Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವದ ಚಾಂಪಿಯನ್ ನಾವು..

30 January 2009

ನಮ್ಮ ಶಾಲಾ ವರ್ಧಂತ್ಯುತ್ಸವ

“ನಮಗೆ ಯಾವತ್ತೂ ಸ್ವಸ್ಥಾನ ಪರಿಜ್ಞಾನವಿರಬೇಕು. ನಮ್ಮ ಇತಿಮಿತಿಗಳ ಕುರಿತಾದ ಸ್ಪಷ್ಟ ಚಿಂತನೆಗಳಿರಬೇಕು. ಮಹಾಜನ ವಿದ್ಯಾಸಂಸ್ಥೆಯು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ವಿಕಾಸಗೊಳಿಸುತ್ತಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಕಲ ನೆರವನ್ನು ನೀಡುತ್ತಿರುವ ಅತ್ಯಪೂರ್ವವಾದ ಸಂಸ್ಥೆಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಅನೇಕ ವಿದ್ಯಾಸಂಸ್ಥೆಗಳಿಗೆ ವಿದ್ವತ್ಪೂರ್ಣರಾದ ಅಧ್ಯಾಪಕರನ್ನು ಕೊಡುಗೆಯಾಗಿ ನೀಡಿದ ಮಹಾಜನ ವಿದ್ಯಾಸಂಸ್ಥೆ ವಿದ್ಯಾಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿದೆ. ಕಾಸರಗೋಡು ಮತ್ತು ಪರಿಸರದ ಅನೇಕ ವಿದ್ವಾಂಸರ ಅಧ್ಯಯನಕ್ಕೆ ಅಮೂಲ್ಯ ಗ್ರಂಥಗಳ ಆಕರವಾಗಿ ಈ ಸಂಸ್ಥೆಯ ಪುಸ್ತಕ ಭಂಡಾರವು ಅಪ್ರತಿಮ ಸೇವೆ ಸಲ್ಲಿಸಿದೆ. ಆ ಮೂಲಕ ಅನೇಕರು ಆತ್ಮದೀವಿಗೆಯನ್ನು ಪ್ರಕಾಶಿಸಿಕೊಂಡಿದ್ದಾರೆ”ಎಂದು ಕಾಸರಗೋಡು ತ್ರಿವೇಣಿ ಅಕಾಡೆಮಿಯ ಪ್ರಾಂಶುಪಾಲ ಡಾ ಕೆ.ಕಮಲಾಕ್ಷ ಅಭಿಪ್ರಾಯಪಟ್ಟರು. ಅವರು ನೀರ್ಚಾಲಿನಲ್ಲಿ ೩೦.೦೧.೨೦೦೯ ಶುಕ್ರವಾರದಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕರಾದ ಖಂಡಿಗೆ ಶಾಮ ಭಟ್, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಶಾಲಾ ನಿವೃತ್ತ ಅಧ್ಯಾಪಕ ದಿ.ಪಡಿಯಡ್ಪು ಮಹಾಲಿಂಗ ಭಟ್ ಅವರ ತೈಲ ಭಾವಚಿತ್ರವನ್ನು ಖಂಡಿಗೆ ಶಾಮ ಭಟ್ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಪೂರ್ವ ವಿದ್ಯಾರ್ಥಿಗಳಾಗಿದ್ದು ಕಣ್ಣೂರು ವಿಶ್ವವಿದ್ಯಾನಿಲ ನಡೆಸಿದ ಕನ್ನಡ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ರೇಂಕ್ ಗಳಿಸಿದ ಸೌಮ್ಯಾ. ಕೆ ಮತ್ತು ತೃತೀಯ ರೇಂಕ್ ಗಳಿಸಿದ ಸೌಮ್ಯಾ. ಪಿ. ಇವರನ್ನು ಸನ್ಮಾನಿಸಲಾಯಿತು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಶಾಲಾ ಹಿರಿಯ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕನ್ನಡ ಅಧ್ಯಾಪಿಕೆ ಎ.ಶೈಲಜಾ ಕಾರ್ಯಕ್ರಮವನ್ನು ನಿರೂಪಿಸಿದರು.

No comments:

Post a Comment