Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

About us

ಗಡಿನಾಡು ಕಾಸರಗೋಡಿನ ಹೆಮ್ಮೆಯ ವಿದ್ಯಾಸಂಸ್ಥೆಯಾದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ, ನೀರ್ಚಾಲು 1911 ರಲ್ಲಿ ಶ್ರೀ ಖಂಡಿಗೆ ಶಂಭಟ್ಟ ಮತ್ತು ಈಶ್ವರ ಭಟ್ಟರ ನೇತೃತ್ವದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಸನ್ನಿಧಿಯಲ್ಲಿ ಸಂಸ್ಕೃತ ಪ್ರಾಥಮಿಕ ಶಾಲೆಯಾಗಿ ತೆರೆದುಕೊಂಡಿತು. 1915 ರಲ್ಲಿ ನೀರ್ಚಾಲಿನ ಸುಂದರ ಪ್ರದೇಶಕ್ಕೆ ಶಾಲೆಯನ್ನು ವರ್ಗಾಯಿಸಲಾಯಿತು.

1920 ನೇ ಇಸವಿಯಲ್ಲಿ ಮದರಾಸು ವಿಶ್ವವಿದ್ಯಾನಿಲಯವು ಮಹಾಜನ ಪಾಠಶಾಲೆಯನ್ನು ಪ್ರಾಚ್ಯಕಲಾಶಾಲೆಯನ್ನಾಗಿ ಅಂಗೀಕರಿಸಿತು. ಹಾಗೂ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ತರಗತಿ ನಡೆಸಲು ಅನುಮತಿ ನೀಡಿತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಂಸ್ಕೃತ ಪಾಠಶಾಲೆಯ ಬೆಳವಣಿಗೆಯು ಕುಂಠಿತವಾಯಿತು. ವಿದ್ಯಾಭಿಮಾನಿಗಳ ಅಪೇಕ್ಷೆಯ ಮೇರೆಗೆ ವಿಜ್ಞಾನ, ಗಣಿತ, ಆಂಗ್ಲ ಭಾಷೆಗಳಿಗೆ ಪ್ರಾಧಾನ್ಯವನ್ನು ನೀಡುತ್ತಾ ೧೯೫೨ರಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ತೆರೆಯಲಾಯಿತು.

ಕೇರಳ ಸರಕಾರದ ಆದೇಶದಂತೆ ಸಂಸ್ಕೃತ ಪ್ರಾಥಮಿಕ ಶಾಲೆಯು ೧೯೫೭ರಲ್ಲಿ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾವಣೆಗೊಂಡಿತು. ಹೀಗೆ ನೀರ್ಚಾಲಿನ ವಿಶಾಲ ಪರಿಸರದಲ್ಲಿ ಒಂದರಿಂದ ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವು ಜನಸಾಮಾನ್ಯರಿಗೂ ದೊರೆಯುವಂತಾದವು. ಶ್ರೀ ಖಂಡಿಗೆ ಶಾಮ ಭಟ್ಟರು ತಾ. 27.08.1973 ರಿಂದ 26.01.2011 ರ ತನಕ ಸಂಸ್ಥೆಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 27.01.2011 ರಿಂದ ಶ್ರೀ ಜಯದೇವ ಖಂಡಿಗೆ ವ್ಯವಸ್ಥಾಪಕರಾಗಿ ಸಕ್ರಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಈ ಶಾಲೆಯ ರಜತ, ಸುವರ್ಣ ಮತ್ತು ವಜ್ರ ಮಹೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.

ಪ್ರಸ್ತುತ 700 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಅಧ್ಯಯನಕ್ಕೆ ಅಗತ್ಯವಾದ ತರಗತಿ ಕೋಣೆಗಳು, ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಎಲ್.ಸಿ.ಡಿ. ಪ್ರೊಜೆಕ್ಟರ್ ಮತ್ತು 22 ಕಂಪ್ಯೂಟರ್‌ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ. ಸಂಸ್ಥೆಯಲ್ಲಿ ಸಂಸ್ಕೃತ, ಕನ್ನಡ, ಇಂಗ್ಲೀಷ್ ಇತ್ಯಾದಿ ಭಾಷಾ ಸಾಹಿತ್ಯಗಳನ್ನೊಳಗೊಂಡ ಸುಮಾರು 10,000 ಕ್ಕೂ ಮಿಕ್ಕು ಪುಸ್ತಕಗಳುಳ್ಳ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳಿವೆ.

ಹಿರಿಯ ಮಹಾನುಭಾವರಾದ ಶ್ರೀ ದರ್ಭೆ ನಾರಾಯಣ ಶಾಸ್ತ್ರಿ, ಶ್ರೀ ಚಾಂಗುಳಿ ಸುಬ್ರಾಯ ಶಾಸ್ತ್ರಿ, ಶ್ರೀ ಪೆರಡಾಲ ಕೃಷ್ಣಯ್ಯ, ಶ್ರೀ ಕಾಕುಂಜೆ ಕೃಷ್ಣ ಭಟ್ಟ ಮೊದಲಾದವರು ಇಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಭೀಷ್ಮ ಡಾ ಶೇಣಿ ಗೋಪಾಲಕೃಷ್ಣ ಭಟ್, ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರಾದ ಡಾ ಕಯ್ಯಾರ ಕಿಞ್ಞಣ್ಣ ರೈ, ತ್ರಿಭಾಷಾ ಕವಿ ಡಾ ವೆಂಕಟರಾಜ ಪುಣಿಂಚಿತ್ತಾಯ, ಸಾಹಿತಿ ಶ್ರೀ ರಾ. ಮೊ. ವಿಶ್ವಾಮಿತ್ರ, ಕವಿ ಶ್ರೀ ಕೆ. ವಿ. ತಿರುಮಲೇಶ್ ಮುಂತಾದವರು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದಿದ್ದಾರೆ.