Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 January 2009

ನಮ್ಮ ಶಾಲಾ ವರ್ಧಂತ್ಯುತ್ಸವ

“ನಮಗೆ ಯಾವತ್ತೂ ಸ್ವಸ್ಥಾನ ಪರಿಜ್ಞಾನವಿರಬೇಕು. ನಮ್ಮ ಇತಿಮಿತಿಗಳ ಕುರಿತಾದ ಸ್ಪಷ್ಟ ಚಿಂತನೆಗಳಿರಬೇಕು. ಮಹಾಜನ ವಿದ್ಯಾಸಂಸ್ಥೆಯು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ವಿಕಾಸಗೊಳಿಸುತ್ತಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಕಲ ನೆರವನ್ನು ನೀಡುತ್ತಿರುವ ಅತ್ಯಪೂರ್ವವಾದ ಸಂಸ್ಥೆಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಅನೇಕ ವಿದ್ಯಾಸಂಸ್ಥೆಗಳಿಗೆ ವಿದ್ವತ್ಪೂರ್ಣರಾದ ಅಧ್ಯಾಪಕರನ್ನು ಕೊಡುಗೆಯಾಗಿ ನೀಡಿದ ಮಹಾಜನ ವಿದ್ಯಾಸಂಸ್ಥೆ ವಿದ್ಯಾಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿದೆ. ಕಾಸರಗೋಡು ಮತ್ತು ಪರಿಸರದ ಅನೇಕ ವಿದ್ವಾಂಸರ ಅಧ್ಯಯನಕ್ಕೆ ಅಮೂಲ್ಯ ಗ್ರಂಥಗಳ ಆಕರವಾಗಿ ಈ ಸಂಸ್ಥೆಯ ಪುಸ್ತಕ ಭಂಡಾರವು ಅಪ್ರತಿಮ ಸೇವೆ ಸಲ್ಲಿಸಿದೆ. ಆ ಮೂಲಕ ಅನೇಕರು ಆತ್ಮದೀವಿಗೆಯನ್ನು ಪ್ರಕಾಶಿಸಿಕೊಂಡಿದ್ದಾರೆ”ಎಂದು ಕಾಸರಗೋಡು ತ್ರಿವೇಣಿ ಅಕಾಡೆಮಿಯ ಪ್ರಾಂಶುಪಾಲ ಡಾ ಕೆ.ಕಮಲಾಕ್ಷ ಅಭಿಪ್ರಾಯಪಟ್ಟರು. ಅವರು ನೀರ್ಚಾಲಿನಲ್ಲಿ ೩೦.೦೧.೨೦೦೯ ಶುಕ್ರವಾರದಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕರಾದ ಖಂಡಿಗೆ ಶಾಮ ಭಟ್, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಶಾಲಾ ನಿವೃತ್ತ ಅಧ್ಯಾಪಕ ದಿ.ಪಡಿಯಡ್ಪು ಮಹಾಲಿಂಗ ಭಟ್ ಅವರ ತೈಲ ಭಾವಚಿತ್ರವನ್ನು ಖಂಡಿಗೆ ಶಾಮ ಭಟ್ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಪೂರ್ವ ವಿದ್ಯಾರ್ಥಿಗಳಾಗಿದ್ದು ಕಣ್ಣೂರು ವಿಶ್ವವಿದ್ಯಾನಿಲ ನಡೆಸಿದ ಕನ್ನಡ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ರೇಂಕ್ ಗಳಿಸಿದ ಸೌಮ್ಯಾ. ಕೆ ಮತ್ತು ತೃತೀಯ ರೇಂಕ್ ಗಳಿಸಿದ ಸೌಮ್ಯಾ. ಪಿ. ಇವರನ್ನು ಸನ್ಮಾನಿಸಲಾಯಿತು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಶಾಲಾ ಹಿರಿಯ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕನ್ನಡ ಅಧ್ಯಾಪಿಕೆ ಎ.ಶೈಲಜಾ ಕಾರ್ಯಕ್ರಮವನ್ನು ನಿರೂಪಿಸಿದರು.

ಶೇಖರಕಾನ ಜಲಪಾತ

ನಮ್ಮ ಶಾಲೆಯ ವಿದ್ಯಾರ್ಥಿಗಳು ಎಂದೂ ತಪ್ಪಿಸಿಕೊಳ್ಳಲು ಬಯಸದ ಅಂದದ ತಾಣ ಈ ಶೇಖರಕಾನ ಜಲಪಾತ. ನಮ್ಮ ಶಾಲೆ ಹಿಂದೆ ಸಂಸ್ಕೃತ ಕಾಲೇಜು ಆಗಿದ್ದಾಗ ವಿದ್ಯಾರ್ಥಿ ನಿಲಯದಲ್ಲಿ ಉಳಕೊಳ್ಳುತ್ತಿದ್ದವರೆಲ್ಲ ಈ ನೀರಿನಲ್ಲಿ ಈಜಾಡಿದವರೇ ಎನ್ನುವುದು ಇನ್ನೊಂದು ವಿಚಾರ. ಈಗ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕುವ ಈ ಜಲಪಾತ ನೀರ್ಚಾಲಿನ ಜನರ ಆಸಕ್ತಿಯ ತಾಣ ಎನ್ನಲಡ್ಡಿಯಿಲ್ಲ.

26 January 2009

ಕಥೆ ೦೧ - ಗೌತಮನ ಆಂಟಿ

“ಗೌತಮ್ ಬೇಗ ಏಳಪ್ಪಾ, ಆಗಲೇ ಆರು ಗಂಟೆ ಆಯ್ತು. ಇನ್ನೂ ಮಲಗಿದ್ರೆ ನೋಡು ಬಸ್ಸು ಹೊರಟು ಹೋಗುತ್ತೆ” ಶೀಲಾ ಆಂಟಿ ಗೌತಮನನ್ನು ಎಚ್ಚರಿಸುತ್ತ ಹೇಳಿದರು. ಆದರೆ ಗೌತಮನಿಗೆ ಬೇಗ ಏಳಲು ಮನಸ್ಸಿರಲಿಲ್ಲ. ಅಲ್ಲೇ ಕಣ್ಣು ಮುಚ್ಚಿಕೊಂಡು ಪುನಃ ಮಲಗಿದ.

“ಬೇಗ ಹೋಗಿ ಸ್ನಾನ ಮಾಡಿ ಬಾ, ಅಷ್ಟರಲ್ಲಿ ನಿನಗೆ ತಿಂಡಿ ಮಾಡಿಡ್ತೇನೆ.” ಎಂದರು ಆಂಟಿ. ಸರಿ ಎಂದ ಗೌತಮ್.

ಗೌತಮ್ ಹಳ್ಳಿಯಲ್ಲಿ ಬೆಳೆದ ಹುಡುಗ. ಓದಿನಲ್ಲೂ ಬುದ್ಧಿವಂತ. ಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಹೆಚ್ಚಿನ ಅನುಕೂಲ ಇಲ್ಲದ್ದರಿಂದ ಮಾವನ ಮನೆಯಲ್ಲಿ ಬಿಟ್ಟು ಒಳ್ಳೆಯ ಶಾಲೆಗೆ ಸೇರಿಸಿದ್ದರು. ಆದರೆ ಗೌತಮನಿಗೆ ಅದೊಂದು ದೊಡ್ಡ ಶಿಕ್ಷೆಯಾಗಿತ್ತು. ಎಲ್ಲಾ ಹೋಂವರ್ಕ್ ಮಾಡಿ ಮುಗಿಸುವುದಲ್ಲದೆ, ಆಂಟಿಯ ಎಲ್ಲಾ ಆಜ್ಞೆಗಳನ್ನು ಪಾಲಿಸಬೇಕಿತ್ತು. ದಿನಾ ಬೇಗನೆ ಏಳಬೇಕು. ಇಷ್ಟೇ ಸಮಯ ಆಡಬೇಕು. ಹೀಗೆ ಒಂದು ವೇಳಾಪಟ್ಟಿ ಸಿದ್ಧಗೊಳಿಸಿದ್ದರು. ಗೌತಮ್‌ಗೆ ಯಾವಾಗಲೂ ಆಂಟಿಯನ್ನು ಕಂಡರೆ ಆಗುವುದೇ ಇಲ್ಲ, ಆದರೆ ಅಂಕಲ್ ಒಳ್ಳೆಯವರು.

ವಾರ್ಷಿಕ ಪರೀಕ್ಷೆ ಆರಂಭವಾಗಲು ಇನ್ನೂ ಒಂದು ವಾರ ಬಾಕಿ ಇತ್ತು. ಗೌತಮ್ ಪರೀಕ್ಷೆಗೆ ಭಾರೀ ಸಿದ್ಧತೆ ನಡೆಸಿದ್ದ. ಹೀಗಿರಲು ಒಂದು ದಿನ ಆತ ಶಾಲೆಯಿಂದ ಬರುತ್ತಿದ್ದಾಗ ಆತನಿಗೆ ಜ್ವರ ಬರುತ್ತಿತ್ತು. ಆಗ ಆಂಟಿಯು ಆತನನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು. ನಾಲ್ಕು ದಿನ ಶಾಲೆಗೆ ರಜೆ ಮಾಡಬೇಕಾಗಿ ಬಂತು. ಆದರೂ ಆತನಿಗೆ ಜ್ವರ ಕಡಿಮೆಯಾಗಲಿಲ್ಲ. ಕೊನೆಗೆ ಆಂಟಿ ಪಕ್ಕದಲ್ಲಿ ಕುಳಿತು ಪಾಠಗಳನ್ನು ಓದಿ ಹೇಳಿದರು. ಗೌತಮ್ ಆ ಪಾಠಗಳನ್ನು ಸರಿಯಾಗಿ ಕೇಳಿಸಿಕೊಂಡನು.ವಾರ್ಷಿಕ ಪರೀಕ್ಷೆಗಳು ಆರಂಭವಾದಾಗ ಜ್ವರ ಕಡಿಮೆಯಾಗಿತ್ತು.

ಫಲಿತಾಂಶ ಪ್ರಕಟಗೊಂಡಾಗ ಆತ ತರಗತಿಯಲ್ಲಿ ಮೊದಲ ಸ್ಥಾನ ಪಡೆದಿದ್ದ. ಶೀಲಾ ಆಂಟಿ ಕಷ್ಟಪಡದಿದ್ರೆ ಪರೀಕ್ಷೆಯಲ್ಲಿ ಯಶ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಸತ್ಯ ಆತನಿಗೆ ಅರಿವಾಯಿತು.

- ಶುಭಲಕ್ಷ್ಮಿ. ಪಿ

23 January 2009

ಪ್ರತಿಭಾನ್ವಿತರು ೦೩ - ಜಲಜಾಕ್ಷಿ. ಕೆ

ಜನವರಿ ೯ರಿಂದ ಆಂಧ್ರಪ್ರದೇಶದ ವಿಜಯವಾಡದಲ್ಲಿ ಜರಗಿದ ರಾಷ್ಟ್ರಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಕೇರಳ ತಂಡದ ಸದಸ್ಯೆಯಾಗಿ ಆಯ್ಕೆಯಾಗಿರುವ ಜಲಜಾಕ್ಷಿ.ಕೆ. ಈಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಖಂಡಿಗೆ ಶಿವರಾಮ ಮಣಿಯಾಣಿ ಮತ್ತು ಪುಷ್ಪಾವತಿ ಇವರ ಪುತ್ರಿ.

21 January 2009

ಮಹಾಜನ ‘ಬ್ಲಾಗ್’ ಅನಾವರಣ


“ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯನ್ನು ಕಂಡು ಅಚ್ಚರಿಯಾಗುತ್ತಿದೆ. ಸದುದ್ದೇಶದಿಂದ ನಾವೆಲ್ಲರೂ ಈ ವ್ಯವಸ್ಥೆಯನ್ನು ಅಭ್ಯಾಸ ಮಾಡಿಕೊಳ್ಳಬೇಕಾಗಿದೆ. ಈ ಬ್ಲಾಗ್ ಶಾಲೆ, ಸಹೃದಯಿಗಳು ಮತ್ತು ಪೂರ್ವ ವಿದ್ಯಾರ್ಥಿಗಳ ನಡುವೆ ಸ್ನೇಹದ ಕೊಂಡಿಯಾಗಿರಲಿ" ಎಂದು ಖಂಡಿಗೆ ಶಾಮ ಭಟ್ಟರು ಹೇಳಿದರು. ಅವರು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಬೆಸೆಯುವ ಉದ್ದೇಶದಿಂದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು ಅಂತರ್ಜಾಲದಲ್ಲಿ ಆರಂಭಿಸಿದ ‘ಮಹಾಜನ’ ಬ್ಲಾಗ್ ಅನಾವರಣ ಕಾರ್ಯಕ್ರಮವನ್ನು ದಿನಾಂಕ ೨೦.೦೧.೨೦೦೯, ಮಂಗಳವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ವಿದ್ಯಾರ್ಥಿಗಳ ಕಥೆ, ಕವನ, ಚಿತ್ರ, ಲೇಖನ, ಪ್ರತಿಭೆ, ವರದಿಗಳನ್ನು ಈ ಬ್ಲಾಗ್ ಅನಾವರಣಗೊಳಿಸುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಆಸಕ್ತರಿಗೆ ಅಂತರ್ಜಾಲದ ಮೂಲಕ ಕನ್ನಡದಲ್ಲಿರುವ ಈ ಬರಹಗಳನ್ನು ಸುಲಲಿತವಾಗಿ ಓದಬಹುದು. ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್, ಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಉಪಸ್ಥಿತರಿದ್ದರು.

20 January 2009

ನಮ್ಮ ಪ್ರಿನ್ಸಿಪಾಲರು - ಖಂಡಿಗೆ ಶಾಮ ಭಟ್ಟರು


ನಮ್ಮ ಶಾಲಾ ವ್ಯವಸ್ಥಾಪಕರೂ, ಮಾಜಿ ಪ್ರಿನ್ಸಿಪಾಲರೂ ಆದ ಖಂಡಿಗೆ ಶಾಮ ಭಟ್ಟರಿಗೆ ಈಗ ತೊಂಭತ್ತರ ಹರೆಯ. ಈ ಇಳಿವಯಸ್ಸಿನಲ್ಲೂ ಅವರದು ಏರುವ ಉತ್ಸಾಹ. ಶಾಲಾ ಕಾರ್ಯಕ್ರಮಗಳಿಗೆಲ್ಲ ನಿಯಮಿತವಾಗಿ ಭೇಟಿ ನೀಡುತ್ತಾರೆ. ಅವರ ಮಾರ್ಗದರ್ಶನ ನಮಗೆ ದಾರಿದೀಪ. ಹಿಂದೆ ನಮ್ಮ ಶಾಲೆ ಸಂಸ್ಕೃತ ಕಾಲೇಜು ಆಗಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರಿಂದ ಊರಿಗೆಲ್ಲ ಅವರು ‘ನಮ್ಮ ಪ್ರಿನ್ಸಿಪಾಲರು’ ಎಂದೇ ಖ್ಯಾತರು. ನೀರ್ಚಾಲಿನ ಬೆಳವಣಿಗೆಯಲ್ಲಿ ಖಂಡಿಗೆ ಮನೆತನದ ಕೊಡುಗೆ ಅಪಾರ. ಒಂಥರಾ ಖಂಡಿಗೆಯನ್ನು ನೀರ್ಚಾಲಿನ ಬೆನ್ನೆಲುಬು ಎನ್ನಬಹುದು. ಇಲ್ಲಿನ ಬ್ಯಾಂಕಿಂಗ್, ವ್ಯಾಪಾರ, ಸಹಕಾರಿ ಸಂಸ್ಥೆ ಮತ್ತು ವಿದ್ಯಾಸಂಸ್ಥೆಗಳ ಸ್ಥಾಪನೆಯಲ್ಲಿ ಅವರ ಕೊಡುಗೆ ಅಗಣಿತವಾಗಿದೆ.

19 January 2009

ಪ್ರತಿಭಾನ್ವಿತರು ೦೨ - ಧನ್ಯಶ್ರೀ. ಎಚ್

ತಿರುವನಂತಪುರದಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಶಾಲಾಕಲೋತ್ಸವದಲ್ಲಿ ಕನ್ನಡ ಕಂಠಪಾಠದಲ್ಲಿ ‘ಎ’ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಮತ್ತು ಸಂಸ್ಕೃತ ಗಾನಾಲಾಪನಂ ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ಪಡೆದ ಧನ್ಯಶ್ರೀ.ಎಚ್. ಈಕೆ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಇದೇ ಶಾಲೆಯ ಅಧ್ಯಾಪಕ ಎಚ್. ಶಿವಕುಮಾರ ಮತ್ತು ನಾಗರತ್ನ ಇವರ ಪುತ್ರಿ.

ಪ್ರತಿಭಾನ್ವಿತರು ೦೧ - ರಾಮರಂಜನ್. ಕೆ.

ತಿರುವನಂತಪುರದಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಶಾಲಾಕಲೋತ್ಸವದಲ್ಲಿ ಸಂಸ್ಕೃತ ಪ್ರಭಾಷಣಂ ಮತ್ತು ಸಂಸ್ಕೃತ ಚಂಪೂಪ್ರಭಾಷಣಂ ಸ್ಪರ್ಧೆಗಳಲ್ಲಿ ರಾಮರಂಜನ್. ಕೆ. ಸತತ ಮೂರನೇ ವರ್ಷ ‘ಎ’ ಗ್ರೇಡ್ ಪಡೆದಿದ್ದಾನೆ. ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಇದೇ ಶಾಲೆಯ ಅಧ್ಯಾಪಕ ಕನ್ನೆಪ್ಪಾಡಿ ನಾರಾಯಣ ಭಟ್ ಮತ್ತು ರಾಜಲಕ್ಷ್ಮಿ ಇವರ ಪುತ್ರ.

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ, ನೀರ್ಚಾಲು


ಗಡಿನಾಡು ಕಾಸರಗೋಡಿನ ಹೆಮ್ಮೆಯ ವಿದ್ಯಾಸಂಸ್ಥೆಯಾದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ, ನೀರ್ಚಾಲು ೧೯೧೧ರಲ್ಲಿ ಶ್ರೀ ಖಂಡಿಗೆ ಶಂಭಟ್ಟ ಮತ್ತು ಈಶ್ವರ ಭಟ್ಟರ ನೇತೃತ್ವದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಸನ್ನಿಧಿಯಲ್ಲಿ ಸಂಸ್ಕೃತ ಪ್ರಾಥಮಿಕ ಶಾಲೆಯಾಗಿ ತೆರೆದುಕೊಂದಿತು. ೧೯೧೫ರಲ್ಲಿ ನೀರ್ಚಾಲಿನ ಸುಂದರ ಪ್ರದೇಶಕ್ಕೆ ಶಾಲೆಯನ್ನು ವರ್ಗಾಯಿಸಲಾಯಿತು. ೧೯೨೦ನೇ ಇಸವಿಯಲ್ಲಿ ಮದರಾಸು ವಿಶ್ವವಿದ್ಯಾನಿಲಯವು ಮಹಾಜನ ಪಾಠಶಾಲೆಯನ್ನು ಪ್ರಾಚ್ಯಕಲಾಶಾಲೆಯನ್ನಾಗಿ ಅಂಗೀಕರಿಸಿತು. ಹಾಗೂ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ತರಗತಿ ನಡೆಸಲು ಅನುಮತಿ ನೀಡಿತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಂಸ್ಕೃತ ಪಾಠಶಾಲೆಯ ಬೆಳವಣಿಗೆಯು ಕುಂಠಿತವಾಯಿತು. ವಿದ್ಯಾಭಿಮಾನಿಗಳ ಅಪೇಕ್ಷೆಯ ಮೇರೆಗೆ ವಿಜ್ಞಾನ, ಗಣಿತ, ಆಂಗ್ಲ ಭಾಷೆಗಳಿಗೆ ಪ್ರಾಧಾನ್ಯವನ್ನು ನೀಡುತ್ತಾ ೧೯೫೨ರಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ತೆರೆಯಲಾಯಿತು. ಕೇರಳ ಸರಕಾರದ ಆದೇಶದಂತೆ ಸಂಸ್ಕೃತ ಪ್ರಾಥಮಿಕ ಶಾಲೆಯು ೧೯೫೭ರಲ್ಲಿ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾವಣೆಗೊಂಡಿತು. ಹೀಗೆ ನೀರ್ಚಾಲಿನ ವಿಶಾಲ ಪರಿಸರದಲ್ಲಿ ಒಂದರಿಂದ ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವು ಜನಸಾಮಾನ್ಯರಿಗೂ ದೊರೆಯುವಂತಾದವು. ಪ್ರಸ್ತುತ ಶ್ರೀ ಖಂಡಿಗೆ ಶಾಮ ಭಟ್ಟರು ತಾ. ೨೭.೦೮.೧೯೭೩ರಿಂದ ಸಂಸ್ಥೆಯ ವ್ಯವಸ್ಥಾಪಕರಾಗಿ ಸಕ್ರಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಈ ಶಾಲೆಯ ರಜತ, ಸುವರ್ಣ ಮತ್ತು ವಜ್ರ ಮಹೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಪ್ರಸ್ತುತ ೭೦೦ ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಅಧ್ಯಯನಕ್ಕೆ ಅಗತ್ಯವಾದ ತರಗತಿ ಕೋಣೆಗಳು, ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಎಲ್.ಸಿ.ಡಿ. ಪ್ರೊಜೆಕ್ಟರ್ ಮತ್ತು ೧೯ ಕಂಪ್ಯೂಟರ್‌ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ. ಸಂಸ್ಥೆಯಲ್ಲಿ ಸಂಸ್ಕೃತ, ಕನ್ನಡ, ಇಂಗ್ಲೀಷ್ ಇತ್ಯಾದಿ ಭಾಷಾ ಸಾಹಿತ್ಯಗಳನ್ನೊಳಗೊಂಡ ಸುಮಾರು ೧೦,೦೦೦ಕ್ಕೂ ಮಿಕ್ಕು ಪುಸ್ತಕಗಳುಳ್ಳ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳಿವೆ. ಹಿರಿಯ ಮಹಾನುಭಾವರಾದ ಶ್ರೀ ದರ್ಭೆ ನಾರಾಯಣ ಶಾಸ್ತ್ರಿ, ಶ್ರೀ ಚಾಂಗುಳಿ ಸುಬ್ರಾಯ ಶಾಸ್ತ್ರಿ, ಶ್ರೀ ಪೆರಡಾಲ ಕೃಷ್ಣಯ್ಯ, ಶ್ರೀ ಕಾಕುಂಜೆ ಕೃಷ್ಣ ಭಟ್ಟ ಮೊದಲಾದವರು ಇಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಭೀಷ್ಮ ಡಾ ಶೇಣಿ ಗೋಪಾಲಕೃಷ್ಣ ಭಟ್, ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರಾದ ಡಾ ಕಯ್ಯಾರ ಕಿಞ್ಞಣ್ಣ ರೈ, ತ್ರಿಭಾಷಾ ಕವಿ ಡಾ ವೆಂಕಟರಾಜ ಪುಣಿಂಚಿತ್ತಾಯ, ಸಾಹಿತಿ ಶ್ರೀ ರಾ. ಮೊ. ವಿಶ್ವಾಮಿತ್ರ, ಕವಿ ಶ್ರೀ ಕೆ. ವಿ. ತಿರುಮಲೇಶ್ ಮುಂತಾದವರು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದಿದ್ದಾರೆ.