Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

08 July 2013

ರಕ್ಷಕ ಶಿಕ್ಷಕ ಸಂಘದ ಮಹಾಸಭೆ - 2013

   
   “ನಮ್ಮ ನಾಡಿನ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳಲ್ಲಿ ಖ್ಯಾತಿ ಪಡೆದ ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಲಿ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಕೂಡಾ ಚೆನ್ನಾಗಿ ಕಲಿತು ಉತ್ತಮ ಫಲಿತಾಂಶ ಪಡೆದು ಹೆತ್ತವರ, ಸಮಾಜದ ಗೌರವಕ್ಕೆ ಪಾತ್ರರಾಗಲಿ" ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಅನ್ನಪೂರ್ಣ ಕುಳಮರ್ವ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ ಸ್ವಾಗತಿಸಿ ಕೆ.ನಾರಾಯಣ ಭಟ್ ವಂದಿಸಿದರು.

26 June 2013

ಮಾದಕ ದ್ರವ್ಯ ವಿರುದ್ಧ ದಿನ

 
“ನೈತಿಕತೆಯನ್ನು ಬದಿಗಿರಿಸಿ ಮಾದಕ ದ್ರವ್ಯಗಳ ದಾಸರಾಗುವತ್ತ ಯುವ ಸಮೂಹ ಮುಖ ಮಾಡಿರುವುದು ಸಮಾಜವನ್ನು ನಲುಗಿಸಲು ಆರಂಭಿಸಿದೆ. ಆ ಮೂಲಕ ಸಮಾಜದ ಧನ, ಆರೋಗ್ಯ ಬಲ ಕುಸಿತಗೊಳ್ಳುತ್ತಿದೆ. ಇದರಿಂದಾಗಿ ದೇಶ ಉನ್ಮತ್ತವಾಗಲು ಆರಂಭಿಸಿದೆ ಹಾಗೂ ಭವಿಷ್ಯದ ಕುರಿತ ಚಿಂತನೆ ಶೋಚನೀಯವಾಗುತ್ತಿದೆ. ಮಾದಕ ದ್ರವ್ಯಗಳನ್ನು ವಿರೋಧಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ರೂಪಿಸುವತ್ತ ನಾವು ಶ್ರಮಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸ್ವಾಗತ ರೈ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಸೌಮ್ಯ ಸ್ವಾಗತಿಸಿ ಭವ್ಯಲಕ್ಷ್ಮಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

25 June 2013

ಗದ್ದೆಗೆ ಸಂದರ್ಶನ

ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಮೈಕುರಿ ಕೃಷ್ಣ ನಾಯ್ಕರ ಗದ್ದೆಯನ್ನು ಸಂದರ್ಶಿಸಿ ಭತ್ತದ ಬಿತ್ತನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಕೃಷಿಯ ಕಷ್ಟ ಸುಖಗಳನ್ನು ಆಲಿಸುವಲ್ಲಿ ಕೃಷ್ಣ ನಾಯ್ಕ್ ಮತ್ತು ಅವರ ಸಹೋದರ ಕುಞಪ್ಪು ನಾಯ್ಕ್ ನಮ್ಮ ಜೊತೆ ಸಹಕರಿಸಿದ್ದು ನಮಗೆ ತುಂಬಾ ಸಂತೋಷ ನೀಡಿದೆ. ಧನ್ಯವಾದಗಳು.

19 June 2013

ವಾಚನಾ ಸಪ್ತಾಹ - ಉದ್ಘಾಟನೆ

  
  “ಓದು ಭವಿಷ್ಯದ ಹಾದಿಯನ್ನು ರೂಪಿಸುತ್ತದೆ. ಆಕರ್ಷಕ ಗ್ರಂಥಾಲಯಗಳು ಮತ್ತು ಅತ್ಯುತ್ತಮ ಪುಸ್ತಕಗಳು ಸಮಾಜವನ್ನು ತಮ್ಮತ್ತ ಸೆಳೆಯುತ್ತವೆ. ಈ ಓದುವಿಕೆ ವಿದ್ಯಾರ್ಥಿಗಳಿಗೆ ಅಪಾರ ಜ್ಞಾನ ಸಂಪತ್ತನ್ನು ಒದಗಿಸುತ್ತದೆ. ಉತ್ತಮ ಪ್ರಜೆಗಳಾಗಿ ಬೆಳೆಯಲು ಓದುವಿಕೆ ಅನಿವಾರ್ಯ." ಎಂದು ನಮ್ಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಾಚನಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಶಿಕ್ಷಕರಾದ ಕೆ.ನಾರಾಯಣ ಭಟ್ ಮತ್ತು ಶಿಕ್ಷಕಿ ವಾಣಿ.ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸ್ವಾಗತ ರೈ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಮಂಜೂಷಾ.ಪಿ.ಎಸ್ ಸ್ವಾಗತಿಸಿ ಮಹಿಮಾ. ಎಚ್.ಎನ್ ವಂದಿಸಿದರು. ಅಶ್ವಿನಿ.ಕೆ ಕಾರ್ಯಕ್ರಮ ನಿರೂಪಿಸಿದರು.

05 June 2013

‘ಯೋಚಿಸಿ, ಸೇವಿಸಿ, ಉಳಿಸಿ’ - ವಿಶ್ವ ಪರಿಸರ ದಿನ


  
   “ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ. ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ ಸಾಧ್ಯ. ಅಂತಹ ಸಸ್ಯಗಳಿಗೆ ಪರಿಸರವು ಮಾರಕವಾಗಿ ಪರಿಣಮಿಸುತ್ತಿರುವುದರಿಂದ ನಾವು ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜೊತೆಗೆ ದೊರೆತ ಆಹಾರವನ್ನು ಯುಕ್ತಿಯಿಂದ ಉಪಯೋಗಿಸಬೇಕಾಗಿದೆ, ಮುಂದಿನ ತಲೆಮಾರಿನ ಜೀವಿಗಳಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ" ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ಮಾತನಾಡುತ್ತಿದ್ದರು.

ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಶೈಲಜಾ. ಬಿ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಸ್ವಾಗತಿಸಿ ವಿದ್ಯಾರ್ಥಿ ನಾಯಕ ಶ್ರೀಶ.ಕೆ ವಂದಿಸಿದರು.

03 June 2013

ಶಾಲಾ ಪ್ರವೇಶೋತ್ಸವ 2013

  


  “ಕಲಿಕೆ ಆಧುನಿಕ ಕಾಲದ ಅನಿವಾರ್ಯತೆ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ, ಬಾಳು ಹಸನಾಗಲಿ" ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಅನ್ನಪೂರ್ಣ ಕುಳಮರ್ವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಸ್ವಾಗತಿಸಿದರು. ಶಿಕ್ಷಕ ಟಿ.ಕೃಷ್ಣಪ್ರಸಾದ ಬಣ್ಪುತ್ತಡ್ಕ ವಂದಿಸಿದರು. ಚಿತ್ರಕಲಾ ಶಿಕ್ಷಕ ಕೆ.ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

01 June 2013

ಮರುಮೌಲ್ಯಮಾಪನ - ಚೈತಾಲಿಗೆ ಎಲ್ಲ ಎ+

ಕೇರಳ ಸರಕಾರವು ಮಾರ್ಚ್ 2013ರಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದ ಫಲಿತಾಂಶವು ಬಂದಿದ್ದು ನಮ್ಮ ಶಾಲೆಯ ವಿದ್ಯಾರ್ಥಿನಿ ಚೈತಾಲಿ. ಕೆ.ಎನ್ ಎಲ್ಲ ಹತ್ತು ವಿಷಯಗಳಲ್ಲೂ ಎ+ ಗ್ರೇಡ್ ಪಡೆದಿದ್ದಾಳೆ. ಹಿಂದೆ ಫಲಿತಾಂಶ ಬಂದಿದ್ದಾಗ ಈಕೆಗೆ ಹಿಂದಿಯಲ್ಲಿ ಮಾತ್ರ ಎ ಗ್ರೇಡ್ ದೊರೆತಿತ್ತು. ಆದ್ದರಿಂದ ಈಕೆ ಮರುಮೌಲ್ಯಮಾಪನಕ್ಕೆ ಅಪೇಕ್ಷೆ ಸಲ್ಲಿಸಿದ್ದಳು. ಇದರೊಂದಿಗೆ ನಮ್ಮ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳಿಗೆ ಎಲ್ಲ ಹತ್ತು ವಿಷಯಗಳಲ್ಲೂ ಎ+ ಗ್ರೇಡ್ ದೊರೆತಂತಾಗಿದೆ. ಈಕೆ ನಿಡುಗಳ ನಿವಾಸಿ ಕೆ.ಎನ್.ವೆಂಕಟ್ರಮಣ ಭಟ್ ಮತ್ತು ಕುಸುಮಾ ಇವರ ಪುತ್ರಿ. ಅಂದ ಹಾಗೆ ಶಾಲೆ ನಾಡಿದ್ದು ಸೋಮವಾರ, ಜೂನ್ 3 ರಂದು ಹೊಸ ಅಧ್ಯಯನ ವರ್ಷಕ್ಕಾಗಿ ಬಾಗಿಲು ತೆರೆಯಲಿದೆ. ಅಕ್ಷರದ ಮೆಟ್ಟಿಲನ್ನು ಏರಲು ಆಗಮಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಗತಗಳು. ಆ ದಿನ ನಮಗೆ ಪ್ರವೇಶೋತ್ಸವ...

24 April 2013

SSLC ಫಲಿತಾಂಶ: ನಮಗೆ 98%

ಕೇರಳ ಸರಕಾರವು ಮಾರ್ಚ್ 2013ರಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ 98% ಫಲಿತಾಂಶ ಪಡೆದಿದೆ. ಒಟ್ಟು ಪರೀಕ್ಷೆ ಬರೆದ 156 ಮಂದಿ ವಿದ್ಯಾರ್ಥಿಗಳಲ್ಲಿ 153 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಆರು ಮಂದಿ ವಿದ್ಯಾರ್ಥಿಗಳು, ಅಂಕಿತಾ.ಪಿ, ಪೂರ್ಣಶ್ರೀ.ಡಿ, ಪ್ರಸೀದಾ.ಕೆ, ರೋಹಿಣಿ.ಕೆ, ಸುಶೀಲಾ.ಎಸ್ ಮತ್ತು ಶರತ್.ಕೆ ಎಲ್ಲಾ ಹತ್ತು ವಿಷಯಗಳಲ್ಲೂ ಎ+ ಗ್ರೇಡ್ ಪಡೆದಿದ್ದಾರೆ. ಎಲ್ಲರಿಗೂ ಶುಭಾಶಯಗಳು.

27 March 2013

ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ಟರಿಗೆ ಬೀಳ್ಕೊಡುಗೆ

   
“ಸಂಸ್ಕೃತ ವಿದ್ವಾಂಸರಾಗಿ, ಶಾಲೆ ಮತ್ತು ವಿದ್ಯಾರ್ಥಿಗಳ ಉನ್ನತಿಗೆ ಕಾರಣರಾದ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಶಾಲೆಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದ ಅವರು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಶಾಲೆಯ ಶತಮಾನೋತ್ಸವದ ಹೊಸ್ತಿಲಲ್ಲಿ ಅವರ ನಿವೃತ್ತಿ, ಶತಮಾನದ ಆಚರಣೆಯಲ್ಲಿ ಅವರು ಪೂರ್ಣವಾಗಿ ತೊಡಗಿಸಿಕೊಳ್ಳಲು ಮುನ್ನುಡಿಯಾಗಲಿ” ಎಂದು ನಮ್ಮ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ಸಂಸ್ಕೃತ ಶಿಕ್ಷಕ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್ (ಎಸ್.ವಿ.ಭಟ್) ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

    ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಎ.ಭುವನೇಶ್ವರಿ, ಸಿ.ಎಚ್.ಸುಬ್ರಹ್ಮಣ್ಯ ಭಟ್, ಎಂ.ಸೂರ್ಯನಾರಾಯಣ, ಎಚ್.ಶಿವಕುಮಾರ, ವಾಣಿ.ಪಿ.ಎಸ್, ಇ.ವೇಣುಗೋಪಾಲಕೃಷ್ಣ, ಶಿವಪ್ರಕಾಶ್.ಎಂ.ಕೆ, ಚಂದ್ರಶೇಖರ ರೈ ಮತ್ತು ಗೋವಿಂದ ಶರ್ಮ.ಕೆ ಇವರು ಶುಭ ಹಾರೈಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕ ಕೆ.ನಾರಾಯಣ ಭಟ್ ವಂದಿಸಿದರು.

26 March 2013

‘ಮಹಾಜನ’ರ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ನಿವೃತ್ತಿ

    ಕಳೆದ 28 ವರ್ಷಗಳಿಂದ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ‘ಮಹಾಜನ’ರಿಗೆ ಸಂಸ್ಕೃತದ ಪಾಠಗಳನ್ನು ಹೇಳಿ ‘ಮಹಾಜನ’ರಾದ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್ (ಎಸ್.ವಿ.ಭಟ್) ಸರಕಾರೀ ಸೇವೆಯಿಂದ ಈ ತಿಂಗಳ ಕೊನೆಗೆ ನಿವೃತ್ತಿ ಹೊಂದಲಿದ್ದಾರೆ. ನಾಳೆ ಈ ಅಧ್ಯಯನ ವರ್ಷದ ಕೊನೆಯ ದಿನವಾದ್ದರಿಂದ ನಾಳೆ ಶ್ರೀ ಎಸ್.ವಿ.ಭಟ್ಟರನ್ನು ಬೀಳ್ಕೊಡುವ ಸಮಾರಂಭ ಶಾಲೆಯಲ್ಲಿ ಜರಗಲಿದೆ. 1956 ದಶಂಬರ 11 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸನಿಹದ ಮೂರೂರಿನಲ್ಲಿ ವೆಂಕಟರಮಣ ಭಟ್ ಮತ್ತು ಗಂಗಾ ಇವರ ಪುತ್ರನಾಗಿ ಜನಿಸಿದ ಎಸ್.ವಿ.ಭಟ್ ಶಿಕ್ಷಕನಾಗಿ ಕಾಸರಗೋಡಿನ ಕನ್ನಡಿಗರಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ.

    1972ರಲ್ಲಿ ಎಸ್.ಎಸ್.ಎಲ್.ಸಿ, 1977ರಲ್ಲಿ ಪದವಿಯನ್ನು ಪಡೆದ ಎಸ್.ವಿ.ಭಟ್ಟರು ಮೈಸೂರು ವಿಶ್ವವಿದ್ಯಾನಿಲಯದಿಂದ 1981ರಲ್ಲಿ ಬಿ.ಎಡ್ ಪದವಿಯನ್ನು ಪಡೆದರು. ಬಳಿಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ನಿರ್ವಹಿಸಿ ಕರಾವಳಿಯ ನಂಟನ್ನು ಹಿಡಿದು ಕಾಸರಗೋಡಿಗೆ ಆಗಮಿಸಿದ ಅವರು ಏತಡ್ಕದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1982 ಜನವರಿ 18 ರಂದು ಸಂಸ್ಕೃತ ಶಿಕ್ಷಕನಾಗಿ ಸೇವೆ ಆರಂಭಿಸಿದ್ದರು. ಸುತ್ತಲೂ ಹರಿಯುತ್ತಿದ್ದ ಹೊಳೆಗಳಿಂದಾಗಿ ‘ದ್ವೀಪ’ದಂತಿದ್ದ ಏತಡ್ಕದಲ್ಲಿನ ಜೀವನ ಅವರಿಗೆ ಅವಿಸ್ಮರಣೀಯ ಅನುಭವವನ್ನು ಕಟ್ಟಿಕೊಟ್ಟಿದೆ. “ಸನಿಹದ ಗೆಳೆಯರೊಂದಿಗೆ ಬಾಳೆದಂಡಿನ ತೆಪ್ಪವನ್ನು ಮಾಡಿ ಹೊಳೆಯಲ್ಲಿ ತೇಲಿಸಿ ಪ್ರಯೋಗ ಶೀಲರಾಗುತ್ತಿದ್ದ ನೆನಪು ಈಗಲೂ ಹಸಿಯಾಗಿದೆ, ಹಸಿರಾಗಿದೆ” ಎನ್ನುತ್ತಾರೆ ಎಸ್.ವಿ.ಭಟ್.

    ಮುಂದೆ 1985 ಅಗೋಸ್ತು 6 ರಂದು ನೀರ್ಚಾಲು ಶಾಲೆ ಅವರನ್ನು ಕೈಬೀಸಿ ಕರೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಕನಾಗಲು ಸಿಕ್ಕಿದ ಅವಕಾಶವನ್ನು ಅವರು ಕೈಚೆಲ್ಲದೆ ಉದ್ಯೋಗದಲ್ಲಿ ಭಡ್ತಿಯನ್ನು ಪಡೆದ ಅವರು ತಮ್ಮ ವಾಸ, ವೃತ್ತಿಯನ್ನು ನೀರ್ಚಾಲಿಗೆ ವರ್ಗಾಯಿಸಿಕೊಂಡರು. ಉದ್ಯೋಗ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ 1994ರಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿಯನ್ನೂ ಅವರು ಪಡೆದಿದ್ದಾರೆ. “ಒಂದು ಕಾಲದಲ್ಲಿ ಪೂರ್ಣವಾಗಿ ಸಂಸ್ಕೃತದ ಶಿಕ್ಷಣದ ಕೇಂದ್ರವಾಗಿದ್ದ ಸಂಸ್ಥೆಯಲ್ಲಿ ಸಂಸ್ಕೃತದ ಶಿಕ್ಷಕನಾಗಲು ಅವಕಾಶ ದೊರೆತದ್ದು ನನ್ನ ಪಾಲಿನ ಸುಯೋಗ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

    ನೀರ್ಚಾಲಿನ ವಿದ್ಯಾರ್ಥಿಗಳನ್ನು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹುರಿದುಂಬಿಸಿದ ಅವರು ಶಾಲಾ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ನಾಟಕಗಳಲ್ಲೂ ಅಭಿನಯಿಸಿದ್ದರು. ಶಾಲಾ ಶಿಕ್ಷಕ ವೃಂದದ ಯಕ್ಷಗಾನ ತಾಳಮದ್ದಳೆಯ ತಂಡಗಳಲ್ಲಿ ಭಾಗವತರಾಗಿ, ಅರ್ಥಧಾರಿಯಾಗಿ ವಿವಿಧ ಪಾತ್ರಗಳನ್ನು ಸಮರ್ಪಕವಾಗಿ ಮಂಡಿಸಿದ್ದಾರೆ. ಪ್ರತೀ ವರ್ಷ ಶಾಲೆಯಲ್ಲಿ ಜರಗುವ ಶ್ರೀಶಾರದಾ ಪೂಜೆಯ ಸಂದರ್ಭದಲ್ಲಿ ಶ್ರೀದೇವಿಗೆ ಸಮರ್ಪಿಸುವ ‘ಅಷ್ಟಾವಧಾನ’ದ ಗೌರವವೂ ಇವರಿಗೆ ದೊರಕಿದೆ.

    ಶಾಲಾ ಕಾರ್ಯಕ್ರಮಗಳಲ್ಲಿ ಮೈಕ್ ಜೋಡಿಸುವುದರಿಂದ ಆರಂಭಿಸಿ ಸಭಾ ಕಾರ್ಯಕ್ರಮದ ನಿರ್ವಹಣೆಯ ತನಕ ವಿವಿಧ ಜವಾಬ್ದಾರಿಗಳನ್ನು ಪೂರೈಸಿ ಕಿರಿಯರಿಗೆ ಮಾರ್ಗದರ್ಶನವೂ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿಕ್ಷಕ ವೃಂದದ ಸಹಕಾರದೊಂದಿಗೆ ಶಾಲಾ ವಿದ್ಯಾರ್ಥಿಗಳನ್ನು ಸಂಸ್ಕೃತ ತಾಳಮದ್ದಳೆಗಾಗಿ ತರಬೇತುಗೊಳಿಸಿ, ಮಂಗಳೂರು ಆಕಾಶವಾಣಿಯಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವು ಪ್ರಸಾರವಾಗಲು ಎಸ್.ವಿ.ಭಟ್ ಕಾರಣೀಭೂತರಾಗಿದ್ದಾರೆ.

    ಶಾಲಾ ಕಲೋತ್ಸವದ ‘ಸಂಸ್ಕೃತ’ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಕಠಿಣವಾಗುತ್ತಿದ್ದ ಅಷ್ಟಪದಿ, ಪಾಠಕಂ, ಚಂಪೂ ಪ್ರಭಾಷಣಂ ಇತ್ಯಾದಿಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ನೀಡಿ ಅನೇಕ ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆಯುವಲ್ಲಿ ಎಸ್.ವಿ.ಭಟ್ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಸಂಸ್ಕೃತ ಶಿಕ್ಷಕರಿಗಾಗಿ ನಡೆದ ವಿವಿಧ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಅವರು ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ಅನೇಕ ಬಾರಿ ನೀರ್ಚಾಲು ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದು, ಶಾಲೆಯ ಕೀರ್ತಿ ಪತಾಕೆಯು ಹಾರಾಡುತ್ತಿರುವಂತೆ ಅವರು ಗಮನಿಸಿದ್ದಾರೆ. ಆಧುನಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿ ವಿದ್ಯಾರ್ಥಿಗಳ ಚಟುವಟಿಕೆಯನ್ನು ಪ್ರತಿಬಿಂಬಿಸಲು ಪ್ರಪ್ರಥಮವಾಗಿ ಶಾಲೆಯೊಂದು ಆರಂಭಿಸಿದ ‘ಬ್ಲಾಗ್’ ಎಂಬ ಕೀರ್ತಿಗೆ ಪಾತ್ರವಾದ ನಮ್ಮ ‘ಮಹಾಜನ’ ಬ್ಲಾಗನ್ನು ಅವರು ಅಪಾರವಾಗಿ ಪ್ರೋತ್ಸಾಹಿಸಿದ್ದಾರೆ.

    ಬಹುಮುಖಿ ವ್ಯಕ್ತಿತ್ವದ ಎಸ್.ವಿ.ಭಟ್ ಸಂಸ್ಕೃತ ಶಿಕ್ಷಕರಾಗಿ ವೃತ್ತಿಯಿಂದ ನಿರ್ಗಮಿಸುತ್ತಿದ್ದರೂ ಪ್ರವೃತ್ತಿಯಿಂದ ಮುಂದುವರಿಯಲಿದ್ದಾರೆ. ಪತ್ನಿ ಜಯಶ್ರೀ, ಪುತ್ರ ನವೀನ್ ಮತ್ತು ಪುತ್ರಿ ನಮೃತಾ ಜೊತೆ ಸಂತೃಪ್ತ ಜೀವನವನ್ನು ಸಾಗಿಸುತ್ತಿರುವ ಎಸ್.ವಿ.ಭಟ್ಟರ ನಿವೃತ್ತ ಜೀವನವು ಇನ್ನಷ್ಟು ಸುಖಮಯವಾಗಲಿ, ಶಾರದಾ ಮಾತೆಗೆ ಅವರು ಸಲ್ಲಿಸುತ್ತಿರುವ ಸೇವೆ ಮುಂದುವರಿಯಲಿ ಎಂದು ಅವರ ಶಿಷ್ಯವರ್ಗ, ಆಪ್ತವರ್ಗ ಹಾರೈಸುತ್ತಿದೆ.

11 March 2013

SSLC ಪರೀಕ್ಷೆ ಇಂದು ಆರಂಭ.

ನಮ್ಮ ಶಾಲೆಯ 156 ಮಂದಿ ವಿದ್ಯಾರ್ಥಿಗಳು ಇಂದಿನಿಂದ SSLC ಪರೀಕ್ಷೆ ಬರೆಯಲು ಆರಂಭಿಸಿದ್ದಾರೆ. ಈಗಾಗಲೇ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷೆಗಳು ಮುಗಿದಿರುವುದರಿಂದ ಇನ್ನು ಉಳಿದಿರುವುದು ಒಟ್ಟು 9 ಪರೀಕ್ಷೆಗಳು. 21 ಗುರುವಾರ ಕೊನೆಯ ದಿನ. ಎಲ್ಲ ಪರೀಕ್ಷೆಗಳೂ ಅಪರಾಹ್ನ ಜರಗುತ್ತವೆ. ಇಂಗ್ಲಿಷ್, ಸಮಾಜ ವಿಜ್ಞಾನ ಮತ್ತು ಗಣಿತ ಎರಡೂವರೆ ಗಂಟೆ ಅವಧಿಯ ಪರೀಕ್ಷೆಗಳು. ಉಳಿದ ಎಲ್ಲ ಪರೀಕ್ಷೆಗಳು ಕೇವಲ ಒಂದೂವರೆ ಘಂಟೆ. ಎಲ್ಲ ಪರೀಕ್ಷೆಗಳ ಆರಂಭದ 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಕೂಲಂಕಶವಾಗಿ ಪರಿಶೀಲಿಸಲು ‘ಕೂಲ್ ಓಫ್ ಟೈಮ್’ ಆಗಿ ನಿಡಲಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಬರೆಯುತ್ತಾರೆ ಎಂಬ ವಿಶ್ವಾಸ ನಮ್ಮದು. ಶುಭಾಶಯಗಳು ಅವರಿಗೆ...

04 March 2013

ವಿದ್ಯಾಭಿಮಾನಿಗಳು ಕೈಜೋಡಿಸಿದರೆ ಶತಮಾನೋತ್ಸವ ಯಶಸ್ವಿ : ಐ.ವಿ.ಭಟ್

    “ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವವು ವಿಜೃಂಭಣೆಯಿಂದ ನಡೆಯಲಿ. ಎಲ್ಲಾ ಸಮಿತಿಗಳೂ ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ದೂರದ ಊರುಗಳಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರನ್ನೂ ಈ ಕಾರ್ಯಕ್ರಮದಲ್ಲಿ ಸರ್ವ ರೀತಿಯಲ್ಲಿ ಸೇರಿಸಿಕೊಂಡು ಮುನ್ನಡೆಯಬೇಕಾದುದು ಅಗತ್ಯ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಐ.ವಿ.ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ ಶಾಲೆಯಲ್ಲಿ ಜರಗಿದ ನಮ್ಮ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಆಚರಣೆಯ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು ಪ್ರಾಸ್ತಾವಿಕ ಭಾಷಣ ಮಾಡಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಶುಭ ಹಾರೈಸಿದರು. ನಿವೃತ್ತ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಮಾನ್ಯ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ. ನಟರಾಜ ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು. ಶತಮನೋತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ಈ ಸಂದರ್ಭದಲ್ಲಿ ರೂಪೀಕರಿಸಲಾಯಿತು.


    ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ವಂದಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕ ಬಾಲ ಮಧುರಕಾನನ ಕಾರ್ಯಕ್ರಮ ನಿರೂಪಿಸಿದರು.

28 February 2013

ಗ್ರಾಮೀಣ ಕ್ರೀಡಾಲೋಕದಲ್ಲಿ... ಹಸ್ತಪ್ರತಿ

ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಗ್ರಾಮೀಣ ಕ್ರೀಡಾಲೋಕದಲ್ಲಿ’ ಹಸ್ತಪ್ರತಿ ಸಂಚಿಕೆಯನ್ನು ನಿನ್ನೆ ನಮ್ಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಬಿಡುಗಡೆಗೊಳಿಸಿದರು. ಶಿಕ್ಷಕರಾದ ಇ.ವೇಣುಗೋಪಾಲಕೃಷ್ಣ ಮತ್ತು ವಾಣಿ. ಪಿ. ಎಸ್ ಉಪಸ್ಥಿತರಿದ್ದರು. ಹಸ್ತಪ್ರತಿಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳ ಬಗ್ಗೆ ಮಾಹಿತಿ ಇದೆ.

14 February 2013

ಶತಮಾನೋತ್ಸವ ಯಶಸ್ವಿಯಾಗಲಿ: ಪಡಿಯಡ್ಪು ಶಂಕರ ಭಟ್

    “ಪೆರಡಾಲದಲ್ಲಿ ಹುಟ್ಟಿ, ನೀರ್ಚಾಲಿನಲ್ಲಿ ಬೆಳೆದು ಹಳ್ಳಿ ಪ್ರದೇಶವಾದ ಈ ನಾಡಿನಲ್ಲಿ ಸಹಸ್ರಾರು ಮಂದಿಗೆ ವಿದ್ಯಾದಾನ ನೀಡಿ ಪರಮ ಪಾವನವಾದ ಮಹಾಜನ ವಿದ್ಯಾಸಂಸ್ಥೆಗಳು ಪ್ರಸ್ತುತ ಶತಮಾನೋತ್ಸವ ಆಚರಣೆಯ ಹೊಸ್ತಿಲಿನಲ್ಲಿದೆ. ಈ ವರ್ಷದ ಕೊನೆಗೆ ನಡೆಯುವ ಈ ಸಮಾರಂಭವು ಕ್ರಿಯಾತ್ಮಕ ಪರಿಣಾಮಗಳನ್ನು ನೀಡಿ ಯಶಸ್ವಿಯಾಗಲಿ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಅಭಿಪ್ರಾಯಪಟ್ಟರು. ಅವರು 10.02.2013 ಆದಿತ್ಯವಾರ ನೀರ್ಚಾಲಿನಲ್ಲಿ ಜರಗಿದ ನಮ್ಮ ಶಾಲೆಗಳ ಶತಮಾನೋತ್ಸವ ಆಚರಣೆಯ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು ಶುಭ ಹಾರೈಸಿದರು. ನಿವೃತ್ತ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಮಾನ್ಯ, ನಿವೃತ್ತ ಶಿಕ್ಷಕ ಕುಂಜಾರು ಸುಬ್ರಾಯ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಸಮಿತಿಯ ಮುಂದಿನ ಸಭೆಯನ್ನು ಮಾರ್ಚ್ ೩ ರಂದು ಶಾಲಾ ಪರಿಸರದಲ್ಲಿ ನಡೆಸಲಾಗುವುದು.

    ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್. ಶಿವಕುಮಾರ ಕಾರ್ಯಕ್ರಮ ನಿರ್ವಹಿಸಿದರು.

06 February 2013

ಶತಮಾನೋತ್ಸವ ಸಿದ್ಧತಾ ಸಭೆ

ಶತಮಾನಗಳಿಂದ ವಿದ್ಯಾದಾನಗೈಯುತ್ತಿರುವ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಶತಮಾನೋತ್ಸವವನ್ನು ಆಚರಿಸುವ ನಿಮಿತ್ತ ಶಾಲಾ ಹಳೆ ವಿದ್ಯಾರ್ಥಿಗಳ, ವಿದ್ಯಾಭಿಮಾನಿಗಳ ಸಭೆಯನ್ನು ದಿನಾಂಕ 10.02.2013 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಶಾಲಾ ಪರಿಸರದಲ್ಲಿ ಕರೆಯಲಾಗಿದೆ. ಎಲ್ಲ ಹಿತೈಷಿಗಳು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ಶತಮಾನೋತ್ಸವದ ಆಚರಣೆಯನ್ನು ಸಾರ್ಥಕಗೊಳಿಸಬೇಕೆಂದು ಮಹಾಜನ ವಿದ್ಯಾಭಿವರ್ಧಕ ಸಂಘ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

28 January 2013

“ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅಗತ್ಯ” : ಎಸ್.ಆರ್.ಶೇಟ್

“ನೈತಿಕ ಶಿಕ್ಷಣದ ಅನಿವಾರ್ಯತೆ ವಿದ್ಯಾರ್ಥಿ ಸಮಾಜದಲ್ಲಿ ಅಧಿಕವಾಗುತ್ತಿದೆ. ‘ಅತಿ’ ಎಂಬುದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಆರಂಭಿಸಿದೆ. ಇಂಟರ್‌ನೆಟ್ ಮತ್ತಿತರ ಸಮೂಹ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ವಿದ್ಯಾರ್ಥಿಗಳು ಹಾದಿ ತಪ್ಪುವ ಅವಕಾಶಗಳು ಅಧಿಕವಾಗಲಾರಂಭಿಸಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಸರಕಾರ ರೂಪಿಸುವ ವಾರ್ಷಿಕ ಚಟುವಟಿಕೆಯಲ್ಲಿ ಈ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.”ಎಂದು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎಸ್.ಆರ್.ಶೇಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್, ಕಾರ್ಯಕಾರಿ ಸಮಿತಿ ಸದಸ್ಯ ಮಹಾಲಿಂಗ ಪಾಟಾಳಿ, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಶುಭಹಾರೈಸಿದರು.

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಿತು.

18 January 2013

ಜನವರಿ 28ರಂದು ಶಾಲಾ ವಾರ್ಷಿಕೋತ್ಸವ

ವರ್ಷಂಪ್ರತಿ ನಡೆಯುವಂತೆ ಶಾಲಾ ವಾರ್ಷಿಕೋತ್ಸವವು ಜನವರಿ 28, 2013 ರಂದು ನಮ್ಮ ಶಾಲೆಯಲ್ಲಿ ನಡೆಯಲಿದೆ. ನೆರೆಯ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಶ್ರೀ ಎಸ್. ಆರ್. ಶೇಟ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಾರ್ಷಿಕೋತ್ಸವದ ಅಂಗವಾಗಿ ಅದೇ ದಿನ ಬೆಳಗ್ಗೆ ಶಾಲಾ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶವೂ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪ್ರಸ್ತುತ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಜರಗುತ್ತಿವೆ.

ರಾಜ್ಯ ಮಟ್ಟದ ಕಲೋತ್ಸವದಲ್ಲಿ...

ನಮ್ಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಕಲೋತ್ಸವದಲ್ಲಿ ರಾಜ್ಯ ಮಟ್ಟದ ತನಕ ಬೆಳೆದಿದ್ದಾರೆ. ಕೇರಳದ ಮಧ್ಯಭಾಗ ಮಲಪ್ಪುರಂನಲ್ಲಿ ನಡೆಯುತ್ತಿರುವ 53ನೇ ರಾಜ್ಯ ಮಟ್ಟದ ಕಲೋತ್ಸವದಲ್ಲಿ  ಭಾಗವಹಿಸಲು ನಮ್ಮ ಶಾಲೆಯ ಒಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವುಗಳಲ್ಲಿ ಮೊನ್ನೆ 16ರಂದು ಜರಗಿದ ವಂದೇಮಾತರಂ ಗಾಯನದಲ್ಲಿ ಹತ್ತನೇ ತರಗತಿಯ ಸುಶೀಲಾ. ಎಸ್, ಅಂಕಿತಾ. ಪಿ, ಚೈತ್ರಾ. ಎನ್, ಇಶಿಕಾ, ಒಂಭತ್ತನೇ ತರಗತಿಯ ಭಾಗ್ಯಶ್ರೀ. ಕೆ. ಎಸ್, ಅಶ್ವಿನಿ. ಕೆ ಹಾಗೂ ರಮ್ಯಶ್ರೀ ಇವರ ತಂಡ ‘ಎ’ ಗ್ರೇಡ್ ಪಡೆದಿದೆ. ನಿನ್ನೆ ಜರಗಿದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗ್ಯಶ್ರೀ ಕೆ. ಎಸ್ ‘ಬಿ’ ಗ್ರೇಡ್ ಪಡೆದಿದ್ದಾಳೆ. ಒಂಭತ್ತನೇ ತರಗತಿಯ ಶ್ರದ್ಧಾ. ಎಸ್ ಭಾಗವಹಿಸುವ ಮಿಮಿಕ್ರಿ ಸ್ಪರ್ಧೆ ನಾಡಿದ್ದು ಭಾನುವಾರ, ಅಂದರೆ ಕಲೋತ್ಸವದ ಕೊನೆಯ ದಿನ ಒಂದನೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಶುಭಾಶಯಗಳು.

14 December 2012

ಗಣಿತೋತ್ಸವದಲ್ಲಿ ಪ್ರಶಸ್ತಿ

ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತೋತ್ಸವದ ಅಂಗವಾಗಿ ಮೊನ್ನೆ 10.12.2012 ಸೋಮವಾರದಂದು ನಮ್ಮ ಶಾಲೆಯಲ್ಲಿ  ಜರಗಿದ ಯುಪಿ ಮತ್ತು ಪ್ರೌಢಶಾಲಾ ವಿಭಾಗದ ಟಾನ್‌ಗ್ರಾಮ್, ರಾಮಾನುಜನ್ ಪೇಪರ್ ಪ್ರೆಸೆಂಟೇಶನ್, ಕಾರ್ಟೂನ್, ಕವಿತಾ ರಚನೆ, ಭಾಷಣ, ಸ್ಕಿಟ್ ಮತ್ತಿತರ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನ ಗಳಿಸಿದ್ದಾರೆ.

12 December 2012

ದಶಂಬರ ಬಂತೆಂದರೆ ಶಾಲಾ ವಿದ್ಯಾರ್ಥಿಗಳಿಗೆ ಎರಡು ಅಬ್ಬರಗಳು. ಮೊದಲನೆಯದು ಕಲೋತ್ಸವ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ಕಲೋತ್ಸವ ಸ್ಪರ್ಧೆಗಳು ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದವು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ಪರ್ಧೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳೂ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಸಂಸ್ಕೃತೋತ್ಸವದ ಪ್ರೌಢಶಾಲಾ ಮತ್ತು ಯುಪಿ ವಿಭಾಗದ ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕ ಪಡೆದು ಸಂಸ್ಕೃತೋತ್ಸವದ ಸಮಗ್ರ ಪ್ರಶಸ್ತಿಯನ್ನು ಶಾಲೆಗೆ ತಂದಿದ್ದಾರೆ. ಅವರಿಗೆ ಶುಭಾಶಯಗಳು.

ನಾಳೆಯಿಂದ ಮಧ್ಯಾವಧಿ ಪರೀಕ್ಷೆಗಳು ಆರಂಭ. ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಅವರಿಗೂ ಶುಭಾಶಯಗಳು.