15 August 2015

ಸ್ವಾತಂತ್ರ್ಯ ಯಾತ್ರೆ 2015


“ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ  ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ. ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸ್ವಾತಂತ್ರ್ಯ ದಿನ ಕಾರ್ಯಕ್ರಮದ ಆಚರಣೆ ನೆರವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ, ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವು ಶ್ರಮಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಅಭಿಪ್ರಾಯಪಟ್ಟರು. ಅವರು 15.08.2015 ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಾಯಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ವಿನೋದಿನಿ.ಕೆ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

30 July 2015

ಶಾಲೆಯ ಮುಂದೆ ಬೇರಿಕೇಡ್


ನಮ್ಮ ಶಾಲೆಯ ಮುಂದಿನ ರಸ್ತೆ ಉತ್ತಮ ಸ್ಥಿತಿಯಲ್ಲಿದ್ದು, ವಾಹನಗಳು ವೇಗವಾಗಿ ಸಂಚರಿಸುತ್ತಿದ್ದುದರಿಂದ ಶಾಲಾ ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿತ್ತು. ಈ ಸಮಸ್ಯೆಯನ್ನು ಮನಗಂಡ ಸಹೃದಯರು ಶಾಲೆಯ ಮುಂಭಾಗದ ರಸ್ತೆಯಲ್ಲಿ ವಾಹನಗಳ ವೇಗದ ಸಂಚಾರಕ್ಕೆ ತಡೆಯನ್ನು ಒಡ್ಡುವಂತಹ ಬೇರಿಕೇಡ್ ಸ್ಥಾಪಿಸಿದ್ದಾರೆ. ಮೊನ್ನೆ 26ರಂದು ಜರಗಿದ ಈ ಬೇರಿಕೇಡ್ ಉದ್ಘಾಟನಾ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಶ್ರೀ ಕೆ.ಎನ್. ಕೃಷ್ಣ ಭಟ್ ಬೇರಿಕೇಡ್‌ಗಳಿಗೆ ಚಾಲನೆ ನೀಡಿದರು. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು...

30 June 2015

ವಿದಾಯ ಸಮಾರಂಭ


“ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳ ಕಡೆಗೆ ಸಕ್ರಿಯರಾಗಿರಬೇಕಾದ ಕಾಲ. ಸಮಾಜಕ್ಕೆ ನಿವೃತ್ತರಿಂದ ಇನ್ನಷ್ಟು ಕೊಡುಗೆಗಳು ದೊರೆಯಬೇಕಾಗಿದೆ. ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಈ ಇಬ್ಬರು ಅಧ್ಯಾಪಕರು ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಭವಿಷ್ಯದಲ್ಲಿ ನೈಜ ಜೀವನವನ್ನು ಪೂರೈಸಲು ಭಗವಂತನು ಅವರನ್ನು ಹರಸಲಿ” ಎಂದು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ಶಾಲಾ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಮತ್ತು ಹಿರಿಯ ಶಿಕ್ಷಕ ಕೆ.ನಾರಾಯಣ ಭಟ್ ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಉಪಸ್ಥಿತರಿದ್ದರು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕಿ ಕೆ.ವಿನೋದಿನಿ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

26 June 2015

ಮಾದಕ ದ್ರವ್ಯ ವಿರೋಧಿ ದಿನ

ಇಂದು ಮಾದಕ ದ್ರವ್ಯ ವಿರುದ್ಧ ದಿನ. ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲ ತರಗತಿಗಳಲ್ಲಿ ಘೋಷಣಾ ವಾಕ್ಯ ಬರೆಯುವ ಚಳವಳಿ ಹಮ್ಮಿಕೊಳ್ಳಲಾಯಿತು. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ನೇತೃತ್ವ ವಹಿಸಿದ್ದರು. ಇದು ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿನಿಯರು ಜತೆಯಾಗಿ ಸಿದ್ಧಪಡಿಸಿದ ಪೋಸ್ಟರು...

22 June 2015

ರಸ್ತೆ ಸುರಕ್ಷೆಯನ್ನು ಹೆಚ್ಚಿಸಬೇಕು: ರಸ್ತೆ ಸುರಕ್ಷಾ ಸಮಿತಿ


“ಸಾವಿರಾರು ಮಂದಿ ವಿದ್ಯಾರ್ಥಿಗಳು ನಿತ್ಯ ಸಂಚಾರ ನಡೆಸುವ, ರಸ್ತೆಯನ್ನು ದಾಟಲು ಕಷ್ಟಪಡುವ ನೀರ್ಚಾಲು ಶಾಲಾ ವಠಾರದಲ್ಲಿ ರಸ್ತೆ ಸುರಕ್ಷೆಯು ಆತಂಕಕಾರಿಯಾಗಿದೆ. ಕುಂಬಳೆ-ಮುಳ್ಳೇರಿಯ ರಸ್ತೆಯು ಅಭಿವೃದ್ಧಿ ಹೊಂದಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ, ಭೀತಿ ಹುಟ್ಟಿಸುವಂತೆ ಚಲಿಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಗಂಭೀರ ಅಪಾಯವನ್ನೊಡ್ಡುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ರಸ್ತೆ ಸುರಕ್ಷಾ ಕ್ಲಬ್ ಮತ್ತು ಶಾಲಾ ಸಂರಕ್ಷಣಾ ಸಮಿತಿಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಮಾನ್ಯ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ, ಬದಿಯಡ್ಕ ಪೋಲೀಸು ಇಲಾಖೆಯ ರತ್ನಾಕರನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ಶಿಕ್ಷಕ ಶಿವಪ್ರಕಾಶ್ ಎಂ.ಕೆ ವಂದಿಸಿದರು.

ನೀರ್ಚಾಲು ಶಾಲೆಯ ಎದುರು ಭಾಗದ ರಸ್ತೆಯಲ್ಲಿ ಜೀಬ್ರಾ ಗುರುತು, ರಸ್ತೆ ಬಾರಿಕೇಡ್‌ಗಳನ್ನು ಅಳವಡಿಸುವುದು, ಶಾಲಾ ವಠಾರ ಎಂಬ ಸೂಚನಾ ಫಲಕದ ಸ್ಥಾಪನೆ ಮತ್ತು ಬಸ್ ಬೇ ನಿರ್ಮಾಣ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾರ್ಯಗತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

20 June 2015

ಸ್ಥಳ ಸಂದರ್ಶನ

 
ನಮ್ಮ ಶಾಲೆಯ ವಿದ್ಯಾರ್ಥಿಗಳು ಸ್ಥಳ ಸಂದರ್ಶನದ ಭಾಗವಾಗಿ ನಿನ್ನೆ, 19.06.2015 ಶುಕ್ರವಾರ ಖಂಡಿಗೆ ಬಳಿಯ ಕಾಡನ್ನು ವೀಕ್ಷಿಸಿದರು.

09 June 2015

ಕವಿ ಕಯ್ಯಾರರಿಗೆ ಮಾತೃಶಾಲೆಯ ಅಭಿನಂದನೆ


ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈಯವರು ನೂರು ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ನಿನ್ನೆ 08.06.2015 ಸೋಮವಾರ ಅವರು ಕಲಿತ ನಮ್ಮ ಮಹಾಜನ ಸಂಸ್ಕೃತ ಕಾಲೇಜಿನ ಪರವಾಗಿ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಶಿಕ್ಷಕರಾದ ವಾಣಿ.ಪಿಎಸ್, ಶೈಲಜಾ.ಬಿ, ಗೋವಿಂದ ಶರ್ಮ.ಕೆ, ತಲೆಂಗಳ ಕೃಷ್ಣಪ್ರಸಾದ ಉಪಸ್ಥಿತರಿದ್ದರು.

05 June 2015

ವಿಶ್ವಪರಿಸರ ದಿನಾಚರಣೆ


“ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಭೂಮಾಲಿನ್ಯದಿಂದಾಗಿ ಆಮ್ಲ ಮಳೆಯಂತಹ ಅಪಾಯಕಾರಿ ಪರಿಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ. ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ ಸಾಧ್ಯ. ಅಂತಹ ಸಸ್ಯಗಳಿಗೆ ಪರಿಸರವು ಮಾರಕವಾಗಿ ಪರಿಣಮಿಸುತ್ತಿರುವುದರಿಂದ ನಾವು ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ತ್ಯಾಜ್ಯದ ಸಮರ್ಪಕ ವಿಲೇವಾರಿ, ತ್ಯಾಜ್ಯದ ಮರುಬಳಕೆ, ಮನೆಯ ಸುತ್ತ ಮುತ್ತ ಗಿಡ-ಮರ ಬೆಳೆಸುವುದು, ಸಾವಯವ ಕೃಷಿಗೆ ಉತ್ತೇಜನ, ರಾಸಾಯನಿಕಗಳ ಮಿತ ಬಳಕೆ, ನೈಸರ್ಗಿಕ ಮೂಲಗಳ ಸದ್ಬಳಕೆ, ತ್ಯಾಜ್ಯದ ಉತ್ಪಾದನೆಯನ್ನು ಆದಷ್ಟು ನಿಯಂತ್ರಣದಲ್ಲಿಡುವುದರಿಂದ ಸಾಕಷ್ಟು ಮಟ್ಟಿಗೆ ಭೂಮಾಲಿನ್ಯವನ್ನು ತಪ್ಪಿಸಬಹುದು. ಜೊತೆಗೆ ದೊರೆತ ಆಹಾರವನ್ನು ಯುಕ್ತಿಯಿಂದ ಉಪಯೋಗಿಸಬೇಕಾಗಿದೆ, ಮುಂದಿನ ತಲೆಮಾರಿನ ಜೀವಿಗಳಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಶಿಕ್ಷಕರಾದ ಕೆ.ವಿನೋದಿನಿ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸೂರ್ಯನಾರಾಯಣ. ಎಂ ವಂದಿಸಿದರು.

01 June 2015

ಪ್ರವೇಶೋತ್ಸವ 2015


“ಹೊಸ ಕನಸುಗಳನ್ನು ಕಟ್ಟಿಕೊಂಡು ಶಾಲೆಗೆ ತಲಪುವ ವಿದ್ಯಾರ್ಥಿಗಳಿಗೆ ಶಿಕ್ಷಣವು ಉತ್ತಮ ಭವಿಷ್ಯವನ್ನು ಕಟ್ಟಿಕೊಡಲಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಉತ್ತಮವಾಗಿ ಕಲಿಯುವುದು ಅನಿವಾರ್ಯ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ, ಬಾಳು ಹಸನಾಗಲಿ" ಎಂದು ನಮ್ಮ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಶಿವಪ್ರಸಾದ್ ಹೊಸಮನೆ, ನಿವೃತ್ತಿ ಹೊಂದುತ್ತಿರುವ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

20 January 2015

‘ರನ್ ಕೇರಳ ರನ್’


“ಆಧುನಿಕ ಜಗತ್ತಿನಲ್ಲಿ ಶಾರೀರಿಕ ವ್ಯಾಯಾಮ ಕಡಿಮೆಯಾಗುತ್ತಿದ್ದು, ಇದು ಆರೋಗ್ಯವನ್ನು ವ್ಯತಿರಿಕ್ತವಾಗಿ ಬಾಧಿಸುತ್ತಿದೆ. ಅರೋಗ್ಯಕರ ಸಮಾಜದ ನಿರ್ಮಾಣದಲ್ಲಿ ದೈಹಿಕ ಕ್ರೀಡೆಗಳ ಮಹತ್ವವೂ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಕೇರಳ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಈ ತಿಂಗಳ ಅಂತ್ಯಕ್ಕೆ ಕೇರಳದಲ್ಲಿ ಜರಗುವ ರಾಷ್ಟ್ರೀಯ ಗೇಮ್ಸ್ ಯಶಸ್ವಿಯಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ರನ್ ಕೇರಳ ರನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ.ಸೂರ್ಯನಾರಾಯಣ ಪ್ರತಿಜ್ಞೆಯನ್ನು ಬೋಧಿಸಿದರು. ಶಾಲಾ ಹಿರಿಯ ಶಿಕ್ಷಕಿ ಎ.ಭುವನೇಶ್ವರಿ ಸ್ವಾಗತಿಸಿದರು, ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು.

12 December 2014

ನೀರಿನ ಶುದ್ಧೀಕರಣ ಘಟಕ ಕೊಡುಗೆ


ಟೀಮ್ ನೀರ್ಚಾಲು ತಂಡದ ಪರವಾಗಿ ತಂಡದ ಪದಾಧಿಕಾರಿಗಳಾದ ಸತ್ಯನಾರಾಯಣ, ಪ್ರಶಾಂತ ಪೈ ಮತ್ತು ರವಿಕುಮಾರ್ ನಮ್ಮ ಶಾಲೆಗೆ 08.12.2014 ಸೋಮವಾರ ನೀರಿನ ಶುದ್ಧೀಕರಣ ಘಟಕವನ್ನು ಮತ್ತು ಕ್ರೀಡೆಯಲ್ಲಿ ಪ್ರತಿಭಾಶಾಲಿಗಳಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿದರು. ಶಾಲೆಯ ಪರವಾಗಿ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವೀಕರಿಸಿದರು. ಧನ್ಯವಾದಗಳು...

ಸಾಕ್ಷರ 2014 - ಸಮಾರೋಪ


``ಅಧ್ಯಾಪಕರು ಹೇಳಿದ ವಿಷಯಗಳನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಉತ್ತಮ ಪ್ರಜೆಯಾಗಿ ಬಾಳಿ" ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ಸೀತಂಗೋಳಿ ನುಡಿದರು. ಅವರು ನಮ್ಮ ಶಾಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜರಗುತ್ತಿದ್ದ ಸಾಕ್ಷರ ತರಗತಿಯ ಸಮಾರೋಪ ಸಮಾರಂಭವನ್ನು ಕಳೆದ ವಾರ ನಿರ್ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಕ್ಕಳು ತಮ್ಮ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ವೆಂಕಟರಾಜ ಸಿ. ಯಚ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶ್ರೀಮತಿ ಮೀನಾಕ್ಷಿ ಯಚ್.ಯನ್ ಸ್ವಾಗತಿಸಿ, ಶ್ರೀಮತಿ ಶೈಲಜಾ. ಎ ಟೀಚರ್ ವಂದಿಸಿದರು. ಶ್ರೀಯುತ ಶಿವಕುಮಾರ. ಯಚ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸ್ವಾಗತ ರೈ. ಬಿ - ಜಿಲ್ಲಾ ಮಟ್ಟಕ್ಕೆ ಆಯ್ಕೆ.


ಬೆಳ್ಳೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಇಂಗ್ಲಿಷ್ ಉಪನ್ಯಾಸ, ಇಂಗ್ಲಿಷ್ ಕಂಠಪಾಠ ಮತ್ತು ಕನ್ನಡ ಭಾಷಣ ಸ್ಪರ್ಧೆಗಳಲ್ಲಿ ‘ಎ’ಗ್ರೇಡ್ ಮತ್ತು ಪ್ರಥಮ ಸ್ಥಾನ ಪಡೆದ ಸ್ವಾಗತ ರೈ. ಬಿ. ಚೆರ್ವತ್ತೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾಳೆ. ಈಕೆ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಶಿಕ್ಷಕ ದಂಪತಿಗಳಾದ ಸೀತಾಂಗೋಳಿ ನಿವಾಸಿ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ.

19 November 2014

ವೃತ್ತಿ ಪರಿಚಯ ಮೇಳ - ಬಾಗಿ.ಎಂ ರಾಜ್ಯ ಮಟ್ಟಕ್ಕೆ ಆಯ್ಕೆ

ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಬಾಗಿ.ಎಂ.17.11.2014 ಸೋಮವಾರ ನಾಯಮ್ಮಾರಮೂಲೆಯಲ್ಲಿ ಜರಗಿದ 2014-15 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಬಿದಿರು ಉತ್ಪನ್ನಗಳ ತಯಾರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾಳೆ. ಅವಳಿಗೆ ಶುಭಾಶಯಗಳು...

ವಿಜ್ಞಾನ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


17.11.2014 ಸೋಮವಾರ ನಾಯಮ್ಮಾರಮೂಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳದಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ. ಬಿ (ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ) ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕೆರೆ - ಭಾರತಿ. ಎಂ.ಜಿ ಇವರ ಪುತ್ರಿ) ಪ್ರದರ್ಶಿಸಿದ ಸ್ಥಿರ ಮಾದರಿಯು ‘ಎ’ ಗ್ರೇಡ್ ಸಹಿತ ಪ್ರಥಮ ಬಹುಮಾನ ಗಳಿಸಿ ನವೆಂಬರ್ 26ರಿಂದ 30ರ ತನಕ ಮಲಪ್ಪುರಂ ಜಿಲ್ಲೆಯ ತಿರೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ ಸ್ಪರ್ಧೆಗೆ ಆಯ್ಕೆಯಾಗಿದೆ. ಬಹುಮಾನ ವಿಜೇತರಿಗೆ ಶುಭಾಶಯಗಳು...

14 November 2014

ರಕ್ಷಕರ ಸಮ್ಮೇಳನ 2014


“ವಿದ್ಯಾರ್ಥಿಗಳ ಪ್ರಗತಿಗೆ ರಕ್ಷಕರು ಮತ್ತು ಶಿಕ್ಷಕರ ಹೊಂದಾಣಿಕೆ ಅಗತ್ಯ. ಸೌಹಾರ್ದಯುತ ವಾತಾವರಣವಿರುವ ಮನೆಗಳಲ್ಲಿ ಬೆಳೆದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳಗುತ್ತಾರೆ. ಆ ರೀತಿಯ ಸುಸಂಸ್ಕೃತ ವಾತಾವರಣವಿರುವ ಮನೆ ಮನಗಳನ್ನು ರೂಪಿಸಲು ನಾವು ಪ್ರಯತ್ನಿಸಬೇಕು ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಭಿಪ್ರಾಯಪಟ್ಟರು. ಅವರು ಸರ್ವಶಿಕ್ಷಾ ಅಭಿಯಾನದ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಜರಗಿದ ರಕ್ಷಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯ  ಶಿಕ್ಷಕಿ ಎ.ಭುವನೇಶ್ವರಿಯವರು ಮಕ್ಕಳಲ್ಲಿ ವಿನಯ ವಿಧೇಯತೆಗಳನ್ನು ಬೆಳೆಸುವಲ್ಲಿ ಮಾತೆಯರ ಪಾತ್ರವು ಮಹತ್ತರವಾದುದು. ಎಲ್ಲ ಮಾತೆಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ಎಚ್.ಸೂರ್ಯನಾರಾಯಣ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶೈಲಜಾ.ಎ ಮತ್ತು ವೇಣುಗೋಪಾಲಕೃಷ್ಣ.ಇ ರಕ್ಷಕರಿಗೆ ತರಗತಿ ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಮೀನಾಕ್ಷಿ.ಎಚ್.ಎನ್ ಸ್ವಾಗತಿಸಿ ಮಾಲತಿ.ಪಿ ವಂದಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಬಿಡುಗಡೆಗೊಳಿಸಿದ ಡೈರಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

13 November 2014

ಅಧ್ಯಾಪಕ ಹುದ್ದೆಗೆ ಸಂದರ್ಶನ


ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ನ್ಯಾಚುರಲ್ ಸಯನ್ಸ್(ವಿಜ್ಞಾನ ಪದವಿ, ಬಿ.ಎಡ್) ಮತ್ತು ಹೈಯರ್ ಸೆಕೆಂಡರಿ ವಿಭಾಗದ ರಸಾಯನ ಶಾಸ್ತ್ರ (ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿ, ಬಿ.ಎಡ್ ಮತ್ತು ಸೆಟ್ ಅಥವಾ ನೆಟ್) ಶಿಕ್ಷಕರ ಆಯ್ಕೆಗಾಗಿ 17.11.2014 ಸೋಮವಾರ ಬೆಳಗ್ಗೆ 10.30ಕ್ಕೆ ಶಾಲೆಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಸಕಾಲದಲ್ಲಿ ಹಾಜರಿರಬೇಕಾಗಿ ವಿನಂತಿ. ಹೆಚ್ಚಿನ ವಿವರಗಳಿಗಾಗಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ (9446283131, 9846575909) ಇವರನ್ನು ಸಂಪರ್ಕಿಸಬಹುದು.

08 November 2014

ನಮ್ಮ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್

ದಿನಾಂಕ 05.11.2014 ಬುಧವಾರದಿಂದ 07.11.2014 ಶುಕ್ರವಾರದ ತನಕ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ವಿಭಾಗಗಳಲ್ಲಿ ಅತ್ಯಧಿಕ ಅಂಕ ಸಹಿತ ಚಾಂಪಿಯನ್‌ಶಿಪ್ ಮತ್ತು ಒಟ್ಟು 14 ಚಿನ್ನ, 16 ಬೆಳ್ಳಿ, 7 ಕಂಚು ಪಡೆದು ಅತ್ಯಧಿಕ 132 ಅಂಕ ಸಂಪಾದಿಸಿ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ನೇತೃತ್ವದ ನಮ್ಮ ಶಾಲೆಯ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೆ ನಮ್ಮ ಶುಭಾಶಯಗಳು...

29 October 2014

ಕಬಡ್ಡಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


    ನವೆಂಬರ್ 5, 2014 ರಂದು ಪಾಲಕ್ಕಾಡಿನಲ್ಲಿ ಜರಗಲಿರುವ ಜ್ಯೂನಿಯರ್ ಹುಡುಗಿಯರ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಯಕ್ಷಿತಾ ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯಗಳು...

08 October 2014

ಹಿರಿಯ ಶಿಕ್ಷಕ ಶ್ರೀ ಸಿ.ಎಚ್ ಸುಬ್ರಹ್ಮಣ್ಯ ಭಟ್ ವಿಧಿವಶ

ನಮ್ಮ ಶಾಲೆಯ ಹಿರಿಯ ಅಧ್ಯಾಪಕ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ನಿವಾಸಿ ಚಾಲತ್ತಡ್ಕ ಸಿ.ಎಚ್. ಸುಬ್ರಹ್ಮಣ್ಯ ಭಟ್(52) ಇಂದು 08.10.2014 ಬುಧವಾರ ಮುಂಜಾನೆ ನಿಧನರಾದರು. ಮೃತರು ಕಳೆದ 26 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರಾಗಿ, ಪ್ರೌಢಶಾಲಾ ಗಣಿತ ಅಧ್ಯಾಪಕರಾಗಿ, ಮತ್ತು ಕೆಲ ಕಾಲ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ನಿ ಉಮಾದೇವಿ, ಮಕ್ಕಳಾದ ಮೇಘಶ್ರೀ, ಶ್ರೀವತ್ಸ ಮತ್ತು ಅಪಾರ ಬಂಧು ಮಿತ್ರರು, ಶಿಷ್ಯವರ್ಗವನ್ನು ಅಗಲಿದ್ದಾರೆ. ಅಕಾಲಿಕ ನಿಧನದ ಪ್ರಯುಕ್ತ ಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಶಾಲೆಗೆ ರಜೆ ಸಾರಲಾಯಿತು. ಕಂಬನಿ....