“ಶಾಲಾ ಕಲೋತ್ಸವವು ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ದೊರೆಯುವ ಸುವರ್ಣಾವಕಾಶ. ಈ ಬಾರಿ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವವನ್ನು ಆಯೋಜಿಸುವ ಜವಾಬ್ದಾರಿ ನೀರ್ಚಾಲಿಗೆ ದೊರೆತಿದೆ. ಮಹಾಜನರು ನಡೆದಾಡಿದ ಈ ನೆಲದಲ್ಲಿ ಕುಂಬಳೆ ಉಪಜಿಲ್ಲೆಯ ನೂರಕ್ಕೂ ಮಿಕ್ಕಿ ಶಾಲೆಗಳಿಂದ ಮೂರು ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮವು ಯಶಸ್ವಿಯಾಗಲಿ'' ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ 58ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಂಘಟಕ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯ ಅವಿನಾಶ್ ರೈ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಜಯಂತಿ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಪ್ರೇಮಕುಮಾರಿ, ದೇಲಂಪಾಡಿ ಗ್ರಾಮ ಪಂಚಾಯತು ಸದಸ್ಯ ಗಂಗಾಧರ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ. ಶುಭ ಹಾರೈಸಿದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯೋಪಾಧ್ಯಾಯರ ಸಂಘದ ಸಂಚಾಲಕ ವಿಷ್ಣುಪಾಲನ್ ವಿವಿಧ ಸಮಿತಿಗಳ ಕುರಿತು ಮಾಹಿತಿ ನೀಡಿದರು. 2017 ಅಕ್ಟೋಬರ್ 31 ರಿಂದ ನವೆಂಬರ್ 4 ರ ತನಕ ಜರಗುವ ಈ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರೂಪೀಕರಿಸಿ ರೂಪಾಯಿ ಹದಿಮೂರು ಲಕ್ಷದ ಇಪ್ಪತ್ತು ಸಾವಿರದ ಬಜೆಟ್ ಅಂಗೀಕರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿದರು, ಹಿರಿಯ ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು. ಶಿಕ್ಷಕ ಶಿವಪ್ರಕಾಶ್.ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment