Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 November 2017

ಕುಂಬಳೆ ಉಪಜಿಲ್ಲಾ ಕಲೋತ್ಸವ ಸಮಾರೋಪ


“ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅಂತಹ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಜನಜನಿತವಾಗಿರುವ ಶಾಲಾ ಕಲೋತ್ಸವಗಳು ಈ ಮಣ್ಣಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಸಾಂಸ್ಕೃತಿಕ, ಸಾಮಾಜಿಕ ಸಹಿತ ಸಮಗ್ರ ರಂಗಗಳಲ್ಲಿ ಕರಾವಳಿಯಲ್ಲೇ ಹೆಸರು ಪಡೆದಿರುವ ನೀರ್ಚಾಲಿನಲ್ಲಿ ಪ್ರಸ್ತುತ ವರ್ಷದ ಉಪಜಿಲ್ಲಾ ಕಲೋತ್ಸವಗಳು ವ್ಯವಸ್ಥಿತವಾಗಿ ನಡೆದಿರುವುದು ಹಿರಿಯೆಯ ದ್ಯೋತಕ ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲೆಗಳಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ 58ನೇ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವನ್ನು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾಗವಹಿಸಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳಲ್ಲಿ ಹಲವರು ಪ್ರಥಮ ಸ್ಥಾನ ಪಡೆದಿರಬಹುದು. ಆದರೆ ಮಿಕ್ಕುಳಿದವರು ಕನಿಷ್ಠರೆಂದಲ್ಲ ಎಂದು ತಿಳಿಸಿದ ಅವರು, ಸ್ಪರ್ಧೆ ಬದುಕಿನ ವಿವಿಧ ಹಂತಗಳಿಗೆ ಸತ್ ಪ್ರೇರಣೆ ನೀಡಿ ಇನ್ನಷ್ಟು ಗೆಲುವಿನ ಪಯಣಕ್ಕೆ ಮಾರ್ಗದರ್ಶಿಯಾಗಲಿ ಎಂದು ಅವರು ತಿಳಿಸಿದರು.

ಬದಿಯಡ್ಕ ಗ್ರಾ.ಪಂ. ಸದಸ್ಯ ಡಿ.ಶಂಕರ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ, ಬದಿಯಡ್ಕ ಗ್ರಾ.ಪಂ. ಸದಸ್ಯ ಮೊಹಮ್ಮದ್ ಬಿ.ಎ, ಬಾಲಕೃಷ್ಣ ಶೆಟ್ಟಿ ಕಡಾರು, ಉಪಸ್ಥಿತರಿದ್ದು ಶುಭಹಾರೈಸಿದರು.  ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂರ್ತಿ ಬಹುಮಾನಗಳನ್ನು ವಿತರಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್, ಹೆಡ್ ಮಾಸ್ಟರ್ಸ್ ಫೋರಂ ಸಂಚಾಲಕ ವಿಷ್ಣುಪಾಲ ಶುಭಹಾರೈಸಿದರು. ಕಲೋತ್ಸವದ ಲಾಂಛನ ನಿರ್ಮಿಸಿದ ವೇಣುಗೋಪಾಲ ಆರೋಳಿಯವರನ್ನು ಸಭೆಯಲ್ಲಿ ಗೌರವಿಸಲಾಯಿತು.  ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸ್ವಾಗತಿಸಿ, ಶಿವಪ್ರಕಾಶ್ ಎಂ.ಕೆ ವಂದಿಸಿದರು. ಶಿಕ್ಷಕರಾದ ರವೀಂದ್ರ ಮತ್ತು ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment