“ಭಜನೆಯು ವಿದ್ಯಾರ್ಥಿಗಳ ಭಾವೋದ್ವೇಗವನ್ನು ನಿಯಂತ್ರಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಒಂದು ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ಕಾಟುಕುಕ್ಕೆಯವರ ಪ್ರಯತ್ನ ಸ್ತುತ್ಯರ್ಹವಾಗಿದೆ” ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿದ್ದ ‘ದಾಸವಾಣಿ ಕೀರ್ತನಾ ತರಗತಿ’ಗಳ ಸಮಾರೋಪ ಮತ್ತು ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಳೆದ ಆರು ತಿಂಗಳಿನಿಂದ ತರಗತಿಗಳನ್ನು ನಡೆಸಿಕೊಟ್ಟ ಗಾಯಕ ರಾಮಕೃಷ್ಣ ಕಾಟುಕುಕ್ಕೆಯವರನ್ನು ವಿದ್ಯಾರ್ಥಿಗಳು ಮತ್ತು ಹಿರಿಯರು ಶಾಲು,ಫಲ,ಸ್ಮರಣಿಕೆ ನೀಡಿ ವಂದಿಸಿದರು. ಈ ಸಂದರ್ಭದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಕಾಟುಕುಕ್ಕೆಯವರು “ವಿದ್ಯಾರ್ಥಿಗಳ ಕಂಠದಿಂದ ದೇವರ ನಾಮವು ಮೊಳಗಿದರೆ ಅದೇ ನನಗೆ ಶ್ರೀನಿವಾಸನ ಸೇವೆ, ದೊರೆಯುವ ಸಂತೃಪ್ತಿ" ಎಂದು ಹೇಳಿದರು.
ಹಿರಿಯ ಅಂಕಣಕಾರ ಎಂ.ವಿ.ಭಟ್ ಮಧುರಂಗಾನ ಮತ್ತು ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕಿ ವಾಣಿ. ಪಿ.ಎಸ್ ಸ್ವಾಗತಿಸಿ ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ವಂದಿಸಿದರು.
No comments:
Post a Comment