Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

29 August 2009

ಓಣಂ ಹಬ್ಬದ ಶುಭಾಶಯಗಳು

ನಮಗೆ ಮತ್ತೆ ರಜಾ ಪರ್ವ. ಈ ಬಾರಿ ಕೇರಳದ ನಾಡಹಬ್ಬ ಓಣಂ. ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ರಜೆ ಮುಗಿಸಿ ವಿದ್ಯಾರ್ಥಿಗಳೆಲ್ಲ ಸೆಪ್ಟೆಂಬರ್ ಏಳರಂದು ಶಾಲೆಗೆ ಹಾಜರಾಗಲಿದ್ದಾರೆ. ಹೊಸ ಉತ್ಸಾಹದೊಂದಿಗೆ...

27 August 2009

ಕವನ - ಸಂಧ್ಯಾ ಸಮಯ :ಮಾನಸ. ಪಿ.ಯಸ್

ಸಂಜೆಯ ಸಮಯದಿ ಮುಳುಗುವ ಸೂರ್ಯನ

ಕಿರಣದ ಸೊಬಗನು ನೋಡಿದೆಯಾ

ಕಡಲಲಿ ನರ್ತನವಾಡುವ ಕಿರಣದ

ಅಲೆಗಳ ಅಂದವ ಸವಿಯುವೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ಕೆಂಬಣ್ಣದ ಬಾನಲಿ ಹೊಳೆಯುವ ಮೇಘದಿ

ಹರಿಯುವ ರಕ್ತವ ನೋಡಿದೆಯಾ

ಸಂಜೆಯ ಕಂಪಲಿ ಮಕ್ಕಳ ಆಟದ

ಅಂದವ ನೀನು ಸವಿಯುವೆಯ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ಚಿಲಿಪಿಲಿಗುಟ್ಟುವ ಹಕ್ಕಿಯು ತನ್ನಯ

ಗೂಡನು ಸೇರುವ ಸಂತಸ ಸವಿಯುವೆಯಾ

ಮೆಲ್ಲನೆ ತನ್ನಯ ಮರಿಗಳ ಮುದ್ದಿಸಿ

ಹಣ್ಣನು ಕೊಡುವುದ ನೋಡಿದೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ತಣ್ಣನೆ ಗಾಳಿಯು ಬೀಸುತ ಮೆಲ್ಲಗೆ

ಕಂಪನು ತರುವುದ ಸವಿಯುವೆಯಾ

ಗಾಳಿಯ ರಭಸಕೆ ಮಾಮರ ಚಾಮರ

ಮಾಡುವ ನರ್ತನ ನೋಡಿದೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

21 August 2009

ಹೂ ರಂಗವಲ್ಲಿ

ಓಣಂ ಔತಣದ ಸಡಗರದ ಜೊತೆಗೆ ಶಾಲಾ ಗಣಿತ ಸಂಘದ ಆಶ್ರಯದಲ್ಲಿ ಹೂ ರಂಗವಲ್ಲಿ ಸ್ಪರ್ಧೆ. ಎಂಟನೇ ತರಗತಿಯ ಕುಸುಮಾ ಮತ್ತು ತಂಡದವರು ಪ್ರಥಮ ಸ್ಥಾನ ಗಳಿಸಿದರು.

ಇಂದು ಓಣಂ ಔತಣ


ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಇಂದು ಸಂಭ್ರಮದ ದಿನ. ರಂಝಾನ್ ಹಬ್ಬದ ನಿಮಿತ್ತ ವಾರ ಮುಂಚಿತವಾಗಿ ಓಣಂ ಔತಣ ಸವಿಯುವ ಸೌಭಾಗ್ಯ. ಹಗ್ಗ ಜಗ್ಗಾಟ, ಹೂ ರಂಗವಲ್ಲಿ ಇತ್ಯಾದಿ ಸ್ಪರ್ಧೆಗಳು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಅವರಿಂದ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರ ಉಪಸ್ಥಿತಿಯಲ್ಲಿ ಉದ್ಘಾಟನೆ.

20 August 2009

ಹೊಸ ಪ್ರಯತ್ನದ ಕಡೆಗೆ...

ನಮ್ಮ ಬ್ಲಾಗ್ ಈ ತನಕ ವಿಂಡೋಸ್ ನಲ್ಲಿ ನಡೆದು ಬರುತ್ತಿತ್ತು. ನಮ್ಮ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಳಕೆ ಕಡ್ಡಾಯವಾಗಿ ಎಂಟನೇ ತರಗತಿಯಿಂದಲೇ ಆರಂಭವಾಗುತ್ತಿದೆ. ಆದರೆ ಅವರೆಲ್ಲ ಲಿನಕ್ಸ್ ತಂತ್ರಾಂಶವನ್ನು ಇದಕ್ಕಾಗಿ ಬಳಸಿಕೊಳ್ಳುತ್ತಾರೆ. ನಮ್ಮ ನಡುವಿನ ಈ ತೊಂದರೆಯನ್ನು ಈಗ ಪರಿಹರಿಸಿಕೊಂಡಿದ್ದೇವೆ. ಈಗ ಲಿನಕ್ಸ್ ನಲ್ಲಿ ಟೈಪು ಮಾಡಿದ ಕನ್ನಡವನ್ನು ಬ್ಲಾಗ್ ನಲ್ಲಿ ಅಪ್ ಡೇಟ್ ಮಾಡಿಕೊಳ್ಳುವಲ್ಲಿ ನಾವು ಮತ್ತು ವಿದ್ಯಾರ್ಥಿಗಳು ಸಮರ್ಥರಾಗಿದ್ದೇವೆ. ಇನ್ನು ನಮ್ಮ ಬ್ಲಾಗ್ ಟೈಪಿಂಗ್ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ಹೊತ್ತುಕೊಳ್ಳುತ್ತಾರೆ. ನಿಮ್ಮ ಸಲಹೆ, ಸಹಕಾರಗಳು ಇನ್ನೂ ಮುಂದುವರಿಯಲಿ ಎಂದು ಅಪೇಕ್ಷಿಸುತ್ತೇವೆ...

19 August 2009

ಜಲಮಾಲಿನ್ಯ

ಜಲಮಾಲಿನ್ಯವು ಹಲವು ರೀತಿಯಲ್ಲಿ ಉಂಟಾಗುತ್ತದೆ. ಹೇಗೆಂದರೆ ಜಲಾಶಯಗಳ ಸಮೀಪ ಬಟ್ಟೆ, ಪಾತ್ರೆ, ವಾಹನ ಇತ್ಯಾದಿಗಳನ್ನು ತೊಳೆಯುವುದರಿಂದ ನೀರು ಮಲಿನಗೊಳ್ಳುವುದು. ಇದೆ ರೀತಿ ಜಲಾಶಯಗಳ ಸಮೀಪ ಸ್ನಾನ ಮಾಡುವುದರಿಂದ ಚರಂಡಿ ನೀರುಗಳನ್ನು ನದಿಗಳಿಗೆ ಬಿಡುವುದರಿಂದ ಕಾಖಾ೯ನೆಗಳ ತ್ಯಾಜ್ಯವಸ್ತುಗಳನ್ನು ಜಲಾಶಯಗಳಿಗೆ ಎಸೆಯುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಮಣ್ಣಿನ ಕೊರೆತದಿಂದ ಜಲಮಾಲಿನ್ಯ ಉಂಟಾಗುತ್ತದೆ.

ಒಂದು ಕಥೆ - ಸ್ವಾತಿ ಸಿ.ವಿ.

ಒಂದು ಊರಿನಲ್ಲಿ ರವಿ ಎಂಬ ಒಬ್ಬ ಹುಡುಗನಿದ್ದನು. ಅವನು ಕೆಟ್ಟವನಾಗಿದ್ದನು. ಸ್ನೇಹಾ ಅವನ ತಂಗಿಯಾಗಿದ್ದಳು. ರವಿ ಸ್ನೇಹಾಳಿಂದ ಒಂದು ವರ್ಷ ದೊಡ್ಡವನಾಗಿದ್ದನು. ಅವನು ೯ನೇ ತರಗತಿಯಲ್ಲೂ ಸ್ನೇಹಾ ೮ನೇ ತರಗತಿಯಲ್ಲೂ ಓದುತ್ತಿದ್ದರು. ರವಿ ಶಾಲೆಯಿಂದ ಬಂದ ನಂತರ ಆಟವಾಡಲು ಹೋಗುತ್ತಿದ್ದನು. ಆಗ ಸ್ನೇಹಾ ತನ್ನ ಶಾಲೆ ಕೆಲಸಗಳನ್ನು ಮಾಡುತ್ತಿದ್ದಳು. ಆಟ ಆಡಿ ಬಂದ ನಂತರ ಸ್ನೇಹಾಳಲ್ಲಿ ಅವನ ಶಾಲೆಕೆಲಸಗಳನ್ನು ಮಾಡಿಸುತ್ತಿದ್ದನು.

ಈ ವರ್ಷದ ಕಲಿಯುವಿಕೆಯಲ್ಲಿ ಸ್ನೇಹಾಳಿಗೆ ಪ್ರಥಮ ಸ್ಥಾನ ದೊರೆಯಿತು. ಆಗ ಅವಳ ತಂದೆ ತಾಯಿ ಬಹಳ ಖುಶಿಪಟ್ಟರು. ರವಿಗೆ ಬಹಳ ಬೇಸರವಾಯಿತು. ಅವನು ತಂದೆ ತಾಯಿಯರ ಬಳಿ ಹೋದಾಗ ಅವರು ಮುಖ ಎತ್ತಿ ಇವನನ್ನು ನೋಡುತ್ತಿರಲಿಲ್ಲ. ಒಂದು ದಿನ ರವಿ ಸ್ನೇಹಾಳಲ್ಲಿ ಈ ವಿಷಯದ ಬಗ್ಗೆ ಪ್ರಶ್ನಿಸಿದನು. ಆಗ ಅವಳು “ನೀನು ಕೂಡಾ ಕಲಿಯುವುದರಲ್ಲಿ ಪ್ರಥಮ ಸ್ಥಾನ ಪಡೆದುಕೊ, ಒಳ್ಳೆಯ ರೀತಿಯಲ್ಲಿ ನಡೆದುಕೊ” ಎಂದಳು. ಇದರಿಂದಾಗಿ ರವಿಯ ಮನಪರಿವರ್ತನೆಯಾಗಿ ನಂತರ ಒಳ್ಳೆಯ ವಿದ್ಯಾರ್ಥಿಯಾದನು. ಅದರಂತೆಯೇ ನಾವೂ ಒಳ್ಳೆಯ ವಿದ್ಯಾರ್ಥಿಯಾಗಿ ಎಲ್ಲರೊಡನೆ ಸ್ನೇಹದಿಂದಿರಬೇಕು.

15 August 2009

ನೀರ್ಚಾಲಿನಲ್ಲಿ ಸ್ವಾತಂತ್ರ್ಯೋತ್ಸವ

“ಮಹಾಪುರುಷರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೬೩ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ನಾವು ಆ ಮಹಾನ್ ತ್ಯಾಗಿಗಳ ಬಲಿದಾನವನ್ನು ನೆನಪಿಸಿಕೊಳ್ಳಬೇಕು. ಬಡವರ ಸೇವೆ, ಪರೋಪಕಾರ, ಅಹಿಂಸೆ, ಸತ್ಯ, ಶಾಂತಿ ನಮ್ಮ ಮಂತ್ರವಾಗಬೇಕು. ಆ ಮೂಲಕ ನಮ್ಮ ದೇಶದ ಉದ್ಧಾರ ಆಗಬೇಕು" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕಾನ ಈಶ್ವರ ಭಟ್ ಹೇಳಿದರು. ಅವರು ೧೫.೦೮.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು. ಕೆ.ನಾರಾಯಣ ಭಟ್, ಎಂ.ಸೂರ್ಯನಾರಾಯಣ, ಪ್ರವೀಣ್ ಕುಮಾರ್, ಅವಿತೇಶ್.ಬಿ, ಕೀರ್ತಿ. ಬಿ ಮತ್ತು ಶ್ರೀಶ.ಕೆ ಸ್ವಾತಂತ್ರ್ಯ ದಿನದ ಮಹತ್ವ ಕುರಿತು ಮಾತನಾಡಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವಿಕೃಷ್ಣ.ಯು ವಂದಿಸಿದರು. ಕಾರ್ಯಕ್ರಮ ಸಂಚಾಲಕ, ಶಾಲಾ ಅಧ್ಯಾಪಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ‘ಸ್ವಾತಂತ್ರ್ಯದ ಸ್ಮೃತಿ’ ಹಸ್ತಪ್ರತಿ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಉಪ್ಪಿನ ಸತ್ಯಾಗ್ರಹದ ಕುರಿತಾದ ಪ್ರಾತ್ಯಕ್ಷಿಕೆ, ಸ್ವಾತಂತ್ರ್ಯ ರೂಪಕ, ದೇಶಭಕ್ತಿಗೀತೆ, ನೃತ್ಯ ಕಾರ್ಯಕ್ರಮಗಳು ಜರಗಿದವು.

14 August 2009

ಲೋಕಕಲ್ಯಾಣಕ್ಕಾಗಿ ಕೃಷ್ಣಾವತಾರ: ಸಿ.ಎಚ್.ರಾಮ ಭಟ್


“ಅಧರ್ಮದ ಮೇರೆ ಮೀರಿದಾಗ ಅವತಾರವೆತ್ತಿದ ಕೃಷ್ಣ ಪರಮಾತ್ಮನು ಧರ್ಮದ ಪುನಸ್ಥಾಪನೆ ಮಾಡಿದನು. ಸತ್ಯ, ಧರ್ಮದಿಂದ ಬಾಳಿ ಬದುಕುವ ಜನರ ಏಳಿಗೆಗಾಗಿ ಶ್ರಮಿಸಿದನು. ದೇವತಾರಾಧನೆ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾಲಯಗಳಲ್ಲಿ ಅಂತಹ ಧಾರ್ಮಿಕ ಮೌಲ್ಯದ ದಿನಗಳನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ" ಎಂದು ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಹೇಳಿದರು. ಅವರು ೧೩.೦೮.೨೦೦೯ ಗುರುವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ವಿದ್ಯಾರ್ಥಿ ಮುಖಂಡ ಪ್ರವೀಣ್ ಕುಮಾರ್ ವರದಿ ವಾಚಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ಲೀಲೆ’ ಎಂಬ ಯಕ್ಷಗಾನ ಬಯಲಾಟ ಜರಗಿತು. ವಿದ್ಯಾರ್ಥಿಗಳಾದ ನವನೀತ ಕೃಷ್ಣ.ಯು, ವಿಜೇಶ.ಬಿ, ಅನೀಶ್, ವಿನೀತ್ ಶಂಕರ್.ಎಚ್, ಪ್ರವೀಣ್ ಕುಮಾರ, ಅವಿನಾಶ್, ಅಭಿಲಾಷ್, ರಾಮ ನಾಯ್ಕ, ಶಂಕರ ತೇಜಸ್ವಿ, ಯಜ್ಞೇಶ.ಎಂ, ವಿನಾಯಕ.ಎಂ, ಮಂಜುನಾಥ, ಮನೀಶ್.ಬಿ, ಶಬರೀಶ ಪಾತ್ರವರ್ಗದಲ್ಲಿ ಮಿಂಚಿದರು. ಸುರೇಶ ಆಚಾರ್ಯ ನೀರ್ಚಾಲ್ ಮತ್ತು ಉಂಡೆಮನೆ ಕೃಷ್ಣ ಭಟ್ ಭಾಗವತರಾಗಿ ಸಹಕರಿಸಿದರು. ಬಾಲಕೃಷ್ಣ ಆಚೆಗೋಳಿ, ಈಶ್ವರ ಮಲ್ಲ, ಪ್ರಕಾಶ ನೀರ್ಚಾಲು ಮತ್ತು ಭಾಸ್ಕರ ಕಲ್ಲಕಟ್ಟ ಹಿಮ್ಮೇಳದಲ್ಲಿ ಸಹಕರಿಸಿದರು. ದಿವಾಣ ಶಿವಶಂಕರ ಭಟ್ ನಿರ್ದೇಶಿಸಿದರು, ದೇವಕಾನ ಕೃಷ್ಣ ಭಟ್ ವಸ್ತ್ರಾಲಂಕಾರದಲ್ಲಿ ಸಹಕರಿಸಿದರು.

13 August 2009

ಶ್ರೀಕೃಷ್ಣ ಲೀಲೆ

ಇಂದು ಶ್ರೀಕೃಷ್ಣ ಜಯಂತಿ ಉತ್ಸವ ನಮ್ಮ ಶಾಲೆಯಲ್ಲಿ ಆಚರಿಸಲ್ಪಟ್ಟಿತು. ಮನರಂಜನಾ ಕಾರ್ಯಕ್ರಮದ ಅಂಗವಾಗಿ ನಮ್ಮ ವಿದ್ಯಾರ್ಥಿಗಳು ನಡೆಸಿಕೊಟ್ಟ `ಶ್ರೀಕೃಷ್ಣ ಲೀಲೆ' ಯಕ್ಷಗಾನ ಬಯಲಾಟದ ಚಿತ್ರವನ್ನು ನಿಮ್ಮ ಮುಂದೆ ಇರಿಸಿದ್ದೇವೆ...

ಕವಿತೆ - ಕೃಷಿ


-ಸೀಮಾ ಎಂ.ಬಿ.

ಧರೆಯ ಮನುಜರೆಲ್ಲ ಬನ್ನಿ

ಹೊಲದಕಡೆಗೆ ಹೋಗುವ

ಮಳೆಯ ಸಮಯದಲ್ಲಿ ಬೆಳೆವ

ಕೃಷಿಗೆ ನಾವು ತೊಡಗುವ

ಎತ್ತುಗಳನು ನೊಗಕೆ ಬಗೆದು

ನೇಗಿಲುಗಳನು ಒತ್ತಿ ಹಿಡಿದು

ಗದ್ದೆಗಳನು ಉತ್ತು ಬಿತ್ತಿ

ಕೃಷಿಯ ನಾವು ಮಾಡುವ

ಮುಂಜಾನೆ ಹೊಲಕೆ ಹೋಗಿ

ಪೈರು ಭತ್ತ ಬೆಳೆಸುವ

ಸಂಜೆ ತನಕ ಕೆಲಸ ಮಾಡಿ

ಊರಿಗನ್ನ ನೀಡುವ

ಒಣಗಿ ಇರುವ ಭೂಮಿಯನ್ನು

ಹಚ್ಚ ಹಸಿರು ಮಾಡುವ

ನಮ್ಮ ಮುಂದಿನ ಜೀವನಕ್ಕಾಗಿ

ಕೃಷಿಯ ನಾವು ಬೆಳೆಸುವ.

11 August 2009

ಶ್ರೀಕೃಷ್ಣ ಜಯಂತಿ ಉತ್ಸವ - ಬನ್ನಿ

ಮಹಾಜನ ವಿದ್ಯಾಭಿವರ್ಧಕ ಸಂಘದ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವವು ಆಗಸ್ಟ್ ೧೩ರಂದು ಜರಗಲಿದೆ. ಆ ಪ್ರಯುಕ್ತ ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ರಾಮ ಭಟ್ ಸಿ.ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ. ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ದಿವಾಣ ಶಿವಶಂಕರ ಭಟ್ ದಿಗ್ದರ್ಶನದಲ್ಲಿ“ಶ್ರೀಕೃಷ್ಣ ಲೀಲೆ" ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಬನ್ನಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಎರಡು ಕವನಗಳು

ತುಂತುರು ಮಳೆ ಹನಿ

- ಮಾನಸ ಪಿ.ಎಸ್

ತುಂತುರು ಮಳೆ ಹನಿ ಬೀಳುತಿದೆ

ತರತರ ಶಬ್ದವು ಕೇಳುತಿದೆ

ಗಾಳಿಯು ಜೋರು ಬೀಸುತಿದೆ

ತೆಂಗು ಕಂಗು ಬಾಗುತಿದೆ

ಗುಡು ಗುಡು ಗುಡುಗು ಗುಡುಗುತಿದೆ

ಫಳ ಫಳ ಮಿಂಚು ಮಿಂಚುತಿದೆ

ಮಳೆಯದು ಜೋರು ಬರುತಲಿದೆ

ಭೂಮಿಗೆ ತಂಪನು ತರುತಲಿದೆ

ನಕ್ಷತ್ರ

ಫಳ ಫಳ ಮಿನುಗುವ ನಕ್ಷತ್ರ

ಬಾನಲಿ ನಗುತಿಹ ನಕ್ಷತ್ರ

ಚಂದ್ರನ ಬಳಿಯಲಿ ನಗುತಲಿ ನಿಂತಿಹ

ಬೆಳ್ಳಿಯ ಬಣ್ಣದ ನಕ್ಷತ್ರ

ರಾತ್ರಿಲಿ ಕಂಡು ಬೆಳಗಲಿ ಕಾಣದೆ

ಆಟವನಾಡುವ ನಕ್ಷತ್ರ

ಮೆಲ್ಲನೆ ಮಕ್ಕಳ ಮನಸನು ಸೆಳೆಯುತ

ಅಂದದ ಚಂದದ ನಕ್ಷತ್ರ

ಬಾನಲಿ ಮೋಡಗಳೆಡೆಯಲಿ ಅಡಗುವ

ಬಿಳಿ ಬಣ್ಣದ ಅಂದದ ನಕ್ಷತ್ರ

ನನ್ನಯ ಮುದ್ದಿನ ನಕ್ಷತ್ರ

08 August 2009

ಜಿಲ್ಲಾ ಸಂಸ್ಕೃತ ದಿನಾಚರಣೆ

ಇಂದು ನಮ್ಮ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು....ಈ ಸಂದರ್ಭದಲ್ಲಿ ಸಂಸ್ಕೃತ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಅವರನ್ನು ಗೌರವಿಸುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಿಂದ ೩೦೦ಕ್ಕೂ ಅಧಿಕ ಮಂದಿ ಭಾಗವಹಿಸಿದರು.

07 August 2009

ಚಿತ್ರ - ಚಂದ್ರಶೇಖರ

ನಾಳೆ ನಮ್ಮ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯನ್ನು ಆಯೋಜಿಸಲಾಗಿದೆ. ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರನ್ನು ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಸಂಸ್ಕೃತ ಕೌನ್ಸಿಲ್ ವತಿಯಿಂದ ಗೌರವಿಸಲಾಗುವುದು. ನೀವೂ ಬನ್ನಿ... ಶಾಲೆಗೆ ಹೊಸತಾಗಿ ಎರಡು ಲ್ಯಾಪ್ ಟಾಪ್ ಮತ್ತು ಒಂದು ಲೇಸರ್ ಪ್ರಿಂಟರ್ ಬಂದಿದೆ...

06 August 2009

ಚಿತ್ರ - ಅವಿತೇಶ್. ಬಿ

ಚಿತ್ರಗಳು ಸಾಲು ಕಟ್ಟಿ ನಿಂತಿವೆ.... ನಿಮ್ಮ ಮುಂದೆ ತೆರೆದುಕೊಳ್ಳಲು.03 August 2009

ಚಿತ್ರ - ಚಂದ್ರಶೇಖರ

ಪೆನ್ಸಿಲ್ ಹಿಡಿದು ಬಣ್ಣಗಳನ್ನು ಉಜ್ಜಿ ಗೀಚಿದರೆ ಪ್ರತಿಯೊಂದೂ ಚಿತ್ರವೇ ನಮಗೆ...