Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

21 October 2013

ಶಾಲಾ ಕರಕುಶಲ ಮೇಳ - 2013

ವಿದ್ಯಾರ್ಥಿಗಳ ಕರಕುಶಲ ಸಾಮರ್ಥ್ಯ, ವೈಜ್ಞಾನಿಕ ಬೆಳವಣಿಗೆಗಳನ್ನು ಪರೀಕ್ಷಿಸಲು ಮೊನ್ನೆ ಅಕ್ಟೋಬರ್ 18ರಂದು ಶಾಲಾ ಮಟ್ಟದ ಕರಕುಶಲ ಮೆಳವನ್ನು ಆಯೋಜಿಸಿದ್ದೆವು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಅಕ್ಟೋಬರ್ 30 ಮತ್ತು 31ರಂದು ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆಯಲ್ಲಿ ಜರಗಲಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು...

ಶತಮಾನದ ಸಂಭ್ರಮಕ್ಕೆ ತಲೆ ಎತ್ತುತ್ತಿದೆ ಹೊಸ ಕಟ್ಟಡ...

                                   
 ಕನ್ನಡ ಕರಾವಳಿಯ ನಾಡಿಗೆ ಸುಸಂಸ್ಕೃತ ವಿದ್ವಾಂಸ ಪರಂಪರೆಯ ಶ್ರೇಷ್ಟ ಸಾಂಸ್ಕೃತಿಕ
ಸಾಮಾಜಿಕನಾಗರಿಕ ಪರಂಪರೆಯನ್ನೊದಗಿಸಿದ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಈಗ ಶತಮಾನದ ಸಂಭ್ರಮದಲ್ಲಿದೆ. ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಲೆಗೆ ಬೆನ್ನೆಲುಬಾಗಿರುವ ಈ ವಿದ್ಯಾಸಂಸ್ಥೆ ಸಮಗ್ರ ಕರ್ನಾಟಕದಲ್ಲೇ ಕನ್ನಡತನದ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾಗಿ ಕಾಸರಗೋಡಿನ ಹೆಮ್ಮೆಯ ಕೋಡು’ ಆಗಿ ಮೆರೆಯುತ್ತಿದೆ. ಪೆರಡಾಲ ದೇವಸ್ಥಾನದಲ್ಲಿ ಪ್ರಾರಂಭಗೊಂಡು 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತು. ಆ ಮೂಲಕ ಕೇವಲ ಒಂದು ವಿದ್ಯಾಸಂಸ್ಥೆಯಾಗದೇ ಸುಸಂಸ್ಕೃತ ಪಂಡಿತ ಪರಂಪರೆಯನ್ನೇ ಸಮಾಜಕ್ಕೆ ಧಾರೆ ಎರೆಯಿತು. ಹೀಗೆ ಸತತ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅದು ಕುಂಬಳೆ ಸೀಮೆಯ ಸಾಂಸ್ಕೃತಿಕಸಾಮಾಜಿಕ ಇತಿಹಾಸದ ಭಾಗವಾಗಿ ಬೆಳೆದಿದೆ.
                ಪ್ರಸ್ತುತ ಶತಮಾನದ ಸಂಭ್ರಮದಲ್ಲಿ ನೀರ್ಚಾಲು ಶಾಲೆಯ ಪ್ರಾಚೀನ ನಾಲ್ಕಂಕಣದ ಕಟ್ಟಡಗಳನ್ನು ಕೆಡವಿಆಧುನಿಕ ಶೈಕ್ಷಣಿಕ ಪರಿಕಲ್ಪನೆಗೆ ಅನುಸಾರವಾದ ಸುಸಜ್ಜಿತ ಕಟ್ಟಡ ಶೃಂಖಲೆಯನ್ನು ನಿರ್ಮಿಸಿ ಮುಂದಿನ ತಲೆಮಾರಿನ ತನಕ ಸಂಸ್ಥೆಯನ್ನು ಬೆಳೆಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ಮೊದಲ ಹಂತವಾಗಿ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುವ ಈ ಕಟ್ಟಡಕ್ಕೆ 2 ಕೋಟಿ ರೂಪಾಯಿಗಳ ವೆಚ್ಚ ಅಂದಾಜಿಸಲಾಗಿದೆ.
                ಇದರಲ್ಲಿ ತರಗತಿ ಕೊಠಡಿಗಳಿಗಾಗಿ ಒಂದು ಕೋಟಿ ರೂಪಾಯಿಸುಸಜ್ಜಿತ ಸಭಾಂಗಣಕ್ಕೆ 50 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ. ಒಂದು ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಈ ಸಭಾಂಗಣವನ್ನು ಅಗತ್ಯ ಸಂದರ್ಭಗಳಲ್ಲಿ ತರಗತಿ ಕೊಠಡಿಯಾಗಿ ಪರಿವರ್ತಿಸಲು ಸೂಕ್ತವಾಗುವಂತೆ ರೂಪಿಸಲಾಗುತ್ತಿದೆ. ನೂತನ ಕಟ್ಟಡಕ್ಕೆ ಪೂರ್ತಿಯಾಗಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ಕಾರ್ಯಕ್ಕೆಂದೇ 15 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ. ಈ ಮೂಲಕ ಸಂಪೂರ್ಣ ಸೌರವಿದ್ಯುತ್ ಅಳವಡಿಕೆಯಾಗುವ ಪ್ರಥಮ ಸಂಸ್ಥೆಯಾಗಿ ಈ ವಿದ್ಯಾಲಯವು ಕಾಸರಗೋಡು ಜಿಲ್ಲೆಯಲ್ಲಿ ಪರಿಗಣಿತವಾಗಲಿದೆ. ಇಂಟರ್ ಲಾಕಿಂಗ್ ಮತ್ತು ಹೊರಾಂಗಣ ವಿನ್ಯಾಸಕ್ಕಾಗಿ 10 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.
                ದಶಂಬರ ತಿಂಗಳೊಳಗೆ ಈ ಕಾಮಗಾರಿಗಳನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿರುವ ಹಳೆವಿದ್ಯಾರ್ಥಿಗಳಿಂದ ಮತ್ತು ದಾನಿಗಳಿಂದ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದೆ. ವಿವಿಧ ಹುದ್ದೆಗಳಲ್ಲಿರುವ ಇಲ್ಲಿನ ಹಳೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿದ ಶೈಕ್ಷಣಿಕ ಸಂಸ್ಥೆಗಾಗಿವಿದ್ಯಾರ್ಥಿ ಜೀವನದ ಮಧುರ ಸ್ಮರಣೆಯೊಂದಿಗೆ ಆರ್ಥಿಕ ಸಹಾಯವನ್ನು ಒದಗಿಸಿ ಪ್ರೋತ್ಸಾಹಿಸಬೇಕೆಂದು ಶಾಲಾ ಆಡಳಿತ ಮಂಡಳಿ ವಿನಂತಿಸಿದೆ.
                ಶಾಲೆಯ ಶತಮಾನೋತ್ಸವ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ಶಾಲಾ ಬ್ಲಾಗ್ http://mschsnirchal.blogspot.in/ ಮತ್ತು ವೆಬ್‌ಸೈಟ್http://mahajanaschools.com/ ಗಳನ್ನು ಸಂದರ್ಶಿಸಬಹುದು. ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಹಾಯಧನ ನೀಡಲು ಆಸಕ್ತಿ ಹೊಂದಿದ ಮಹಾಜನರು ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖೆಯ SB ಖಾತೆ ಸಂಖ್ಯೆ 5322500100957501, IFSC: KARB0000532 ಖಾತೆಗೆ ಜಮಾ ಮಾಡಬಹುದಾಗಿದೆ. ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ಮುಂದಿನ ಹಂತದ ಸಭೆಯನ್ನು ಅಕ್ಟೋಬರ್ 26 ಶನಿವಾರ ಬೆಳಗ್ಗೆ 10 ಗಂಟೆಗೆ ಶಾಲಾ ಪರಿಸರದಲ್ಲಿ ಕರೆಯಲಾಗಿದೆ. ಹಿತೈಷಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಿನಂತಿಸಿದ್ದಾರೆ.

05 October 2013

ಬಹುಮಾನದ ಮೊತ್ತವನ್ನು ಶತಮಾನೋತ್ಸವಕ್ಕೆ ನೀಡಿದ ಶ್ರೀಶ.ಕೆಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ 2013-14 ಅಧ್ಯಯನ ವರ್ಷದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾಸರಗೋಡು ಜಿಲ್ಲಾ ಮಟ್ಟದ ವಾಚನ ಪರೀಕ್ಷೆಯಲ್ಲಿ ಮತ್ತು ವನ್ಯ ಜೀವಿ ಸಪ್ತಾಹದ ಅಂಗವಾಗಿ ಕೇರಳ ಅರಣ್ಯ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀಶ.ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈತ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಸುಬ್ರಹ್ಮಣ್ಯ ಭಟ್ ಮತ್ತು ನಮ್ಮ ಶಾಲೆಯ ಶಿಕ್ಷಕಿ ಶೈಲಜಾ.ಬಿ ಇವರ ಪುತ್ರ. ಒಟ್ಟು ಬಹುಮಾನದ ಮೊತ್ತ ಎಂಟುಸಾವಿರದ ಐನೂರು ರೂಪಾಯಿಯನ್ನು ಶಾಲಾ ಶತಮಾನೋತ್ಸವ ಕಾರ್ಯಕ್ರಮಗಳಿಗೆ ನೀಡಿ ಈತ ಸಮಾಜಕ್ಕೆ ಮಾದರಿಯಾಗಿದ್ದಾನೆ. ಶುಭಾಶಯಗಳು...

03 October 2013

ಜಿಲ್ಲಾ ಮಟ್ಟದ ಜಲವರ್ಣಚಿತ್ರ ರಚನೆ - ನಮ್ಮ ಶಾಲೆಗೆ ಬಹುಮಾನ

ಕೇರಳ ರಾಜ್ಯ ಸಿವಿಲ್ ಸಪ್ಲೈಸ್ ಕಾರ್ಪೊರೇಷನ್ (ಸಪ್ಲೈಕೋ) ವತಿಯಿಂದ ದಿನಾಂಕ 28.09.2013 ಶನಿವಾರ ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಜಲವರ್ಣ ಚಿತ್ರರಚನಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಗೌತಮ್. ಒ ಪ್ರಥಮ ಸ್ಥಾನ ಹಾಗೂ ಆದರ್ಶ.ಎಚ್.ಎ ದ್ವಿತೀಯ ಸ್ಥಾನ ಗಳಿಸಿ ಎರ್ನಾಕುಳಂನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ. ಶುಭಾಶಯಗಳು...

01 October 2013

ಅಕ್ಟೋಬರ್ 6ರಂದು ಶತಮಾನೋತ್ಸವ ಸಮಿತಿ ಸಭೆ


ನಮ್ಮ ಶಾಲೆಗಳ ಶತಮಾನೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿವೆ. ಹಳೆಯ ನಾಲ್ಕು ಸೂತ್ರದ ಕಟ್ಟಡವಿದ್ದ ಜಾಗದಲ್ಲಿ ಪ್ರಥಮ ಹಂತವಾಗಿ ಹನ್ನೊಂದು ತರಗತಿ ಕೊಠಡಿಯನ್ನು ಒಳಗೊಂಡ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಬಗ್ಗೆ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಗೆ ರೂಪುರೇಷೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಶತಮಾನೋತ್ಸವದ ವಿವಿಧ ಸಮಿತಿಗಳು, ಪೂರ್ವ ವಿದ್ಯಾರ್ಥಿಗಳು ಮತ್ತು ಆಸಕ್ತರ ಸಭೆಯನ್ನು 06.10.2013 ಭಾನುವಾರ ಅಪರಾಹ್ನ 3 ಗಂಟೆಗೆ ಕರೆಯಲಾಗಿದೆ. ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ.

ಜಿಲ್ಲಾ ಮಟ್ಟದ ವಾರ್ತಾ ವಾಚನ – ವಿನಯಾ.ಕೆ ಪ್ರಥಮ


ಕಾಸರಗೋಡು ಜಿಲ್ಲಾ ಸಮಾಜ ವಿಜ್ಞಾನ ಸಂಘವು ಪುದಿಯಕಂಡಂ ಸರಕಾರಿ ಹಿರಿಯ ಬುನಾದಿ ಶಾಲೆಯಲ್ಲಿ 25.09.2013 ರಂದು ಏರ್ಪಡಿಸಿದ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ವಾರ್ತಾ ವಾಚನ (ನ್ಯೂಸ್ ರೀಡಿಂಗ್) ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವಿನಯಾ.ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಗಣರಾಜ ಭಟ್ ಪೆರ್ವ ಮತ್ತು ಶಕುಂತಳಾ ಇವರ ಪುತ್ರಿ.