Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

12 December 2014

ನೀರಿನ ಶುದ್ಧೀಕರಣ ಘಟಕ ಕೊಡುಗೆ


ಟೀಮ್ ನೀರ್ಚಾಲು ತಂಡದ ಪರವಾಗಿ ತಂಡದ ಪದಾಧಿಕಾರಿಗಳಾದ ಸತ್ಯನಾರಾಯಣ, ಪ್ರಶಾಂತ ಪೈ ಮತ್ತು ರವಿಕುಮಾರ್ ನಮ್ಮ ಶಾಲೆಗೆ 08.12.2014 ಸೋಮವಾರ ನೀರಿನ ಶುದ್ಧೀಕರಣ ಘಟಕವನ್ನು ಮತ್ತು ಕ್ರೀಡೆಯಲ್ಲಿ ಪ್ರತಿಭಾಶಾಲಿಗಳಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿದರು. ಶಾಲೆಯ ಪರವಾಗಿ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವೀಕರಿಸಿದರು. ಧನ್ಯವಾದಗಳು...

ಸಾಕ್ಷರ 2014 - ಸಮಾರೋಪ


``ಅಧ್ಯಾಪಕರು ಹೇಳಿದ ವಿಷಯಗಳನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಉತ್ತಮ ಪ್ರಜೆಯಾಗಿ ಬಾಳಿ" ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ಸೀತಂಗೋಳಿ ನುಡಿದರು. ಅವರು ನಮ್ಮ ಶಾಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜರಗುತ್ತಿದ್ದ ಸಾಕ್ಷರ ತರಗತಿಯ ಸಮಾರೋಪ ಸಮಾರಂಭವನ್ನು ಕಳೆದ ವಾರ ನಿರ್ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಕ್ಕಳು ತಮ್ಮ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ವೆಂಕಟರಾಜ ಸಿ. ಯಚ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶ್ರೀಮತಿ ಮೀನಾಕ್ಷಿ ಯಚ್.ಯನ್ ಸ್ವಾಗತಿಸಿ, ಶ್ರೀಮತಿ ಶೈಲಜಾ. ಎ ಟೀಚರ್ ವಂದಿಸಿದರು. ಶ್ರೀಯುತ ಶಿವಕುಮಾರ. ಯಚ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸ್ವಾಗತ ರೈ. ಬಿ - ಜಿಲ್ಲಾ ಮಟ್ಟಕ್ಕೆ ಆಯ್ಕೆ.


ಬೆಳ್ಳೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಇಂಗ್ಲಿಷ್ ಉಪನ್ಯಾಸ, ಇಂಗ್ಲಿಷ್ ಕಂಠಪಾಠ ಮತ್ತು ಕನ್ನಡ ಭಾಷಣ ಸ್ಪರ್ಧೆಗಳಲ್ಲಿ ‘ಎ’ಗ್ರೇಡ್ ಮತ್ತು ಪ್ರಥಮ ಸ್ಥಾನ ಪಡೆದ ಸ್ವಾಗತ ರೈ. ಬಿ. ಚೆರ್ವತ್ತೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾಳೆ. ಈಕೆ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಶಿಕ್ಷಕ ದಂಪತಿಗಳಾದ ಸೀತಾಂಗೋಳಿ ನಿವಾಸಿ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ.

19 November 2014

ವೃತ್ತಿ ಪರಿಚಯ ಮೇಳ - ಬಾಗಿ.ಎಂ ರಾಜ್ಯ ಮಟ್ಟಕ್ಕೆ ಆಯ್ಕೆ

ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಬಾಗಿ.ಎಂ.17.11.2014 ಸೋಮವಾರ ನಾಯಮ್ಮಾರಮೂಲೆಯಲ್ಲಿ ಜರಗಿದ 2014-15 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಬಿದಿರು ಉತ್ಪನ್ನಗಳ ತಯಾರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾಳೆ. ಅವಳಿಗೆ ಶುಭಾಶಯಗಳು...

ವಿಜ್ಞಾನ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


17.11.2014 ಸೋಮವಾರ ನಾಯಮ್ಮಾರಮೂಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳದಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ. ಬಿ (ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ) ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕೆರೆ - ಭಾರತಿ. ಎಂ.ಜಿ ಇವರ ಪುತ್ರಿ) ಪ್ರದರ್ಶಿಸಿದ ಸ್ಥಿರ ಮಾದರಿಯು ‘ಎ’ ಗ್ರೇಡ್ ಸಹಿತ ಪ್ರಥಮ ಬಹುಮಾನ ಗಳಿಸಿ ನವೆಂಬರ್ 26ರಿಂದ 30ರ ತನಕ ಮಲಪ್ಪುರಂ ಜಿಲ್ಲೆಯ ತಿರೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ ಸ್ಪರ್ಧೆಗೆ ಆಯ್ಕೆಯಾಗಿದೆ. ಬಹುಮಾನ ವಿಜೇತರಿಗೆ ಶುಭಾಶಯಗಳು...

14 November 2014

ರಕ್ಷಕರ ಸಮ್ಮೇಳನ 2014


“ವಿದ್ಯಾರ್ಥಿಗಳ ಪ್ರಗತಿಗೆ ರಕ್ಷಕರು ಮತ್ತು ಶಿಕ್ಷಕರ ಹೊಂದಾಣಿಕೆ ಅಗತ್ಯ. ಸೌಹಾರ್ದಯುತ ವಾತಾವರಣವಿರುವ ಮನೆಗಳಲ್ಲಿ ಬೆಳೆದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳಗುತ್ತಾರೆ. ಆ ರೀತಿಯ ಸುಸಂಸ್ಕೃತ ವಾತಾವರಣವಿರುವ ಮನೆ ಮನಗಳನ್ನು ರೂಪಿಸಲು ನಾವು ಪ್ರಯತ್ನಿಸಬೇಕು ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಭಿಪ್ರಾಯಪಟ್ಟರು. ಅವರು ಸರ್ವಶಿಕ್ಷಾ ಅಭಿಯಾನದ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಜರಗಿದ ರಕ್ಷಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯ  ಶಿಕ್ಷಕಿ ಎ.ಭುವನೇಶ್ವರಿಯವರು ಮಕ್ಕಳಲ್ಲಿ ವಿನಯ ವಿಧೇಯತೆಗಳನ್ನು ಬೆಳೆಸುವಲ್ಲಿ ಮಾತೆಯರ ಪಾತ್ರವು ಮಹತ್ತರವಾದುದು. ಎಲ್ಲ ಮಾತೆಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ಎಚ್.ಸೂರ್ಯನಾರಾಯಣ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶೈಲಜಾ.ಎ ಮತ್ತು ವೇಣುಗೋಪಾಲಕೃಷ್ಣ.ಇ ರಕ್ಷಕರಿಗೆ ತರಗತಿ ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಮೀನಾಕ್ಷಿ.ಎಚ್.ಎನ್ ಸ್ವಾಗತಿಸಿ ಮಾಲತಿ.ಪಿ ವಂದಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಬಿಡುಗಡೆಗೊಳಿಸಿದ ಡೈರಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

13 November 2014

ಅಧ್ಯಾಪಕ ಹುದ್ದೆಗೆ ಸಂದರ್ಶನ


ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ನ್ಯಾಚುರಲ್ ಸಯನ್ಸ್(ವಿಜ್ಞಾನ ಪದವಿ, ಬಿ.ಎಡ್) ಮತ್ತು ಹೈಯರ್ ಸೆಕೆಂಡರಿ ವಿಭಾಗದ ರಸಾಯನ ಶಾಸ್ತ್ರ (ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿ, ಬಿ.ಎಡ್ ಮತ್ತು ಸೆಟ್ ಅಥವಾ ನೆಟ್) ಶಿಕ್ಷಕರ ಆಯ್ಕೆಗಾಗಿ 17.11.2014 ಸೋಮವಾರ ಬೆಳಗ್ಗೆ 10.30ಕ್ಕೆ ಶಾಲೆಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಸಕಾಲದಲ್ಲಿ ಹಾಜರಿರಬೇಕಾಗಿ ವಿನಂತಿ. ಹೆಚ್ಚಿನ ವಿವರಗಳಿಗಾಗಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ (9446283131, 9846575909) ಇವರನ್ನು ಸಂಪರ್ಕಿಸಬಹುದು.

08 November 2014

ನಮ್ಮ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್

ದಿನಾಂಕ 05.11.2014 ಬುಧವಾರದಿಂದ 07.11.2014 ಶುಕ್ರವಾರದ ತನಕ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ವಿಭಾಗಗಳಲ್ಲಿ ಅತ್ಯಧಿಕ ಅಂಕ ಸಹಿತ ಚಾಂಪಿಯನ್‌ಶಿಪ್ ಮತ್ತು ಒಟ್ಟು 14 ಚಿನ್ನ, 16 ಬೆಳ್ಳಿ, 7 ಕಂಚು ಪಡೆದು ಅತ್ಯಧಿಕ 132 ಅಂಕ ಸಂಪಾದಿಸಿ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ನೇತೃತ್ವದ ನಮ್ಮ ಶಾಲೆಯ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೆ ನಮ್ಮ ಶುಭಾಶಯಗಳು...

29 October 2014

ಕಬಡ್ಡಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


    ನವೆಂಬರ್ 5, 2014 ರಂದು ಪಾಲಕ್ಕಾಡಿನಲ್ಲಿ ಜರಗಲಿರುವ ಜ್ಯೂನಿಯರ್ ಹುಡುಗಿಯರ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಯಕ್ಷಿತಾ ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯಗಳು...

08 October 2014

ಹಿರಿಯ ಶಿಕ್ಷಕ ಶ್ರೀ ಸಿ.ಎಚ್ ಸುಬ್ರಹ್ಮಣ್ಯ ಭಟ್ ವಿಧಿವಶ

ನಮ್ಮ ಶಾಲೆಯ ಹಿರಿಯ ಅಧ್ಯಾಪಕ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ನಿವಾಸಿ ಚಾಲತ್ತಡ್ಕ ಸಿ.ಎಚ್. ಸುಬ್ರಹ್ಮಣ್ಯ ಭಟ್(52) ಇಂದು 08.10.2014 ಬುಧವಾರ ಮುಂಜಾನೆ ನಿಧನರಾದರು. ಮೃತರು ಕಳೆದ 26 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರಾಗಿ, ಪ್ರೌಢಶಾಲಾ ಗಣಿತ ಅಧ್ಯಾಪಕರಾಗಿ, ಮತ್ತು ಕೆಲ ಕಾಲ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ನಿ ಉಮಾದೇವಿ, ಮಕ್ಕಳಾದ ಮೇಘಶ್ರೀ, ಶ್ರೀವತ್ಸ ಮತ್ತು ಅಪಾರ ಬಂಧು ಮಿತ್ರರು, ಶಿಷ್ಯವರ್ಗವನ್ನು ಅಗಲಿದ್ದಾರೆ. ಅಕಾಲಿಕ ನಿಧನದ ಪ್ರಯುಕ್ತ ಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಶಾಲೆಗೆ ರಜೆ ಸಾರಲಾಯಿತು. ಕಂಬನಿ....

19 September 2014

ಮಕ್ಕಳ ಧ್ವನಿಯಲ್ಲಿ ಬಹುಮಾನ

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ 2014 ಸೆಪ್ಟೆಂಬರ್ 6 ಮತ್ತು 7 ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದಿದ್ದಾರೆ. ಶುಭಾಶಯಗಳು...

05 September 2014

ಶಿಕ್ಷಕರ ದಿನಾಚರಣೆ - 2014


ಇಂದು ನಮ್ಮ ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಜರಗಿದ ‘ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರು. ಜತೆಯಲ್ಲಿ ಓಣಂ ಕಾರ್ಯಕ್ರಮಗಳು...

01 September 2014

ಯುಪಿ ವಿಭಾಗದ ಗಣಿತ ಹೂ ರಂಗವಲ್ಲಿ

ಇನ್ನೇನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಓಣಂ ರಜೆ ಆರಂಭ. ಪ್ರಸ್ತುತ ಓಣಂ ಪರೀಕ್ಷೆಗಳ ಕಾಲ. ಈ ನಡುವೆ ಮನವನ್ನು ಒಂದಷ್ಟು ಪುಳಕಗೊಳಿಸಲು ಹೂ ರಂಗವಲ್ಲಿ. ಗಣಿತ ಸಂಘದ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸೀತಾಲಕ್ಷ್ಮಿ ಮತ್ತು ತಂಡ...

27 August 2014

ಹೈಯರ್ ಸೆಕೆಂಡರಿ ವಿಭಾಗ ಆರಂಭ

   
“ಬದಿಯಡ್ಕ ಗ್ರಾಮ ಪಂಚಾಯತು ಆಡಳಿತದ ಪ್ರದೇಶದಲ್ಲಿ ಕೇವಲ ಒಂದು ಶಾಲೆಯಲ್ಲಿ ಮಾತ್ರ ಇಲ್ಲಿಯ ತನಕ ಹೈಯರ್ ಸೆಕೆಂಡರಿ ವಿಭಾಗವಿದ್ದು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಪ್ರದೇಶಕ್ಕೆ ತೆರಳುವ ಕಷ್ಟ ಅನುಭವಿಸಬೇಕಾಗಿತ್ತು. ಪ್ರಸ್ತುತ ಶತಮಾನೋತ್ಸವ ವರ್ಷ ಆಚರಿಸಿ ಸಹಸ್ರಾರು ಮಂದಿಗೆ ವಿದ್ಯಾದಾನ ನೀಡಿದ ಮಹಾಜನ ಸಂಸ್ಥೆಗೆ ಈ ವರ್ಷ ಸರಕಾರವು ಹೊಸತಾಗಿ ಹೈಯರ್ ಸೆಕೆಂಡರಿ ಆರಂಭಿಸಲು ಅನುಮತಿ ನೀಡಿದ್ದು ಸಂತಸ ತಂದಿದೆ. ಕೇರಳ ರಾಜ್ಯ ಸರಕಾರವು ಈ ರೀತಿಯಲ್ಲಿ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಸುಧಾ ಜಯರಾಮ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯ ಹೈಯರ್ ಸೆಕೆಂಡರಿ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಸೌಮ್ಯಾ ಮಹೇಶ್, ಮಂಜುನಾಥ ಮಾನ್ಯ, ಗಂಗಾಧರ ಗೋಳಿಯಡ್ಕ, ಶೀಲಾ ಕೆ.ಎನ್. ಭಟ್, ಸಮಾಜ ಸೇವಕ ಅಬ್ದುಲ್ಲ ಮುಗು, ನೀರ್ಚಾಲು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಂಕರ ಸ್ವಾಮಿಕೃಪಾ ಶುಭ ಹಾರೈಸಿದರು.
    ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರಭಾರ ಪ್ರಾಂಶುಪಾಲ ಎಚ್.ಸೂರ್ಯನಾರಾಯಣ ವಂದಿಸಿದರು. ಶಾಲಾ ಶಿಕ್ಷಕಿ ಶೈಲಜಾ.ಬಿ ಪ್ರಾರ್ಥಿಸಿದರು. ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ. ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ಹೂ ರಂಗವಲ್ಲಿ 2014

ಓಣಂ ಹಬ್ಬದ ಅಂಗವಾಗಿ ಇತ್ತೀಚೆಗೆ ನಮ್ಮ ಶಾಲೆಯ ಗಣಿತ ಸಂಘದ ಆಶ್ರಯದಲ್ಲಿ ಗಣಿತ ಆಕೃತಿಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ರಚಿಸಿದ ಹೂ ರಂಗವಲ್ಲಿ...

22 August 2014

‘ಬ್ಲೆಂಡ್ - ಬ್ಲಾಗ್ ತಯಾರಿ ಮತ್ತು ತರಬೇತಿ’              
  “ಜಗತ್ತು ಸಂವಹನ ವ್ಯವಸ್ಥೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಿದೇಶಗಳಲ್ಲಿರುವ ಪ್ರತಿಯೊಬ್ಬರ ನಡುವೆಯೂ ಪ್ರಸ್ತುತ ಕ್ಷಣಮಾತ್ರದಲ್ಲಿ ಆಶಯ ವಿನಿಮಯ ಸಾಧ್ಯವಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಕಂಡು ಬರುತ್ತಿದೆ. ಈ ವಿದ್ಯಮಾನಕ್ಕೆ ಶಿಕ್ಷಣ ಸಂಸ್ಥೆಗಳೂ ಹೊರತಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆಯಲ್ಲಿ ಮುಖ್ಯವಾಹಿನಿಯ ವಿದ್ಯಾಸಂಸ್ಥೆಗಳು ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತಿದೆ. ಈ ಸಂದರ್ಭದಲ್ಲಿ ಶಾಲೆಗಳು ಸಮಾಜದೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಬ್ಲಾಗ್ಗಳು ಸುಲಭ ವ್ಯವಸ್ಥೆಗಳಾಗಿವೆ. ಎಲ್ಲ ಶಾಲೆಗಳು ಬ್ಲಾಗ್ ಮೂಲಕ ಶಾಲೆಯ ಚಟುವಟಿಕೆಗಳನ್ನು ಜಗತ್ತಿನ ಜೊತೆ ಹಂಚಿಕೊಳ್ಳಬಹುದು. ಎಂದು ಡಯಟ್ ಮಾಯಿಪ್ಪಾಡಿಯ ಉಪನ್ಯಾಸಕ ಡಾ|ರಘುರಾಮ ಭಟ್ ಕೋಂಗೋಟು ಅಭಿಪ್ರಾಯಪಟ್ಟರು. ಅವರು ಇಂದು ಕುಂಬಳೆ ಉಪಜಿಲ್ಲಾ ಮಟ್ಟದ ಅಧ್ಯಾಪಕರಿಗಾಗಿ ಡಯಟ್ಸಂಸ್ಥೆಯ ನೇತೃತ್ವದಲ್ಲಿ ನಮ್ಮ ಶಾಲೆಯಲ್ಲಿ ಕೊನೆಯ ಹಂತದ ಬ್ಲೆಂಡ್ - ಬ್ಲಾಗ್ ತಯಾರಿ ಮತ್ತು ತರಬೇತಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
                ಶಾಲಾ ಹಿರಿಯ ಶಿಕ್ಷಕ ಸಿ.ಎಚ್. ವೆಂಕಟರಾಜ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅನಿಲ್ ಕುಮಾರ್ ಮತ್ತು ನಮ್ಮ ಶಾಲೆಯ ರವಿಶಂಕರ ದೊಡ್ಡಮಾಣಿ ಉಪಸ್ಥಿತರಿದ್ದರು. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಂದ್ರನ್ ಸ್ವಾಗತಿಸಿ, ಸೂರಂಬೈಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಇಸ್ಮಾಯಿಲ್ ಕೆ.ಎಂ ವಂದಿಸಿದರು. ಕುಂಟಿಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಹೈಯರ್ ಸೆಕೆಂಡರಿ - ಕನ್ನಡಕ್ಕೆ ಅನುಮತಿ


                ಶತಮಾನೋತ್ಸವ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ ಆಶ್ವಾಸನೆಯಂತೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಗೆ ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಅನುಮತಿ ನೀಡಿ ಕೇರಳ ಸರಕಾರ ಆದೇಶ ಹೊರಡಿಸಿದೆ. ಮೊದಲು ನೀಡಿದ ಆದೇಶದಲ್ಲಿ ಸರಕಾರವು ಭಾಷಾ ಕಲಿಕೆಗಾಗಿ ಮಲಯಾಳವನ್ನು ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳ, ಹಿತೈಷಿಗಳ ಮತ್ತು ಶಾಲಾ ಆಡಳಿತ ಮಂಡಳಿಯ ಬೇಡಿಕೆಯನ್ನು ಗಮನಿಸಿ 21.08.2014 ರಂದು ಕೇರಳ ಸರಕಾರವು ಮಲಯಾಳದ ಬದಲು ಕನ್ನಡ ತರಗತಿಗಳನ್ನು ಆರಂಭಿಸಲು ಸೂಚಿಸಿದೆ. ಆದೇಶದ ಪ್ರಕಾರ ಇಂಗ್ಲಿಷ್, ಕನ್ನಡ ಭಾಷೆಗಳ ಹೊರತಾಗಿ ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) ತರಗತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ 23.08.2014 ರಂದು ಅಪರಾಹ್ನ 4 ಗಂಟೆಯ ಮೊದಲು ಶಾಲಾ ಕಛೇರಿಯಲ್ಲಿ ಅರ್ಜಿಗಳನ್ನು ಸಮರ್ಪಿಸಬಹುದಾಗಿದೆ.
                ಶಾಲೆಯ ಬೇಡಿಕೆಯನ್ನು ಮನ್ನಿಸಿ ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಮತ್ತು ಸೂಕ್ತ ಕೋರ್ಸುಗಳಿಗೆ ಅನುಮತಿ ನೀಡಿ ಸರಕಾರವು ಆದೇಶವನ್ನು ಹೊರಡಿಸಲು ಪ್ರಯತ್ನಿಸಿದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್..ನೆಲ್ಲಿಕುನ್ನು, ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಪಕ್ಷಗಳ ಪ್ರತಿನಿಧಿಗಳು ಮತ್ತು ಎಲ್ಲ ಹಿತೈಷಿಗಳಿಗೆ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

19 August 2014

ಸಂಸ್ಕೃತ ದಿನಾಚರಣೆ - ಬಹುಮಾನಗಳು

ಮೊನ್ನೆ 13.08.2014 ಬುಧವಾರ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದ ಸಂಘಗಾನ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಪ್ರಶ್ನೋತ್ತರಿಯಲ್ಲಿ ತೃತೀಯ ಸ್ಥಾನ ಗಳಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳು ಇವರು. ಶುಭಾಶಯಗಳು...

17 August 2014

ಶ್ರೀಕೃಷ್ಣ ಜಯಂತಿ ಉತ್ಸವ - 2014            


    “ಕೃಷ್ಣ ಎಂದರೆ ಸೆಳೆತ, ಸಂಭ್ರಮ, ಸಂತೋಷ, ಆತ್ಮೀಯತೆ, ನಮ್ಮವನೆಂಬ ವ್ಯಾಮೋಹ. ಕೃಷ್ಣನ ಹೆಸರು ಅನುಪಮ ಆನಂದದ ಅನುಭವ. ಅವನ ವ್ಯಕ್ತಿತ್ವ ಅನುಪಮ, ಆದರ್ಶ. ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹಾಪುರುಷರ ಜನ್ಮದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದುಕೊಡುತ್ತದೆಎಂದು ನಿವೃತ್ತ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ವಿದ್ಯೋದಯ ಸಭಾಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ಶ್ರೀಕೃಷ್ಣ ಜಯಂತಿಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

                ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ಉಪನಾಯಕಿ ರಮ್ಯಾ.ಕೆ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕಿ ವಾಣಿ.ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

                ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೋಹನ ನೀರ್ಚಾಲು, ಗಣೇಶ್ ನೀರ್ಚಾಲು, ಮನಮೋಹನ ಸೂರಂಬೈಲು ಇವರಿಂದ ಭಕ್ತಿಗಾನ ಸುಧಾಕಾರ್ಯಕ್ರಮ ಜರಗಿತು. ಹಾರ್ಮೋನಿಯಂನಲ್ಲಿ ಶಿವಾನಂದ ಮಾಯಿಪ್ಪಾಡಿ, ತಬ್ಲಾದಲ್ಲಿ ಅಚ್ಯುತಾನಂದ ಕೂಡ್ಲು ಮತ್ತು ಮೌನೇಶ್ ನೀರ್ಚಾಲು ಸಹಕರಿಸಿದರು.

15 August 2014

ಸ್ವಾತಂತ್ರ್ಯ ದಿನಾಚರಣೆ - 2014

ಇಂದು ಸ್ವಾತಂತ್ರ್ಯ ದಿನ. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ಅವರಿಂದ ಧ್ವಜಾರೋಹಣ ಮತ್ತು ಸ್ವಾತಂತ್ರ್ಯ ಮೆರವಣಿಗೆಯ ನೇತೃತ್ವ. ವಿದ್ಯಾರ್ಥಿಗಳ ಭಾಗವಹಿಸುವಿಕೆ ಭವ್ಯ ಭಾರತದ ಕನಸನ್ನು ನನಸು ಮಾಡುವ ಉತ್ತಮ ದೃಷ್ಟಿಕೋನ ಹೊಂದಿತ್ತು. ಎಲ್ಲರಿಗೂ ಶುಭಾಶಯಗಳು...

11 August 2014

ಇನ್‌ಸ್ಪೈರ್ ಅವಾರ್ಡ್ - ಕೇರಳ ರಾಜ್ಯ ಮಟ್ಟಕ್ಕೆ ಆಯ್ಕೆ


ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಚಿನ್ಮಯ ಭಟ್.ಕೆ.ಕೆ 07.08.2014 ಗುರುವಾರ ಕಣ್ಣನ್ನೂರಿನಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಇದೇ ತಿಂಗಳ 14 ರಂದು ಕೊಲ್ಲಂನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಈತ ಕಿದೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ ಮತ್ತು ಪರಮೇಶ್ವರಿ ಇವರ ಪುತ್ರ.

06 August 2014

‘ಸಾಕ್ಷರ 2014’ ಯೋಜನೆಗೆ ಚಾಲನೆ

   
“ಅಕ್ಷರ ಜ್ಞಾನ ಮತ್ತು ಭಾಷಾ ಜ್ಞಾನ ನಿರ್ಣಯ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಭವಿಷ್ಯದ ಕಡೆಗೆ ಉತ್ತಮ ನಡೆಯನ್ನು ಹಾಕಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅಗತ್ಯ. ಆದ್ದರಿಂದ ಸಾಕ್ಷರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಅಭಿಪ್ರಾಯಪಟ್ಟರು. ಅವರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತು ಮತ್ತು ಡಯಟ್ ಕಾಸರಗೋಡು ಕೈಗೊಂಡಿರುವ ‘ಸಾಕ್ಷರ’ ಯೋಜನೆಯನ್ನು ಇಂದು ನಮ್ಮ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
    ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಮೀನಾಕ್ಷಿ ಎಚ್.ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರಾದ ಶಿವಕುಮಾರ ಎಚ್. ಸ್ವಾಗತಿಸಿ ಗೋವಿಂದ ಶರ್ಮ ವಂದಿಸಿದರು. ತಲೆಂಗಳ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

30 July 2014

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

“ಶಾಲೆಯ ಶತಮಾನೋತ್ಸವವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಭಾಭವನದ ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದೆ. ಈ ಸುಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗವನ್ನು ಆರಂಭಿಸುವ ಕುರಿತು ಸರಕಾರದಿಂದ ಸೂಚನೆ ದೊರೆಯುವ ನಿರೀಕ್ಷೆ ಇದೆ. ಶತಮಾನೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರೂ ಮುಂದೆಯೂ ಶಾಲೆಯ ಪ್ರಗತಿಗೆ ಸಕ್ರಿಯ ಸಹಕಾರ ನೀಡಬೇಕು" ಎಂದು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು 18.07.2014 ಶುಕ್ರವಾರ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಚಂದ್ರಿಕಾ ಮುಂಡಿತ್ತಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ವರದಿ ವಾಚಿಸಿದರು. ಶಿಕ್ಷಕರಾದ ಕೆ.ನಾರಾಯಣ ಭಟ್ ಸ್ವಾಗತಿಸಿ ಸಿ.ಎಚ್.ವೆಂಕಟರಾಜ ವಂದಿಸಿದರು.

11 July 2014

ಶೇಖರಕಾನ - 2014

ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ನೀರ್ಚಾಲು ಸನಿಹದ ಶೇಖರಕಾನ ಜಲಪಾತವನ್ನು ಸಂದರ್ಶಿಸಿದರು.

26 June 2014

ಮಾದಕ ದ್ರವ್ಯ ವಿರುದ್ಧ ದಿನ 2014
ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಪೋಸ್ಟರ್ ರಚನಾ ಕಾರ್ಯಕ್ರಮ ಮತ್ತು ನೀರ್ಚಾಲು ಪೇಟೆಯಲ್ಲಿ 26.06.2014 ಗುರುವಾರ ಮೆರವಣಿಗೆ ನಡೆಯಿತು.