“ವಿದ್ಯಾರ್ಥಿಯು ಬಾಲ್ಯದಲ್ಲಿಯೇ ತಾನು ಕೈಗೊಳ್ಳುವ ಕಾರ್ಯಗಳಲ್ಲಿ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳಬೇಕು. ದೇವರ ಮೇಲಿನ ಭಕ್ತಿ, ನಂಬಿಕೆಗಳು ನಮಗೆ ಏಕಾಗ್ರತೆಯನ್ನು ಬೆಳೆಸುವ ಸಾಮರ್ಥ್ಯವನ್ನೂ ತಂದುಕೊಡುತ್ತವೆ. ದೊರೆತ ಅವಕಾಶಗಳನ್ನು ತಿರಸ್ಕರಿಸದೆ, ಸೂಕ್ತ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸಿಕೊಳ್ಳುವುದೂ ಅಷ್ಟೇ ಅಗತ್ಯ” ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ.ಕೃಷ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಮತ್ತು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕಂಬಾರು ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಜಯಾ.ಎಸ್.ಭಟ್ ಮತ್ತು ಶ್ರೀಮತಿ ಸ್ಮಿತಾ ಶರ್ಮ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಾದ ಶ್ರೀಮತಿ ಸಿ.ಎಚ್.ಸರಸ್ವತಿ ಮತ್ತು ಎಚ್.ಸೂರ್ಯನಾರಾಯಣ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ಬಹುಮಾನಗಳನ್ನು ವಿತರಿಸಿದರು.
ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಶಿಕ್ಷಕಿ ವಿನೋದಿನಿ.ಕೆ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment