ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ, ಕಾಸರಗೋಡಿನ ಬದಿಯಡ್ಕ ಬಳಿಯ ಕೂಳಕ್ಕೋಡ್ಲು ಈಶಾವಾಸ್ಯಂ ಮನೆಯ ಹುಡುಗ ಸಂಸ್ಕೃತ ಲೋಕದಲ್ಲಿ ಉತ್ತಮ ಸಾಧನೆಗೈದು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಯರ ಪುತ್ರ ೨೯ ವರ್ಷದ ಯುವ ಸಂಶೋಧಕ ಮಹೇಶ್ ಕೂಳಕ್ಕೋಡ್ಲು ಈ ಸಾಧನೆಗೈದ ಪ್ರತಿಭಾವಂತ.
‘ಎ ಕ್ರಿಟಿಕಲ್ ಸ್ಟಡಿ ಓಫ್ ಸಿದ್ಧಾಂತ ದರ್ಪಣ ಓಫ್ ನೀಲಕಂಠ ಸೋಮಯಾಜಿ’ ಎಂಬ ಶೀರ್ಷಿಕೆಯ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಚಾರ್ಯ ಶ್ರೀ ರಾಮಸುಬ್ರಹ್ಮಣ್ಯಂ ಮಾರ್ಗದರ್ಶನದಲ್ಲಿ ಬರೆದಿರುವ ಮಹೇಶ್ ಈ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಸಂಸ್ಕೃತದಲ್ಲಿರುವ ವಿಜ್ಞಾನ ವಿಷಯವನ್ನು ಆಧರಿಸಿ ಸಿದ್ಧವಾದ ಮೊದಲ ಪಿಎಚ್‌ಡಿ ಇದು ಎಂಬುದು ಈ ಪದವಿಯ ಗೌರವವನ್ನು ಹೆಚ್ಚಿಸುತ್ತದೆ.
ಸಂಸ್ಕೃತದಲ್ಲಿರುವ ಈ ಸಿದ್ಧಾಂತ-ದರ್ಪಣ ಗ್ರಂಥ ಭಾರತೀಯ ಖಗೋಳ ಶಾಸ್ತ್ರದ ಕೆಲವು ನಿಯಮಗಳನ್ನು ಉಲ್ಲೇಖಿಸುತ್ತದೆ. ಇದನ್ನು ರಚಿಸಿದ ವಿಜ್ಞಾನಿ ಕೇರಳದ ತ್ರಿಕ್ಕಂಟಿಯೂರಿನ ನೀಲಕಂಠ (೧೫ ನೆ ಶತಮಾನ), ನಮ್ಮ ದೇಶ ಕಂಡ ಒಬ್ಬ ಅತ್ಯಂತ ಮೇಧಾವೀ ಗಣಿತ-ಖಗೋಳಜ್ಞ. ಈ ಗ್ರಂಥದ ಭಾಷೆ, ವ್ಯಾಖ್ಯಾನ, ವಿಷಯ ಪ್ರಸ್ತುತಿಯ ಶೈಲಿ ಎಲ್ಲವೂ ಅದ್ಭುತ. ಒಬ್ಬ ವಿಜ್ಞಾನಿಗೆ ಇರಬೇಕಾದ ದೃಷ್ಟಿ, ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಹೇಳಬೇಕಾದ ಹಿತವಚನಗಳ ಸಂಗ್ರಹ ಈ ಗ್ರಂಥದಲ್ಲಿದೆ. ಭಾರತೀಯ ವಿಜ್ಞಾನ/ಗಣಿತದಲ್ಲಿ ಉಪಪತ್ತಿ (ಪ್ರೂಫ್)- ಮತ್ತು ವೈಚಾರಿಕ ಚಿಂತನೆಗೆ ಎಷ್ಟು ಮಹತ್ತ್ವ ನೀಡಲಾಗಿದೆ ಎನ್ನುವುದು ಕೂಡಾ ಈ ಗ್ರಂಥದಲ್ಲಿ ವ್ಯಕ್ತವಾಗುತ್ತದೆ. ಭಾರತದ ಗ್ರಂಥಗಳಲ್ಲಿ ಪ್ರೂಫ್ ಇಲ್ಲ ಎಂಬ ಒಂದು ಮಿಥ್ಯಾ ಆರೋಪ ವಿದೇಶೀಯರಲ್ಲಿರುವುದರಿಂದ ಈ ಗ್ರಂಥಕ್ಕೆ ಅಪಾರ ಮಹತ್ವವಿದೆ.
ಮಹೇಶ್ ಈ ಗ್ರಂಥದ ಸಂಪೂರ್ಣ ಆಂಗ್ಲ ಭಾಷಾಂತರ ಮಾಡಿದ್ದಾರೆ ಮತ್ತು ಅಗತ್ಯ ವಿವರಣೆಗಳನ್ನೂ ಆಂಗ್ಲ ಭಾಷೆಯಲ್ಲಿ ನೀಡಿದ್ದಾರೆ. ಸೂಕ್ತ ಆಧುನಿಕ ಗಣಿತ ವಿವರಣೆ, ಅಗತ್ಯ ಚಿತ್ರಗಳನ್ನೂ ಸೇರಿಸಿದ್ದಾರೆ. ಗ್ರಹ-ಭ್ರಮಣ ಸಿದ್ಧಾಂತ (ಥಿಯರಿ ಓಫ್ ಪ್ಲಾನೆಟರಿ ಮೋಷನ್) ದ ಬೆಳವಣಿಗೆಯಲ್ಲಿ ಗ್ರಂಥದ ಕೊಡುಗೆ ಇತ್ಯಾದಿ ಮಹತ್ತ್ವ ಪೂರ್ಣ ವಿಷಯದ ಕುರಿತು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಇತಿಹಾಸ ತಿಳಿಯಲು ಹಾಗೂ ನಮ್ಮ ಪೂರ್ವಜರ ಕೊಡುಗೆಯ ಮಹತ್ತ್ವ ತಿಳಿಯಲು ಈ ಅಧ್ಯಯನ ಸಹಕಾರಿ ಆಗಲಿದೆ.
ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಸೆಪ್ಟೆಂಬರ್ ೧-೫, ೨೦೦೯ ದ ತನಕ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ಈ ವಿಶ್ವ ವಿದ್ಯಾಲಯದಲ್ಲಿ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ. ಇಂತಹ ಅತ್ಯಪೂರ್ವ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾಡಲ್ಪಟ್ಟಿದ್ದವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದಿದ್ದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ಸುಮಾರು ೫೦೦. ಇಂತಹ ಅಪೂರ್ವ ಸಮ್ಮೇಳನದಲ್ಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ‘ಶ್ಯೇನ ಚಿತಿ’ ಎಂಬ ಒಂದು ವಿಚಾರವನ್ನು ಮಹೇಶ ಕೂಳಕ್ಕೋಡ್ಲು ಪ್ರಸ್ತುತ ಪಡಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ.ಪೂ. ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದೃಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವನ್ನು ಕೂಳಕ್ಕೋಡ್ಳು ಮಹೇಶ್ ಮಾಡಿದ್ದರು.
ನ್ಯೂಟನ ನಿಗಿಂತ ಸುಮಾರು ೨೦೦ ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (ಬೈನೋಮಿಯಲ್ ಎಕ್ಸ್‌ಪಾನ್ಶನ್) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (ಟರ್ನಿಂಗ್ ಏನ್ ಆಲ್ಜೀಬ್ರಿಕ್ ಎಕ್ಸ್‌ಪ್ರೆಷನ್ ಇನ್ ಟು ಏನ್ ಇನ್‌ಫೈನೈಟ್ ಸೀರೀಸ್ - ಏನ್ ಇಂಡಿಯನ್ ಕೋಂಟ್ರಿಬ್ಯೂಷನ್) ಅವರು ಕಳೆದ ವರ್ಷಾರಂಭದಲ್ಲಿ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಭಾರತೀಯ ವಿಜ್ಞಾನದ ಬಗ್ಗೆ ಅಧ್ಯಯನ ಕಾರ್ಯ ನಿರತರಾಗಿದ್ದಾರೆ. ಇವರು ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ್ದಾರೆ. ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (೨೦೦೩), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (೨೦೦೩),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (೨೦೦೮--) ಗಳನ್ನೂ ಸಾಧಿಸಿದವರಾಗಿದ್ದಾರೆ. ಮುಂಬೈ ಐಐಟಿ ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ. ಅಭಿನಂದನೆಗಳು, ಮಹೇಶ್...
ಉತ್ತಮ ಮಾಹಿತಿ. ಅವರಿಗೆ ಅಭಿನಂದನೆ ತಿಳಿಸಿ
ReplyDeletemaheshanna...Haardika Shubhashayagalu.....
ReplyDeleteತುಂಬ ಧನ್ಯವಾದಗಳು,
ReplyDeleteಅಭಿನಂದನೆಗಳನ್ನು ತಿಳಿಸುತ್ತಿರುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
ಈ ಸಾಧನೆಯಲ್ಲಿ ಮಹಾಜನ ಶಾಲೆಯಿಂದ ಸಿಕ್ಕಿದ ಜ್ಞಾನದ ಕೊಡುಗೆ ಬಹಳಷ್ಟಿದೆ. ಈ ಅಭಿಮಾನದಿಂದ ಶೋಧ ಪ್ರಬಂಧದಲ್ಲಿ ಶಾಲೆಯ ಹೆಸರನ್ನು ಉಲ್ಲೇಖಿಸಿ ನನ್ನ ಧನ್ಯತೆಯನ್ನು ಪ್ರಕಟಿಸುವ ಪ್ರಯತ್ನವನ್ನ ಮಾಡಿದ್ದೇನೆ.
ನನ್ನ ಎಲ್ಲಾ ಶಿಕ್ಷಕರಿಗೆ, ಹಿರಿಯರಿಗೆ, ಊರಿನವರಿಗೆ, ಮಿತ್ರರಿಗೆ.... ಮನಃ ಪೂರ್ವಕ ಮತ್ತು ನಮಃ ಪೂರ್ವಕ ಕೃತಜ್ಞತೆಗಳು.
ಮಹೇಶ್ ಅವರಿಗೆ ಅಭಿನಂದನೆಗಳು, ಮುಂದೆಯೂ ಒಳ್ಳೆದಾಗಲಿ ಎಂಬ ಶುಭ ಹಾರೈಕೆಗಳು.
ReplyDelete