಯಾರಿ ಪ್ರಾತ್ಯಕ್ಷಿಕೆ

ನಿನ್ನೆ ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಶರತ್ ರಾಜ್ ಮತ್ತು ಆತನ ತಾಯಿ ಶ್ರೀಮತಿ ರತ್ನಾವತಿ ಬೇಳ ನಮ್ಮ ಶಾಲಾ ವಿದ್ಯಾರ್ಥಿಗಳಿಗಾಗಿ ಸಾಬೂನು ತಯಾರಿಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

26 January 2012

ಗಣತಂತ್ರ ದಿನದ ಶುಭಾಶಯಗಳು...

ಭಾರತ ಇಂದು ಗಣತಂತ್ರದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಶಿಕ್ಷಕರಾದ ವಿ.ಮಹಾಲಿಂಗ ಭಟ್, ಡಿ.ರಾಮಕೃಷ್ಣ ಭಟ್ ಮತ್ತು ಅಧ್ಯಾಪಕ ಬಂಧುಗಳು ಉಪಸ್ಥಿತರಿದ್ದರು.
ನಿಮಗೆಲ್ಲರಿಗೂ ಗಣತಂತ್ರ ದಿನದ ಶುಭಾಶಯಗಳನ್ನು ಕೋರುತ್ತೇವೆ.

25 January 2012

ಪ್ರಸೀದಾ. ಕೆ ಬಿಡಿಸಿದ ಚಿತ್ರ

ಒಂಭತ್ತನೇ ತರಗತಿಯ ಹುಡುಗಿ ಪ್ರಸೀದಾ.ಕೆ ನೀರ್ಚಾಲು ಸನಿಹದ ಕುಮಾರಮಂಗಲದ ಹುಡುಗಿ. ಸಹಜವಾಗಿ ಕುಮಾರಮಂಗಲದಲ್ಲೂ ಪರಿಸರದಲ್ಲೂ ಜರಗಿದ ಯಕ್ಷಗಾನ ಬಯಲಾಟಗಳು ಅವಳ ಮೇಲೆ ಪ್ರಭಾವ ಬೀರಿವೆ. ಆಂಟ್ಸ್ ಆನಿಮೇಷನ್ ತರಬೇತಿಯನ್ನೂ ಪಡೆದಿರುವ ಇವಳು ತುಂಬ ಆಕರ್ಷಕವಾದ ಆನಿಮೇಷನ್ ವೀಡಿಯೋಗಳನ್ನೂ ಸೃಷ್ಟಿಸಿದ್ದಾಳೆ.

21 January 2012

ಗಜಮುಖನಿಗೆ ಪ್ರಣಾಮಗಳು...

ಹಿಂದಿನ ಮೂರು ವರ್ಷಗಳಲ್ಲಿ ನಮ್ಮನ್ನು ಮುನ್ನಡೆಸಿದ ಗಣಪನಿಗೆ ನಾವು ಶರಣು. ಮುಂದೆಯೂ ನಮ್ಮ ಉತ್ತರೋತ್ತರ ಅಭಿವೃದ್ಧಿಗೆ ಕಾರಣೀಭೂತರಾಗಿ ನಮ್ಮನ್ನು ಮುನ್ನಡೆಸಬೇಕೆಂದು ಮತ್ತೆ ಪ್ರಾರ್ಥನೆ. ನಾಲ್ಕರ ಹರೆಯಕ್ಕೆ ಕಾಲಿಡುವ ಈ ವೇಳೆಯಲ್ಲಿ ನಿಮ್ಮ ಮುಂದೆ ಎಂಟನೇ ತರಗತಿಯ ರಮೇಶ ನಾಯಕ್ ಬಿಡಿಸಿದ ಚಿತ್ರ.

19 January 2012

ನಾಲ್ಕರ ಹರೆಯಕ್ಕೆ ನಮ್ಮ ಪಾದಾರ್ಪಣೆ...

ಧನ್ಯವಾದಗಳು. ಶೈಶವ ಹಂತವನ್ನು ದಾಟಿ ಬಾಲ್ಯಕ್ಕೆ ಕಾಲಿಡುತ್ತಿದ್ದೇವೆ. ಈ ಹಂತದಲ್ಲಿ ಮಗು ನಡೆದಾಡಲು ಆರಂಭಿಸುತ್ತದೆ. ೨೦೦೯ ಜನವರಿ ೧೯ ರಂದು ಆರಂಭವಾದ ಈ ‘ಮಹಾಜನ’ ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ೧೫೦ ಮಂದಿ ಫಾಲೋವರುಗಳ ಜೊತೆ ನಡೆಯಲು ನಮಗೆ ಈಗ ಹೆಮ್ಮೆ ಎನಿಸುತ್ತಿದೆ. ಈ ‘ಬ್ಲಾಗ್’ ಶಿಶುವಿಗೆ ನೀವೇ ದಾರಿದೀಪ. ನಮ್ಮನ್ನು ಕೈಹಿಡಿದು ಮುನ್ನಡೆಸಿ...

`ಮಹಾಜನ’ದ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲ್ಲರಿಗೂ ನಮ್ಮ ನಮನಗಳು...

06 January 2012

ಕಲೋತ್ಸವ ಪ್ರತಿಭೆಗಳು

ಚೆರ್ಕಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕಲೋತ್ಸವದಲ್ಲಿ ಸಾಧನೆ ಮೆರೆದ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಈ ತಿಂಗಳ ಕೊನೆಗೆ ತ್ರಿಶ್ಶೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ರಂಜನಾ. ಕೆ - ಜಾನಪದ ನೃತ್ಯ - ಪ್ರಥಮ ಸ್ಥಾನ
( ಈಕೆ ನಮ್ಮ ಶಾಲಾ ಹಿರಿಯ ಶಿಕ್ಷಕ ಕೆ.ಶಂಕರನಾರಾಯಣ ಶರ್ಮ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ)

ಭಾಗ್ಯಶ್ರೀ .ಕೆ.ಎಸ್ - ಕಥಕ್ಕಳಿ ಸಂಗೀತ -
ಪ್ರಥಮ ಸ್ಥಾನ
( ಈಕೆ ಮುಳ್ಳೇರಿಯಾದ ಅಧ್ಯಾಪಕ ದಂಪತಿಗಳಾದ ಸತ್ಯಶಂಕರ.ಕೆ ಮತ್ತು ಶ್ರೀಕಲಾ ಇವರ ಪುತ್ರಿ)

ಶಾಂತಿ.ಕೆ - ಸಮಸ್ಯಾಪೂರಣಂ - ಪ್ರಥಮ ಸ್ಥಾನ
( ಈಕೆ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಗಣೇಶ್ ಭಟ್ ಮತ್ತು ಉಮಾಮಹೇಶ್ವರಿ ಇವರ ಪುತ್ರಿ)

ಎಲ್ಲರಿಗೂ ಶುಭಾಶಯಗಳು.

02 January 2012

“ಸಾಹಿತ್ಯ ಸಂಸ್ಕೃತಿಗೆ ಖಂಡಿಗೆ ಶಾಮ ಭಟ್ಟರ ಕೊಡುಗೆ ಅನನ್ಯ''

“ಹಿರಿಯ ಚೇತನ ಖಂಡಿಗೆ ಶಾಮ ಭಟ್ಟರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿದ್ದಾಗ ಇಳಿವಯಸ್ಸಿನಲ್ಲಿಯೂ ಅವರು ಶಾಲೆಗೆ ಸುತ್ತು ಬರುತ್ತಿದ್ದ ದೃಶ್ಯ; ಆಗ ಶಾಲಾ ಪರಿಸರ ಮತ್ತು ಮಕ್ಕಳ ಮೇಲೆ ವ್ಯಕ್ತವಾಗುತ್ತಿದ್ದ ಅವರ ಒಲವು ಈಗ ನೆನಪಾಗಿ ಮಾತ್ರ ಉಳಿದಿದೆ. ಸಂಸ್ಥೆಯಲ್ಲಿ ಕಾರ್ಯಕ್ರಮವೇನಾದರೂ ನಡೆಯುತ್ತಿದ್ದರೆ ಐದು ನಿಮಿಷ ಮೊದಲೇ ಹಾಜರಾಗಿ ವ್ಯವಸ್ಥೆಯ ಬಗ್ಗೆ ವಿಚಾರಿಸುವುದು ಅವರ ರೂಢಿ. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಸಂದೇಹಗಳನ್ನೇನಾದರೂ ಮುಂದಿಟ್ಟರೆ ಮಾಹಿತಿ ಸಹಿತವಾಗಿ ವಿವರಣೆಯನ್ನು ನೀಡುವ ಸೊಗಸು ಅನನ್ಯ, ಅನುಪಮ” ಎಂದು ನಮ್ಮ ಶಾಲಾ ನಿವೃತ್ತ ಶಿಕ್ಷಕ ವಿ. ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ‘ಶ್ರೀ ಖಂಡಿಗೆ ಶಾಮ ಭಟ್ಟರ ಸಂಸ್ಮರಣಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲಕೃಷ್ಣ ಮುಖಾರಿ ಪೆರ್ಣೆ, ಶಾಲಾ ಅಧ್ಯಾಪಕರಾದ ಎಸ್.ವಿ.ಭಟ್, ಕನ್ನೆಪ್ಪಾಡಿ ನಾರಾಯಣ ಭಟ್, ಕೆ.ಶಂಕರನಾರಾಯಣ ಶರ್ಮ, ವಾಣಿ ಪಿ.ಎಸ್, ಚಂದ್ರಶೇಖರ ರೈ ಮತ್ತು ಶಾಲಾ ವಿದ್ಯಾರ್ಥಿಗಳಾದ ವರ್ಷಾ.ಕೆ, ಶಾಂತಿ.ಕೆ, ಅನುಶ್ರೀ.ಕೆ, ಸ್ವಾತಿ ಮಯ್ಯ, ಗುರುವಿನಯಕೃಷ್ಣ.ಕೆ, ಶಶಾಂಕ ಶರ್ಮ.ಎಸ್, ಕೃಷ್ಣಮೂರ್ತಿ ಪಿ.ವಿ, ಕ್ಷಮಾದೇವಿ.ಕೆ, ಶ್ರದ್ಧಾ.ಎಸ್, ಶ್ರೀಶ.ಕೆ, ಮಂದಸ್ಮಿತ.ಎ ಇವರು ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ನುಡಿನಮನಗಳನ್ನು ಸಲ್ಲಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...