Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

02 November 2017

ಕಲೋತ್ಸವ - ಉದ್ಘಾಟನೆ


“ಪುಣ್ಯಕಲೆಗಳ ಸಮ್ಮಿಲನದಿಂದ ಕಲೋತ್ಸವಗಳು ನಡೆಯುತ್ತವೆ. ಮಾನವತೆಯೇ ಮಾನವ ಸಂಪನ್ಮೂಲವಾಗಿದೆ. ಬುದ್ಧಿಯನ್ನು ವಿಕಾಸಗೊಳಿಸಿದರೆ ನಮಗೆ ಜಯವಿದೆ” ಎಂದು ಮುಂಬೈ ಐಐಟಿಯಲ್ಲಿ ಸಂಶೋಧಕರಾಗಿರುವ ಡಾ| ಮಹೇಶ್ ಕೂಳಕ್ಕೋಡ್ಲು ಅಭಿಪ್ರಾಯಪಟ್ಟರು. 
ಅವರು ಇಂದು ನಮ್ಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ 58ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಸದ್ವಿಚಾರ, ಸದಾಚಾರಗಳೆಂಬ ಪುಣ್ಯ ಕಲೆಗಳು ಮನುಜನಲ್ಲಿರಬೇಕು. ಸುಕೃತ ಹಾಗೂ ಕಠಿಣ ಪರಿಶ್ರಮದಿಂದ ಒಬ್ಬ ಕಲಾವಿದ ರೂಪುಗೊಳ್ಳುತ್ತಾನೆ. ಯಾರಲ್ಲಿ ಯಾವ ರೀತಿ ವ್ಯವಹರಿಸಬೇಕೆಂದು ತಿಳಿದಿರುವವನೇ ಜೀವನದ ಕಲೆಯಲ್ಲಿ ಉತ್ತೀರ್ಣನಾಗುತ್ತಾನೆ. ಅಂತಹ ಕುಶಲವಾದ ಕಲಾವಿದರಿಂದ ಈ ಲೋಕ ನಡೆಯುತ್ತದೆ ಎಂದರು.
ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಎಲ್ಲರ ಸಹಕಾರದಿಂದ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂದು ಹೇಳಿದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಮಗುವಿನಲ್ಲಿರುವ ಸಹಜವಾದ ಪ್ರತಿಭೆಗಳನ್ನು ಹೊರತರುವಲ್ಲಿ ನಮ್ಮ ಪ್ರೋತ್ಸಾಹವಿರಬೇಕು. ಅಭಿರುಚಿಗೆ ವಿರುದ್ಧವಾದ ಒತ್ತಡ ಅವರ ಮೇಲೆ ಹೇರಬಾರದು. ಶತಮಾನದ ಶಾಲೆಯಲ್ಲಿ ಶತಮಾನದ ಮಾದರಿ ಕಾರ್ಯಕ್ರಮವಾಗಿ ಈ ಕಲೋತ್ಸವವು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲಿದೆ. ‘ಟೋಕನ್’ ಇಲ್ಲದೆ ಸಹಸ್ರಾರು ಜನರಿಗೆ ಕಲೋತ್ಸವದ ಊಟವನ್ನು ನೀಡಿದ ಶತಮಾನದ ಮಹಾಜನ ಶಾಲೆ ಇದು ಎಂದರು.
ಸಂಸ್ಕೃತಿ ಹಾಗೂ ಸಂಸ್ಕಾರದ ಸರಸ್ವತೀ ದೇಗುಲದಲ್ಲಿ ನಡೆಯುವ ಕಲೋತ್ಸವವು ವಿಜಯಿಯಾಗಲಿ ಎಂದರು.
ಎಣ್ಮಕಜೆ ಗ್ರಾಮಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗಳಲ್ಲಿ ಭಾಗಹಿಸುವುದೇ ಮುಖ್ಯವಾಗಿದೆ. ಗೆಲ್ಲುವ ಗುರಿಯನ್ನು ಹೊಂದಿ ಇತರರನ್ನೂ ಗೆಲ್ಲಿಸುವಲ್ಲಿ ನಮ್ಮ ಶ್ರಮವಿರಬೇಕೇ ಹೊರತು ಇತರರನ್ನು ಸೋಲಿಸಿ ಗೆಲ್ಲುವ ಮನಸ್ಸು ನಮ್ಮ ನಿಜ ಜೀವನದಲ್ಲಿ ಇರಬಾರದು ಎಂದರು. 
ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ.ಕೆ.ಎಲ್, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ. ಜೆ, ಕಾಸರಗೋಡು ಬ್ಲೋಕ್ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್, ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸೈಬುನ್ನೀಸಾ, ಬದಿಯಡ್ಕ ಗ್ರಾಮ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಬ್ಲೋಕ್ ಪಂಚಾಯತ್ ಸದಸ್ಯ ಅವಿನಾಶ್.ವಿ.ರೈ, ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಶಂಕರ.ಡಿ, ಪ್ರೇಮಕುಮಾರಿ, ಮುನೀರ್,  ಜಯಂತಿ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ನೀರ್ಚಾಲು ಸೊಸೈಟಿಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ, ಕುಂಬಳೆ ಬ್ಲೋಕ್ ಪ್ರೋಗ್ರಾಮ್ ಆಫೀಸರ್ ಕುಞಿಕೃಷ್ಣನ್, ಕುಂಬಳೆ ಉಪಜಿಲ್ಲಾ ಹೆಡ್ ಮಾಸ್ಟರ್ಸ್ ಫೋರಂ ನ ಸಂಚಾಲಕ ವಿಷ್ಣುಪಾಲ.ಬಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಎಸ್.ನಾರಾಯಣ ಮತ್ತು ಉದಯ ಕಂಬಾರು, ಶಾಲಾ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಜಯ.ಎಸ್.ಭಟ್ ಮತ್ತು ಶ್ರೀಮತಿ ಸ್ಮಿತ.ಎಸ್.ಶರ್ಮ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದವನ್ನಿತ್ತರು. ಅಧ್ಯಾಪಕ ವಿಶ್ವನಾಥ ಭಟ್ ನಿರೂಪಣೆಗೈದರು.

ಕಲೋತ್ಸವದಲ್ಲಿ......

* ಕುಂಬಳೆ ಉಪಜಿಲ್ಲೆಯ 117 ಶಾಲೆಗಳಿಂದ 3700 ಮಂದಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ
* ದಿನನಿತ್ಯ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ, ಪಾಯಸ, ವಿವಿಧ ತಿಂಡಿಗಳು.
* ಅಚ್ಚುಕಟ್ಟಾದ ಪಾರ್ಕಿಂಗ್ ಹಾಗೂ ಇತರ ವ್ಯವಸ್ಥೆಗಳು.
* ಭಾರತದ ಪುಣ್ಯ ನದಿಗಳ ಹೆಸರಿನ ವೇದಿಕೆಗಳು.
* ನ.4ರಂದು ಸಮಾರೋಪ ಸಮಾರಂಭ.
* ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿ ಶಾಲಾ ಮಕ್ಕಳು, ಅಧ್ಯಾಪಕರು, ರಕ್ಷಕರು, ವಿವಿಧ ಸಂಘಸಂಸ್ಥೆಗಳು ಹಾಗೂ ಊರವರ ಪಾಲ್ಗೊಳ್ಳುವಿಕೆ
* ಆಲ್ ಕೇರಳ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಬದಿಯಡ್ಕ ಯೂನಿಟ್ ವತಿಯಿಂದ ಛಾಯಾಚಿತ್ರ ಪ್ರದರ್ಶನ
* ಕ್ಯಾಂಪ್ಕೋ ವತಿಯಿಂದ ಮಾರಾಟ ಮಳಿಗೆ

No comments:

Post a Comment