Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

24 April 2009

ಧನ್ಯವಾದಗಳು ನಿಮಗೆ.......

ವಿದ್ಯಾರ್ಥಿಗಳ ಪ್ರತಿಭೆಯನ್ನು ನಿಜಾರ್ಥದಲ್ಲಿ ಜಾಗತಿಕವಾಗಿ ಹೊರಹಮ್ಮಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಅನಿಸುತ್ತಿದೆ. ನಮ್ಮ ಬ್ಲಾಗ್ ಫಾಲೋವರ್ ಸಂಖ್ಯೆ ಅಜೇಯ ಅರ್ಧಶತಕವನ್ನು ದಾಖಲಿಸಿದೆ. ನಾನು ನೋಡಿದ ಕನ್ನಡದ ಬ್ಲಾಗ್‌ಗಳಲ್ಲಿ ಇಷ್ಟು ಫಾಲೋವರ್‌ಗಳಿರುವ ಇನ್ನೊಂದು ಬ್ಲಾಗ್ ಇಲ್ಲ. ಇಷ್ತು ಮಾತ್ರವಲ್ಲ ಅಲ್ಪ ಕಾಲದಲ್ಲಿ ನಾವು ದಾಖಲಿಸಿದ ಹಿಟ್ಸ್ ಸಂಖ್ಯೆ ನಾವೇ ನಿಬ್ಬೆರಗಾಗುವಂತೆ ಬೆಳೆಯುತ್ತಿದೆ. ಅಂದ ಹಾಗೆ ನಮ್ಮ ಫಾಲೋವರ್ ಪಟ್ಟಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ, ಹಳೆವಿದ್ಯಾರ್ಥಿಗಳಿದ್ದಾರೆ, ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಬೆನ್ನು ತಟ್ಟುವ ಹಿರಿಯ ಕನ್ನಡ ಬರಹಗಾರರಿದ್ದಾರೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೆ ನಾವು ಚಿರಋಣಿಯಾಗಿರುತ್ತೇವೆ. ಈ ಪ್ರೀತಿ ಸದಾ ಹೀಗೆಯೇ.... ಮುಂದುವರಿಯಲಿ.

17 April 2009

ಪ್ರಬಂಧ ೦೭ - ಕೋಲ್ಕತ್ತದಲ್ಲಿ ‘ಪಕ್ಷಿಲೋಕದಲ್ಲೊಂದು ಪ್ರಸಂಗ’


-ಅನುಪಮ.ಪಿ.ಎಸ್
ವಿಷ್ಣು ಶರ್ಮನ ಪಂಚತಂತ್ರ ಕಥೆಯನ್ನಾಧರಿಸಿ ಆಧುನಿಕ ಕಾಲಕ್ಕೆ ಹೋಲಿಸಿ ರಚಿಸಲಾದ ಡಾಎಚ್.ವಿ. ವೇಣುಗೋಪಾಲ್ ರ ‘ಪಕ್ಷಿಲೋಕದಲ್ಲೊಂದು ಪ್ರಸಂಗ’ ನಾಟಕವನ್ನು ಅಪೂರ್ವ ಕಲಾವಿದರು ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕಾಗಿ ಆರಿಸಿದ್ದರು.

ಅಪೂರ್ವ ಕಲಾವಿದರು ಇದರ ಅಧ್ಯಕ್ಷ ಉಮೇಶ್ ಸಾಲ್ಯಾನ್ ನಮ್ಮ ನಾಟಕ ತಂಡದ ನಿರ್ದೇಶಕರು. ಪುಷ್ಪರಾಜ್, ಜಾಹ್ನವಿ, ವಾಸು ಬಾಯಾರ್, ರೀನಾ, ಗೋಪಾಲ್, ಸುರೇಂದ್ರ ಮೊದಲಾದವರು ಸಹಾಯಕರಾಗಿದ್ದ ನಮ್ಮ ತಂಡಕ್ಕೆ ಮೇ ತಿಂಗಳಿಡೀ ಸತತ ತರಬೇತಿ ನೀಡಿದ್ದರು. ನಾಟಕದ ಪಾತ್ರಧಾರಿಗಳಾದ ನಾವು ಹನ್ನೆರಡು ಮಂದಿ ಶ್ರಮ ವಹಿಸಿ ಕಾಸರಗೋಡಿಗೆ ಕೀರ್ತಿ ತರುವ ಮಹದಾಸೆ ಹೊತ್ತಿದ್ದೆವು. ಚಿನ್ಮಯ ವಿದ್ಯಾಲಯದ ಹತ್ತು ಮಂದಿ (ಮೇಘನಾ ಎಸ್, ಶ್ರೇಯಸ್ ಜಿ.ಕಾಮತ್, ಅಬಿತ್ ಕುಮಾರ್ ಬಿ, ಪವನ್ ಕೆ, ಸ್ವಾತಿ ಕೆ, ಮೇಘಶ್ಯಾಮ್ ಖಂಡಿಗೆ, ಆತ್ಮಿಕ ಎಂ, ಅಭಿಷೇಕ್ ವಿ.ಆರ್, ಅಂಜನ, ಕಾರ್ತಿಕ) ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿ ಮಿಥುನ್ ಶೆಟ್ಟಿ ಹಾಗು ನೀರ್ಚಾಲಿನ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ ಕಲಿಯುವ ನಾನು ಯುದ್ಧ ವಿರೋಧಿ ನೀತಿಯೊಂದಿಗೆ ಶಾಂತಿಯನ್ನು ಸಾರುವುದೇ ನಮ್ಮ ನಾಟಕದ ಸಾರವಾಗಿತ್ತು.

ಅಂತೂ ಇಂತೂ ನಾನು ಕಲ್ಕತ್ತಾಗೆ ಹೋಗುವ ದಿನ ಬಂದೇ ಬಿಟ್ಟಿತು. ಮೇ ೩೦ ರಂದು ಚೀಲಕ್ಕೆ ಬಟ್ಟೆಬರೆ, ತಿಂಡಿ ತಿನಿಸುಗಳನ್ನು ತುಂಬಿಸಿಕೊಂಡು ಹಿರಿಯರ ಆಶೀರ್ವಾದ ಪಡೆದು ಸಂತೋಷದಿಂದ ಹೊರಟೆವು. ಮಧ್ಯಾಹ್ನ ೨ ಗಂಟೆಗೆ ರೈಲುಗಾಡಿ ಎಂದು ಮೊದಲೇ ತಿಳಿದಿದ್ದರಿಂದ ರೈಲ್ವೇ ನಿಲ್ದಾಣಕ್ಕೆ ೧.೩೦ ಕ್ಕೆ ತಲುಪಿದೆವು. ಸರಿಯಾಗಿ ೨ ಗಂಟೆಗೆ ಪ್ರಯಾಣ ಆರಂಭವಾಯಿತು. ರಾತ್ರಿಯಾಗುತ್ತಿದ್ದಂತೆ ಊಟ ಮುಗಿಸಿ ಚೀಲಗಳನ್ನು ಭದ್ರಗೊಳಿಸಿ ನಿದ್ದೆಗೆ ಜಾರಿದೆವು. ಬೆಳಿಗ್ಗೆ ೭ ಗಂಟೆಗೆ ಚೆನ್ನೈ ಗೆ ತಲುಪಿ ಕಾಫಿ ಕುಡಿದು ಇನ್ನೊಂದು ರೈಲುಗಾಡಿಯನ್ನೇರಿದೆವು. ಹೊತ್ತು ಏರುತ್ತಿದ್ದಂತೆ ಸೆಕೆಯೂ ಏರುತ್ತಾ ಹೋಯಿತು.

ಊಟ ಮುಗಿಸಿ ಎಲ್ಲರೂ ಸ್ವಲ್ಪ ಹೊತ್ತು ವಿರಮಿಸಿದೆವು. ನಂತರ ಒಮ್ಮೆ ನಾಟಕ ಅಭ್ಯಾಸ ಮಾಡಿದೆವು. ಪದ್ಯ ಹಾಡಿ ಸಮಯ ಕಳೆದೆವು. ಊಟ ಮಾಡಿ ನಿದ್ದೆ ಹೋದೆವು. ಮರುದಿವಸವೂ ದಿನಚರಿ ಹೀಗೇ ಹೋಗುತ್ತಿತ್ತು. ದಾರಿಯಲ್ಲಿ ಕಾಣುತ್ತಿದ್ದ ಮನೋಹರ ದೃಶ್ಯಗಳನ್ನು ವೀಕ್ಷಿಸಿದೆವು. ಜೂನ್ ೧ ರಂದು ಮಧ್ಯಾಹ್ನ ೧.೩೦ ಕ್ಕೆ ಕಲ್ಕತ್ತಾಗೆ ತಲುಪಿ ಎರಡು ಟಾಟಾಸುಮೋಗಳಲ್ಲಿ ನಮ್ಮ ವಾಸಸ್ಥಳಕ್ಕೆ ತಲುಪಿದೆವು. ಅದೊಂದು ಫುಟ್ಬಾಲ್ ಸ್ಟೇಡಿಯಂ . ಅದರ ಕೊಠಡಿಗಳನ್ನು ನಾಟಕದಲ್ಲಿ ಭಾಗವಹಿಸಲು ಬಂದಿರುವವರಿಗೆ ಕೊಟ್ಟಿದ್ದರು. ಸ್ಟೇಡಿಯಂ ಬಹಳ ಸುಂದರವಾಗಿತ್ತು. ಅಲ್ಲಿಯ ನೀರು ಕಠಿಣವಾಗಿದ್ದರಿಂದ ಸ್ನಾನ ಮಾಡಿದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ.

ಹವಾಮಾನ, ನೀರು ಬದಲಾದ್ದರಿಂದ ಎಲ್ಲರ ಸ್ವರವೂ ಬಿದ್ದು ಹೋಗಿತ್ತು. ಗುರುಗಳಾದ ಪುಷ್ಪರಾಜ್ ನಮಗೆ ಔಷಧಿ ಕೊಡುತ್ತಿದ್ದರು. ಹಾಗಾಗಿ ನಾವು ಸ್ವಲ್ಪ ಸುದಾರಿಸಿದೆವು. ಸ್ವಲ್ಪ ಹೊತ್ತು ನಾಟಕ ಅಭ್ಯಾಸ ಮಾಡಿ ವಾಯು ವಿಹಾರಕ್ಕೆಂದು ಹೊರ ನಡೆದೆವು. ಪಶ್ಚಿಮ ಬಂಗಾಳವು ಪೂರ್ವ ರಾಜ್ಯವಾದ್ದರಿಂದ ಬೆಳಕು ಬೇಗನೇ ಬರುತ್ತಿತ್ತು. ಮರುದಿನ ನಾಟಕ ಇದ್ದುದರಿಂದ ನಮ್ಮ ಅಭ್ಯಾಸ ಹೆಚ್ಚುತ್ತಾ ಹೋಯಿತು. ನಾಟಕ ರವೀಂದ್ರ ಸದನದಲ್ಲಿ ನಡೆಯುತ್ತಿತ್ತು.

ಸಂಜೆ ಎಲ್ಲಾ ರಾಜ್ಯದವರು ಸೇರಿ ಒಂದು ಮೆರವಣಿಗೆ ಮಾಡಿ ರವೀಂದ್ರ ಸದನಕ್ಕೆ ಹೋದೆವು. ಅಲ್ಲಿ ನಮ್ಮ ತಂಡದ ಕೆಲವು ವಿದ್ಯಾರ್ಥಿಗಳನ್ನು ಪತ್ರಕರ್ತೆಯೋರ್ವೆ ಸಂದರ್ಶಿಸಿದಳು. ನಂತರ ಲಂಡನ್ ನವರ ನಾಟಕದ ಜೊತೆಗೆ ಮತ್ತೆರಡು ನಾಟಕ ನೋಡಿ ಕೊಠಡಿಗೆ ಮರಳಿದೆವು. ನಮ್ಮ ನಾಟಕ ಅಭ್ಯಾಸ ೮ ಗಂಟೆಯಿಂದ ೧೨.೩೦ ವರೆಗೆ ಮುಂದುವರಿಯಿತು. ಊಟ ಮುಗಿಸಿ ಎಲ್ಲರೂ ವೇಷ ಭೂಷಣಗಳನ್ನು ಕಟ್ಟಿಕೊಂಡು ರವೀಂದ್ರ ಸದನಕ್ಕೆ ಹೊರಟೆವು. ಅಲ್ಲಿ ಕೇಳಿದ ರಸಪ್ರಶ್ನೆಗೆ ನಮ್ಮ ತಂಡದವನೊಬ್ಬ ಉತ್ತರ ಹೇಳಿ ಬಹುಮಾನ ಗಳಿಸಿದನು. ಅಲ್ಲಿ ವೇಷ ಹಾಕಿ, ಸುಣ್ಣ ಬಣ್ಣ ಮುಖಕ್ಕೆ ಬಳಿದು ನಮ್ಮ ಶಕ್ತಿ ಮೀರಿ ನಾಟಕ ಮಾಡಿದೆವು. ನಮ್ಮ ನಾಟಕ ರಾತ್ರಿ ೭.೪೫ ರಿಂದ ೯ ಗಂಟೆಯವರೆಗೆ ನಡೆಯಿತು. ನಾವು ಮಾಡಿದ ಅಭ್ಯಾಸಕ್ಕೆ ತಕ್ಕ ಹಾಗೆ ಉತ್ತಮ ಪ್ರತಿಫಲ ಸಿಕ್ಕಿತು. ಕೋಲ್ಕತ್ತದವರಿಗೆ ನಮ್ಮ ನಾಟಕ ಮೆಚ್ಚುಗೆಯಾಯಿತು.

ಮರುದಿನ ಬೆಳಿಗ್ಗೆ ನಮ್ಮ ತಿರುಗಾಟ ಪ್ರಾರಂಭವಾಯಿತು. ಜೈನರ ದೇವಾಲಯಕ್ಕೆ ಮೊದಲು ಭೇಟಿ ನೀಡಿದೆವು. ಕನ್ನಡಿ ತುಂಡುಗಳಿಂದ ನಿರ್ಮಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು. ನಂತರ ಕಾಳಿ ದೇವಸ್ಥಾನಕ್ಕೆ ಹೋದೆವು. ಬಳಿಕ ರಾಮಕೃಷ್ಣ ಪರಮಹಂಸರ ಆಶ್ರಮಕ್ಕೆ ತೆರಳಿ ಅಲ್ಲಿನ ಕೆಲವು ಸುಂದರ ಹೂದೋಟಗಳನ್ನು ಕಂಡೆವು. ಆ ದೇವಾಲಯವನ್ನು ಪ್ರತ್ಯೇಕ ರೀತಿಯ ಕಲ್ಲಿನಿಂದ ನಿರ್ಮಿಸಲಾಗಿತ್ತು. ಕೆಲವು ಕೆತ್ತನೆಗಳೂ ಅದರಲ್ಲಿತ್ತು. ಅಲ್ಲೇ ಹತ್ತಿರವಿರುವ ನದಿಯ ಸೊಬಗನ್ನು ನೋಡಿಕೊಂಡು ತಿರುಗಾಟ ಮುಂದುವರಿಸಿದೆವು. ಬಳಿಕ ಬಹಳ ಆಕರ್ಷಕವಾದ ಸಯನ್ಸ್ ಸಿಟಿಗೆ ತೆರಳಿ ಡೈನೋಸರ್ ಗಳ ಕಲಾಕೃತಿಗಳನ್ನು, ಜ್ವಾಲಾಮುಖಿಯನ್ನು ನೋಡಿದೆವು.

ಕನ್ನಡಿಗಳ ಲೋಕವಾಗಿದ್ದ ಮಿರರ್ ಮ್ಯಾಜಿಕ್ ಗೆ ಕಾಲಿರಿಸಿದೆವು. ಇನ್ನೊಂದು ಕಡೆ ವಿಜ್ಞಾನದ ಹಲವು ವಿಸ್ಮಯಗಳಿದ್ದವು. ಆ ವಿಸ್ಮಯಗಳನ್ನು ನೋಡಿಕೊಂಡು ಕುಳಿತಾಗ ಗಂಟೆ ೧೨.೩೦ ಆಗಿತ್ತು. ಬಳಿಕ ಉಪಾಹಾರ ಸೇವಿಸಿ ಮೆಟ್ರೋ ರೈಲಿನಲ್ಲಿ ಪಯಣಿಸಿದೆವು. ಮೆಟ್ರೋ ರೈಲು ಪೂರ್ತಿ ಹವಾನಿಯಂತ್ರಿತವಾದ ಕಾರಣ ಸೆಕೆಯ ಅನುಭವವಾಗಲಿಲ್ಲ. ಭಾರತದಲ್ಲೇ ಅತೀ ದೊಡ್ಡ ಪ್ಲಾನಿಟೋರಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ಲಾನಿಟೋರಿಯಂಗೆ ಹೋದೆವು. ಗ್ರಹ, ಆಕಾಶ, ನಕ್ಷತ್ರಗಳ ಬಗ್ಗೆ ಅಲ್ಲಿ ವಿವರವಾಗಿ ಹೇಳಿದರು.

ಬಳಿಕ ಸುಂದರವಾಗಿರುವ ಹೌರಾ ಸೇತುವೆಯ ಮೂಲಕ ಪಯಣಿಸಿದ್ದು, ಹೀಗೆ ಪಯಣಿಸುತ್ತಿದ್ದಾಗ ತೂಗು ಸೇತುವೆಯಂತಿದ್ದ ೨ ಕಂಬಗಳಿರುವ ದೊಡ್ಡ ಸೇತುವೆ ಕಾಣಿಸುತ್ತಿತ್ತು. ಕೋಲ್ಕತ್ತಾ ನಗರದಲ್ಲಿ ವಾಹನಗಳ ಸಾಗರವೇ ಹರಿದು ಬಂದಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ಗಗನಚುಂಬಿ ಕಟ್ಟಡಗಳು ಕಾಣಿಸುತ್ತಿದ್ದವು. ಕೆಲವರು ಅಂಗಡಿಯಿಂದ ಕೆಲವು ಸಾಮಗ್ರಿಗಳನ್ನು ಖರೀದಿಸಿ ನಾಟಕ ಥಿಯೇಟರ್ ಗೆ ಹೋದೆವು. ಅಲ್ಲಿ ಒಂದೆರಡು ನಾಟಕ ನೋಡಿದೆವು.

ಕೊನೆಯ ದಿವಸವಾಗಿದ್ದರಿಂದ ಎಲ್ಲಾ ತಂಡದವರೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಬೇಕೆಂದು ಅಲ್ಲಿನವರು ಕೇಳಿಕೊಂಡಿದ್ದರು. ಆದ್ದರಿಂದ ನಾವು ಎರಡು ಪದ್ಯಗಳನ್ನು ಹೇಳಿದೆವು. ಅಲ್ಲಿಯವರೊಬ್ಬರು ನಮ್ಮ ನಾಟಕದ ಒಂದು ಪದ್ಯವನ್ನು ಇಂಗ್ಲೀಷಿನಲ್ಲಿ ಬರೆಯಿಸಿ ತೆಗೆದುಕೊಂಡರು. ಇದರಿಂದ ಎಲ್ಲರಿಗೂ ನಮ್ಮ ನಾಟಕ ಮೆಚ್ಚುಗೆ ಆಗಿದೆ ಎಂದು ತಿಳಿದೆವು. ಬೆಳಿಗ್ಗೆ ಎದ್ದು ಚಹಾ ಸೇವಿಸಿ ಶಾಪಿಂಗ್ ಗೆ ತೆರಳಿದೆವು. ‘ಸ್ವಭೂಮಿ’ ಎನ್ನುವ ಬಜಾರ್ ೧೨ ಗಂಟೆಗೆ ತೆರೆಯುವ ಕಾರಣ ನಾವೆಲ್ಲರೂ ಸಿಟಿ ಸೆಂಟರ್ ಬಜಾರ್ ಗೆ ಹೋಗಿ ನಮಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ವಾಸಸ್ಥಳಕ್ಕೆ ಮರಳಿದೆವು.

೧೨ ಗಂಟೆಗೆ ಹೊರಟು ರೈಲ್ವೇ ನಿಲ್ದಾಣ ತಲುಪಿದೆವು. ೩ ಗಂಟೆಗೆ ನಮ್ಮ ಪ್ರಯಾಣ ಪುನಃ ಆರಂಭವಾಯಿತು. ಮರುದಿನ ಸಂಜೆ ೫.೩೦ ಕ್ಕೆ ಚೆನ್ನೈ ತಲುಪಿದೆವು. ರಾತ್ರಿ ೮.೧೫ ಕ್ಕೆ ಕಾಸರಗೋಡಿಗೆ ಬರುವ ರೈಲಿಗೆ ಹತ್ತಿದೆವು. ಮರಳಿ ಗೂಡಿಗೆ ತಲುಪಿದ ಸಂತೋಷ ಒಂದೆಡೆಯಾದರೆ ಮನೆ ಆಹಾರ ಲಭಿಸಿತಲ್ಲಾ ಎಂಬ ಸಂತೊಷ ಇನ್ನೊಂದೆಡೆ. ಈ ಅವಕಾಶ ನಮ್ಮ ಪಾಲಿಗೆ ಒದಗಿದ ಸೌಭಾಗ್ಯವೇ ಸರಿ.

11 April 2009

ಸಂಭ್ರಮದ ವಿಷು ಶುಭಾಶಯಗಳು


ನಾವೆಲ್ಲ ರಜೆಯಲ್ಲಿ ಬಿದ್ದು ಹೋಗಿದ್ದೇವೆ. ಕರಾವಳಿಯ ಸುಡುಬೇಸಿಗೆಗೆ ಸೃಜನಶೀಲತೆ ಮತ್ತಷ್ಟು ಕಡಿಮೆಯಾಗಿದೆ ಅನಿಸುತ್ತಿದೆ. ನಾಡಿದ್ದು ವಿಷು. ಕೇರಳದ ದೊಡ್ಡ ಹಬ್ಬ. ಹೊಸ ಸಂವತ್ಸರವನ್ನು ಸ್ವಾಗತಿಸುವ ಪರ್ವ ಕಾಲ. ನಿಮಗೆಲ್ಲ ವಿಷು ಶುಭಾಶಯಗಳು.

07 April 2009

ಚಿತ್ರ ೧೨ - ನಮ್ರತಾ. ಎಂ.ಎಸ್

ಮತ್ತೆ ಒಂದು ಸುಂದರ ಚಿತ್ರವನ್ನು ನಿಮ್ಮ ಮುಂದೆ ಇರಿಸಿದ್ದೇವೆ, ಸ್ವೀಕರಿಸಿ

03 April 2009

ಪ್ರಬಂಧ ೦೬ - ಬಯಲು ಪ್ರವಾಸ

- ಅನುಪಮ ಪಿ.ಎಸ್

ನಮ್ಮ ಶಾಲೆಯ ಹಳೆವಿದ್ಯಾರ್ಥಿ, ಖ್ಯಾತ ಚಿತ್ರ ಕಲಾವಿದ ಪಿ.ಎಸ್. ಪುಣಿಂಚಿತ್ತಾಯರ ಮನೆಗೆ ಭೇಟಿ ಕೊಡುವ ಅಪೂರ್ವ ಅವಕಾಶ ಒಂದು ಬಾರಿ ನನಗೆ ದೊರೆತಿತ್ತು. ನಾನು‘ಪುಣಿಂಚಿತ್ತಾಯರು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದವರಲ್ಲವೆ? ಅವರ ಮನೆ ತುಂಬಾ ದೊಡ್ಡದಿರಬಹುದು. ಮನೆಯಲ್ಲಿ ತುಂಬಾ ಗೌಜಿ ಗದ್ದಲವಿರಬಹುದು. ಮನೆ ಸುತ್ತಲೂ ತುಂಬಾ ಜನರಿರಬಹುದು. ಅಂತಹ ಮಹಾನ್ ಕಲಾವಿದ ನಮ್ಮೊಂದಿಗೆ ಹೇಗೆ ವರ್ತಿಸಿದಾರು?’ ಎಂದೆಲ್ಲಾ ಆಲೋಚಿಸುತ್ತಿದ್ದೆ.

ನನ್ನ ಆಲೋಚನೆಗೆ ಪೂರ್ಣ ವಿರಾಮವಿತ್ತಂತೆ ಅವರ ಮನೆಯ ಗೇಟಿಗೆ ನಮ್ಮ ವಾಹನ ತಲುಪಿತು. ಅವರ ಮನೆಯ ಎದುರೇ ದೊಡ್ಡ ರಬ್ಬರ್ ತೋಟ. ಮನೆಗೆ ಮಾರ್ಗವೂ ಆ ತೋಟದ ನಡುವಿನಿಂದಲೇ ಬರುತ್ತಿತ್ತು. ಸರಿಯಾಗಿ ಹನ್ನೊಂದು ಗಂಟೆಗೆ ನಾವು ಅಲ್ಲಿಗೆ ತಲುಪಿದೆವು. ಮಾರ್ಗದಿಂದಲೇ ಅವರ ಮನೆ ಕಾಣಿಸುತ್ತಿತ್ತು. ಮನೆಯ ಹಿಂದೆ, ಮುಂದೆ ಎಲ್ಲ ಕಡೆಯೂ ಚಿತ್ರಗಳೇ ಕಾಣಿಸುತ್ತಿದ್ದವು. ಎಲ್ಲರೂ ಕಾರಿನಿಂದ ಇಳಿದೆವು. ಒಬ್ಬಾಕೆ ಮಹಿಳೆ ಮನೆಯಿಂದ ಹೊರ ಬಂದರು. ಅವರು ಪಿ.ಯಸ್ ಪುಣಿಂಚತ್ತಾಯರ ಪತ್ನಿಯೆಂದು ತಿಳಿಯಿತು.

ಆಗಲೇ ನಾವು ನಿರೀಕ್ಷಿಸುತ್ತಿದ್ದ ವ್ಯಕ್ತಿ ಹೊರಬಂದರು. ಸಂಪೂರ್ಣವಾಗಿ ಶಾಂತಚಿತ್ತದವರು. ನಗುಮುಖದವರು. ತಾನೊಬ್ಬ ದೊಡ್ಡ ಕಲಾವಿದ ಎಂಬ ಅಹಂ ಇಲ್ಲದವರು. ಮಕ್ಕಳೊಂದಿಗೆ ಮಗುವಿನಂತೆ ಬೆರೆಯುವವರು. ಭೇದಭಾವ ತೋರಿಸದವರು. ಹೀಗೆ ಹಲವು ಸದ್ಗುಣಗಳೇ ಹೊಂದಿದ ಅಪರೂಪದ ವ್ಯಕ್ತಿಯೇ ಆ ಮಹಾನ್ ಚೇತನ. ‘ಕಾಂಚನಗಂಗಾ’ ಎಂಬ ಹೆಸರಿನ ಅವರ ಮನೆ ಸುಂದರವಾಗಿತ್ತು. ಚಿತ್ರವಿರದ ಗೋಡೆಯಿರಲಿಲ್ಲ. ಪ್ರಶಸ್ತಿ ಇರದ ಶೆಲ್ಫ್ ಇರಲಿಲ್ಲ. ಒಂದೊಂದು ಚಿತ್ರವೂ ಸಾವಿರದಿಂದಾರಂಭಿಸಿ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವಂತಾದ್ದು. ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡೆವು. ಪುಣಿಂಚತ್ತಾಯರು ನಮ್ಮೆಲ್ಲರ ಪರಿಚಯ ಮಾಡಿಕೊಂಡರು.

ನಾನು ನೀರ್ಚಾಲು ಶಾಲೆಗೆ ಹೋಗುತ್ತಿರುವವಳು ಎಂದು ತಿಳಿದಾಗ ಅವರು ಕೂಡಾ ಅಲ್ಲಿನ ವಿದ್ಯಾರ್ಥಿಯೆಂದು ತಿಳಿಸಿದರು. ‘ಅದೊಂದು ಉತ್ತಮ ಶಾಲೆಯಾಗಿತ್ತು. ಮುಖ್ಯೋಪಾಧ್ಯಾಯರಾಗಿದ್ದ ಬಿ.ಎಂ ಸುಬ್ರಾಯ ಭಟ್ಟರು ಉತ್ತಮ ಅಧ್ಯಾಪಕರಾಗಿದ್ದರು’ ಎಂದು ಹೇಳಿದರು. ಇದರೊಂದಿಗೆ ತಮ್ಮ ಬಾಲ್ಯದ ಘಟನೆಗಳು, ಬಡತನದ ನಡುವೆಯೂ ತಾನು ಕಾಲೇಜು ಸೇರಿದ್ದು ಮುಂತಾದ ಹಲವು ಅನುಭವಗಳನ್ನು ನಮ್ಮೆಲ್ಲರ ಮುಂದೆ ಹರಡಿದರು.

ಸ್ವತಃ ತನ್ನ ಕೌಶಲ್ಯದಿಂದಲೇ ತಯಾರಿಸಿದಂತಹ ನೀರು ಬಿಸಿ ಮಾಡುವ ಉಪಕರಣವನ್ನು ತೋರಿಸಿ ವಿವರಿಸಿದರು. ಸೋಲಾರ್, ಗೋಬರ್ ಗೇಸ್, ರಬ್ಬರ್ ಶೀಟ್ ತಯಾರಿಸುವುದು ಹೇಗೆಂದು ಸವಿವರವಾಗಿ ಹೇಳಿದರು. ಗೋವನ್ನು ‘ಮಾತೆ’ಯೆಂದು ಪೂಜಿಸುವ ಅವರು ತಮ್ಮ ‘ಫೇನ್’ ಅಳವಡಿಸಿದ ಹಟ್ಟಿ, ದಿನಾಲೂ ದನಗಳಿಗೆ ಸ್ನಾನ ಮಾಡಿಸುತ್ತಿರುವ ಬಗ್ಗೆ ತಿಳಿಸಿ ತೋಟಕ್ಕೆ ಹಿಂಬಾಲಿಸಲು ಹೇಳಿದರು. ಕೇಳುತ್ತಿದ್ದ ಜುಳು ಜುಳು ನಾದದಿಂದ ಹತ್ತಿರದಲ್ಲೆಲ್ಲೋ ತೋಡೋ, ಹೊಳೆಯೋ ಇದ್ದೀತೆಂದು ಭಾವಿಸಿದೆ.

ತೋಟದಲ್ಲಿದ್ದ ಸ್ಲರಿ ಗೊಬ್ಬರ, ತುಂತುರು, ಹನಿ ನೀರಾವರಿ, ಸ್ಪ್ರಿಂಕ್ಲರ್, ವೆನಿಲ್ಲಾ ಗಿಡ ಮೊದಲಾದವುಗಳನ್ನು ತೋರಿಸಿ ವಿವರಿಸಿದರು. ಹತ್ತಿರವೇ ಒಂದು ಕೆರೆಯೂ ಇತ್ತು. ಅದರಿಂದಲೇ ತೋಟಕ್ಕೆ ನೀರು ಹಾಕುವುದೆಂದು ತಿಳಿಸಿದರು. ಒಂದು ಸರಿಗೆಗೆ ಒಂದು ಬಾಲ್ದಿ ಕಟ್ಟಲಾಗಿತ್ತು. ಅದರ ಮೇಲೆ ಮುಚ್ಚಳವಿತ್ತು. ಅದರ ಮಧ್ಯದಲ್ಲಿ ಒಂದು ಸಣ್ಣ ಬಟ್ಟಲಿನಂತೆ ಇತ್ತು. ಆ ಬಟ್ಟಲಿನೊಳಗೆ ಹಳದಿ ದ್ರವವಿದ್ದು, ಅದಕ್ಕೆ ಪಾರದರ್ಶಕವಾದ ಮುಚ್ಚಳವಿತ್ತು. ಬಾಲ್ದಿಯೊಳಗೆ ನೀರಿತ್ತು. ನೀರಿನಲ್ಲಿ ತೆಂಗಿಗೆ ರೋಗ ಬರಿಸುವಂತಹ ಕೂರ್ಬಾಯಿಗಳು ಬಿದ್ದಿದ್ದವು. ತೆಂಗಿನ ಮರವನ್ನು ರೋಗಗಳಿಂದ ರಕ್ಷಿಸಲು ಇದು ಸಹಾಯಕವಾಗುತ್ತದೆಯೆಂದೂ, ಕೂರ್ಬಾಯಿಗಳು ಆ ಬಟ್ಟಲಿನೊಳಗಿರುವ ದ್ರವದಿಂದ ಆಕರ್ಷಣೆ ಹೊಂದಿ ಬಂದು ನೀರಿಗೆ ಬೀಳುತ್ತವೆ ಎಂದು ತಿಳಿಸಿದರು.

ತೋಟದಲ್ಲಿ ಎಲ್ಲವನ್ನೂ ತೋರಿಸಿದ ನಂತರ ಒಂದು ಪುಟ್ಟ ಜಲಪಾತಕ್ಕೆ ಕರಕೊಂಡು ಹೋದರು. ಈ ಜಲಪಾತದ್ದೇ ಜುಳು ಜುಳು ನಾದ ಕೇಳುತ್ತಿದ್ದುದು ಎಂದು ಅರಿವಾಯಿತು. ನಾವೆಲ್ಲರೂ ಸಂತೋಷದಿಂದ ಆಡಿದೆವು. ಕೆಲವರು ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಟ್ಟರು. ನಾವು ನೀರಿನೊಂದಿಗೆ ಸ್ವಲ್ಪದೂರ ಹೋದೆವು. ನಂತರ ಹಿಂದೆ ಬಂದು ಬಂಡೆಕಲ್ಲಿನ ಮೇಲೆ ಕುಳಿತುಕೊಂಡೆವು. ಗಂಟೆ ಒಂದಾಯಿತು. ಕಲಾವಿದರ ಮನೆಗೆ ತೋಟದ ಮೂಲಕ ಸಾಗಿದೆವು. ಅವರ ಮನೆಯಲ್ಲಿ ಭಾರವನ್ನಳೆಯುವಂತಹ ಹಿಂದಿನ ಕಾಲದ ಕಲ್ಲುಗಳು, ಎತ್ತಿನ ಗಾಡಿಯ ಚಕ್ರವು ತಿಳಿಸುವ ಒಳ್ಳೆಯ ನೀತಿ, ಅವರ ಮಗ ಮಾಡಿದಂತಹ ಶಿಲ್ಪಕಲೆಗಳನ್ನು ತೋರಿಸಿ ವಿವರಿಸಿದರು. ಒಂದೂವರೆಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು.

ಊಟದ ನಂತರ ಹಲವು ವಿಷಯಗಳನ್ನು ಹೇಳಿ ನಮ್ಮ ಜ್ಞಾನ ಹೆಚ್ಚಿಸಿದರು. ಶಂಖದ ಮಹಿಮೆಯನ್ನು ಹೇಳಿದರು. ಶಂಖ ಊದುವುದು ಎಂದರೆ ಮೂಢ ನಂಬಿಕೆಯಲ್ಲ. ವೈಜ್ಞಾನಿಕವಾದ ಕಾರಣವೂ ಇದೆ ಎಂದು ವಿವರಿಸಿದರು. ಅನಂತರ ನಮಗೆಲ್ಲರಿಗೂ ಒಂದು ಚಿತ್ರ ಮಾಡಿ ತೋರಿಸಿದರು. ಒಂದೇ ನಿಮಿಷದಲ್ಲಿ ಸೂರ್ಯೋದಯದ ಚಿತ್ರವನ್ನು ಸುಂದರವಾಗಿ ಕಾಗದದ ಮೇಲೆ ಮೂಡಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಪುಣಿಂಚತ್ತಾಯರ ಪತ್ನಿ ಎಲ್ಲರಿಗೂ ಉಪಾಹಾರ ತಯಾರಿಸಿ ತಂದಿಟ್ಟರು. ನಮ್ಮ ವಾಹನದ ಚಾಲಕರಾದ ಚಂದ್ರಶೇಖರ್ ಎಲ್ಲರಿಗೂ ಹಂಚಿದರು. ಸ್ವಲ್ಪ ಹೊತ್ತಿನಲ್ಲಿ ಇಬ್ಬರು ಪತ್ರಕರ್ತರು ಪುಣಿಂಚತ್ತಾಯರನ್ನು ಸಂದರ್ಶಿಸಲೆಂದು ಬಂದರು. ಅಂತಹ ಮಹಾನ್ ಕಲಾವಿದರ ಬಳಿ ನಾವೆಲ್ಲರೂ ಆಟೋಗ್ರಾಫ್ ತೆಗೆದುಕೊಂಡೆವು.

ಮೂರೂವರೆಗೆ ಸರಿಯಾಗಿ ಎಲ್ಲರೂ ಅಲ್ಲಿಂದ ಹೊರೆಟೆವು. ಅವರು ಸಂತೋಷದಿಂದ ನಮ್ಮನ್ನು ಬೀಳ್ಕೊಟ್ಟರು ನಾಲ್ಕೂವರೆಗೆ ಸರಿಯಾಗಿ ಮನೆಗೆ ತಲುಪಿದೆವು. ನಾನು ಭಾವಿಸಿದ್ದಕ್ಕಿಂತ ತುಂಬಾ ವ್ಯತ್ಯಾಸ ವ್ಯಕ್ತಿತ್ವದವರಾಗಿದ್ದರು ಪಿ.ಯಸ್ ಪುಣಿಂಚತ್ತಾಯ ಅವರು. ಒಂದು ಸ್ವಲ್ಪವೂ ಅಹಂ ಇರಲಿಲ್ಲ. ಕೆಲಸದವರೊಂದಿಗೆ ಕೂಡಾ ಪ್ರೀತಿಯಿಂದ ಮಾತನಾಡುತ್ತಿದ್ದರು. ಮನೆಯ ಸುತ್ತಮುತ್ತಲೂ ಪ್ರಶಾಂತ ವಾತವರಣವಿತ್ತು. ಇಂತಹ ಬಹುಮುಖ ವ್ಯಕ್ತಿತ್ವವುಳ್ಳ ನಿರಾಡಂಬರ, ಸರಳ ಜೀವನ ನಡೆಸುವ ಪಿ.ಯಸ್ ಪುಣಿಂಚತ್ತಾಯರ ‘ಗೃಹಸಂದರ್ಶನ’ ನಡೆಸಿದ ನಾವೇ ಭಾಗ್ಯವಂತರು ಎಂದು ಮನಸ್ಸಲ್ಲೇ ಭಾವಿಸಿದೆ! ನಮ್ಮನ್ನು ಇದಕ್ಕಾಗಿಯೇ ತಮ್ಮ ಸ್ವಂತ ವಾಹನದಲ್ಲಿ ಕರೆದೊಯ್ದ ಪ್ರೊ ಶ್ರೀನಾಥ್ ಕಾಸರಗೋಡು ಇವರಿಗೆ ನಾನು ಎಲ್ಲರ ಪರವಾಗಿ ಚಿರಋಣಿಯಾಗಿರುತ್ತೇನೆ.