Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 June 2015

ವಿದಾಯ ಸಮಾರಂಭ


“ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳ ಕಡೆಗೆ ಸಕ್ರಿಯರಾಗಿರಬೇಕಾದ ಕಾಲ. ಸಮಾಜಕ್ಕೆ ನಿವೃತ್ತರಿಂದ ಇನ್ನಷ್ಟು ಕೊಡುಗೆಗಳು ದೊರೆಯಬೇಕಾಗಿದೆ. ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಈ ಇಬ್ಬರು ಅಧ್ಯಾಪಕರು ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಭವಿಷ್ಯದಲ್ಲಿ ನೈಜ ಜೀವನವನ್ನು ಪೂರೈಸಲು ಭಗವಂತನು ಅವರನ್ನು ಹರಸಲಿ” ಎಂದು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ಶಾಲಾ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಮತ್ತು ಹಿರಿಯ ಶಿಕ್ಷಕ ಕೆ.ನಾರಾಯಣ ಭಟ್ ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಉಪಸ್ಥಿತರಿದ್ದರು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕಿ ಕೆ.ವಿನೋದಿನಿ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

26 June 2015

ಮಾದಕ ದ್ರವ್ಯ ವಿರೋಧಿ ದಿನ

ಇಂದು ಮಾದಕ ದ್ರವ್ಯ ವಿರುದ್ಧ ದಿನ. ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲ ತರಗತಿಗಳಲ್ಲಿ ಘೋಷಣಾ ವಾಕ್ಯ ಬರೆಯುವ ಚಳವಳಿ ಹಮ್ಮಿಕೊಳ್ಳಲಾಯಿತು. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ನೇತೃತ್ವ ವಹಿಸಿದ್ದರು. ಇದು ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿನಿಯರು ಜತೆಯಾಗಿ ಸಿದ್ಧಪಡಿಸಿದ ಪೋಸ್ಟರು...

22 June 2015

ರಸ್ತೆ ಸುರಕ್ಷೆಯನ್ನು ಹೆಚ್ಚಿಸಬೇಕು: ರಸ್ತೆ ಸುರಕ್ಷಾ ಸಮಿತಿ


“ಸಾವಿರಾರು ಮಂದಿ ವಿದ್ಯಾರ್ಥಿಗಳು ನಿತ್ಯ ಸಂಚಾರ ನಡೆಸುವ, ರಸ್ತೆಯನ್ನು ದಾಟಲು ಕಷ್ಟಪಡುವ ನೀರ್ಚಾಲು ಶಾಲಾ ವಠಾರದಲ್ಲಿ ರಸ್ತೆ ಸುರಕ್ಷೆಯು ಆತಂಕಕಾರಿಯಾಗಿದೆ. ಕುಂಬಳೆ-ಮುಳ್ಳೇರಿಯ ರಸ್ತೆಯು ಅಭಿವೃದ್ಧಿ ಹೊಂದಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ, ಭೀತಿ ಹುಟ್ಟಿಸುವಂತೆ ಚಲಿಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಗಂಭೀರ ಅಪಾಯವನ್ನೊಡ್ಡುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ರಸ್ತೆ ಸುರಕ್ಷಾ ಕ್ಲಬ್ ಮತ್ತು ಶಾಲಾ ಸಂರಕ್ಷಣಾ ಸಮಿತಿಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಮಾನ್ಯ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ, ಬದಿಯಡ್ಕ ಪೋಲೀಸು ಇಲಾಖೆಯ ರತ್ನಾಕರನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ಶಿಕ್ಷಕ ಶಿವಪ್ರಕಾಶ್ ಎಂ.ಕೆ ವಂದಿಸಿದರು.

ನೀರ್ಚಾಲು ಶಾಲೆಯ ಎದುರು ಭಾಗದ ರಸ್ತೆಯಲ್ಲಿ ಜೀಬ್ರಾ ಗುರುತು, ರಸ್ತೆ ಬಾರಿಕೇಡ್‌ಗಳನ್ನು ಅಳವಡಿಸುವುದು, ಶಾಲಾ ವಠಾರ ಎಂಬ ಸೂಚನಾ ಫಲಕದ ಸ್ಥಾಪನೆ ಮತ್ತು ಬಸ್ ಬೇ ನಿರ್ಮಾಣ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾರ್ಯಗತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

20 June 2015

ಸ್ಥಳ ಸಂದರ್ಶನ

 
ನಮ್ಮ ಶಾಲೆಯ ವಿದ್ಯಾರ್ಥಿಗಳು ಸ್ಥಳ ಸಂದರ್ಶನದ ಭಾಗವಾಗಿ ನಿನ್ನೆ, 19.06.2015 ಶುಕ್ರವಾರ ಖಂಡಿಗೆ ಬಳಿಯ ಕಾಡನ್ನು ವೀಕ್ಷಿಸಿದರು.

09 June 2015

ಕವಿ ಕಯ್ಯಾರರಿಗೆ ಮಾತೃಶಾಲೆಯ ಅಭಿನಂದನೆ


ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈಯವರು ನೂರು ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ನಿನ್ನೆ 08.06.2015 ಸೋಮವಾರ ಅವರು ಕಲಿತ ನಮ್ಮ ಮಹಾಜನ ಸಂಸ್ಕೃತ ಕಾಲೇಜಿನ ಪರವಾಗಿ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಶಿಕ್ಷಕರಾದ ವಾಣಿ.ಪಿಎಸ್, ಶೈಲಜಾ.ಬಿ, ಗೋವಿಂದ ಶರ್ಮ.ಕೆ, ತಲೆಂಗಳ ಕೃಷ್ಣಪ್ರಸಾದ ಉಪಸ್ಥಿತರಿದ್ದರು.

05 June 2015

ವಿಶ್ವಪರಿಸರ ದಿನಾಚರಣೆ


“ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಭೂಮಾಲಿನ್ಯದಿಂದಾಗಿ ಆಮ್ಲ ಮಳೆಯಂತಹ ಅಪಾಯಕಾರಿ ಪರಿಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ. ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ ಸಾಧ್ಯ. ಅಂತಹ ಸಸ್ಯಗಳಿಗೆ ಪರಿಸರವು ಮಾರಕವಾಗಿ ಪರಿಣಮಿಸುತ್ತಿರುವುದರಿಂದ ನಾವು ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ತ್ಯಾಜ್ಯದ ಸಮರ್ಪಕ ವಿಲೇವಾರಿ, ತ್ಯಾಜ್ಯದ ಮರುಬಳಕೆ, ಮನೆಯ ಸುತ್ತ ಮುತ್ತ ಗಿಡ-ಮರ ಬೆಳೆಸುವುದು, ಸಾವಯವ ಕೃಷಿಗೆ ಉತ್ತೇಜನ, ರಾಸಾಯನಿಕಗಳ ಮಿತ ಬಳಕೆ, ನೈಸರ್ಗಿಕ ಮೂಲಗಳ ಸದ್ಬಳಕೆ, ತ್ಯಾಜ್ಯದ ಉತ್ಪಾದನೆಯನ್ನು ಆದಷ್ಟು ನಿಯಂತ್ರಣದಲ್ಲಿಡುವುದರಿಂದ ಸಾಕಷ್ಟು ಮಟ್ಟಿಗೆ ಭೂಮಾಲಿನ್ಯವನ್ನು ತಪ್ಪಿಸಬಹುದು. ಜೊತೆಗೆ ದೊರೆತ ಆಹಾರವನ್ನು ಯುಕ್ತಿಯಿಂದ ಉಪಯೋಗಿಸಬೇಕಾಗಿದೆ, ಮುಂದಿನ ತಲೆಮಾರಿನ ಜೀವಿಗಳಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಶಿಕ್ಷಕರಾದ ಕೆ.ವಿನೋದಿನಿ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸೂರ್ಯನಾರಾಯಣ. ಎಂ ವಂದಿಸಿದರು.

01 June 2015

ಪ್ರವೇಶೋತ್ಸವ 2015


“ಹೊಸ ಕನಸುಗಳನ್ನು ಕಟ್ಟಿಕೊಂಡು ಶಾಲೆಗೆ ತಲಪುವ ವಿದ್ಯಾರ್ಥಿಗಳಿಗೆ ಶಿಕ್ಷಣವು ಉತ್ತಮ ಭವಿಷ್ಯವನ್ನು ಕಟ್ಟಿಕೊಡಲಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಉತ್ತಮವಾಗಿ ಕಲಿಯುವುದು ಅನಿವಾರ್ಯ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ, ಬಾಳು ಹಸನಾಗಲಿ" ಎಂದು ನಮ್ಮ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಶಿವಪ್ರಸಾದ್ ಹೊಸಮನೆ, ನಿವೃತ್ತಿ ಹೊಂದುತ್ತಿರುವ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.