Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 June 2009

ನೀರ್ಚಾಲಿನಲ್ಲಿ ವಿದ್ಯಾರಂಗ ಆರಂಭ

"ನಮ್ಮಲ್ಲಿರುವ ಪ್ರತಿಭೆಗಳನ್ನು ಸುಪ್ತವಾಗಿರಿಸಬಾರದು, ಅವುಗಳನ್ನು ಅನಾವರಣಗೊಳಿಸಬೇಕು. ಪ್ರತಿಭೆಯ ಪ್ರಕಟಣೆಗೆ ಭಾಷೆ ತೊಡಕಾಗಬಾರದು. ವಿದ್ಯಾರಂಗ ವೇದಿಕೆಯ ಮೂಲಕ ನಿಮ್ಮ ಪ್ರತಿಭೆ ಇನ್ನಷ್ಟು ವಿಕಾಸಗೊಳ್ಳಲಿ "ಎಂದು ಹಿರಿಯ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೨೬.೦೬.೨೦೦೯ ಶುಕ್ರವಾರದಂದು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕಿ ಭುವನೇಶ್ವರಿ ಉಪಸ್ಥಿತರಿದ್ದರು. ಶೃತಿ.ವೈ ಕಳೆದ ಅಧ್ಯಯನ ವರ್ಷದ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ವಿನೀತ್ ಶಂಕರ್.ಎಚ್ ಸ್ವಾಗತಿಸಿ ಸ್ಪೂರ್ತಿ.ಕೆ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರಗಿದವು.

26 June 2009

ಶತಮಾನದ ಹೊಸ್ತಿಲಲ್ಲಿ ಸನ್ನಡತೆಯ ಸಭೆ: ಖಂಡಿಗೆ ಶಾಮ ಭಟ್

“ಕಾಸರಗೋಡಿನ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಗಳನ್ನು ನಿರ್ಮಿಸಿದ ಮಹಾಜನ ವಿದ್ಯಾಸಂಸ್ಥೆ ಶತಮಾನದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿಯ ಲಕ್ಷ್ಯವಿರಿಸಿ ನಡೆದ ಸಭೆ ಇಲ್ಲಿನ ಜನ ಸ್ಪಂದನಕ್ಕೆ ಮಾದರಿಯಾಗಿದೆ. ಶತಮಾನದ ಆಚರಣೆಗೆ ಇದು ನಮಗೆ ಸ್ಪೂರ್ತಿ ನೀಡುತ್ತದೆ. ಶಾಲೆ ಮತ್ತು ವಿದ್ಯಾರ್ಥಿಗಳ ಪ್ರಗತಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಪಾತ್ರ ಮಹತ್ತರವಾದದ್ದು" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ವ್ಯವಸ್ಥಾಪಕ ಖಂಡಿಗೆ ಶ್ಯಾಮ ಭಟ್ ಅಭಿಪ್ರಾಯಪಟ್ಟರು. ಅವರು ದಿನಾಂಕ ೨೫.೦೬.೨೦೦೯ ಗುರುವಾರದಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮಾರ್ಗದರ್ಶಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಕೆ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಎಸ್.ವಿ.ಭಟ್ ಧನ್ಯವಾದ ಸಮರ್ಪಿಸಿದರು.

24 June 2009

ಚಿತ್ರ - ಆಶಿತ್ ಕೃಷ್ಣ ಉಪಾಧ್ಯಾಯ

ಬೇಸಗೆ ರಜಾದ ದೀರ್ಘ ಬಿಡುವಿನ ನಂತರ ನಮ್ಮ ವಿದ್ಯಾರ್ಥಿಗಳು ಈಗ ಚಿತ್ರಗಳನ್ನು ಹೊತ್ತು ತರುತ್ತಿದ್ದಾರೆ. ಮಳೆಗಾಲದ ಪುಳಕಕ್ಕೆ ಈ ಚಿತ್ರವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸ್ವೀಕರಿಸಿ.

22 June 2009

ಕವನ-ಸೊಬಗಿನ ಪ್ರಕೃತಿ

-ಶ್ರೀವಾಣಿ.ಕೆ

ಮರಗಿಡಗಳ ತಾಯ್ನೆಲವಿದು

ಬನವನಗಳ ನಾಡು

ದಿನದಿನವೂ

ತಂಪೆರೆಯುವ ವನದೇವಿಯ ಬೀಡು

ಈ ಮಣ್ಣಿನ ಈ ನಾಡಿನ

ಹಿರಿಮೆಯದೆಂತೋ

ಈ ನಾಡಿನ ಸ್ವಾತಂತ್ರ್ಯಕೆ

ಹೋರಾಡಿದವರೆನಿತೋ

ಶ್ರೀಗಾಂಧಿಯ ಆದರ್ಶವ

ಪಾಲಿಪ ನಾಡು

ಮತಜಾತಿಯ ಮರೆತಿಹ ಇದು

ದೇವರ ಬೀಡು

ಸೌಂದರ್ಯವ ತುಂಬಿರುವ

ನದಿಹೊಳೆಗಳ ನೋಡು

ಗಿರಿಶಿಖರದ ಉನ್ನತಿಯಲಿ

ಮೆರೆಯುತಿಹುದು ಕಾಡು

ಮೃಗಪಕ್ಷಿಯ ನಲಿವಿರುವುದು

ಇದು ಪ್ರಕೃತಿಯ ಬೆಡಗು

ಮನಮೋಹಕ ಸೌಂದರ್ಯದ

ಭೂ ತಾಯಿಯ ಸೊಬಗು

ಜನಮನಗಳ ಸಮ್ಮಿಲನವು

ತರುತಿಹವು ಹರುಷವು

ಮತಭಾಷೆಯ ಮರೆತಿಹರು

ಹರುಷದಿ ಒಗ್ಗೂಡುವರು

ಪರಿಸರವೇ ನಮ್ಮುಸಿರು

ಅದರಿಂದಲೇ ನಾವು

ಸುಖವಿರುವುದು ಅದನುಳಿಸಿದರೆ

ಭಾಗಿಯಾಗೋಣ ಅದರಲಿ ನಾವು ನೀವು.

19 June 2009

ಮಳೆಗಾಲ ಆರಂಭವಾಗಿದೆ, ಜೊತೆಗೆ ಫಿವರ್ ಕ್ಲಿನಿಕ್ ಕೂಡಾ

ಬದಿಯದ್ಕದಲ್ಲಿರುವ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಶಾಲೆಯಲ್ಲಿ ನಿನ್ನೆ ಫಿವರ್ ಕ್ಲಿನಿಕ್ ಜರಗಿತು. ವಿದ್ಯಾರ್ಥಿಗಳು ಇ ಹೊಸ ಪ್ರಯೋಗದ ಪ್ರಯೋಜನವನ್ನು ಪಡೆದುಕೊಂಡರು. ಹೊಸ ಹೊಸ ಜ್ವರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಸಹಕರಿಸಿದ ಆರೋಗ್ಯ ಇಲಾಖೆಯ ಡಾ ಅನಿಲ್, ಗೋಪಾಲಕೃಷ್ಣ, ಜೋಸೆಫ್, ಪಂಕಜಾಕ್ಷ ಮತ್ತು ಪೂಮಣಿ ಇವರಿಗೆ ನಮ್ಮ ಅನಂತ ಧನ್ಯವಾದಗಳು.

12 June 2009

ರಜಾಕಾಲದ ಅನುಭವ -ಅಜೇಯಕೃಷ್ಣ. ಕೆ

ನನಗೆ ಮಾರ್ಚ್ ಇಪ್ಪತ್ತೇಳರಂದು ೯ನೇ ತರಗತಿಯ ಎಲ್ಲಾ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಯಿತು. ಎಪ್ರಿಲ್ ೨ ರಂದು ನಾನು ಸ್ಕೌಟ್ ರಾಜ್ಯಪುರಸ್ಕಾರ ಪ್ರಿಟೆಸ್ಟ್ ಶಿಬಿರದಲ್ಲಿ ಸಂತಸದಿಂದ ಭಾಗವಹಿಸಿದೆ. ನಂತರ ನಾನು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ಜರಗಿದ ವಸಂತ ವೇದಪಾಠ ಶಿಬಿರದಲ್ಲಿ ಭಾಗವಹಿಸಿದೆ. ಅಲ್ಲಿ ಮೇ ೨೧ ರಂದು ಶಿವ ಪಂಚಾಕ್ಷರಿ ಯಜ್ಞ ನಡೆಯಿತು. ಮೇ ೨೬ ರಂದು ನನಗೆ ರಾಜ್ಯ ಪುರಸ್ಕಾರ ಪರಿಕ್ಷೆಯಲ್ಲಿ ಭಾಗವಹಿಸಲಿತ್ತು. ವೇದಪಾಠ ಮುಕ್ತಾಯವಾದ ತಕ್ಷಣ ನಾನು ಆ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದೆ. ಮೇ ೨೯ ರಂದು ಮುಕ್ತಾಯವಾದ ಆ ಪರೀಕ್ಷೆ ಬಹಳ ಸುಲಭವಾಗಿತ್ತು. ಪುನಃ ಶಾಲೆ ಆರಂಭವಾಗುವ ಸಮಯವೂ ಸನ್ನಿಹಿತವಾಯಿತು. ನಾನು ಶಾಲೆಯ ಬಾಗಿಲು ತೆರೆಯುವುದನ್ನೇ ಕಾಯಲು ಆರಂಭಿಸಿದೆ.

10 June 2009

ಡಾ| ಕಯ್ಯಾರ ಕಿಞ್ಞಣ್ಣ ರೈ - ತೊಂಭತ್ತೈದು : ಶುಭಾಶಯಗಳು

ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿ, ಗಡಿ ಹೋರಾಟದ ಅಧ್ವರ್ಯು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯ ಕವಿ, ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಇವರಿಗೆ ಮೊನ್ನೆ ತೊಂಭತ್ತೈದು ವರ್ಷ ಪ್ರಾಯ ಪೂರ್ತಿಯಾಗಿದೆ. ನಾಡೋಜ ಪ್ರಶಸ್ತಿ ವಿಜೇತ, ಬಹುಮುಖ ಪ್ರತಿಭಾನ್ವಿತ, ಅತ್ಯುತ್ತಮ ಶಿಕ್ಷಕ ಪ್ರಸಸ್ತಿ ವಿಜೇತ ಅಧ್ಯಾಪಕನಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಿದ್ದೇವೆ.

07 June 2009

ವಿಶ್ವ ಪರಿಸರ ದಿನ - ಸಸಿ ವಿತರಣೆ

ಮೊನ್ನೆ ೫ ನೇ ತಾರೀಕಿನಂದು ವಿಶ್ವ ಪರಿಸರ ದಿನ, ನಮ್ಮಲ್ಲೂ ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ‘ನನ್ನ ಮರ’ ಯೋಜನೆಯ ಅಂಗವಾಗಿ ಸರಕಾರ ವಿತರಿಸಿದ ಮಹೋಗನಿ, ಮಂದಾರ ಇತ್ಯಾದಿ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹಂಚುವುದರ ಮೂಲಕ ವಿಶ್ವ ಪರಿಸರ ದಿನ ಆಚರಣೆಗೆ ಚಾಲನೆ ನೀಡಿದರು. ಅಂದ ಹಾಗೆ ಕಳೆದ ವರ್ಷ ವಿತರಿಸಿದ ಗಿಡಗಳು ಈಗ ಮತ್ತೆ ಚಿಗುರೊಡೆಯುತ್ತಿವೆ.

05 June 2009

ಶಾಲಾರಂಭ - ಒಂದು ನೋಟ


ಶಾಲೆ ಮೊನ್ನೆ ಸೋಮವಾರ ಒಂದನೇ ತಾರೀಕು ಆರಂಭವಾಗಿದೆ, ಜೊತೆಯಲ್ಲಿ ಮಳೆಗಾಲವೂ. ಮಳೆಗೆ ಒದ್ದೆಯಾದ ದೂರವಾಣಿ ತಂತಿ ನಮ್ಮ ಬ್ರಾಡ್‌ಬ್ಯಾಂಡ್ ಲೋಕವನ್ನೆಲ್ಲ ಲಗಾಡಿ ತೆಗೆದು ಬಿಟ್ಟಿದೆ. ಅನಿವಾರ್ಯವಾಗಿ ನಮ್ಮ ಕೈಕಟ್ಟಿ ಹಾಕಿದೆ. ನಾಲ್ಕು ದಿನಗಳ ಸತತ ಪರಿಶ್ರಮದ ನಂತರ ಈ ಹಳ್ಳಿ ಮೂಲೆಯ ಶಾಲೆ ಅಂತರ್ಜಾಲಕ್ಕೆ ಮತ್ತೆ ತೆರೆದುಕೊಂಡಿದೆ. ಈಗ ಹೊಸ ಅವತಾರದೊಂದಿಗೆ ಕಂಪ್ಯೂಟರ್ ಲ್ಯಾಬ್ ಸಜ್ಜಾಗಿದೆ. ಎಲ್ಲಾ ೧೮ ಕಂಪ್ಯೂಟರ್‌ಗಳನ್ನೂ ಲ್ಯಾನ್ ಮೂಲಕ ಬಂಧಿಸಿಡುವ ಪ್ರಯತ್ನ ಮಾಡಿದ್ದೇವೆ. ಈ ಬಾರಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಟರ್‌ನೆಟ್ ಶಿಕ್ಷಣವೂ ಇದೆ. ಈ ಮಧ್ಯೆ ಶಾಲಾ ಪ್ರವೇಶೋತ್ಸವವನ್ನು ಉಚಿತ ಪುಸ್ತಕ ವಿತರಿಸುವುದರೊಂದಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ ಇವರು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದ್ದಾರೆ. ಫೋಟೋ ನಿಮ್ಮ ಮುಂದೆ ಇರಿಸಿದ್ದೇವೆ. ಈ ಶೈಕ್ಷಣಿಕ ವರ್ಷದ ಪ್ರತಿಭೆಗಳನ್ನು ಶೀಘ್ರ ಹೊತ್ತು ತರುತ್ತೇವೆ. ಹಿಂದೆ ನೀಡಿದಕ್ಕಿಂತಲೂ ಮಿಗಿಲಾದ ಪ್ರೋತ್ಸಾಹವನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ. ಆಗದೇ....