Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

30 October 2009

ಹೆಮ್ಮೆ ಇದೆ ನಮಗೆ...


ಸೆಪ್ಟೆಂಬರ್ ೧ ರಿಂದ ೫ ರ ವರೆಗೆ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ೩೫ ದೇಶಗಳಿಂದ ಬಂದ ೫೦೦ ಸಂಸ್ಕೃತ ಜ್ಞರು ಭಾಗವಹಿಸಿದ್ದರು. ನಮ್ಮ ಹೆಮ್ಮೆಯ ಕಲೆಯನ್ನು ವಿಶ್ವಮಾನ್ಯ ಭಾಷೆಯಾದ ಸಂಸ್ಕೃತದಲ್ಲಿ ಪ್ರಸ್ತುತಿಪಡಿಸಿದವರು ಕನ್ನಡಿಗರಾದ ಶ್ರೀ ವೆಂಕಟೇಶ ಮೂರ್ತಿ. ಕಾಸರಗೋಡಿನವರು. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಗಳ ಈ ಸುಪುತ್ರ, ನೀರ್ಚಾಲಿನ ಮಹಾಜನ ಸಂಸ್ಕೃತ-ಕಾಲೇಜು-ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪಡೆಯುತ್ತಲೇ ಅಲ್ಲಿ ಯಕ್ಷಗಾನದ ನಾಟ್ಯದ ತರಬೇತಿಯನ್ನು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಗಳಿಸಿದರು. ತಮ್ಮ ಸಹಧರ್ಮಿಣಿ ಶುಭಲಕ್ಷ್ಮೀ ಹಾಗೂ ಪುತ್ರ ಈಶಾನ ನೊಂದಿಗೆ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ದಲ್ಲಿ ಉಪನ್ಯಾಸಕರಾಗಿದ್ದಾರೆ. ಸಂಸ್ಕೃತ ನಾಟಕದ ಸನ್ನಿವೇಶಗಳಿಗೆ ಯಕ್ಷಗಾನದ ರೂಪವನ್ನು ಕೊಟ್ಟು ಯಕ್ಷಗಾನ-ಏಕಪಾತ್ರಾಭಿನಯದ ಈ ಮನಮೋಹಕ ಪ್ರಯೋಗವನ್ನು ಮೆಚ್ಚಿದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಈ ಬಾರಿಯ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ರೋಚಕ ಅಭಿನಯವನ್ನು ಪ್ರದರ್ಶಿಸಲು ಆಹ್ವಾನವನ್ನಿತ್ತಿತು. ಮುಉರ್ತಿ ಯವರು ಪ್ರದರ್ಶಿಸಿದ ಕೌರವೌರವಮ್ (ಗದಾಯುದ್ಧ-ಊರುಭಂಗ) ಎಂಬ ಕಥಾ-ಪ್ರಸಂಗದ ದುರ್ಯೋಧನನ ರೌಷ-ವಿಲಾಪ ದ ಅಭಿನಯ ಪ್ರೇಕ್ಷಕರ ಹೃದಯ ಸ್ಪರ್ಶಿಯಾಗಿ ಮೂಡಿ ಬಂತು. ಭಾರತದ ವಿವಿಧ ರಾಜ್ಯಗಳಿಂದ ಬಂದ ನಾಟಕಾಭಿಮಾನಿಗಳಿಗೆ, ವಿವಿಧ ದೇಶಗಳಿಂದ ಬಂದ ಅನಿವಾಸಿ-ಭಾರತೀಯರಿಗೆ ಮತ್ತು ಭಾರತೀಯತೆಯನ್ನು ತಿಳಿಯುವ ತವಕದ ವಿದೇಶೀಯರಿಗೆ ಇದೊಂದು ರಸಭರಿತ ಔತಣವಾಯಿತು. ಈ ಮನೋಜ್ಞ ಭಾರತೀಯ ಅಭಿನಯವನ್ನು ವಿಶ್ವಮಾನ್ಯ ಭಾರತೀಯ ಭಾಷೆಯಿಂದಲೇ ನೋಡಿ ಆನಂದಿಸಿದ ವಿಶ್ವಸ್ತರದ ಪ್ರೇಕ್ಷಕರಿಂದ ತುಂಬು ಹೃದಯದ ಪ್ರಶಂಸೆ ವ್ಯಕ್ತವಾಯಿತು. ನಾವು ಬೇರೆ ರಾಜ್ಯಕ್ಕೆ, ದೇಶಕ್ಕೆ ಹೋದಾಗ ಅಲ್ಲಿನವರಿಗೆ ನಮ್ಮ ನೆಲದ ವೈಶಿಷ್ಟ್ಯವನ್ನು ಹೇಳುವ ಸಂಸ್ಕೃತಿಯ ವೈಭವಗಳನ್ನ ತೋರಿಸುವ ಒಂದು ರೀತಿಯ ತವಕ ನಮಗಿರುತ್ತದೆ ತಾನೇ? ಅದಕ್ಕೆ ಸಹಾಯ ಮಾಡುವ ಮಾಧ್ಯಮಗಳಲ್ಲೊಂದು ನಮ್ಮ ಜಾನಪದ-ಸಾಂಸ್ಕೃತಿಕ ಕಲೆಗಳ ಪ್ರದರ್ಶನ. ಕನ್ನಡೇತರರಿಗೆ ಕನ್ನಡಿಗರು ಕೊಡಬಹುದಾದ ಕೊಡುಗೆಗಳಲ್ಲಿ ಕನ್ನಡ ನೆಲದ ಕಲಾ ಪ್ರದರ್ಶನವು ಒಂದು. ಕನ್ನಡನಾಡಿನ ಕಲೆಯಾದ ಯಕ್ಷಗಾನದ ಸವಿಯನ್ನು ಕನ್ನಡ ತಿಳಿಯದವರಿಗೂ ಕೊಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದಕ್ಕಾಗಿ ಆಯಾಯ ಪ್ರದೇಶಗಳ ಭಾಷೆಗಳಲ್ಲಿ ( ಹಿಂದಿ ಹಾಗೂ ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ಇಂಗ್ಲೀಷಿನಲ್ಲಿ) ನಡೆಯುವ ಪ್ರದರ್ಶನದ ಬಗ್ಗೆ ನಾವು ಕೇಳಿದ್ದೇವೆ. ನಾಟ್ಯರಂಗಕ್ಕೆ ವಿಪುಲ ಸಾಹಿತ್ಯದ ಕೊಡುಗೆಯನ್ನೀಯುವ ಸಂಸ್ಕೃತಭಾಷೆಯಲ್ಲಿ ಯಕ್ಷಗಾನದ ಪ್ರದರ್ಶನ ವಾದರೆ ಹೇಗಿರಬಹುದು? ಇಂತಹ ಒಂದು ಪ್ರಯತ್ನ ಜಪಾನಿನಲ್ಲಿ ನಡೆಯಿತು. ಅಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕಲೆಗಳ ಪ್ರತೀಕವಾಗಿ ಕನ್ನಡನಾಡಿನ ಯಕ್ಷಗಾನ ಸಂಸ್ಕೃತದಲ್ಲಿ ಪ್ರದರ್ಶನಗೊಂಡಿತು. ತಮ್ಮಬಾಲ್ಯದಲ್ಲಿ ಪಡೆದ ಗ್ರಾಮೀಣ ಕಲೆಯನ್ನು ಸಂಸ್ಕೃತ ನಾಟಕ ರಂಗಕ್ಕೆ ಜೋಡಿಸಿ ದೆಹಲಿಯ ತಮ್ಮ ಸಂಸ್ಥೆಯ ವಸಂತೋತ್ಸವದಲ್ಲಿ , ಉಜ್ಜಯಿನಿಯ ನಾಟ್ಯ ಮಹೋತ್ಸವದಲ್ಲಿ, ಭೋಪಾಲದ ಸಂಸ್ಕೃತ ರಂಗಮಂಚ ದಲ್ಲೂ ಪ್ರದರ್ಶಿಸಿ ಸಂಸ್ಕೃತ-ವಿದ್ವಾಂಸರ, ಕಲಾ ರಸಿಕರ ಮನವನ್ನು ರಂಜಿಸಿದ್ದಾರೆ. ತಿರುಪತಿಯ ಸಂಸ್ಕೃತ ವಿದ್ಯಾಪೀಥದಿಂದ ಸಂಸ್ಕೃತದಲ್ಲಿ ಉನ್ನತ ವಿದ್ಯಾಬ್ಯಾಸವನ್ನು ಮಾಡಿದ ಈ ಕಲಾವಿದ ಸಂಸ್ಕೃತವನ್ನು ಜನಮಾನಸಕ್ಕೊಯ್ಯುವ ಕಾರ್ಯದಲ್ಲೂ ನಿರತರಾಗಿದ್ದಾರೆ. ಸಂಸ್ಕೃತದಿಂದ ಕನ್ನಡಿಗರಿಗೇನು ಪ್ರಯೋಜನ? ಕನ್ನಡದಿಂದ ಸಂಸ್ಕೃತ ಕ್ಕೇನು ಸಿಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಇದೊಂದು ಉದಾಹರಣೆಯಾಗಬಹುದೇನೋ?

23 October 2009

ಕೊನೆಯ ಚಿತ್ರ...

ಮೊನ್ನೆ ಅಸುನೀಗಿದ ನಾಲ್ವರು ಬಾಲಕರಲ್ಲಿ ಕಿರಿಯವನಾದ ಅಜಿತ್ ಬಿ.ಟಿ ಬಿಡಿಸಿದ ಚಿತ್ರ ಇದು. ಈಗ ನಿಮ್ಮ ಮುಂದೆ ಇದೆ. ಇದು ಆ ಹುಡುಗ ಬಿಡಿಸಿದ ಕೊನೆಯ ಚಿತ್ರ. ಗುರುವಾರ ಶಾಲೆಯಲ್ಲಿ ಜರಗಿದ ಕಲೋತ್ಸವ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಬಿಡಿಸಿದ ಪೆನ್ಸಿಲ್ ಡ್ರಾಯಿಂಗ್ ಇದು. ಶುಕ್ರವಾರ ಶಾಲಾ ಕ್ರೀಡಾಕೂಟ ಜರಗಿತ್ತು. ಈತ ಮತ್ತು ಅಣ್ಣಂದಿರು ಆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶನಿವಾರ ದೇವರು ಬಿಡಿಸಿದ ಆ ನಾಲ್ಕು ಪುಟಾಣಿಗಳ ಚಿತ್ರವನ್ನು ಯಮ ಬಲಿ ತೆಗೆದುಕೊಂಡ...
ಅತ್ಯಂತ ಬಡ ಕುಟುಂಬದ ಈ ಬಾಲಕರ ಪೈಕಿ ಇನ್ನುಳಿದವರಿಗೆ ಆಶ್ರಯ ನೀಡುವುದು ಸಮಾಜದ ಕರ್ತವ್ಯ ಎನ್ನುವ ದೃಷ್ಟಿಯಿಂದ ಕುಟುಂಬ ಸಹಾಯ ನಿಧಿಯನ್ನು ಸ್ಥಾಪಿಸಿದ್ದೇವೆ. ಇದಕ್ಕಾಗಿ ಹಳೆ ವಿದ್ಯಾರ್ಥಿಗಳ, ರಕ್ಷಕ ಶಿಕ್ಷಕ ಸಂಘದ ಸಹಾಯ ಸಮಿತಿಯನ್ನೂ ರೂಪೀಕರಿಸಲಾಗಿದೆ. ಅಜಿತ್ ಕುಟುಂಬದಲ್ಲಿ ತಾಯಿ ತಂದೆಯರ ಹೊರತಾಗಿ ಉಳಿದಿರುವುದು ಮಾನಸಿಕ ವಿಕಲ ಚೇತನೆ ತಂಗಿ ಮಾತ್ರ....
ಆಸಕ್ತರು ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾದ ಚಾಲ್ತಿ ಖಾತೆ ಸಂಖ್ಯೆ ೭೧೬೦ಕ್ಕೆ ದೇಣಿಗೆ ಸಲ್ಲಿಸಬೇಕಾಗಿ ಅಪೇಕ್ಷೆ.

19 October 2009

.... ಅಶ್ರುತರ್ಪಣ

ಕ್ಷಮೆ ಇರಲಿ, ಬೇವು ಚಿಗುರೊಡೆದ ಸಂತಸದ ಸುದ್ದಿಯ ಹಿಂದೆ, ಬೆಳೆಯುತ್ತಿರುವ ನಾಲ್ಕು ಚಿಗುರುಗಳು ಮುರುಟಿಹೋದ ಸುದ್ದಿ ಬರೆಯಲು ದುಃಖದ ಕಟ್ಟೆ ಸಮ್ಮತಿಸುವುದಿಲ್ಲ. ನಿಮ್ಮ ಮುಂದೆ ಇಡುವ ವಿಚಾರ ಮೌನ ಮಾತ್ರ.... ಮೊನ್ನೆ ನರಕ ಚತುರ್ದಶಿಯ ಹಬ್ಬದ ದಿನ, ೧೭.೧೦.೨೦೦೯ ಶನಿವಾರ ಕಲ್ಲಕಟ್ಟ ಸಮೀಪದ ಬಾರಿಕ್ಕಾಡು, ಅಜ್ಜಾವರ ಕ್ಷೇತ್ರದ ಬಳಿಯಲ್ಲಿ ಹರಿಯುವ ಮಧುವಾಹಿನಿ ನದಿಯಲ್ಲಿ ಸ್ನಾನಕ್ಕಿಳಿದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಲಾಶ್, ರತನ್ ಕುಮಾರ್ ಮತ್ತು ಅಜಿತ್ ಹಾಗೂ ಕಳೆದ ವರ್ಷ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಜೀಶ್ ಹೀಗೆ... ನಾಲ್ವರು ವಿದ್ಯಾರ್ಥಿಗಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ತಲಪುವ ಮುನ್ನವೇ ಅಸುನೀಗಿದ ಈ ನಾಲ್ವರು ಬಾಲಕರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ತಂದೆತಾಯಿ, ಕುಟುಂಬ ಹಾಗೂ ಮಿತ್ರವರ್ಗಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಪರಮಾತ್ಮನು ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

16 October 2009

ಬೇವು ಚಿಗುರಿತು...!

ಕರಾವಳಿಯ ಮಣ್ಣಿನಲ್ಲಿ ಕಹಿಬೇವಿನ ಗಿಡವನ್ನು ಬದುಕಿಸುವುದು ಮತ್ತು ಉಳಿಸಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸ. ಇಲ್ಲಿನ ಹವಾಗುಣ ಮತ್ತು ಮಣ್ಣಿನ ತರಗತಿ ಬೇವು ಬೆಳೆಗೆ ಅನುಕೂಲಕರವಾಗಿಲ್ಲ. ಆಯುರ್ವೇದ ಔಷಧ ಲೋಕಕ್ಕೂ ಕಹಿಬೇವು ಅನಿವಾರ್ಯವಾದ ಸಂಬಾರವಾದ್ದರಿಂದ ಕಹಿಬೇವಿಗೆ ಈ ನಾಡಿನಲ್ಲಿ ಭಾರೀ ಬೇಡಿಕೆ. ಇಂತಹಾ ಪರಿಸ್ಥಿತಿಯಲ್ಲೂ ನಮ್ಮ ಶಾಲೆಯಲ್ಲಿ ಕಳೆದ ಒಂದು ಶತಮಾನದಿಂದ ಕಹಿಬೇವಿನ ಮರವೊಂದು ಸೆಟೆದು ನಿಂತಿರುವುದು ಅನೇಕರ ಅಚ್ಚರಿಗೆ, ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಊರಮಂದಿಗೆಲ್ಲ ಔಷಧೀಯ ಗುಣಗಣಿಯಾಗಿ ಅಪಾರ ಸಹಾಯನೀಡಿದ ಈ ವೃಕ್ಷ ಅಂಗಳದಲ್ಲೇ ಸುತ್ತಾಡುತ್ತಿದ್ದ ಪುಟಾಣಿ ವಿದ್ಯಾರ್ಥಿಗಳನ್ನೂ, ನೆರೆಯವರನ್ನೂ ಬೇಸರದಲ್ಲಿ ಸಿಲುಕಿಸಿ ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಗಾಳಿಮಳೆಗೆ ಧರಾಶಾಯಿಯಾಯಿತು. ಪ್ರತಿಷ್ಟಿತ ‘ಮನೋರಮಾ’ ನ್ಯೂಸ್ ಚಾನಲ್ ಸಹಿತ ಅನೇಕ ಕನ್ನಡ, ಮಲಯಾಳ ಪತ್ರಿಕೆಗಳು ಆ ಸಂದರ್ಭದಲ್ಲಿ ವೃಕ್ಷ ಪಿತಾಮಹನಿಗೆ ಅಶ್ರುತರ್ಪಣಗೈದಿದ್ದವು.
ನಾಡಿನಾದ್ಯಂತದಿಂದ ಬಂದ ಒಕ್ಕೊರಲ ಅಭಿಪ್ರಾಯದಂತೆ ಶಾಲಾ ಆಡಳಿತ ಮಂಡಳಿಯು, ಆ ಮರದ ಜೊತೆ ಅವಿನಾಭಾವ ಸಂಬಂಧ ಹೊತ್ತಿದ್ದ ‘ಮಹಾಜನ’ ಖಂಡಿಗೆ ಶಾಮ ಭಟ್ಟರ ನಿರ್ದೇಶನದಂತೆ ಕಹಿಬೇವಿನ ಉಳಿವಿಗಾಗಿ ಚಿಕಿತ್ಸೆ ನೀಡಿತು. ಎಲ್ಲರ ಪ್ರಾರ್ಥನೆಯ ಪರಿಣಾಮವಾಗಿ ಈಗ ಒಂದೆರಡು ತಿಂಗಳ ನಂತರ ಬೇವು ಮತ್ತೆ ಚಿಗುರಿದೆ, ಇನ್ನಷ್ಟು ವರ್ಷ ಅನೇಕ ಮಂದಿಯ ಖಾಯಿಲೆಗಳನ್ನು ದೂರಮಾಡುವ ವಿಶ್ವಾಸವನ್ನು ಮೂಡಿಸಿದೆ.

15 October 2009

ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿ

ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಷೇಕ್.ಎಸ್.ಎನ್, ನವನೀತಕೃಷ್ಣ.ಯು, ಅನುತೇಜ್.ಎಸ್, ದೀಪಕ್.ಎಂ, ಗೋವಿಂದಪ್ರಕಾಶ.ಪಿ.ಜಿ, ಅವಿತೇಶ್.ಬಿ, ಪ್ರಶಾಂತಕೃಷ್ಣ, ರಾಮಕಿಶನ್.ಎಂ, ಶ್ರೀನಿಧಿ, ನಿತಿನ್.ಎಂ.ಡಿ, ಶ್ರೀನಿವಾಸ.ಎಚ್.ಎನ್ ಮತ್ತು ವಿನೀತ್ ಶಂಕರ್.ಎಚ್ ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

13 October 2009

‘ಗೋವಿಂದಣ್ಣ’ ಅಸ್ತಂಗತ - ಶ್ರದ್ಧಾಂಜಲಿ

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಜವಾನನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನ ‘ಗೋವಿಂದಣ್ಣ’ನಾಗಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಗೋವಿಂದ ಭಟ್(೫೨) ನಿನ್ನೆ ರಾತ್ರಿ ೧.೩೦ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ೧೫.೦೫.೧೯೫೭ ರಂದು ಕೃಷ್ಣ ಭಟ್ಟರ ಪುತ್ರನಾಗಿ ಜನಿಸಿದ ಅವರು ೧.೧೧.೧೯೮೯ ರಂದು ನೀರ್ಚಾಲಿನಲ್ಲಿ ಉದ್ಯೋಗಿಯಾಗಿ ಸೇವೆ ಆರಂಭಿಸಿದ್ದರು. ಅವರು ಪತ್ನಿ ರಾಜೇಶ್ವರಿ, ತಾಯಿ, ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳಿಗೆ ರಜೆಸಾರಲಾಗಿದೆ. ಮೃತರ ಆತ್ಮಕ್ಕೆ `ಮಹಾಜನ' ಶ್ರದ್ಧಾಂಜಲಿಗಳನ್ನೂ ಸಮರ್ಪಿಸುತ್ತದೆ.

08 October 2009

ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿ

ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ವಿದ್ಯಾ.ಕೆ.ಎನ್, ಸುಶ್ಮಿತಾ.ಬಿ, ಮಾನಸ.ಪಿ.ಎಸ್, ಕೃತಿ.ಪಿ.ಕೆ, ಅಕ್ಷತಾ ದುರ್ಗಾ ಮತ್ತು ಐಶ್ವರ್ಯಾ ಆಳ್ವಾ.ಬಿ ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

06 October 2009

ಯು.ಎಸ್.ಎಸ್. ಪ್ರಶಸ್ತಿ

೨೦೦೮-೦೯ನೇ ಸಾಲಿನ ಯು.ಎಸ್.ಎಸ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಕೃಷ್ಣ. ಎನ್.ಕೆ, ರಂಜಿತಾ ಮತ್ತು ಸುಬ್ರಹ್ಮಣ್ಯ ಪ್ರಸಾದ ತೇರ್ಗಡೆಹೊಂದಿ ಸ್ಕಾಲರ್‌ಶಿಪ್ ಪಡೆಯಲು ಅರ್ಹತೆಹೊಂದಿದ್ದಾರೆ.

03 October 2009

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮಲ್ಲಿ... ಬನ್ನಿ...

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ವತಿಯಿಂದ ಜನವರಿ ಮೊದಲ ವಾರದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ನಡೆಸಲು ತೀರ್ಮಾನಿಸಿದ ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ಅವರು ೦೩.೧೦.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೆಜು ಪ್ರೌಢಶಾಲೆಯಲ್ಲಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಶಕ್ತಿಯನ್ನು ಈ ಸಮ್ಮೇಳನ ಪ್ರತಿಬಿಂಬಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಒತ್ತು ಕೊಡುವ ಕಾರ್ಯಕ್ರಮಗಳು ಈ ಸಮ್ಮೇಳನದಲ್ಲಿ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲ ಕನ್ನಡಿಗರು ಒಂದಾಗಿ ನಿಂತು ದುಡಿಯಬೇಕಾಗಿದೆ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷ ಎಸ್.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಜನೋತ್ಸವದ ರೂಪುರೇಷೆಯ ಬಗೆಗೆ ಯುವಜನೋತ್ಸವ ಸಮಿತಿ ಅಧ್ಯಕ್ಷ ಮಾಯಿಪ್ಪಾಡಿ ವಿಶ್ವನಾಥ ರೈ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಖೆಯ ಬಗ್ಗೆ ಸಮಿತಿ ಸಂಚಾಲಕ ಶ್ರೀಕೃಷ್ಣಯ್ಯ ಅನಂತಪುರ ವಿವರಿಸಿದರು.
ಎಂ.ವಿ.ಭಟ್ ಮಧುರಂಗಾನ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಸುಕುಮಾರ ಆಲಂಪಾಡಿ, ಜಯದೇವ ಖಂಡಿಗೆ ಹಾಗೂ ಸ್ವಾಗತ ಸಮಿತಿಯ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಎಂ.ವಿ ಸ್ವಾಗತಿಸಿ ತಾಲೂಕು ಕಾರ್ಯದರ್ಶಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಗೌರವ ಕಾರ್ಯದರ್ಶಿ ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು.