Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

14 December 2012

ಗಣಿತೋತ್ಸವದಲ್ಲಿ ಪ್ರಶಸ್ತಿ

ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತೋತ್ಸವದ ಅಂಗವಾಗಿ ಮೊನ್ನೆ 10.12.2012 ಸೋಮವಾರದಂದು ನಮ್ಮ ಶಾಲೆಯಲ್ಲಿ  ಜರಗಿದ ಯುಪಿ ಮತ್ತು ಪ್ರೌಢಶಾಲಾ ವಿಭಾಗದ ಟಾನ್‌ಗ್ರಾಮ್, ರಾಮಾನುಜನ್ ಪೇಪರ್ ಪ್ರೆಸೆಂಟೇಶನ್, ಕಾರ್ಟೂನ್, ಕವಿತಾ ರಚನೆ, ಭಾಷಣ, ಸ್ಕಿಟ್ ಮತ್ತಿತರ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನ ಗಳಿಸಿದ್ದಾರೆ.

12 December 2012

ದಶಂಬರ ಬಂತೆಂದರೆ ಶಾಲಾ ವಿದ್ಯಾರ್ಥಿಗಳಿಗೆ ಎರಡು ಅಬ್ಬರಗಳು. ಮೊದಲನೆಯದು ಕಲೋತ್ಸವ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ಕಲೋತ್ಸವ ಸ್ಪರ್ಧೆಗಳು ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದವು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ಪರ್ಧೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳೂ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಸಂಸ್ಕೃತೋತ್ಸವದ ಪ್ರೌಢಶಾಲಾ ಮತ್ತು ಯುಪಿ ವಿಭಾಗದ ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕ ಪಡೆದು ಸಂಸ್ಕೃತೋತ್ಸವದ ಸಮಗ್ರ ಪ್ರಶಸ್ತಿಯನ್ನು ಶಾಲೆಗೆ ತಂದಿದ್ದಾರೆ. ಅವರಿಗೆ ಶುಭಾಶಯಗಳು.

ನಾಳೆಯಿಂದ ಮಧ್ಯಾವಧಿ ಪರೀಕ್ಷೆಗಳು ಆರಂಭ. ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಅವರಿಗೂ ಶುಭಾಶಯಗಳು.

21 November 2012

ಜಿಲ್ಲಾ ವಿಜ್ಞಾನ ಮೇಳದಲ್ಲಿ ಪ್ರಶಸ್ತಿ 20.11.2012 ರಂದು ಚಟ್ಟಂಚಾಲ್‌ನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಪ್ರೌಢಶಾಲಾ ವಿಭಾಗದ ‘ಸ್ಥಿರ ಮಾದರಿ’ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಲ್ಲಿಕೋಟೆಯಲ್ಲಿ ಜರಗಲಿರುವ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಸ್ವಾಗತ ರೈ. ಬಿ ಮತ್ತು ಅಭಿಲಾಶ್ ಶರ್ಮ. ಕೆ ಅರ್ಹತೆ ಪಡೆದಿದ್ದಾರೆ. ಸ್ವಾಗತ ರೈ - ಶಿಕ್ಷಕ ದಂಪತಿಯರಾದ ಚಂದ್ರಶೇಖರ ರೈ. ಕೆ ಮತ್ತು ಚಂದ್ರಾವತಿ. ಬಿ ಇವರ ಸುಪುತ್ರಿ. ಅಭಿಲಾಶ್ ಶರ್ಮ.ಕೆ - ಹಿರಿಯ ಪತ್ರಕರ್ತ ಶಂಕರನಾರಾಯಣ ಕಿದೂರು ಮತ್ತು ಕೃಷ್ಣವೇಣಿ ಕಿದೂರು ಇವರ ಪುತ್ರ.

17 November 2012

ಮಾದಕ ದ್ರವ್ಯ ವಿರುದ್ಧ ಜಾಗೃತಿ

ಇಂದು ಅರಾಹ್ನ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಸತೀಶ್ ಬಲ್ಲಾಳ್ ಮತ್ತು ಮದನನ್‌ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಉಪಯೋಗದ ವಿರುದ್ಧ ಜಾಗೃತಿ ತರಗತಿಯನ್ನು ನಡೆಸಿದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ಕೆ. ಶಂಕರನಾರಾಯಣ ಶರ್ಮ ಧನ್ಯವಾದ ಸಮರ್ಪಿಸಿದರು. ಹಿರಿಯ ಶಿಕ್ಷಕಿ ಭುವನೇಶ್ವರಿ. ಎ ಕಾರ್ಯಕ್ರಮ ನಿರೂಪಿಸಿದರು.

ಗ್ಲಾಸ್ ಪೈಂಟಿಂಗ್ ಮತ್ತು ಭಾವಗೀತೆ ಗಾಯನ ತರಬೇತಿ

ಮೊನ್ನೆ 13.11.2012 ದೀಪಾವಳ ಹಬ್ಬದ ರಜೆಯ ದಿನ, ನಮ್ಮ ಶಾಲಾ ಆಕ್ತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಎರಡು ವಿಭಿನ್ನ ಕಾರ್ಯಕ್ರಮಗಳನ್ನು ಶಾಲಾ ಆರ್ಟ್ಸ್ ಕ್ಲಬ್ ಆಯೋಜಿಸಿತು. ಉಪ್ಪಳ ಸರಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಜ್ಯೋತಿ ಕುಮಾರಿ. ಪಿ.ವಿ ವಿದ್ಯಾರ್ಥಿಗಳಿಗೆ ಭಾವಗೀತ ಗಾಯನ ತರಬೆತಿ ನೀಡಿದರು. ಶಾಲಾ ಸಂಚಾಲಕ ಶ್ರೀ ಜಯದೇವ ಖಂಡಿಗೆ ಇವರ ಪುತ್ರಿ ಕುಮಾರಿ ಸಂಜೋತಾ ವಿದ್ಯಾರ್ಥಿಗಳಿಗೆ ಗ್ಲಾಸ್ ಪೈಂಟಿಂಗ್ ಮಾಡುವ ವಿಧಾನದ ತರಬೇತಿ ನೀಡಿದರು. ಧನ್ಯವಾದಗಳು ಅವರಿಗೆ...

24 October 2012

ಶಾರದಾ ಪೂಜಾ - 2012

ಇಂದು ನಮ್ಮ ಶಾಲೆಯ ಶಾರದಾ ಪೂಜೆ. ವರ್ಷಂಪ್ರತಿ ನಡೆಸುವಂತೆ ವಿದ್ಯಾರ್ಥಿಗಳು ‘ಅಷ್ಟಾವಧಾನ ಸೇವೆ’ ನೆರವೇರಿಸಿ, ಶಾರದಾಂಬೆಯ ಪೂಜೆಯಲ್ಲಿ ಪಾಲ್ಗೊಂಡರು. ನಿಮಗೆಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು.

19 October 2012

ಕಾಸರಗೋಡಿನಲ್ಲಿ ಕನ್ನಡ ಉಳಿದಿದೆ: ಪ್ರಕಾಶ್ ಮತ್ತಿಹಳ್ಳಿ


“ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ದೂರವಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆಯ ಕೇವಲ ೨೩ ಶೇಕಡಾ ಜನ ಮಾತ್ರ ಸದ್ಯ ಕನ್ನಡಿಗರಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕನ್ನಡಿಗರಿಗಿಂತಲೂ ಸುಲಲಿತವಾಗಿ ಕನ್ನಡ ಮಾತನಾಡುವ ಜನ ಈ ಗಡಿನಾಡಿನಲ್ಲಿದ್ದಾರೆ ಎಂಬುದನ್ನು ತಿಳಿದು ಸಂತಸವಾಗಿದೆ. ಕನ್ನಡದ ಬೆಳವಣಿಗೆಗಾಗಿ ಈ ನಾಡಿನ ಜನತೆಯ ಜೊತೆ ನಾವೂ ಕೈಜೋಡಿಸುತ್ತೇವೆ. ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪ್ರಕಾಶ್ ಮತ್ತಿಹಳ್ಳಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜಿಸುವ ಧನ ಸಹಾಯದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

17 October 2012

19ರಂದು ಗ್ರಂಥಾಲಯ ಕಟ್ಟಡ - ಕಾಮಗಾರಿ ಪರಿಶೀಲನಾ ಸಭೆ

ನಮ್ಮ ಪ್ರೌಢಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಧನ ಸಹಾಯದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪರಿಶೀಲನಾ ಸಭೆಯು ೧೯.೧೦.೨೦೧೨ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಜರಗಲಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಚ್.ವಿ.ರಾಮಚಂದ್ರ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪ್ರಕಾಶ್ ಮತ್ತಿಹಳ್ಳಿಯವರು  ಪರಿಶೀಲನಾ ವರದಿಯನ್ನು ಮಂಡಿಸುವರು.  ಶಾಲಾ ಹಳೆ ವಿದ್ಯಾರ್ಥಿ ಕುಂಜಾರು ಸುಬ್ರಾಯ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಶುಭ ಹಾರೈಸಲಿದ್ದಾರೆ.

12 October 2012

ರಕ್ತ ಗುಂಪು ನಿರ್ಣಯ ಶಿಬಿರ

ಇಂದು ನಮ್ಮ ಶಾಲೆಯಲ್ಲಿ ರಕ್ತ ಗುಂಪು ನಿರ್ಣಯ ಶಿಬಿರ ಜರಗಿತು. ನೀರ್ಚಾಲಿನಲ್ಲಿ ಹೊಸದಾಗಿ ಆರಂಭವಾದ ‘ಅಭಯ’ ಡಯಗ್ನೋಸ್ಟಿಕ್ ಲ್ಯಾಬ್‌ನ ತಜ್ಞೆ ಸುಲೋಚನಾ ಇಂದು ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳ ರಕ್ತ ಗುಂಪು ನಿರ್ಣಯ ನಡೆಸಿಕೊಟ್ಟರು. ಕೃತಜ್ಞತೆಗಳು...

27 September 2012

ಶಾಲಾ ಮಟ್ಟದ ವೃತ್ತಿ ಪರಿಚಯ ಮೇಳ

ನಿನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ. ಪ್ರತೀ ವರ್ಷವೂ ಉಪಜಿಲ್ಲಾ ಮಟ್ಟದಲ್ಲಿ ನಡೆಯುವ ವೃತ್ತಿ ಪರಿಚಯ ಮೇಳಕ್ಕೆ ಪೂರ್ವಭಾವಿಯಾಗಿ ನಮ್ಮ ಶಾಲಾ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ನಿನ್ನೆ ವೃತ್ತಿಪರಿಚಯ ಮೇಳವನ್ನು ಆಯೋಜಿಸಲಾಯಿತು. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಇವರ ಮುಂದಾಳ್ತನದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದ ಒಂದು ನೋಟವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸ್ಪರ್ಧೆಗಳು ವಿವಿಧ ವಿಭಾಗಳಲ್ಲಿ ನಡೆದಿದ್ದು ವಿಜೇತ ವಿದ್ಯಾರ್ಥಿಗಳು ಮುಂದಿನ ತಿಂಗಳು ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಶುಭಾಶಯಗಳು...

22 September 2012

ಸಾಹಿತ್ಯ ಶಿಬಿರ 2012

ನಮ್ಮ ಶಾಲೆಯಲ್ಲಿ 21.09.2012 ಶುಕ್ರವಾರ ಜರಗಿದ ‘ಸಾಹಿತ್ಯ ಶಿಬಿರ’ದಲ್ಲಿ ಸಾಹಿತಿ ವಿ.ಬಿ.ಕುಳಮರ್ವ ಕಥಾ ರಚನೆ ಮತ್ತು ಸಾಹಿತಿ ಬಾಲ ಮಧುರಕಾನನ ಕವನ ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಅರವಿಂದ ಎಸ್.ವಿ ಸ್ವಾಗತಿಸಿ ಸುಷ್ಮಾ.ಕೆ ವಂದಿಸಿದರು. ರಮ್ಯಶ್ರೀ. ಎ ಪ್ರಾರ್ಥಿಸಿದಳು. ಕ್ಷಮಾದೇವಿ.ಕೆ ಕಾರ್ಯಕ್ರಮ ನಿರೂಪಿಸಿದಳು.

ಚೈತನ್ಯ ಸಂರಕ್ಷಣೆ - ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ

ಕನ್ನಡ, ಮಲಯಾಳ ಮತ್ತು ಆಂಗ್ಲ ಭಾಷಾ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ಸ್ಪರ್ಧೆ ನಡೆಸುವ ಕ್ರಮ ತೀರಾ ಸರಿಯಲ್ಲ. ಯಾಕೆಂದರೆ ವಿವಿಧ ಭಾಷೆಗಳನ್ನು, ಶೈಲಿಯನ್ನು ಒಂದೇ ತಕ್ಕ್ಡಿಯಲ್ಲಿ ಇರಿಸಿ ತೂಗುವುದು ಸುಲಭವಲ್ಲ, ಹಾಗೂ ಅನೇಕ ಸಂದರ್ಭದಲ್ಲಿ ಬಹುಮಾನ ಮಲಯಾಳಿ ಪ್ರಾಬಲ್ಯಕ್ಕೆ ಒಳಗಾಗುತ್ತದೆ. ಈ ರೀತಿಯ ಪ್ರಸಂಗಗಳು ನಮ್ಮ ಕಾಸರಗೋಡಿನಲ್ಲಿ ಪದೇ ಪದೇ ಎದುರಾಗುತ್ತದೆ. ಆದರೆ ಮೊನ್ನೆ 20.09.2012 ಗುರುವಾರದಂದು ಬಹುಮಾನ ನಮ್ಮ ಕನ್ನಡದ ಪಾಲಿಗೆ ಒಲಿಯಿತು. ಕೇರಳ ಸರಕಾರದ ಕ್ರೀಡಾ ಮತ್ತು ಯುವಜನ ಖಾತೆಯು ‘ಚೈತನ್ಯ ಸಂರಕ್ಷಣೆ’ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಳ್ಳೇರಿಯಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಕ್ಷಮಾದೇವಿ.ಕೆ ಕನ್ನಡದಲ್ಲಿ ಮಾತನಾಡಿ ಪ್ರಥಮ ಬಹುಮಾನ ‘ಸೈಕಲ್’ ಪಡೆದುಕೊಂಡಳು. ಬೇಳ ಕುಮಾರಮಂಗಲ ನಿವಾಸಿ ಬಾಲಕೃಷ್ಣಮೂರ್ತಿ ಮತ್ತು ಸತ್ಯಶೀಲಾ ಇವರ ಪುತ್ರಿಯಾದ ಈಕೆಗೆ ನಮ್ಮ ಶುಭ ಹಾರೈಕೆಗಳು.

14 September 2012

ಏಣಿಯರ್ಪು ಕಡೆಗೆ ಪ್ರಯಾಣ...


ಇಂದು ನಮ್ಮ ಪ್ರಯಾಣ ನೀರ್ಚಾಲಿನಿಂದ ಮೈಲೊಳಗಿನ ಅಂತರದಲ್ಲಿರುವ ಏಣಿಯರ್ಪು ಇಟ್ಟಿಗೆ ಕಾರ್ಖಾನೆ ಮತ್ತು ಬಿರ್ಮಿನಡ್ಕದಲ್ಲಿರುವ ಕೆಂಪು ಕಲ್ಲಿನ ಗಣಿಯ ಕಡೆಗೆ...  ಇಟ್ಟಿಗೆ ಕಾರ್ಖಾನೆಯಲ್ಲಿ ಮಡಿಕೆ ಮಾಡುವ ವಿಧಾನದ ಬಗ್ಗೆ ಬೇಳ ವಿಷ್ಣುಮೂರ್ತಿ ನಗರದ ದಾಮೋದರ ಪ್ರಾತ್ಯಕ್ಷಿಕೆ ನೀಡಿದರು. ನಂತರ ಕಲ್ಲಿನ ಗಣಿಯನ್ನು ಸಂದರ್ಶಿಸಿದ ವಿದ್ಯಾರ್ಥಿಗಳು ಕಲ್ಲಿನ ಗಣಿಗಳ ಗುಣ ಮತ್ತು ಅವುಗಳಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

06 September 2012

ಶಿಕ್ಷಕ ದಿನಾಚರಣೆ

ವಿದ್ಯಾರ್ಥಿಗಳ ಕಾಲುವಾರ್ಷಿಕ ಪರೀಕ್ಷೆ ಇನ್ನೂ ಮುಗಿದಿಲ್ಲ. ಮುಂದಿನ ಸೋಮವಾರ ಮತ್ತು ಮಂಗಳವಾರ ಮತ್ತೆ ಪರೀಕ್ಷೆಗಳಿವೆ. ಈ ಒತ್ತಡಗಳ ನಡುವೆ ನಾವು ಸರಳವಾಗಿ ಶಿಕ್ಷಕರ ದಿನವನ್ನು ಆಚರಿಸಿಕೊಂಡೆವು. ಒಂಬತ್ತನೆಯ ತರಗತಿ ಹುಡುಗ ಆದರ್ಶ ಪೆನ್ಸಿಲ್ ಚಿತ್ರಗಳನ್ನು ಬಿಡಿಸುವುದರಲ್ಲಿ ಚೆನ್ನಾಗಿ ಪಳಗುತ್ತಿದ್ದಾನೆ. ಅವನು ಬಿಡಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ರೇಖಾಚಿತ್ರವನ್ನು ಒಂಬತ್ತನೆಯ ತರಗತಿ ಹುಡುಗರು ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅವರಿಗೆ ಸಮರ್ಪಿಸಿದರು.

05 September 2012

ಮಕ್ಕಳ ಧ್ವನಿ - 2012

ಮೂಡುಬಿದಿರೆ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಮೊನ್ನೆ ಸೆಪ್ಟೆಂಬರ್ 1 ಮತ್ತು 2 ನೇ ತಾರೀಕಿನಂದು ಜರಗಿದ ಉಡುಪಿ - ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಹತ್ತೊಂಬತ್ತನೆಯ ‘ಮಕ್ಕಳ ಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು ರಸಪ್ರಶ್ನೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.

04 September 2012

ವಿಜಯವಾಣಿ ಪತ್ರಿಕೆಯಲ್ಲಿ ನಮ್ಮ ಬ್ಲಾಗ್

ಸ್ನೇಹಿತರೇ, ನಮ್ಮ ‘ಮಹಾಜನ’ ಬ್ಲಾಗ್ ಬಗ್ಗೆ ಕುತೂಹಲ ಹೊಂದಿದ ವೈ.ಜಿ.ಸುರೇಶ್ ಮೊನ್ನೆ ಭಾನುವಾರ ಫೋನ್ ಮಾಡಿದ್ದರು. ಇಷ್ಟು ಪಕ್ಕನೆ ಅವರ ಬರವಣಿಗೆ ಪ್ರಕಟವಾಗುತ್ತದೆಂದು ಎಣಿಸಿರಲಿಲ್ಲ. ಆದರೆ ನಿನ್ನೆ ಸೋಮವಾರದ ಪತ್ರಿಕೆಯಲ್ಲಿಯೇ ನಮ್ಮ ಬಗ್ಗೆ ಮಾಹಿತಿ ಪ್ರಕಟವಾಗಿದೆ. ಧನ್ಯವಾದಗಳು ಸುರೇಶ್...

30 August 2012

ಓಣಂ ಆಚರಣೆಮೊನ್ನೆ 24 ರಂದು, ಓಣಂ ರಜೆ ಆರಂಭವಾಗುವ ಮುನ್ನ ನಮ್ಮ ಶಾಲೆಯಲ್ಲಿ ಓಣಂ ಆಚರಣೆ ಜರಗಿತು. ಗಣಿತ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹೂರಂಗವಲ್ಲಿಯಲ್ಲಿ ಗಣಿತ ಆಕೃತಿಗಳನ್ನು ಬಿಡಿಸುವ ಸ್ಪರ್ಧೆ, ಮೊಸರು ಕುಡಿಕೆ ಇತ್ಯಾದಿ ಸ್ಪರ್ಧೆಗಳು ಜರಗಿದವು.  ರಕ್ಷಕ ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳಿಗೆ ‘ಓಣಂ ಊಟ’ವನ್ನು ಬಡಿಸಿದರು.

18 August 2012

ಕಾಗದದ ದೋಣಿ

ಅಧ್ಯಾಪಕರ ಸಾನ್ನಿಧ್ಯದಲ್ಲಿ ನೀರಲ್ಲಿ ಇಳಿದು ಆಟವಾಡುವುದೆಂದರೆ ಮಕ್ಕಳಿಗೆ ತುಂಬಾ ಖುಷಿ. ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯ ಎಡನಾಡು ಗ್ರಾಮದಲ್ಲಿರುವ ಆನಾಡಿಪಳ್ಳ ಮದಕ ಹೆಚ್ಚು ಆಳವಿಲ್ಲದ ನೀರಾಶ್ರಯ, ವರ್ಷಪೂರ್ತಿ ನೀರಿರುವ ಪ್ರದೇಶ. ಅಂತಹ ನೀರ ಜಾಗದಲ್ಲಿ ಕಾಗದದ ದೋಣಿ ಬಿಟ್ಟು ಸಂತಸ ಪಟ್ಟ ವಿದ್ಯಾರ್ಥಿಗಳು...

ಮುಖಾರಿಕಂಡ ಅಣೆಕಟ್ಟಿನ ಕಡೆಗೆ...ಕಾಲು ವಾರ್ಷಿಕ ಪರೀಕ್ಷೆಗಳ ನಡುವೆ ನಿನ್ನೆ, ನಮ್ಮ ಶಾಲಾ ಯು.ಪಿ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ ದಿನ. ‘ಸೋಣೆ’ ತಿಂಗಳ ‘ಸೋನೆ’ ಮಳೆಯ ನಡುವೆ ಸೀತಾಂಗೋಳಿ ಪರಿಸರದಲ್ಲಿ ಒಂದು ಸುತ್ತಾಟ. ಮುಖಾರಿಕಂಡ ಅಣೆಕಟ್ಟು ಸಂದರ್ಶಿಸಿ, ಕೋಡಿಮೂಲೆಯಲ್ಲಿ ಕಬ್ಬಿಣದ ಕತ್ತಿ ತಯಾರಿಯ ಬಗ್ಗೆ ಮಾಹಿತಿ ತಿಳಿದುಕೊಂಡು ಮರಳಿ ಶಾಲೆ ಸೇರುವಾಗ ಒಂದು ಖುಷಿ...

15 August 2012

ಸ್ವಾತಂತ್ರ್ಯ ಯಾತ್ರೆ

“ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ  ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಿರಿಯ ಶಿಕ್ಷಕರಾದ ಎಸ್.ವಿ.ಭಟ್, ಕೆ.ನಾರಾಯಣ ಭಟ್ ಮತ್ತು ಎಂ.ಸೂರ್ಯನಾರಾಯಣ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

13 August 2012

‘ಹೂ’ಗಳನ್ನು ಉಪಯೋಗಿಸಿ ಭೂಪಟ

ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ನಮ್ಮ ಶಾಲಾ ಸಮಾಜ ವಿಜ್ಞಾನ ಕ್ಲಬ್ ಆಶ್ರಯದಲ್ಲಿ 10.08.2012 ಶುಕ್ರವಾರ ನಡೆದ ಹೂರಂಗವಲ್ಲಿಯಲ್ಲಿ ಭಾರತ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ಮತ್ತು ಕೇರಳ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ತಂಡ.

ತರಕಾರಿ ಬೀಜ ವಿತರಣೆ

ನಮ್ಮ ಶಾಲೆಯಲ್ಲಿ 10.08.2012 ಶುಕ್ರವಾರ ಕೇರಳ ಸರಕಾರದ ಕೃಷಿ ಇಲಾಖೆಯು ವಿತರಿಸಿದ ತರಕಾರಿ ಬೀಜಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ವಿತರಿಸಿದರು.

10 August 2012

ಸಿ.ಪಿ.ಸಿ.ಆರ್.ಐ ಗೆ ಭೇಟಿ

ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ 06.08.2012 ಸೋಮವಾರದಂದು ನಮ್ಮ ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿ ವಿಜ್ಞಾನಿ ಮಣಿಕಂಠನ್ ಅವರಿಂದ ಕಸಿ ಕಟ್ಟುವ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

“ಶ್ರೀಕೃಷ್ಣ ಆತ್ಮೀಯ ದೇವರು": ಕೆ.ಶಿವಕುಮಾರ್


 “ಶ್ರೀಕೃಷ್ಣನ ಬಾಲಲೀಲೆಗಳು ಎಂದೆಂದಿಗೂ ಚೇತೋಹಾರಿ. ಧರ್ಮ ಸಂಸ್ಥಾಪನೆಗಾಗಿ ಅವನು ಕೈಗೊಂಡ ಕಾರ್ಯಗಳ ಸಮಾಜಕ್ಕೆ ಆದರ್ಶ. ಅವನ ಪಥ ಅನುಕರಣೀಯ, ಆದರಿಂದಲೇ ಆತ ಎಲ್ಲರಿಗೂ ಆತ್ಮೀಯ ದೇವರು ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ಅವರು ೦೯.೦೮.೨೦೧೨ ಗುರುವಾರ ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಸುಶೀಲಾ.ಎಸ್ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳಾದ ಹೇಮಶ್ರೀ ಕಾಕುಂಜೆ ಮತ್ತು ಶ್ರೀವಾಣಿ ಕಾಕುಂಜೆ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ಜರಗಿತು. ವಯಲಿನ್‌ನಲ್ಲಿ ಪ್ರಭಾಕರ ಕುಂಜಾರು ಮತ್ತು ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೇಕೆರೆ ಸಹಕರಿಸಿದರು.

11 July 2012

ಶ್ರದ್ಧಾ. ಎಸ್ ಬಿಡಿಸಿದ ಚಿತ್ರ

ಇದು ಒಂಭತ್ತನೇ ತರಗತಿಯ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಹುಡುಗಿ ಶ್ರದ್ಧಾ.ಎಸ್ ಬಿಡಿಸಿದ ಚಿತ್ರ.

29 June 2012

ದಿ|ಖಂಡಿಗೆ ಶಾಮ ಭಟ್ಟರ ತೈಲ ಚಿತ್ರ ಅನಾವರಣ

    “ದುಡ್ಡು ಬಟ್ಟೆಯಿಂದ ದೊಡ್ಡವರಾದವರಿಲ್ಲ, ದೊಡ್ಡ ಮನಸ್ಸಿನಿಂದ ದೊಡ್ಡವರಾದವರೇ ಎಲ್ಲ. ಲೋಕಕ್ಕೆ ಆದರ್ಶರೆನಿಸಿಕೊಂಡವರೆಲ್ಲ ಈ ತತ್ವವನ್ನು ಅನುಸರಿಸಿಕೊಂಡವರು. ‘ಮಹಾಜನ’ ಎಂಬ ಪದಕ್ಕೆ ಅನ್ವರ್ಥವಾಗಿ ಬೆಳೆದ ಖಂಡಿಗೆ ಶಾಮ ಭಟ್ಟರ ರೂಪವನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಈ ತೈಲ ವರ್ಣ ಚಿತ್ರ ಸಹಕಾರಿ. ಆ ಚಿತ್ರವೇ ಮುಂದಿನ ಪೀಳಿಗೆಗೆ ದಾರಿ ದೀಪವಾಗಬಲ್ಲದು" ಎಂದು ನಿವೃತ್ತ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ದಿ| ಖಂಡಿಗೆ ಶಾಮ ಭಟ್ಟರ ತೈಲ ವರ್ಣ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಿದ್ಯಾರ್ಥಿಗಳಾದ ಬಳ್ಳಪದವು ಶಂಕರನಾರಾಯಣ ಭಟ್, ಕುಂಜಾರು ಸುಬ್ರಾಯ ಭಟ್, ಚಿತ್ರ ಕಲಾವಿದ ರವಿ ಪಿಲಿಕ್ಕೋಡ್, ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಅರ್ಪಿಸಿದರು.


    ಚಿತ್ರ ಕಲಾವಿದ ರವಿ ಪಿಲಿಕ್ಕೋಡ್ ಅವರನ್ನು ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ ಶಾಲು ಹೊದೆಸಿ ಫಲ ಸಮರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಗೋವಿಂದ ಶರ್ಮ ಕೋರಿಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಮಾದಕ ದ್ರವ್ಯ ವಿರುದ್ಧ ಭಿತ್ತಿ ಚಿತ್ರಗಳು

ಮೊನ್ನೆ ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಾಲಾ ‘ಆರ್ಟ್ಸ್ ಕ್ಲಬ್’ ಸದಸ್ಯರು ರಚಿಸಿದ ಪೋಸ್ಟರುಗಳು, ವಿದ್ಯಾರ್ಥಿಗಳನ್ನು ಆಕರ್ಷಿಸಿದವು.

26 June 2012

ಮಾದಕ ದ್ರವ್ಯ ವಿರುದ್ಧ ದಿನ

ಇಂದು 26.06.2012 ಮಂಗಳವಾರ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನ. ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಗೃತಿಯನ್ನು ಬೆಳೆಸುವ ದೃಷ್ಟಿಯಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ನೀರ್ಚಾಲು ಪೇಟೆಯಲ್ಲಿ ಮೆರವಣಿಗೆ ನಡೆಸಿದರು.

ವಾಚನ ಸಪ್ತಾಹ

ಓದುವ ಅಭ್ಯಾಸವನ್ನು ಬೆಳಿಸಿಕೊಳ್ಳುವ ದೃಷ್ಟಿಯಿಂದ ನಮ್ಮ ಶಾಲಾ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ತಾಳೆಗರಿ ಸಹಿತ ವಿವಿಧ ಗ್ರಂಥಗಳ ಪ್ರದರ್ಶನ ಕಳೆದ ವಾರ ಜರಗಿತು.

11 June 2012

‘ಪ್ರಾಂಶುಪಾಲ’ರ ತೈಲ ವರ್ಣ ಚಿತ್ರ

ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾಗಿದ್ದು, ‘ಪ್ರಾಂಶುಪಾಲರೆಂದೇ ಖ್ಯಾತರಾಗಿದ್ದ ಶ್ರೀ ಖಂಡಿಗೆ ಶಾಮ ಭಟ್ಟರ ಚಿರಸ್ಮರಣೆಗಾಗಿ ಬೋವಿಕ್ಕಾನ ಪ್ರೌಢಶಾಲೆಯ ಖ್ಯಾತ ಚಿತ್ರ ಕಲಾವಿದ ಶ್ರೀ ರವಿ ಪಿಲಿಕ್ಕೋಡ್ ತಾವು ಚಿತ್ರಿಸುತ್ತಿರುವ ತೈಲವರ್ಣ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಈ ಚಿತ್ರವನ್ನು ಶಾಲಾ ಶಿಕ್ಷಕ ವರ್ಗವು ಶಾಲೆಗೆ ಸಮರ್ಪಿಸಲಿದೆ.

05 June 2012

ವಿಶ್ವ ಪರಿಸರ ದಿನ

ಇಂದು ವಿಶ್ವ ಪರಿಸರ ದಿನ. ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರಾಮುಖ್ಯತೆಯನ್ನು ನೆನಪಿಸಿಕೊಡುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಅರಣ್ಯ ಬೆಳೆಸುವ ‘ನನ್ನ ಮರ’ ಯೋಜನೆಗೆ ಪೂರಕವಾದ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ವಿದ್ಯಾರ್ಥಿಗಳಿಗೆ ವಿತರಿಸಿದರು.

04 June 2012

ಶಾಲಾ ಪ್ರವೇಶೋತ್ಸವ 2012

ಬೇಸಿಗೆ ರಜಾ ಕಾಲ ಕಳೆದಿದೆ, ಮುಂಗಾರು ಕೇರಳಕ್ಕೆ ಕಾಲಿಡುವ ಹೊತ್ತಿನಲ್ಲೇ ಹೊಸ ಅಧ್ಯಯನ ವರ್ಷ ಆರಂಭವಾಗಿದೆ. ಹೊಸ ಹೊಸ ಕನಸನ್ನು ಕಟ್ಟಿಕೊಂಡು ಶಾಲೆಯ ಕಡೆಗೆ ಬಂದ ಚಿಣ್ಣರನ್ನು ಸ್ವಾಗತಿಸುವ ಕಾರ್ಯವೂ ಇಂದು ನಡೆದಿದೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಸಿಹಿತಿಂಡಿ ವಿತರಿಸಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಆದರದಿಂದ ಬರಮಾಡಿಕೊಂಡಿದ್ದಾರೆ. ಈಗ ವಿದ್ಯಾರ್ಥಿಗಳ ಕನಸುಗಳು ಗರಿಗೆದರುತ್ತಿವೆ...

02 May 2012

ಎಲ್ಲ ವಿಷಯಗಳಲ್ಲೂ ಎ+ ಪಡೆದವರು

ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂಸ್ಕೃತ, ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಮಾಹಿತಿ ವಿನಿಮಯ ತಂತ್ರಜ್ಞಾನ ಪರೀಕ್ಷೆಗಳಲ್ಲಿ ಎ+ ಗ್ರೇಡ್ ಪಡೆದ ವಿದ್ಯಾರ್ಥಿಗಳು ಇವರು, ಅವರ ಮುಂದಿನ ಹಾದಿಗೆ ಶುಭಾಶಯಗಳು...

27 April 2012

ಎಸ್ ಎಸ್ ಎಲ್ ಸಿ ಫಲಿತಾಂಶ ಬಂತು...

98% ಫಲಿತಾಂಶ ದಾಖಲಿಸಿದ್ದೇವೆ. ಈ ಬಾರಿಯ ಕೇರಳ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆ ಬರೆದ ೧೫೮ ಮಂದಿಯಲ್ಲಿ ೧೫೫ ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಲು ಸಂತೋಷಪಡುತ್ತಿದ್ದೇವೆ. ಕೇರಳ ರಾಜ್ಯ ಮಟ್ಟದ ಸರಾಸರಿ 93% ಆಗಿದ್ದು, ಅದಕ್ಕಿಂತ ಹೆಚ್ಚು ಫಲಿತಾಂಶ ನಮ್ಮ ಶಾಲೆಗೆ ಬಂದಿರುವುದು ಸಂತಸದ ಇನ್ನೊಂದು ವಿಷಯ. ಶಾಂತಿ.ಕೆ, ರಂಜನಾ.ಕೆ, ರಂಜಿತಾ.ಬಿ, ಗುರುವಿನಯ ಕೃಷ್ಣ ಕೆ.ಆರ್, ನಂದನ.ಎ, ಶಶಾಂಕ ಶರ್ಮ. ಎಸ್ ಈ ಆರು ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ+ ಗ್ರೇಡ್ ಪಡೆದು ಗೆಲುವಿನ ಕಿರೀಟಕ್ಕೆ ಗರಿಯನ್ನು ಸೇರಿಸಿದ್ದಾರೆ. ಶುಭಾಶಯಗಳು...

24 April 2012

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಮುಂದಿನ ವಾರ


ಮೌಲ್ಯಮಾಪನ ಮೊನ್ನೆ ಇಪ್ಪತ್ತರಂದು ಕೊನೆಗೊಂಡಿದೆ. ಮುಂದಿನ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಿಸಿಲಿನ ಬೇಗೆಯ ನಡುವೆ, ಕಾಯುವಿಕೆ ವಿದ್ಯಾರ್ಥಿಗಳಿಗೂ, ನಮಗೂ ಅವರ್ಣನೀಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ಮುಂದಿನ ಕಲಿಯುವಿಕೆಯ ದಾರಿಯನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು...

30 March 2012

ನಾಳೆಯಿಂದ ರಜೆ...

ಬೇಸಗೆ ಪರೀಕ್ಷೆಗಳು ಇಂದು ಕೊನೆಗೊಳ್ಳುತ್ತವೆ. ಇನ್ನು ಅಧ್ಯಾಪಕ ಮಿತ್ರರಿಗೆ ‘ಉತ್ತರಕಾಂಡ’ ಆರಂಭವಾಗುತ್ತದೆ. ನಡುವೆಯೇ ಅಧ್ಯಾಪಕರಿಂದ ‘ಸೋಶಿಯೋ ಇಕೊನೊಮಿಕ್ ಸರ್ವೇ’ ಮತ್ತು ಜಾತಿವಾರು ಜನಗಣತಿ ಆರಂಭವಾಗಲಿದೆ. ಕಾಸರಗೋಡಿನ ಕನ್ನಡ ನೆಲದಲ್ಲಿ ಕನ್ನಡದ ಹೊಸ ಪೀಳಿಗೆಯನ್ನು ಹುಡುಕುತ್ತಾ ಮನೆ - ಮನೆ ಭೇಟಿ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಹೊಸ ಅನುವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅಂತಹ ಒಂದು ಪ್ರಯತ್ನವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ದರ್ಜಿಯನ್ನು ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡ ಸಂದರ್ಭದ ಫೋಟೋ ಒಂದನ್ನು ನಮ್ಮ ಕಡತದಿಂದ ಆರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ವಸಂತ ಕಾಲ ನಮ್ಮ ಮುಂದೆ ಇದೆ...
ಎಲ್ಲ ಚಿಂತೆ - ಚಿಂತನೆಗಳ ನಡುವೆ ನಮ್ಮ ಶುಭಾಶಯಗಳನ್ನೂ ಸ್ವೀಕರಿಸಿ...

23 March 2012

ಚಾಂದ್ರಮಾನ ಯುಗಾದಿಯ ಶುಭಾಶಯಗಳು...


ನಮ್ಮ ಶಾಲೆಯ ಪಡು ಸಭಾಂಗಣದಲ್ಲಿ ಇಂದು ಒಂದು ಆತ್ಮೀಯ ಕಾರ್ಯಕ್ರಮ. ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರ ಪ್ರಾಯೋಜಕತ್ವದಲ್ಲಿ ನಂದನ ಸಂವತ್ಸರದ ಆರಂಭದ ಈ ಸುದಿನದಂದು ಗಣಪತಿ ಪೂಜೆ ನಡೆಯಿತು. ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖಾ ಪ್ರಬಂಧಕ ಶಿವಕುಮಾರ್ ದೀಪ ಬೆಳಗಿಸಿ ‘ಮಹಾಜನ’ ಸಂಸ್ಥೆಯ ಶತಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು.

05 March 2012

ರಾಷ್ಟ್ರಪತಿ ಸ್ಕೌಟ್ ಪ್ರಶಸ್ತಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ೨೦೧೧-೧೨ನೇ ಸಾಲಿನಲ್ಲಿ ನೀಡುವ ‘ರಾಷ್ಟ್ರಪತಿ ಸ್ಕೌಟ್’ ಪ್ರಶಸ್ತಿಗೆ ನಮ್ಮ ಶಾಲೆಯ ಮೂರು ಮಂದಿ ಸ್ಕೌಟ್ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ಹತ್ತನೇ ತರಗತಿಯ ಗುರುವಿನಯಕೃಷ್ಣ. ಕೆ.ಆರ್ ( ಕಡವ ರಾಮಚಂದ್ರ ಭಟ್ ಮತ್ತು ನಮ್ಮ ಶಾಲಾ ಹಿಂದಿ ಶಿಕ್ಷಕಿ ಸಿ.ಎಚ್.ಸರಸ್ವತಿ ಇವರ ಪುತ್ರ), ನಂದನ.ಎ ( ಆರೋಳಿ ಕೃಷ್ಣ ಭಟ್ ಮತ್ತು ಮೂಕಾಂಬಿಕಾ ಇವರ ಪುತ್ರ) ಹಾಗೂ ಪೂರ್ವ ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ( ನಮ್ಮ ಶಾಲಾ ಶಿಕ್ಷಕ ಎಚ್.ಸೂರ್ಯನಾರಾಯಣ ಮತ್ತು ಶ್ಯಾಮಲಾ ಇವರ ಪುತ್ರ). ಇವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು...

07 February 2012

ಶಾಲಾ ವಾರ್ಷಿಕೋತ್ಸವ

ಜೀವನದಲ್ಲಿ ನಿಷ್ಟೆಯಿಂದ,ಕಷ್ಟ ಪಟ್ಟು ನಾವು ಆದರ್ಶಪ್ರಾಯರಾಗಿ ಬೆಳೆಯಬೇಕು. ಸತ್ಯವನ್ನೇ ಉಸಿರಾಗಿಸಿಕೊಂಡು ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನಿಟ್ಟಿನಲ್ಲಿ ಸಮರ್ಪಕ ವಿದ್ಯಾಭ್ಯಾಸವನ್ನು ಪಡೆಯುವುದು ವಿದ್ಯಾರ್ಥಿಗಳ ಹಕ್ಕು, ಅದನ್ನು ಒದಗಿಸುವುದು ಹಿರಿಯರ ಕರ್ತವ್ಯ. ಅಂತಹ ಅನುಪಮ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಕೇರಳ ಸರಕಾರದ ಶಿಕ್ಷಣ ಇಲಾಖೆಯಿಂದ ಕಳೆದ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ಗೋಪಾಲ ಭಟ್ ಚುಕ್ಕಿನಡ್ಕ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಶುಭಹಾರೈಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನ ವಿತರಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಚೇತನ ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಿತು.