30 August 2012
18 August 2012
15 August 2012
ಸ್ವಾತಂತ್ರ್ಯ ಯಾತ್ರೆ

“ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಿರಿಯ ಶಿಕ್ಷಕರಾದ ಎಸ್.ವಿ.ಭಟ್, ಕೆ.ನಾರಾಯಣ ಭಟ್ ಮತ್ತು ಎಂ.ಸೂರ್ಯನಾರಾಯಣ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.
13 August 2012
‘ಹೂ’ಗಳನ್ನು ಉಪಯೋಗಿಸಿ ಭೂಪಟ
ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ನಮ್ಮ ಶಾಲಾ ಸಮಾಜ ವಿಜ್ಞಾನ ಕ್ಲಬ್ ಆಶ್ರಯದಲ್ಲಿ 10.08.2012 ಶುಕ್ರವಾರ ನಡೆದ ಹೂರಂಗವಲ್ಲಿಯಲ್ಲಿ ಭಾರತ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ಮತ್ತು ಕೇರಳ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ತಂಡ.10 August 2012
“ಶ್ರೀಕೃಷ್ಣ ಆತ್ಮೀಯ ದೇವರು": ಕೆ.ಶಿವಕುಮಾರ್
“ಶ್ರೀಕೃಷ್ಣನ ಬಾಲಲೀಲೆಗಳು ಎಂದೆಂದಿಗೂ ಚೇತೋಹಾರಿ. ಧರ್ಮ ಸಂಸ್ಥಾಪನೆಗಾಗಿ ಅವನು ಕೈಗೊಂಡ ಕಾರ್ಯಗಳ ಸಮಾಜಕ್ಕೆ ಆದರ್ಶ. ಅವನ ಪಥ ಅನುಕರಣೀಯ, ಆದರಿಂದಲೇ ಆತ ಎಲ್ಲರಿಗೂ ಆತ್ಮೀಯ ದೇವರು ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ಅವರು ೦೯.೦೮.೨೦೧೨ ಗುರುವಾರ ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಸುಶೀಲಾ.ಎಸ್ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳಾದ ಹೇಮಶ್ರೀ ಕಾಕುಂಜೆ ಮತ್ತು ಶ್ರೀವಾಣಿ ಕಾಕುಂಜೆ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ಜರಗಿತು. ವಯಲಿನ್‌ನಲ್ಲಿ ಪ್ರಭಾಕರ ಕುಂಜಾರು ಮತ್ತು ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೇಕೆರೆ ಸಹಕರಿಸಿದರು.
11 July 2012
29 June 2012
ದಿ|ಖಂಡಿಗೆ ಶಾಮ ಭಟ್ಟರ ತೈಲ ಚಿತ್ರ ಅನಾವರಣ
“ದುಡ್ಡು ಬಟ್ಟೆಯಿಂದ ದೊಡ್ಡವರಾದವರಿಲ್ಲ, ದೊಡ್ಡ ಮನಸ್ಸಿನಿಂದ ದೊಡ್ಡವರಾದವರೇ ಎಲ್ಲ. ಲೋಕಕ್ಕೆ ಆದರ್ಶರೆನಿಸಿಕೊಂಡವರೆಲ್ಲ ಈ ತತ್ವವನ್ನು ಅನುಸರಿಸಿಕೊಂಡವರು. ‘ಮಹಾಜನ’ ಎಂಬ ಪದಕ್ಕೆ ಅನ್ವರ್ಥವಾಗಿ ಬೆಳೆದ ಖಂಡಿಗೆ ಶಾಮ ಭಟ್ಟರ ರೂಪವನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಈ ತೈಲ ವರ್ಣ ಚಿತ್ರ ಸಹಕಾರಿ. ಆ ಚಿತ್ರವೇ ಮುಂದಿನ ಪೀಳಿಗೆಗೆ ದಾರಿ ದೀಪವಾಗಬಲ್ಲದು" ಎಂದು ನಿವೃತ್ತ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ದಿ| ಖಂಡಿಗೆ ಶಾಮ ಭಟ್ಟರ ತೈಲ ವರ್ಣ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಿದ್ಯಾರ್ಥಿಗಳಾದ ಬಳ್ಳಪದವು ಶಂಕರನಾರಾಯಣ ಭಟ್, ಕುಂಜಾರು ಸುಬ್ರಾಯ ಭಟ್, ಚಿತ್ರ ಕಲಾವಿದ ರವಿ ಪಿಲಿಕ್ಕೋಡ್, ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಅರ್ಪಿಸಿದರು.

ಚಿತ್ರ ಕಲಾವಿದ ರವಿ ಪಿಲಿಕ್ಕೋಡ್ ಅವರನ್ನು ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ ಶಾಲು ಹೊದೆಸಿ ಫಲ ಸಮರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಗೋವಿಂದ ಶರ್ಮ ಕೋರಿಕ್ಕಾರು ಕಾರ್ಯಕ್ರಮ ನಿರೂಪಿಸಿದರು.
26 June 2012
11 June 2012
05 June 2012
04 June 2012
ಶಾಲಾ ಪ್ರವೇಶೋತ್ಸವ 2012
ಬೇಸಿಗೆ ರಜಾ ಕಾಲ ಕಳೆದಿದೆ, ಮುಂಗಾರು ಕೇರಳಕ್ಕೆ ಕಾಲಿಡುವ ಹೊತ್ತಿನಲ್ಲೇ ಹೊಸ ಅಧ್ಯಯನ ವರ್ಷ ಆರಂಭವಾಗಿದೆ. ಹೊಸ ಹೊಸ ಕನಸನ್ನು ಕಟ್ಟಿಕೊಂಡು ಶಾಲೆಯ ಕಡೆಗೆ ಬಂದ ಚಿಣ್ಣರನ್ನು ಸ್ವಾಗತಿಸುವ ಕಾರ್ಯವೂ ಇಂದು ನಡೆದಿದೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಸಿಹಿತಿಂಡಿ ವಿತರಿಸಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಆದರದಿಂದ ಬರಮಾಡಿಕೊಂಡಿದ್ದಾರೆ. ಈಗ ವಿದ್ಯಾರ್ಥಿಗಳ ಕನಸುಗಳು ಗರಿಗೆದರುತ್ತಿವೆ...
02 May 2012
27 April 2012
ಎಸ್ ಎಸ್ ಎಲ್ ಸಿ ಫಲಿತಾಂಶ ಬಂತು...
98% ಫಲಿತಾಂಶ ದಾಖಲಿಸಿದ್ದೇವೆ. ಈ ಬಾರಿಯ ಕೇರಳ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆ ಬರೆದ ೧೫೮ ಮಂದಿಯಲ್ಲಿ ೧೫೫ ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಲು ಸಂತೋಷಪಡುತ್ತಿದ್ದೇವೆ. ಕೇರಳ ರಾಜ್ಯ ಮಟ್ಟದ ಸರಾಸರಿ 93% ಆಗಿದ್ದು, ಅದಕ್ಕಿಂತ ಹೆಚ್ಚು ಫಲಿತಾಂಶ ನಮ್ಮ ಶಾಲೆಗೆ ಬಂದಿರುವುದು ಸಂತಸದ ಇನ್ನೊಂದು ವಿಷಯ. ಶಾಂತಿ.ಕೆ, ರಂಜನಾ.ಕೆ, ರಂಜಿತಾ.ಬಿ, ಗುರುವಿನಯ ಕೃಷ್ಣ ಕೆ.ಆರ್, ನಂದನ.ಎ, ಶಶಾಂಕ ಶರ್ಮ. ಎಸ್ ಈ ಆರು ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ+ ಗ್ರೇಡ್ ಪಡೆದು ಗೆಲುವಿನ ಕಿರೀಟಕ್ಕೆ ಗರಿಯನ್ನು ಸೇರಿಸಿದ್ದಾರೆ. ಶುಭಾಶಯಗಳು...
24 April 2012
ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಮುಂದಿನ ವಾರ
ಮೌಲ್ಯಮಾಪನ ಮೊನ್ನೆ ಇಪ್ಪತ್ತರಂದು ಕೊನೆಗೊಂಡಿದೆ. ಮುಂದಿನ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಿಸಿಲಿನ ಬೇಗೆಯ ನಡುವೆ, ಕಾಯುವಿಕೆ ವಿದ್ಯಾರ್ಥಿಗಳಿಗೂ, ನಮಗೂ ಅವರ್ಣನೀಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ಮುಂದಿನ ಕಲಿಯುವಿಕೆಯ ದಾರಿಯನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು...
30 March 2012
ನಾಳೆಯಿಂದ ರಜೆ...
ಬೇಸಗೆ ಪರೀಕ್ಷೆಗಳು ಇಂದು ಕೊನೆಗೊಳ್ಳುತ್ತವೆ. ಇನ್ನು ಅಧ್ಯಾಪಕ ಮಿತ್ರರಿಗೆ ‘ಉತ್ತರಕಾಂಡ’ ಆರಂಭವಾಗುತ್ತದೆ. ನಡುವೆಯೇ ಅಧ್ಯಾಪಕರಿಂದ ‘ಸೋಶಿಯೋ ಇಕೊನೊಮಿಕ್ ಸರ್ವೇ’ ಮತ್ತು ಜಾತಿವಾರು ಜನಗಣತಿ ಆರಂಭವಾಗಲಿದೆ. ಕಾಸರಗೋಡಿನ ಕನ್ನಡ ನೆಲದಲ್ಲಿ ಕನ್ನಡದ ಹೊಸ ಪೀಳಿಗೆಯನ್ನು ಹುಡುಕುತ್ತಾ ಮನೆ - ಮನೆ ಭೇಟಿ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಹೊಸ ಅನುವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅಂತಹ ಒಂದು ಪ್ರಯತ್ನವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ದರ್ಜಿಯನ್ನು ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡ ಸಂದರ್ಭದ ಫೋಟೋ ಒಂದನ್ನು ನಮ್ಮ ಕಡತದಿಂದ ಆರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ.ವಸಂತ ಕಾಲ ನಮ್ಮ ಮುಂದೆ ಇದೆ...
ಎಲ್ಲ ಚಿಂತೆ - ಚಿಂತನೆಗಳ ನಡುವೆ ನಮ್ಮ ಶುಭಾಶಯಗಳನ್ನೂ ಸ್ವೀಕರಿಸಿ...
Subscribe to:
Posts (Atom)




















