“ಖಂಡಿಗೆ ಮನೆತನ ಕಾಸರಗೋಡಿನ ಬೆಳವಣಿಗೆಯಲ್ಲಿ ನೀಡಿದ ಸೇವೆ ಅನನ್ಯ. ನೂರು ವರ್ಷಗಳ ಹಿಂದೆಯೇ ನೀರ್ಚಾಲಿನಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವಂತೆ ಖಂಡಿಗೆಯವರು ಪ್ರಯತ್ನಿಸಿದ್ದರಿಂದಾಗಿ ನಾಡಿಗೊಂದು ಉತ್ತಮ ವಿದ್ಯಾಸಂಸ್ಥೆ ದೊರೆಯಿತು. ವಿದ್ಯಾರ್ಥಿಗಳ ಬಹುಮುಖಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ. ಅವರ ಬೆಳವಣಿಗೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಶಾಲಾ ಕಾರ್ಯಕ್ರಮಗಳು ನಡೆಯುತ್ತವೆ. ಹೆಸರಾಂತ ಮಹಾಜನ ವಿದ್ಯಾಸಂಸ್ಥೆ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ನಾಡಿನ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಮುಗು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ನಾರಾಯಣ ನಂಬ್ಯಾರ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ನಮ್ಮ ಶಾಲಾ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ ಶುಭಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಶಾಲಾ ಸಂಸ್ಕೃತ ಅಧ್ಯಾಪಕ ಎಸ್. ವಿ. ಭಟ್ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯನ್ನೂ ಏರ್ಪಡಿಸಲಾಗಿತ್ತು.
No comments:
Post a Comment