Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

30 March 2016

``ವಿಮರ್ಶೆ ಇಲ್ಲದೆ ಪ್ರಗತಿ ಇಲ್ಲ: ಕೆ.ವಿ.ತಿರುಮಲೇಶ್"
ವಿದ್ಯಾರ್ಥಿಗಳು ಶಾಲೆಯಲ್ಲಿ ನೀತಿ ಪಾಠಗಳನ್ನು ಕಲಿಯಬೇಕು. ನ್ಯಾಯ ಅನ್ಯಾಯಗಳನ್ನು ಶಾಲೆಯು ಮಗುವಿಗೆ ತಿಳಿಹೇಳುತ್ತದೆ. ಶಾಲೆಗಳಲ್ಲಿ ನೈತಿಕತೆಯನ್ನು ಕಲಿಯುವ ಮೂಲಕ ಮನುಷ್ಯ ನಾಗರಿಕನಾಗುತ್ತಾನೆ. ವಿಜ್ಞಾನ ಮತ್ತು ತತ್ವಜ್ಞಾನಗಳು ವಿರೋಧಾಭಾಸಗಳಲ್ಲ ಎನ್ನುತ್ತಾನೆ ಐನ್‌ಸ್ಟೀನ್. ಈ ಬಗ್ಗೆ ವಿವಿಧ ಕೃತಿಗಳನ್ನು ಅಧ್ಯಯನ ಮಾಡಿ ‘ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನ ಎಂಬ ಅನುವಾದಿತ ಕೃತಿಗೆ ರೂಪುನೀಡುತ್ತಿದ್ದೇನೆ. ಈ ಕೃತಿಯ ಬರವಣಿಗೆಯ ಹೊತ್ತಿನಲ್ಲಿ ತಾಯ್ನೆಲದ ಅನುಭವ ಶ್ರೀಮಂತಿಕೆ ನನ್ನ ಮೇಲೆ ಪ್ರಭಾವ ಬೀರಿದೆ. ಗುರುಗಳಾದ ಎಸ್.ವಿ.ಎಲ್.ಎನ್ ಶರ್ಮ, ಬೊಳುಂಬು ಸುಬ್ರಾಯ ಭಟ್ಟರು ನನ್ನ ಪ್ರೌಢ ಶಿಕ್ಷಣದ ಹಂತದಲ್ಲಿ  ನನ್ನ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರಮುಖರು. ಅಧ್ಯಾಪಕರು ಶಾಲೆಯ ಆತ್ಮ, ಮನ:ಸಾಕ್ಷಿ ಇದ್ದ ಹಾಗೆ ಇರಬೇಕಾದವರು. ಶಾಲೆಗಳಲ್ಲಿ ಹಿಂಸೆ ನೀಡುವ ಶಿಕ್ಷೆಗಳನ್ನು ನೀಡಬಾರದು. ಶಿಕ್ಷಣಕ್ಕೆ ಸಮೀಪದ ಶಿಕ್ಷೆ ಇರಬೇಕು. ಅಲ್ಲಿ ಸಂವಾದ ಜರಗಬೇಕು, ವಾಗ್ವಾದವಲ್ಲ. ವಿಮರ್ಶೆ ಇಲ್ಲದೆ ಪ್ರಗತಿ ಇಲ್ಲ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ ಶುಚಿತ್ವದ ಬಗ್ಗೆ ಕಾಳಜಿ ಹೆಚ್ಚಾಗಿದೆ. ನನಗೆ ದೊರೆತ ಈ ಪ್ರಶಸ್ತಿಯ ಮೊತ್ತವೂ ಸಾಮಾಜಿಕ ಕಾರ್ಯಕ್ಕೆ ಬಳಕೆಯಾಗಲಿ. ಎಂದು ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ಅಭಿಪ್ರಾಯಪಟ್ಟರು. ಅವರು ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವಾದ ರೂಪಾಯಿ ಒಂದು ಲಕ್ಷವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನಮ್ಮ ವಿದ್ಯಾಸಂಸ್ಥೆಗೆ ಸಮರ್ಪಿಸಿ ಮಾತನಾಡುತ್ತಿದ್ದರು.
 
ಇಂದು ನಮ್ಮ ಶಾಲೆಯಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಪಡಿಯಡ್ಪು ಶಂಕರ ಭಟ್ಟರು ಕೆ.ವಿ.ತಿರುಮಲೇಶರನ್ನು ಅಭಿನಂದಿಸಿದರು. ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಐತಪ್ಪ ಮುಳಿಯಾರು, ಗೋಪಾಲಕೃಷ್ಣ ಶಾಸ್ತ್ರಿ, ಡಾ|ಹರಿಕೃಷ್ಣ ಭರಣ್ಯ, ಡಾ|ಮಹೇಶ್ವರಿ.ಯು, ವಿ.ಬಿ.ಕುಳಮರ್ವ ಶುಭ ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ.ಸುಬ್ರಾಯ ಭಟ್ಟರನ್ನು ಕೆ.ವಿ.ತಿರುಮಲೇಶ್ ಕುಟುಂಬಿಕರು ಗೌರವಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಶೈಲಜ.ಬಿ ಪ್ರಾರ್ಥಿಸಿದರು.

28 March 2016

ಸಾಹಿತಿ ಕೆ.ವಿ.ತಿರುಮಲೇಶ್ ಇವರಿಂದ ಗೌರವ ಸಮರ್ಪಣೆ


ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗೆ ಸಮರ್ಪಿಸಲಿದ್ದಾರೆ. 30.03.2016 ಬುಧವಾರ ಅಪರಾಹ್ನ 4 ಗಂಟೆಗೆ ನಮ್ಮ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಪಡಿಯಡ್ಪು ಶಂಕರ ಭಟ್ಟರು ಕೆ.ವಿ.ತಿರುಮಲೇಶರನ್ನು ಅಭಿನಂದಿಸಲಿದ್ದಾರೆ. ಶಾಲಾ ಹಳೆ ವಿದ್ಯಾರ್ಥಿ, ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶುಭ ಹಾರೈಸಲಿದ್ದಾರೆ.