Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

29 October 2011

“ಸೃಜನಶೀಲತೆಯಿಂದ ಆನಿಮೇಶನಿನ ಹೊಸ ಉತ್ಪನ್ನ: ಆಗಸ್ಟಿನ್ ಬರ್ನಾಡ್"

“ತಂತ್ರಜ್ಞಾನವನ್ನು ಕಲಿಕೆಯಲ್ಲಿ ಬಳಸಿಕೊಳ್ಳಬೇಕು. ೨೦೦೨ರಲ್ಲಿ ಶಾಲೆಗಳಲ್ಲಿ ಆರಂಭವಾದ ಐಟಿ ಎಟ್ ಸ್ಕೂಲ್ ಯೋಜನೆ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ನೀಡುವಷ್ಟರ ತನಕ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಆನಿಮೇಶನ್ ತರಬೇತಿಯೂ ವಿದ್ಯಾರ್ಥಿಗಳ ಎಲ್ಲ ಪಠ್ಯ ವಿಷಯಗಳ ಕಲಿಕೆಯಲ್ಲಿ ನೆರವಾಗಲಿದೆ. ಸೃಜನಶೀಲತೆ ಇದ್ದರೆ ಆನಿಮೇಶನ್ ತಂತ್ರಜ್ಞಾನದ ಮೂಲಕ ಹೊಸ ಉತ್ಪನ್ನವನ್ನು ನಾವು ಜಗತ್ತಿಗೆ ನೀಡಬಹುದು. ಆದ್ದರಿಂದ ಇಲ್ಲಿ ದೊರೆತ ಶಿಕ್ಷಣವನ್ನು ಮುಂದಿನ ಜೀವನದಲ್ಲಿ ಉಪಯೋಗಿಸಿಕೊಳ್ಳಿ” ಎಂದು ಕೇರಳ ವಿದ್ಯಾಭ್ಯಾಸ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ಆಗಸ್ಟಿನ್ ಬರ್ನಾಡ್ ಅಭಿಪ್ರಾಯಪಟ್ಟರು. ಅವರು ಇಂದು ಅಪರಾಹ್ನ ನಮ್ಮ ಶಾಲೆಯಲ್ಲಿ ನಾಲ್ಕು ದಿನಗಳಿಂದ ಜರಗುತ್ತಿರುವ ‘ಆಂಟ್ಸ್ ಆನಿಮೇಶನ್’ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ನೆರವೇರಿಸುತ್ತಾ ಮಾತನಾಡುತ್ತಿದ್ದರು.

ನೀರ್ಚಾಲಿನ ‘ಶಾರ್ಪ್ ಡಿಜಿಟಲ್ ಸ್ಟುಡಿಯೋ’ ಸಂಸ್ಥೆಯ ಮಾಲಕ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆನಿಮೇಶನ್ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಯೋಜಕ ಎಚ್. ಸೂರ್ಯನಾರಾಯಣ ಮತ್ತು ಸಂಪನ್ಮೂಲ ಅಧ್ಯಾಪಕ ಬಿ.ಸುಬ್ರಹ್ಮಣ್ಯ ಕೆದಿಲಾಯ ಉಪಸ್ಥಿತರಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸುಶೀಲಾ. ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳಾದ ಅನುಶ್ರೀ ಸ್ವಾಗತಿಸಿ ಆದರ್ಶ ಎಚ್.ಎ ವಂದಿಸಿದರು. ಶ್ರದ್ಧಾ.ಎಸ್ ಪ್ರಾರ್ಥಿಸಿದರು ಮತ್ತು ಚೈತಾಲಿ.ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಆನಿಮೇಶನ್ ಶಿಬಿರದಲ್ಲಿ ವಿದ್ಯಾರ್ಥಿಗಳಾದ ಶಾಂತಿ.ಕೆ, ಶಶಾಂಕ ಶರ್ಮ.ಎಸ್, ವರ್ಷಾ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಮೇಘನಾ ಮತ್ತು ಅಜಿತ್ ವಿ.ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಇಪ್ಪತ್ತು ಮಂದಿ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.

21 October 2011

‘ಆನಿಮೇಶನ್ ಸಾಧ್ಯತೆಗಳು ಅಪಾರ’: ಜಯದೇವ ಖಂಡಿಗೆ

“ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅತ್ಯಧಿಕ ಅವಕಾಶಗಳೊಂದಿಗೆ ತೆರೆದುಕೊಳ್ಳುತ್ತಿದೆ. ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗುತ್ತಾ ಇದೆ. ಆನಿಮೇಶನ್, ಗ್ರಾಫಿಕ್ಸ್ ಇತ್ಯಾದಿ ರಂಗಗಳಲ್ಲಿ ಹೊಸ ಹೊಸ ಸಂಶೋಧನೆಗಳು ನಿರಂತರವಾಗಿ ಅನಾವರಣಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಈ ಆನಿಮೇಶನ್ ತರಬೇತಿ ಅವರ ವಿಕಾಸಕ್ಕೆ ದಾರಿದೀಪವಾಗಲಿ" ಎಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ನಾಲ್ಕು ದಿನಗಳ ‘ಆಂಟ್ಸ್ ಆನಿಮೇಶನ್’ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನೀರ್ಚಾಲಿನ ಸೈನೇಜ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಗಣೇಶ್ ಕಿರಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆನಿಮೇಶನ್ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸಂಯೋಜಕ ಎಚ್.ಸೂರ್ಯನಾರಾಯಣ ಪ್ರಾಸ್ತಾವಿಕ ಭಾಷಣ ಮಾಡಿದರು.

ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ.ಕೆ ಸ್ವಾಗತಿಸಿ ಮೇಘನಾ ವಂದಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಈ ತರಬೇತಿಯಲ್ಲಿ ಎಂಟು ಮತ್ತು ಒಂಬತ್ತನೇ ತರಗತಿಯ ಇಪ್ಪತ್ತು ಮಂದಿ ಆನಿಮೇಶನ್ ತರಬೇತಿ ಪಡೆಯಲಿದ್ದಾರೆ. ಸಂಪನ್ಮೂಲ ವಿದ್ಯಾರ್ಥಿಗಳಾಗಿ ಒಂಬತ್ತನೇ ತರಗತಿಯ ಮೇಘನಾ, ಹತ್ತನೇ ತರಗತಿಯ ಶಾಂತಿ.ಕೆ, ವರ್ಷ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಶಶಾಂಕ ಶರ್ಮ.ಎಸ್, ಅಜಿತ್. ವಿ. ಶರ್ಮ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳೇ ತರಬೇತಿ ನೀಡುವುದು ಈ ಕಾರ್ಯಕ್ರಮದ ವಿಶೇಷತೆ.

19 October 2011

ಮದಕಗಳನ್ನು ಉಳಿಸಿ: ಹರೀಶ್ ಹಳೆಮನೆ

“ಮದಕಗಳ ಮಧ್ಯಭಾಗದಲ್ಲಿರುವ ಜಾಗದಲ್ಲಿ ಸುತ್ತಲಿನ ಎತ್ತರದ ನೆಲದಿಂದ ಹರಿದುಬಂದ ಮಳೆನೀರು ಸಂಗ್ರಹವಾಗಿ ನಿಲ್ಲುತ್ತದೆ. ನಿಧಾನವಾಗಿ ಭೂಮಿಗೆ ಇಂಗುತ್ತದೆ. ಆದ ಕಾರಣ ಮದಕವನ್ನು ಒಂದು ವಿಶಾಲವಾದ ಇಂಗುಕೊಳವೆಂದೇ ಹೇಳಬಹುದು. ಇದರ ಪರಿಣಾಮ ಹತ್ತಿರದಲ್ಲಿರುವ ಕೆರೆ, ಬಾವಿಗಳಲ್ಲಿ ನೀರು ಒರತೆಯ ರೂಪದಲ್ಲಿ ಕಾಣಸಿಗುತ್ತದೆ. ಕೆಲವು ಕಡೆ ಕೆರೆಗಳನ್ನೂ ಮದಕಗಳೆಂದು ಹೇಳುತ್ತಾರೆ. ಸುರಂಗದ ನೀರಿನ ಸಂಗ್ರಹಕ್ಕೆಂದು ಮಾಡಿದ ಕೆರೆಗಳನ್ನು ಮದಕಗಳೆನ್ನುವುದು ವಾಡಿಕೆ. ಕೆರೆಗಳಿಂದ ನೀರನ್ನು ನೇರವಾಗಿ ನೀರಾವರಿಗಾಗಿ ಬಳಸುತ್ತಾರೆ. ಮದಕಗಳಿಂದ ನೇರವಾಗಿ ನೀರೆತ್ತುವ ಉದಾಹರಣೆಗಳು ಇಲ್ಲ. ಮದಕಗಳಿಂದ ಬರುವ ಒರತೆ ನೀರನ್ನು ಮಾತ್ರ ಕೃಷಿಗೆ ಬಳಸುತ್ತಾರೆ. ಆದ್ದರಿಂದ ಮದಕಗಳು ಹೆಚ್ಚು ಸುಸ್ಥಿರವಾದ ಜಲಮೂಲಗಳಾಗಿವೆ. ಮದಕಗಳ ಕೆಳಭಾಗದಲ್ಲಿರುವ ಕೃಷಿಭೂಮಿಗಳಿಗೆ ಪಂಪಿನ ಮೂಲಕ ನೀರಿನ ಹಾಯಿಸುವಿಕೆಯ ಪ್ರಮಾಣ ಕಡಿಮೆ ಸಾಕಾಗುತ್ತದೆ. ಇದರಿಂದಾಗಿ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು ಹಾಗೂ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಮಾನವ ಸಂಬಂಧಗಳನ್ನು ಸುಧಾರಿಸಬಹುದು. ಎಂದು ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ “ಮದಕ-ಸಂವಾದ” ಕಾರ್ಯಕ್ರಮದಲ್ಲಿ ಸ್ಲೈಡ್ ಪ್ರದರ್ಶನ ಸಹಿತ ಉಪನ್ಯಾಸವನ್ನು ನೀಡುತ್ತಾ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕಾವ್ಯ ಸ್ವಾಗತಿಸಿ ಚೇತನ್‌ಕೃಷ್ಣ.ಸಿ ವಂದಿಸಿದರು. ಶ್ರವಣ್. ಬಿ ಕಾರ್ಯಕ್ರಮ ನಿರೂಪಿಸಿದರು.

12 October 2011

ಗೌತಮ್ ಬಿಡಿಸಿದ ಚಿತ್ರ

ಎಂಟನೇ ತರಗತಿಯಲ್ಲಿ ಈ ಬಾರಿ ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವೂ ಆರಂಭವಾಗಿದೆ. ಮೊದಲ ತಂಡದಲ್ಲಿರುವ ಗೌತಮ್ ಚಿತ್ರ ಬಿಡಿಸುವುದರಲ್ಲಿ ತನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ಈ ಮೂಲಕ ಮತ್ತೆ ಮಾಡಿಕೊಳ್ಳುತ್ತಿದ್ದೇವೆ.

10 October 2011

ಶುಭಾಶಯಗಳು, ಪೂರ್ವ ವಿದ್ಯಾರ್ಥಿಗಳಿಗೆ...


ಹಿಮಾಚಲ ಪ್ರದೇಶ ಸರಕಾರದ ವತಿಯಿಂದ ಜರಗುವ ಅಂತರ್ದೇಶೀಯ ಕುಲು ಫೆಸ್ಟಿವಲ್ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಮೂವರು ಹಳೆ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಕೇರಳದಿಂದ ಆಯ್ಕೆಯಾದ ಒಟ್ಟು ಇಪ್ಪತ್ತು ಮಂದಿಯಲ್ಲಿ ನಮ್ಮ ಶಾಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ವಿದ್ಯಾರ್ಜನೆ ಮಾಡಿದ ನೇತ್ರಾವತಿ, ಲಕ್ಷ್ಮಿ ಮತ್ತು ಧನ್ಯ ರಾಘವ ಸೇರಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಪಯ್ಯನ್ನೂರಿನ ಫೋಕ್ ಲ್ಯಾಂಡ್ ಕಲಾ ಶಾಲೆಯ ವಿದ್ಯಾರ್ಥಿಗಳಾದ ಇವರು ಹಿಮಾಚಲ ಪ್ರದೇಶದಲ್ಲಿ ತಿರುವಾದಿರಕ್ಕಳಿ, ಮಾರ್ಗಂ ಕಳಿ ಮತ್ತು ಒಪ್ಪನ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು.

08 October 2011

ಶ್ರೀ ಶಾರದಾ ಪೂಜಾ - ೨೦೧೧

ನಮ್ಮ ಶಾಲೆಯಲ್ಲಿ ವರ್ಷಂಪ್ರತಿ ಜರಗುವ ಶ್ರೀ ಶಾರದಾ ಪೂಜಾ ಕಾರ್ಯಕ್ರಮ ಅಷ್ಟಾವಧಾನ ಕಾರ್ಯಕ್ರಮ ಸಹಿತ ಮೊನ್ನೆ ೦೬.೧೦.೨೦೧೧ ಗುರುವಾರ ಜರಗಿತು.

03 October 2011

ಆದರ್ಶ ಬಿಡಿಸಿದ ಚಿತ್ರ


ಲ್ಲಕಟ್ಟ ಶಾಲೆಯಲ್ಲಿ ಏಳನೇ ತರಗತಿಯನ್ನು ಪೂರ್ತಿಗೊಳಿಸಿ ನಮ್ಮ ಶಾಲೆಯ ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಆದರ್ಶ. ಎಚ್. ಎ ಇವನಿಗೆ ಬ್ಲಾಗ್ ಲೋಕಕ್ಕೆ ನಮ್ಮೆಲ್ಲರ ಸ್ವಾಗತಗಳು. ಗಣೇಶ ಚತುರ್ಥಿ ದಿನದ ಅಂಗವಾಗಿ ಮಧೂರು ಶ್ರೀ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ‘ಗಣೇಶ’ನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿದ ಆದರ್ಶನಿಗೆ ಶುಭಾಶಯಗಳು.