Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 November 2013

ಶ್ರೀಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ಕೊಡುಗೆ


“ಸಮಾಜದ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಕ್ಷೇತ್ರ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ರೂಪಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡಿನಲ್ಲೂ ಸಂಘಟನೆಯನ್ನು ರೂಪಿಸಿ ಸಂಸ್ಥೆಯು ಜನಪ್ರೀತಿಯನ್ನು ಗಳಿಸುತ್ತಿದೆ. ಈ ನಿಟ್ಟಿನಲ್ಲಿ ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಕೈಜೋಡಿಸುತ್ತಿದೆ. ಆ ಮೂಲಕ ಧರ್ಮಸ್ಥಳದ ಖಾವಂದರಾದ ಸನ್ಮಾನ್ಯ ವೀರೇಂದ್ರ ಹೆಗ್ಗಡೆಯವರು ಈ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ತಮ್ಮ ಅಚ್ಚಳಿಯದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಡಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತಿರುವ ರೂಪಾಯಿ ಐದು ಲಕ್ಷ ದೇಣಿಗೆಯನ್ನು ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊ| ಕಾನತ್ತಿಲ ಮಹಾಲಿಂಗ ಭಟ್ಟರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್, ಪಡಿಯಡ್ಪು ಶಂಕರ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಮಂಜುನಾಥ ಮಾನ್ಯ ಮತ್ತು ಶ್ರೀಮತಿ ಸೌಮ್ಯಾ ಮಹೇಶ್ ನಿಡುಗಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಶಾಲಾ ಶಿಕ್ಷಕ ಎಚ್. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.

26 November 2013

ಮಹಾಜನ ಶತಮಾನೋತ್ಸವ ಭವನ ‘ಸಮರ್ಪಣೆ’ಗೆ ಸಿದ್ಧ


ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೇ ವರ್ಷದ ಅಗೋಸ್ತು 19 ರಂದು ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಆ ದಿನದ ಗ್ರಹಗತಿ ಅತ್ಯುತ್ತಮವಾಗಿದ್ದು ಕಟ್ಟಡದ ಕಾಮಗಾರಿ ಅತ್ಯಂತ ವೇಗವಾಗಿ ಪೂರ್ತಿಗೊಳ್ಳಲಿದೆ ಎಂದು ಶುಭ ಹಾರೈಸಿದ್ದರು. ಅವರ ನುಡಿಯಂತೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಈಗ ಪೂರ್ಣಗೊಳ್ಳುವ ಹಂತ ತಲಪಿದೆ.

ಕನ್ನಡ ಕರಾವಳಿಯ ನಾಡಿಗೆ ಸುಸಂಸ್ಕೃತ ವಿದ್ವಾಂಸ ಪರಂಪರೆಯ ಶ್ರೇಷ್ಠ ಸಾಂಸ್ಕೃತಿಕ, ಸಾಮಾಜಿಕ, ನಾಗರಿಕ ಪರಂಪರೆಯನ್ನೊದಗಿಸಿದ ಈ ಶಾಲೆ ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಲೆಗೆ ಬೆನ್ನೆಲುಬಾಗಿ ಬೆಳೆದಿರುವುದು ಕಟ್ಟಡ ನಿರ್ಮಾಣದ ಕಾರ್ಯ ವೇಗ ಪಡೆದುಕೊಳ್ಳಲು ಮೂಲ ಕಾರಣವಾಗಿದೆ. ಪೆರಡಾಲ ದೇವಸ್ಥಾನದಲ್ಲಿ ಪ್ರಾರಂಭಗೊಂಡು 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತ್ತು. ಶಾಲಾ ಕಟ್ಟಡವೂ ಸುಮಾರು ಅಷ್ಟೇ ಹಳೆಯದಾಗಿರುವುದರಿಂದ ಆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲು ಶಾಲಾ ಆಡಳಿತ ಸಮಿತಿ ತೀರ್ಮಾನಿಸಿತ್ತು. ಶಾಲಾ ಆಡಳಿತ ಮಂಡಳಿಯ ವಿನಂತಿ ಮೇರೆಗೆ ಸೆಪ್ಟೆಂಬರ್ 2 ರಂದು ಶಾಲೆಗೆ ಭೇಟಿ ನೀಡಿದ ನೂತನ ಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿ ಐ. ಸತ್ಯನಾರಾಯಣ ಭಟ್ ಹಳೆಯ ಕಟ್ಟಡವನ್ನು ಕೆಡವಲು ಅನುಮತಿ ನೀಡಿದ್ದರು.

        ಸರಕಾರೀ ಅಂಗೀಕಾರ ಗಳಿಸಿಕೊಂಡು ಹಳೆಯ ನಾಲ್ಕಂಕಣದ ಕಟ್ಟಡವನ್ನು ಕೆಡಹುವ ಕಾರ್ಯ ಓಣಂ ರಜೆಯ ಜೊತೆಗೆ ಸೆಪ್ಟೆಂಬರ್ 11 ರಂದು ಆರಂಭವಾಗಿತ್ತು. ಇತರ ಕಟ್ಟಡಗಳು ಸಾಕಷ್ಟು ಲಭ್ಯವಿರುವುದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡವನ್ನು ಕೆಡಹುವ ಕಾರ್ಯಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಶಾಲಾ ತರಗತಿಗಳನ್ನು ಪುನರ್ ವಿನ್ಯಾಸಗೊಳಿಸಿ, ಶಾಲಾ ಅಧ್ಯಯನ ವರ್ಷದ ದ್ವಿತೀಯಾರ್ಧ ಆರಂಭವಾಗುವಾಗ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವೇಗದ ಚಾಲನೆ ದೊರೆತಿತ್ತು. ಸಮಾಜದ ಎಲ್ಲ ಸಜ್ಜನರ ಆಶಯದಂತೆ, ಅತ್ಯಂತ ವೇಗವಾಗಿ ಸಾಗಿದ ಈ ಕಾರ್ಯ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಆ ಮೂಲಕ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳು ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕೆ ದೊರೆಯಲಿದೆ. ಪ್ರಸ್ತುತ ಒಂದು ಸಾವಿರ ಮಂದಿ ಮಳೆಗಾಲದಲ್ಲೂ ಆರಾಮವಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ವಿಶಾಲ ಸಭಾಂಗಣ ನಿರ್ಮಾಣ ಕಾರ್ಯ ಆರಂಭವಾಗಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮತ್ತು ಸಭಾಂಗಣಕ್ಕೆ ಅಂದಾಜು 2 ಕೋಟಿ ರೂಪಾಯಿ ಖರ್ಚು ನಿರೀಕ್ಷಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚವಾಗಿದೆ.

        ಅಂದ ಹಾಗೆ ದಶಂಬರ 20,21 ಮತ್ತು 22 ರಂದು ವೈಭವದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾವು ಕುಟುಂಬ ಸಮೇತರಾಗಿ ಬನ್ನಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಡಿ...

25 November 2013

ದಶಂಬರ 7 ರಂದು ಹಳೆವಿದ್ಯಾರ್ಥಿಗಳ ಕ್ರೀಡಾಕೂಟ, ಬನ್ನಿ...


ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು 2013 ದಶಂಬರ್ 7, ಶನಿವಾರ ಶಾಲಾ ಮೈದಾನದಲ್ಲಿ ನಡೆಸಲಾಗುವುದು. 25 ವರ್ಷಕ್ಕಿಂತ ಕೆಳಗಿನ ಪ್ರಾಯದ ಹಳೆ ವಿದ್ಯಾರ್ಥಿಗಳಿಗೆ 100 ಮೀ ಓಟ, 200 ಮೀ ಓಟ, 400 ಮೀ. ಓಟ, ಶೋಟ್‌ಪುಟ್, ಲೋಂಗ್ ಜಂಪ್, ಹೈಜಂಪ್ ಸ್ಪರ್ಧೆಗಳನ್ನು ನಡೆಸಲಾಗುವುದು. 25 ವರ್ಷಕ್ಕಿಂತ ಹಿರಿಯರಿಗೆ 100 ಮೀ ಓಟ, 200 ಮೀ ಓಟ, ಶೋಟ್‌ಪುಟ್ ಮತ್ತು ಲೋಂಗ್ ಜಂಪ್ ಸ್ಪರ್ಧೆಗಳು ನಡೆಯುವುದು. ಹಳೆ ವಿದ್ಯಾರ್ಥಿಗಳಿಗೆ ಯಾವುದಾದರೂ ಮೂರು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ. ಸೂರ್ಯನಾರಾಯಣ (9446034086) ಅವರನ್ನು ಸಂಪರ್ಕಿಸಬಹುದು.

19 November 2013

ವೃತ್ತಿ ಪರಿಚಯ ಮೇಳ - ರಾಜ್ಯ ಮಟ್ಟಕ್ಕೆ ಮನೋಜ್ ಕುಮಾರ್

ಪಿಲಿಕ್ಕೋಡಿನಲ್ಲಿ ಜರಗಿದ 2013-14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಪೌಷ್ಟಿಕಾಂಶಯುಕ್ತ ಆಹಾರ ತಯಾರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮನೋಜ್ ಕುಮಾರ್. ಈತ ನಾರಾಯಣಮಂಗಲ ನಿವಾಸಿ ನಾರಾಯಣ ಪ್ರಕಾಶ್ ಮತ್ತು ಸಾವಿತ್ರಿ ಇವರ ಪುತ್ರ. ಶುಭಾಶಯಗಳು...

ವಿಜ್ಞಾನ ಮೇಳ ರಾಜ್ಯ ಮಟ್ಟಕ್ಕೆ ಆಯ್ಕೆ

ಪಿಲಿಕ್ಕೋಡಿನಲ್ಲಿ ಜರಗಿದ 2013-14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಪ್ರೌಢಶಾಲಾ ವಿಭಾಗದ ಸ್ಥಿರ ಮಾದರಿಯಲ್ಲಿ ‘ಪ್ಲಾಸ್ಟಿಕ್‌ನಿಂದ ಪಾಲಿಸ್ಟರ್ ತಯಾರಿ - ಪರಿಸರ ಸಹ್ಯ ಪ್ಲಾಸ್ಟಿಕ್ ವಿಲೇವಾರಿ ವಿಧಾನ ಮತ್ತು ನಗರ ಮಾಲಿನ್ಯ ನಿವಾರಣೆಯ ವ್ಯವಸ್ಥೆಗೆ’ಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ಶಾಲೆಯ  ಎಂಟನೇ ತರಗತಿಯ ನಿಸರ್ಗ.ಕೆ(ಕೇಶವಪ್ರಸಾದ್ ಕೊಡ್ವಕೆರೆ - ಭಾರತಿ. ಎಂ.ಜಿ ಇವರ ಪುತ್ರಿ) ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ.ಬಿ (ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ). ಶುಭಾಶಯಗಳು...

15 November 2013

ಕಬಡ್ಡಿ ರಾಜ್ಯ ತಂಡಕ್ಕೆ ಆಯ್ಕೆ - ರಮ್ಯಾ. ಆರ್



ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಬಾಲಕಿಯರ ಕಬಡ್ಡಿ ಚಾಂಪಿಯನ್‍ಶಿಪ್ (ಪೈಕ) ನಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ರಮ್ಯಾ. ಆರ್ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಶುಭಾಶಯಗಳು...

21 October 2013

ಶಾಲಾ ಕರಕುಶಲ ಮೇಳ - 2013

ವಿದ್ಯಾರ್ಥಿಗಳ ಕರಕುಶಲ ಸಾಮರ್ಥ್ಯ, ವೈಜ್ಞಾನಿಕ ಬೆಳವಣಿಗೆಗಳನ್ನು ಪರೀಕ್ಷಿಸಲು ಮೊನ್ನೆ ಅಕ್ಟೋಬರ್ 18ರಂದು ಶಾಲಾ ಮಟ್ಟದ ಕರಕುಶಲ ಮೆಳವನ್ನು ಆಯೋಜಿಸಿದ್ದೆವು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಅಕ್ಟೋಬರ್ 30 ಮತ್ತು 31ರಂದು ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆಯಲ್ಲಿ ಜರಗಲಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು...

ಶತಮಾನದ ಸಂಭ್ರಮಕ್ಕೆ ತಲೆ ಎತ್ತುತ್ತಿದೆ ಹೊಸ ಕಟ್ಟಡ...

                                   
 ಕನ್ನಡ ಕರಾವಳಿಯ ನಾಡಿಗೆ ಸುಸಂಸ್ಕೃತ ವಿದ್ವಾಂಸ ಪರಂಪರೆಯ ಶ್ರೇಷ್ಟ ಸಾಂಸ್ಕೃತಿಕ
ಸಾಮಾಜಿಕನಾಗರಿಕ ಪರಂಪರೆಯನ್ನೊದಗಿಸಿದ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಈಗ ಶತಮಾನದ ಸಂಭ್ರಮದಲ್ಲಿದೆ. ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಲೆಗೆ ಬೆನ್ನೆಲುಬಾಗಿರುವ ಈ ವಿದ್ಯಾಸಂಸ್ಥೆ ಸಮಗ್ರ ಕರ್ನಾಟಕದಲ್ಲೇ ಕನ್ನಡತನದ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾಗಿ ಕಾಸರಗೋಡಿನ ಹೆಮ್ಮೆಯ ಕೋಡು’ ಆಗಿ ಮೆರೆಯುತ್ತಿದೆ. ಪೆರಡಾಲ ದೇವಸ್ಥಾನದಲ್ಲಿ ಪ್ರಾರಂಭಗೊಂಡು 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತು. ಆ ಮೂಲಕ ಕೇವಲ ಒಂದು ವಿದ್ಯಾಸಂಸ್ಥೆಯಾಗದೇ ಸುಸಂಸ್ಕೃತ ಪಂಡಿತ ಪರಂಪರೆಯನ್ನೇ ಸಮಾಜಕ್ಕೆ ಧಾರೆ ಎರೆಯಿತು. ಹೀಗೆ ಸತತ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅದು ಕುಂಬಳೆ ಸೀಮೆಯ ಸಾಂಸ್ಕೃತಿಕಸಾಮಾಜಿಕ ಇತಿಹಾಸದ ಭಾಗವಾಗಿ ಬೆಳೆದಿದೆ.
                ಪ್ರಸ್ತುತ ಶತಮಾನದ ಸಂಭ್ರಮದಲ್ಲಿ ನೀರ್ಚಾಲು ಶಾಲೆಯ ಪ್ರಾಚೀನ ನಾಲ್ಕಂಕಣದ ಕಟ್ಟಡಗಳನ್ನು ಕೆಡವಿಆಧುನಿಕ ಶೈಕ್ಷಣಿಕ ಪರಿಕಲ್ಪನೆಗೆ ಅನುಸಾರವಾದ ಸುಸಜ್ಜಿತ ಕಟ್ಟಡ ಶೃಂಖಲೆಯನ್ನು ನಿರ್ಮಿಸಿ ಮುಂದಿನ ತಲೆಮಾರಿನ ತನಕ ಸಂಸ್ಥೆಯನ್ನು ಬೆಳೆಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ಮೊದಲ ಹಂತವಾಗಿ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುವ ಈ ಕಟ್ಟಡಕ್ಕೆ 2 ಕೋಟಿ ರೂಪಾಯಿಗಳ ವೆಚ್ಚ ಅಂದಾಜಿಸಲಾಗಿದೆ.
                ಇದರಲ್ಲಿ ತರಗತಿ ಕೊಠಡಿಗಳಿಗಾಗಿ ಒಂದು ಕೋಟಿ ರೂಪಾಯಿಸುಸಜ್ಜಿತ ಸಭಾಂಗಣಕ್ಕೆ 50 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ. ಒಂದು ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಈ ಸಭಾಂಗಣವನ್ನು ಅಗತ್ಯ ಸಂದರ್ಭಗಳಲ್ಲಿ ತರಗತಿ ಕೊಠಡಿಯಾಗಿ ಪರಿವರ್ತಿಸಲು ಸೂಕ್ತವಾಗುವಂತೆ ರೂಪಿಸಲಾಗುತ್ತಿದೆ. ನೂತನ ಕಟ್ಟಡಕ್ಕೆ ಪೂರ್ತಿಯಾಗಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ಕಾರ್ಯಕ್ಕೆಂದೇ 15 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ. ಈ ಮೂಲಕ ಸಂಪೂರ್ಣ ಸೌರವಿದ್ಯುತ್ ಅಳವಡಿಕೆಯಾಗುವ ಪ್ರಥಮ ಸಂಸ್ಥೆಯಾಗಿ ಈ ವಿದ್ಯಾಲಯವು ಕಾಸರಗೋಡು ಜಿಲ್ಲೆಯಲ್ಲಿ ಪರಿಗಣಿತವಾಗಲಿದೆ. ಇಂಟರ್ ಲಾಕಿಂಗ್ ಮತ್ತು ಹೊರಾಂಗಣ ವಿನ್ಯಾಸಕ್ಕಾಗಿ 10 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.
                ದಶಂಬರ ತಿಂಗಳೊಳಗೆ ಈ ಕಾಮಗಾರಿಗಳನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿರುವ ಹಳೆವಿದ್ಯಾರ್ಥಿಗಳಿಂದ ಮತ್ತು ದಾನಿಗಳಿಂದ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದೆ. ವಿವಿಧ ಹುದ್ದೆಗಳಲ್ಲಿರುವ ಇಲ್ಲಿನ ಹಳೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿದ ಶೈಕ್ಷಣಿಕ ಸಂಸ್ಥೆಗಾಗಿವಿದ್ಯಾರ್ಥಿ ಜೀವನದ ಮಧುರ ಸ್ಮರಣೆಯೊಂದಿಗೆ ಆರ್ಥಿಕ ಸಹಾಯವನ್ನು ಒದಗಿಸಿ ಪ್ರೋತ್ಸಾಹಿಸಬೇಕೆಂದು ಶಾಲಾ ಆಡಳಿತ ಮಂಡಳಿ ವಿನಂತಿಸಿದೆ.
                ಶಾಲೆಯ ಶತಮಾನೋತ್ಸವ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ಶಾಲಾ ಬ್ಲಾಗ್ http://mschsnirchal.blogspot.in/ ಮತ್ತು ವೆಬ್‌ಸೈಟ್http://mahajanaschools.com/ ಗಳನ್ನು ಸಂದರ್ಶಿಸಬಹುದು. ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಹಾಯಧನ ನೀಡಲು ಆಸಕ್ತಿ ಹೊಂದಿದ ಮಹಾಜನರು ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖೆಯ SB ಖಾತೆ ಸಂಖ್ಯೆ 5322500100957501, IFSC: KARB0000532 ಖಾತೆಗೆ ಜಮಾ ಮಾಡಬಹುದಾಗಿದೆ. ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ಮುಂದಿನ ಹಂತದ ಸಭೆಯನ್ನು ಅಕ್ಟೋಬರ್ 26 ಶನಿವಾರ ಬೆಳಗ್ಗೆ 10 ಗಂಟೆಗೆ ಶಾಲಾ ಪರಿಸರದಲ್ಲಿ ಕರೆಯಲಾಗಿದೆ. ಹಿತೈಷಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಿನಂತಿಸಿದ್ದಾರೆ.

05 October 2013

ಬಹುಮಾನದ ಮೊತ್ತವನ್ನು ಶತಮಾನೋತ್ಸವಕ್ಕೆ ನೀಡಿದ ಶ್ರೀಶ.ಕೆ



ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ 2013-14 ಅಧ್ಯಯನ ವರ್ಷದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾಸರಗೋಡು ಜಿಲ್ಲಾ ಮಟ್ಟದ ವಾಚನ ಪರೀಕ್ಷೆಯಲ್ಲಿ ಮತ್ತು ವನ್ಯ ಜೀವಿ ಸಪ್ತಾಹದ ಅಂಗವಾಗಿ ಕೇರಳ ಅರಣ್ಯ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀಶ.ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈತ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಸುಬ್ರಹ್ಮಣ್ಯ ಭಟ್ ಮತ್ತು ನಮ್ಮ ಶಾಲೆಯ ಶಿಕ್ಷಕಿ ಶೈಲಜಾ.ಬಿ ಇವರ ಪುತ್ರ. ಒಟ್ಟು ಬಹುಮಾನದ ಮೊತ್ತ ಎಂಟುಸಾವಿರದ ಐನೂರು ರೂಪಾಯಿಯನ್ನು ಶಾಲಾ ಶತಮಾನೋತ್ಸವ ಕಾರ್ಯಕ್ರಮಗಳಿಗೆ ನೀಡಿ ಈತ ಸಮಾಜಕ್ಕೆ ಮಾದರಿಯಾಗಿದ್ದಾನೆ. ಶುಭಾಶಯಗಳು...

03 October 2013

ಜಿಲ್ಲಾ ಮಟ್ಟದ ಜಲವರ್ಣಚಿತ್ರ ರಚನೆ - ನಮ್ಮ ಶಾಲೆಗೆ ಬಹುಮಾನ

ಕೇರಳ ರಾಜ್ಯ ಸಿವಿಲ್ ಸಪ್ಲೈಸ್ ಕಾರ್ಪೊರೇಷನ್ (ಸಪ್ಲೈಕೋ) ವತಿಯಿಂದ ದಿನಾಂಕ 28.09.2013 ಶನಿವಾರ ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಜಲವರ್ಣ ಚಿತ್ರರಚನಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಗೌತಮ್. ಒ ಪ್ರಥಮ ಸ್ಥಾನ ಹಾಗೂ ಆದರ್ಶ.ಎಚ್.ಎ ದ್ವಿತೀಯ ಸ್ಥಾನ ಗಳಿಸಿ ಎರ್ನಾಕುಳಂನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ. ಶುಭಾಶಯಗಳು...

01 October 2013

ಅಕ್ಟೋಬರ್ 6ರಂದು ಶತಮಾನೋತ್ಸವ ಸಮಿತಿ ಸಭೆ


ನಮ್ಮ ಶಾಲೆಗಳ ಶತಮಾನೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿವೆ. ಹಳೆಯ ನಾಲ್ಕು ಸೂತ್ರದ ಕಟ್ಟಡವಿದ್ದ ಜಾಗದಲ್ಲಿ ಪ್ರಥಮ ಹಂತವಾಗಿ ಹನ್ನೊಂದು ತರಗತಿ ಕೊಠಡಿಯನ್ನು ಒಳಗೊಂಡ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಬಗ್ಗೆ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಗೆ ರೂಪುರೇಷೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಶತಮಾನೋತ್ಸವದ ವಿವಿಧ ಸಮಿತಿಗಳು, ಪೂರ್ವ ವಿದ್ಯಾರ್ಥಿಗಳು ಮತ್ತು ಆಸಕ್ತರ ಸಭೆಯನ್ನು 06.10.2013 ಭಾನುವಾರ ಅಪರಾಹ್ನ 3 ಗಂಟೆಗೆ ಕರೆಯಲಾಗಿದೆ. ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ.

ಜಿಲ್ಲಾ ಮಟ್ಟದ ವಾರ್ತಾ ವಾಚನ – ವಿನಯಾ.ಕೆ ಪ್ರಥಮ


ಕಾಸರಗೋಡು ಜಿಲ್ಲಾ ಸಮಾಜ ವಿಜ್ಞಾನ ಸಂಘವು ಪುದಿಯಕಂಡಂ ಸರಕಾರಿ ಹಿರಿಯ ಬುನಾದಿ ಶಾಲೆಯಲ್ಲಿ 25.09.2013 ರಂದು ಏರ್ಪಡಿಸಿದ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ವಾರ್ತಾ ವಾಚನ (ನ್ಯೂಸ್ ರೀಡಿಂಗ್) ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವಿನಯಾ.ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಗಣರಾಜ ಭಟ್ ಪೆರ್ವ ಮತ್ತು ಶಕುಂತಳಾ ಇವರ ಪುತ್ರಿ.

13 September 2013

ಮಕ್ಕಳ ಧ್ವನಿ - 2013

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ಇತ್ತೀಚೆಗೆ ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಆಯೋಜಿಸಿದ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದರು.

12 September 2013

ಹೊಸತನದ ಕಡೆಗೆ ನಮ್ಮ ಶಾಲೆ...


ಶಾಲೆಯ ಈ ಹಳೆಯ ನಾಲ್ಕು ಸೂತ್ರದ ಕಟ್ಟಡ ಸಹಸ್ರಾರು ಮಂದಿಗೆ ಅರಿವಿನ ಅಕ್ಷರಗಳನ್ನು ಹೇಳಿಕೊಟ್ಟಿದೆ. ಶತಮಾನೋತ್ಸವದ ಸಿದ್ಧತೆಯಲ್ಲಿ ಈ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ತಲೆ ಎತ್ತಲಿದೆ. ಸಿದ್ಧತೆಗಳು ಆರಂಭವಾಗಿವೆ, ನಿನ್ನೆಯಿಂದ...

ಶ್ರೀಶ.ಕೆ - ವಾಚನ ಪರೀಕ್ಷೆಯಲ್ಲಿ ಪ್ರಥಮ


ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ 2013-14 ಅಧ್ಯಯನ ವರ್ಷದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾಸರಗೋಡು ತಾಲೂಕು ಮಟ್ಟದ ವಾಚನ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀಶ.ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈತ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಸುಬ್ರಹ್ಮಣ್ಯ ಭಟ್ ಮತ್ತು ನಮ್ಮ ಶಾಲಾ ಶಿಕ್ಷಕಿ ಶೈಲಜಾ.ಬಿ ಇವರ ಪುತ್ರ.

28 August 2013

‘ಶ್ರೀಕೃಷ್ಣ ಜಯಂತಿ’ - 2013

   


“ಶ್ರೀಕೃಷ್ಣ ಬೆಣ್ಣೆಕಳ್ಳ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಕೃಷ್ಣ ಆತನ ಜೊತೆಗಿದ್ದ ಅಶಕ್ತ ಮಕ್ಕಳಿಗಾಗಿ ಗೋಪಿಕೆಯರ ಬಳಿಯಲ್ಲಿದ್ದ ಬೆಣ್ಣೆಯನ್ನು ಕದ್ದು ಪುಟಾಣಿಗಳಿಗೆ ಪೌಷ್ಟಿಕ ಆಹಾರವನ್ನು ಕೊಡುತ್ತಿದ್ದ. ಆತನ ಜನನ, ಬಾಲ ಲೀಲೆಗಳೆಲ್ಲವೂ ಲೋಕ ಕಲ್ಯಾಣಕ್ಕಾಗಿ ಮುಡಿಪಾಗಿದ್ದವು. ಅಂತಹ ಪರಮಾತ್ಮನ ಲೀಲೆಗಳನ್ನು ಕೊಂಡಾಡುವುದಕ್ಕಾಗಿ ಇಂತಹ ಆಚರಣೆಗಳನ್ನು ಸಮಾಜದಲ್ಲಿ ನಡೆಸಲಾಗುತ್ತಿದೆ. ಇವು ಸಮಾಜದ ಅಭಿವೃದ್ಧಿಗೆ ದಾರಿದೀಪವಾಗುತ್ತವೆ.” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀರ್ಚಾಲು ಮೇಲಿನ ಪೇಟೆಯ ಸ್ವೀಕಾರ್ ಕಮ್ಯುನಿಕೇಷನ್ಸ್ ಮಾಲಕ ರವಿ.ಕೆ ಪ್ರಾಯೋಜಿಸಿದ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಅನುಶ್ರೀ. ಎಂ.ಪಿ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಳ್ಳಪದವು ನಟರಾಜ ಶರ್ಮ ಇವರಿಂದ ‘ಭಕ್ತಿಗೀತೆ’ ಗಾಯನ ಕಾರ್ಯಕ್ರಮ ಜರಗಿತು.