Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 October 2011

ಮದಕಗಳನ್ನು ಉಳಿಸಿ: ಹರೀಶ್ ಹಳೆಮನೆ

“ಮದಕಗಳ ಮಧ್ಯಭಾಗದಲ್ಲಿರುವ ಜಾಗದಲ್ಲಿ ಸುತ್ತಲಿನ ಎತ್ತರದ ನೆಲದಿಂದ ಹರಿದುಬಂದ ಮಳೆನೀರು ಸಂಗ್ರಹವಾಗಿ ನಿಲ್ಲುತ್ತದೆ. ನಿಧಾನವಾಗಿ ಭೂಮಿಗೆ ಇಂಗುತ್ತದೆ. ಆದ ಕಾರಣ ಮದಕವನ್ನು ಒಂದು ವಿಶಾಲವಾದ ಇಂಗುಕೊಳವೆಂದೇ ಹೇಳಬಹುದು. ಇದರ ಪರಿಣಾಮ ಹತ್ತಿರದಲ್ಲಿರುವ ಕೆರೆ, ಬಾವಿಗಳಲ್ಲಿ ನೀರು ಒರತೆಯ ರೂಪದಲ್ಲಿ ಕಾಣಸಿಗುತ್ತದೆ. ಕೆಲವು ಕಡೆ ಕೆರೆಗಳನ್ನೂ ಮದಕಗಳೆಂದು ಹೇಳುತ್ತಾರೆ. ಸುರಂಗದ ನೀರಿನ ಸಂಗ್ರಹಕ್ಕೆಂದು ಮಾಡಿದ ಕೆರೆಗಳನ್ನು ಮದಕಗಳೆನ್ನುವುದು ವಾಡಿಕೆ. ಕೆರೆಗಳಿಂದ ನೀರನ್ನು ನೇರವಾಗಿ ನೀರಾವರಿಗಾಗಿ ಬಳಸುತ್ತಾರೆ. ಮದಕಗಳಿಂದ ನೇರವಾಗಿ ನೀರೆತ್ತುವ ಉದಾಹರಣೆಗಳು ಇಲ್ಲ. ಮದಕಗಳಿಂದ ಬರುವ ಒರತೆ ನೀರನ್ನು ಮಾತ್ರ ಕೃಷಿಗೆ ಬಳಸುತ್ತಾರೆ. ಆದ್ದರಿಂದ ಮದಕಗಳು ಹೆಚ್ಚು ಸುಸ್ಥಿರವಾದ ಜಲಮೂಲಗಳಾಗಿವೆ. ಮದಕಗಳ ಕೆಳಭಾಗದಲ್ಲಿರುವ ಕೃಷಿಭೂಮಿಗಳಿಗೆ ಪಂಪಿನ ಮೂಲಕ ನೀರಿನ ಹಾಯಿಸುವಿಕೆಯ ಪ್ರಮಾಣ ಕಡಿಮೆ ಸಾಕಾಗುತ್ತದೆ. ಇದರಿಂದಾಗಿ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು ಹಾಗೂ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಮಾನವ ಸಂಬಂಧಗಳನ್ನು ಸುಧಾರಿಸಬಹುದು. ಎಂದು ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ “ಮದಕ-ಸಂವಾದ” ಕಾರ್ಯಕ್ರಮದಲ್ಲಿ ಸ್ಲೈಡ್ ಪ್ರದರ್ಶನ ಸಹಿತ ಉಪನ್ಯಾಸವನ್ನು ನೀಡುತ್ತಾ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕಾವ್ಯ ಸ್ವಾಗತಿಸಿ ಚೇತನ್‌ಕೃಷ್ಣ.ಸಿ ವಂದಿಸಿದರು. ಶ್ರವಣ್. ಬಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment