Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

31 December 2009

ಹೊಸ ವರುಷ ತರಲಿ ಹೊಸ ಹರುಷ

೨೧ನೇ ಶತಮಾನದ ಹೊಸ ದಶಕವನ್ನು ಪ್ರವೇಶಿಸುತ್ತಿದ್ದೇವೆ. ನೆಮ್ಮದಿ, ಶಾಂತಿ, ಸಹಬಾಳ್ವೆಯ ಹೊಸ ಮನ್ವಂತರವನ್ನು ನಿರೀಕ್ಷಿಸುತ್ತಾ ಹೊಸ ವರುಷವನ್ನು ಸ್ವಾಗತಿಸೋಣ. ನಮ್ಮ ಎಲ್ಲ ಹಿತೈಷಿಗಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

26 December 2009

ಕಾಸರಗೋಡು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ, ಬನ್ನಿ..

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ೨೦೧೦ನೇ ಜನವರಿ ೯ ಮತ್ತು ೧೦ರಂದು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಸಲು ತೀರ್ಮಾನಿಸಿದ್ದು ಅದಕ್ಕಾಗಿ ನಾಡಿನ ಹಿರಿಯ ಖ್ಯಾತ ವಿದ್ವಾಂಸರಾದ ಶ್ರೀ ಖಂಡಿಗೆ ಶಾಮ ಭಟ್ಟರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರೂಪೀಕರಿಸಿ ಕಾರ್ಯಪ್ರವೃತ್ತರಾಗಿರುವ ವಿಚಾರ ಕಾಸರಗೋಡಿನ ಕನ್ನಡಾಭಿಮಾನಿಗಳಿಗೆ ಸಂತಸ ತಂದಿದೆ.
ಕನ್ನಡ ಮಾಧ್ಯಮದ ಬಾಲವಾಡಿಯಿಂದ ಪದವಿ ತನಕದ ವಿದ್ಯಾರ್ಥಿಗಳಿಗಾಗಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ೧೫೦೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಹಿರಿಯ ವಿದ್ವಾಂಸರೂ ಖ್ಯಾತ ಯಕ್ಷಗಾನ ಅರ್ಥಧಾರಿಗಳೂ ನಿವೃತ್ತ ಅಧ್ಯಾಪಕರೂ ಆದ ಶ್ರೀ ಪೆರ್ಲ ಕೃಷ್ಣ ಭಟ್ಟರು ಆಯ್ಕೆಯಾಗಿರುವುದು ತುಂಬ ಸಂತಸದ ವಿಷಯ. ಸಮ್ಮೇಳನದ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿದ್ವಾಂಸ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನಡೆಸಲಿದ್ದು ಹಾಸ್ಯಗೋಷ್ಟಿ, ಕವಿಗೋಷ್ಟಿ, ಭಾಷಾ ಸೌಹಾರ್ದ ಗೋಷ್ಟಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಸಂಪನ್ನವಾಗಲಿದೆ.
ಕಾಸರಗೋಡಿನ ಕನ್ನಡಕ್ಕೆ ಕಂಪು ಇದೆ, ಇಂಪು ಇದೆ, ತನ್ನತನವಿದೆ. ಕರ್ನಾಟಕದ ಗಣ್ಯವ್ಯಕ್ತಿಗಳೆಲ್ಲ ಕಾಸರಗೋಡನ್ನು ಸಂದರ್ಶಿಸಿದಾಗಲೆಲ್ಲ ಇಲ್ಲಿಯ ಕನ್ನಡ ಚಟುವಟಿಕೆಗಳ ಕುರಿತು ಭಾಷಾ ಶುದ್ಧತೆಯ ಕುರಿತು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಅದು ಈ ನೆಲದ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಶ್ರೀ ಕ್ಷೇತ್ರ ಅನಂತಪುರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭೇಟಿ ಇತ್ತಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ನೆಲದ ಕನ್ನಡ ಭಾಷೆಯ ಅಚ್ಚತನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವುದು ಖಂಡಿತವಾಗಿಯೂ ಕನ್ನಡಿಗರಿಗೆ ಪ್ರೋತ್ಸಾಹಕರ. ಕಾಸರಗೋಡಿನಲ್ಲಿ ಕನ್ನಡ ನಶಿಸಿಹೋಗುತ್ತಿದೆ ಎನ್ನುವಂತಹ ಕೂಗು ಕೇಳಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಎಲ್ಲ ಸಹೃದಯರೂ ಸಹರಿಸಬೇಕಾಗಿ ಕೇಳಿಕೊಳ್ಳುತ್ತೇವೆ.

24 December 2009

ಕ್ರಿಸ್ಮಸ್ ಹಬ್ಬದ ಶುಭಾಶಯಗಳು..

ನಾಳೆ ಕ್ರಿಸ್ಮಸ್. ನಮ್ಮ ಪ್ರೀತಿಯ ಓದುಗರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.


23 December 2009

ನಮಗೆ ಕ್ರಿಸ್ಮಸ್ ರಜೆ...

ಕ್ರಿಸ್ಮಸ್ ರಜೆ ಆರಂಭವಾಗಿದೆ, ನಾಡಿದ್ದು ೨೮ಕ್ಕೆ ಶಾಲೆ ಪುನಃ ತೆರೆಯಲಿದೆ. ಈ ಮಧ್ಯೆ ಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಿಗೆ ಆಯ್ಕೆಯಾದವರು ಮತ್ತು ರಾಜ್ಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಯಾರಿಯಲ್ಲಿ ಮಗ್ನರಾಗಿದ್ದಾರೆ. ಅಂದ ಹಾಗೆ ಕಳೆದ ವಾರ ಅಡೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದು ಸಂಸ್ಕೃತೋತ್ಸವ ಯುಪಿ ವಿಭಾಗ ಚಾಂಪಿಯನ್, ಹೈಸ್ಕೂಲು ವಿಭಾಗ ಚಾಂಪಿಯನ್ ಮತ್ತು ಸಂಸ್ಕೃತೋತ್ಸವ ಸಮಗ್ರ ಪ್ರಶಸ್ತಿಗಳನ್ನು ಶಾಲೆಗೆ ತಂದಿದ್ದಾರೆ. ಸಂಸ್ಕೃತ ಎಂಬ ಶಾಲೆಯ ಹೆಸರಿಗೆ ಅರ್ಥ ತಂದಿದ್ದಾರೆ. ಈ ಸಾಧನೆ ನಮ್ಮ ಶಾಲೆ ನಿರಂತರವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಸುತ್ತಿದೆ. ಈ ಜೈತ್ರಯಾತ್ರೆ ಹೀಗೆಯೇ ಮುಂದುವರಿಯುತ್ತಿರಲಿ,ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ.

18 December 2009

ಪದ್ಯ - ಅಮ್ಮಾ ಪ್ಲೀಸಮ್ಮಾ-ಶ್ರೀವಾಣಿ.ಕೆ.

ಅಮ್ಮಾ ಅಮ್ಮಾ ಟೀವಿಯನಿಡುವೆ
ಕಾರ್ಟೂನ್ ಇದೆಯಮ್ಮಾ
ಐದು ಕಾಲದು ಚಿಂಟು ಟಿವಿಲಿ
ನೋಡಲೆಬೇಕಮ್ಮಾ
ನೋ,ನೋ ಎನ್ನುತ ಬಂದಳು ಅಮ್ಮ
ಎಂದಳು ಬೇಡ ಮಗಾ
ಗಣಿತದ ಎಕ್ಸಾಮ್ ಇಲ್ಲವೆ ನಾಳೆ
ಓದದು ಹೋಗೀಗ
ಓದುವೆ ಟಿವಿಯ ನೋಡಿದ ಬಳಿಕ
ಅಮ್ಮಾ ಪ್ಲೀಸಮ್ಮಾ
ಈಗದು ಕಾರ್ಟೂನ್ ನೋಡುವ ಆಸೆ
ನನಗದು ಕೇಳಮ್ಮಾ
ಗದರುತ ತಾಯಿಯು ಹೇಳಿದೆನಲ್ಲ
ಪಾಠವನೋದೀಗ
ಅಲ್ಲದೆ ಟಿವಿಯ ನೋಡಲು ಬಿಡೆನು
ಅಪ್ಪಗೆ ಹೇಳುವೆ ಆಗ.

16 December 2009

ನಮ್ಮ ಪ್ರಯಾಣ ರಾಜ್ಯ ಮಟ್ಟಕ್ಕೆ...

ಉತ್ಸವಗಳ ಕಾಲ ನಮ್ಮ ಪಾಲಿಗೆ ಶುಭದಾಯಕವಾಗುವ ಲಕ್ಷಣವಿದೆ. ಇತ್ತೀಚೆಗೆ ತೃಕ್ಕರಿಪುರದಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿಪರಿಚಯ ಮತ್ತು ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರತಿಭೆಗಳು ಈ ತಿಂಗಳ ಕೊನೆಗೆ ತ್ರಿಶ್ಶೂರಿನಲ್ಲಿ ಜರಗುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವೃತ್ತಿ ಪರಿಚಯ ಮೇಳದ ಅಗರಬತ್ತಿ ತಯಾರಿಯಲ್ಲಿ ವಿದ್ಯಾ.ಕೆ.ಎಂ, ಇಲೆಕ್ಟ್ರೋನಿಕ್ಸ್ ನಲ್ಲಿ ಗೋವಿಂದ ಪ್ರಕಾಶ್, ಕೊಡೆ ತಯಾರಿಯಲ್ಲಿ ಮನೋಜ್, ಬುಕ್ ಬೈಂಡಿಂಗ್ ಸ್ಪರ್ಧೆಯಲ್ಲಿ ಸುಷ್ಮಿತಾ.ಬಿ ಹಾಗೂ ವಿಜ್ಞಾನ ಮೇಳದಲ್ಲಿ ಮಾನಸ ಪಿ.ಎಸ್ ಮತ್ತು ಸುಷ್ಮಿತಾ ಶೆಟ್ಟಿ ಚಾಲಿತ ಯಂತ್ರಗಳ ವಿಭಾಗದಲ್ಲಿ ಸೈಕಲ್ ಎನರ್ಜಿ ಎಂಬ ಉಪಕರಣವನ್ನು ಪ್ರದರ್ಶಿಸಲಿದ್ದಾರೆ, ಎಲ್ಲರಿಗೂ ನಮ್ಮ ಶುಭಾಶಯಗಳು.

14 December 2009

ಚುಟುಕುಗಳು

ಝೀರೋ ವೇಸ್ಟ್ - ಹಿತೇಶ್ ಕುಮಾರ್ ಎಂ.

ಪಂಚಾಯತಿನ ಒಂದು ಅಭಿಯಾನ
ಝೀರೋ ವೇಸ್ಟ್
ಇದು ಕಂಡು ಹೇಳಿದರು ಕೆಲವರು
ಇದು ಬಹಳ ವೇಸ್ಟ್

ಮೊಬೈಲು - ವನಿತ ಕುಮಾರಿ. ಸಿ.ಎಚ್

ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್
ಅದುಮಿ ಮಾಡುತ್ತಾರೆ ಸ್ಟೈಲ್
ರೇಂಜ್ ಇಲ್ಲ ಹತ್ತುತ್ತಾರೆ ಗುಡ್ಡ
ಕೆಳಗೆ ಬಿದ್ದು ಗುಳಿಬೀಳುತ್ತದೆ ಗಡ್ಡ.

11 December 2009

ಕ್ಷಮಿಸಿ...

ಕೆಲವಾರು ದಿನಗಳಿಂದ ನಮ್ಮ ಶಾಲೆಯ ಮೋಡೆಮ್ ಕೆಟ್ಟು ಹೋಗಿತ್ತು. ಇವತ್ತು ಸರಿಪಡಿಸಲಷ್ಟೇ ಸಾಧ್ಯವಾಯಿತು. ಹಳ್ಳಿ ಶಾಲೆ ಎಂದ ಮೇಲೆ ಇದೆಲ್ಲಾ ಸಹಜ ಅಂದುಕೊಂಡಿದ್ದೇವೆ, ಮುಂದೆ ಈ ರೀತಿ ಆಗದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ವಿವಿಧ ಕಲೋತ್ಸವ, ವಿಜ್ಞಾನ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಅದರ ವರದಿಯೊಂದಿಗೆ ನಿಮ್ಮೆದುರು ಬೇಗ ಬರುತ್ತೇವೆ, ಪ್ರೀತಿ ಇರಲಿ...

27 November 2009

ಚುಟುಕು - ಅಜೇಯಕೃಷ್ಣ. ಕೆ

ಕಾಫಿ

ಕಾಫಿ ಸಿಕ್ಕಿತು ನನಗೆ
ನಾಲಗೆ ಕರಚಿತು ಬಿಸಿಗೆ
ವೈದ್ಯರ ಬಳಿ ಹೋದೆನು ಮದ್ದಿಗೆ
ಈ ದಿನ ರಜಾ ಎಂದು ಬಂತು ನೆನಪಿಗೆ.

ದಾನ

ಮೂರ್ಖರ ಶ್ರೇಷ್ಟ ದಾನ
ಮೈದಾನ
ಪಂಡಿತರ ಶ್ರೇಷ್ಟ ದಾನ
ಅನ್ನದಾನ

19 November 2009

ಕಥೆ - ಪುಟ್ಟುವಿನ ಮೂರ್ಖತನ


-ರೇಣುಕಾ. ಎ

ಪುಟ್ಟುವಿಗೆ ಅವನೇ ಹೆಚ್ಚು ವಿದ್ಯಾವಂತ ಎಂಬ ಭಾರೀ ಅಹಂಕಾರವಿತ್ತು. ಒಂದು ದಿನ ಅವನು ಗೆಳೆಯನಾದ ಕಿಟ್ಟನ ಮನೆಗೆ ಬಂದನು. ಕಿಟ್ಟನು ಭಾರತದ ಕ್ರಿಕೆಟ್ ಪಂದ್ಯಾಟ ನೋಡುತ್ತಾ ಕುಳಿತುಕೊಂಡಿದ್ದನು. ಪುಟ್ಟು ಬಂದುದನ್ನು ನೋಡಿ ಕಿಟ್ಟನು ಅವನನ್ನು ಕುಳಿತುಕೊಳ್ಳುವಂತೆ ಹೇಳಿ “ನೀನು ಭಾರತದ ಬ್ಯಾಟಿಂಗ್ ನೋಡುತ್ತಾ ಇರು, ನಾನು ಈಗ ಒಳಗೆ ಹೋಗಿ ಅಮ್ಮನಲ್ಲಿ ಹೇಳಿ ಬರುತ್ತೇನೆ"ಎಂದನು. ಕಿಟ್ಟನು ಒಳಗೆ ಹೋದಾಗ ಪುಟ್ಟನು ಕ್ರಿಕೆಟ್ ನೋಡುತ್ತಾ ಕುಳಿತನು. ಸ್ವಲ್ಪ ಸಮಯ ಕಳೆದಾಗ ಒಬ್ಬ ಬ್ಯಾಟ್ಸ್ ಮನ್ ಔಟಾಗಿ ಪೆವಿಲಿಯನ್ ಕಡೆ ಹೋದನು. ಆಗ ಪುಟ್ಟನು ಜೋರಾಗಿ ನಕ್ಕನು, ಕೇಕೆ ಹಾಕಿ ಕುಣಿದನು. ಆದರೆ ಕಿಟ್ಟನು ಬಂದಾಗ ಒಂದು ವಿಕೆಟ್ ಹೋದದ್ದು ಕಂಡು ಬೇಸರಿಸಿದನು. ಸ್ವಲ್ಪ ಸಮಯ ಕಳೆದಾಗ ಬ್ಯಾಟ್ಸ್ ಮನ್ ಸಿಕ್ಸ್ ಬಾರಿಸಿದನು. ಇದು ಕಂಡು ಪುಟ್ಟುವಿಗೆ ದುಃಖ ಬಂತು. ಭಾರತದ ಆಟಗಾರ ಸಿಕ್ಸ್ ಬಾರಿಸಿದಾಗ ಖುಷಿ ಪಡಬೇಕಾದ, ಔಟಾದಾಗ ದುಃಖಿಸಬೇಕಾದ ಬದಲು ಪುಟ್ಟುವಿನಂತೆ ವರ್ತಿಸುವುದು ಅತೀ ದೊಡ್ಡ ಮೂರ್ಖತನ ಎಂದು ಕಿಟ್ಟನು ತೀರ್ಮಾನಿಸಿದನು.

10 November 2009

ಇನ್ನು ಉತ್ಸವಗಳ ಕಾಲ...

ಅಚಾನಕ್ಕಾಗಿ ಮತ್ತೆ ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿದೆ, ಗದ್ದೆ ಕೊಯ್ಲು ಪ್ರಕ್ರಿಯೆ ಗೆ ಸಮಸ್ಯೆ, ಅಡಿಕೆ ಕೃಷಿಕರ ಮನಸ್ಸಿಗೆ ಮಳೆ ಒಂದಷ್ಟು ಸಮಾಧಾನ ತಂದಿದೆ. ಕಳೆದ ಎರಡು ದಿನಗಳಿಂದ ವಾತಾವರಣ ಪೂರ್ತಿ ತಂಪು ತಂದಿದೆ. ವಿದ್ಯಾರ್ಥಿಗಳಿಗೂ ಅಷ್ಟೆ, ಪರೀಕ್ಷೆಯ ದಿನಗಳು ಕಳೆದು ಉತ್ಸವಗಳ ಕಾಲ ಆರಂಭವಾಗುತ್ತಿದೆ, ಈ ತಿಂಗಳು ೧೮,೧೯ ಬದಿಯಡ್ಕದಲ್ಲಿ ಉಪಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆ, ೨೩,೨೪ ರಂದು ಮಾನ್ಯದಲ್ಲಿ ವಿಜ್ಞಾನ ಮೇಳ, ಮುಂದಿನ ತಿಂಗಳು ಅಡೂರಿನಲ್ಲಿ ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಮತ್ತು ಕಲೋತ್ಸವ... ನಮ್ಮ ತಂಡ ಹುರುಪಿನೊಂದಿಗೆ ತಯಾರಾಗುತ್ತಿದೆ...

06 November 2009

ಬಡಗುಮೂಲೆಗೆ ಬಯಲು ಪ್ರವಾಸ

ನಮ್ಮ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೊನ್ನೆ ಬಡಗುಮೂಲೆ ಈಶ್ವರ ಭಟ್ಟರ ಕೃಷಿ ಕ್ಷೇತ್ರವನ್ನು ಸಂದರ್ಶಿಸಿದರು. ಹೈನುಗಾರಿಕೆ ಪ್ರಶಸ್ತಿ ವಿಜೇತ ಬಡಗುಮೂಲೆ ಈಶ್ವರ ಭಟ್ಟರು ದನ ಸಾಕಣೆಯ ಕುರಿತು ಮತ್ತು ಅವರ ಪತ್ನಿ ಕನಕಲಕ್ಷ್ಮಿ ಮಲ್ಲಿಗೆ ಕೃಷಿಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಔಷಧೀಯ ಸಸ್ಯಗಳು ಮತ್ತು ಬಾಳೆ ತಳಿಗಳ ಬಗೆಗೂ ಮಾಹಿತಿ ಪಡೆದುಕೊಂಡರು. ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್, ಶಿಕ್ಷಕಿಯರಾದ ಮಾಲತಿ. ವೈ ಮತ್ತು ಪ್ರತಿಮಾ ನೇತೃತ್ವ ವಹಿಸಿದ್ದರು.

04 November 2009

ಪೂರ್ವ ವಿದ್ಯಾರ್ಥಿಗಳ ಸಾಧನೆ...

ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಯ ಸಾಧನೆಯ ಪರಿಚಯವನ್ನು ಮೊನ್ನೆ ಮಾಡಿದ್ದೆವು. ಈ ಬಾರಿ ಮಹೇಶನ ಪರಿಚಯ, ಸಾಧನೆಗಳ ಮಜಲನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ೧೩ ನೆಯ ವಿಶ್ವ ಸಂಸ್ಕೃತ ಸಮ್ಮೇಳನ ೨೦೦೬ ರಲ್ಲಿ Edinburgh (Scotland, U.K.) ನಲ್ಲಿ ಆಯೋಜಿತವಾಗಿದ್ದರೆ ಈ ವರ್ಷ ಇತ್ತೀಚೆಗೆ (ಸೆಪ್ಟೆಂಬರ್ ೧-೫, ೨೦೦೯) ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆಯಿತು. (ಈ ವಿ ವಿ ಯಲ್ಲಿನ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ.) ಈ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾದಲ್ಪತ್ತವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ೫೦೦ ಆಗಬಹುದು. http://www.indology.bun.kyoto-u.ac.jp/14thWSC/ಇದರಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ಶ್ಯೇನ ಚಿತಿ ಎಂಬ ಒಂದು ವಿಚಾರವನ್ನು ಕಾಸರಗೋಡಿನ ಯುವ ಕನ್ನಡಿಗ ಮಹೇಶ ಕೂಳಕ್ಕೋಡ್ಲು ಇವರು ಪ್ರಸ್ತುತ ಪಡಿಸಿದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ ಪೂ ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದ್ರಿಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವಾಗಿತ್ತು ಶ್ರೀ ಮಹೇಶರದ್ದು. ನ್ಯೂಟನ ನಿಗಿಂತ ಸುಮಾರು 200 ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (Binomial expansion) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (Turning an Algebraic Expression into an Infinite Series--An Indian contribution) ಕೆಲವು ತಿಂಗಳುಗಳ ಹಿಂದೆ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. 29 ವರ್ಷದ ಈ ಯುವಾ ಸಂಶೋಧಕ ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಶ್ರೀ ರಾಮಸುಬ್ರಹ್ಮಣ್ಯಂ ರ ಮಾರ್ಗದರ್ಶನದಲ್ಲಿ ಭಾರತೀಯ ವಿಜ್ಞಾನದ ಬಗ್ಗೆ ಕಾರ್ಯ ನಿರತರಾಗಿದ್ದಾರೆ. ಇವರ ಊರು ಕಾಸರಗೋಡಿನ ಬದಿಯಡ್ಕ. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟರ ಮಗನಾದ ಇವರು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ನ ಪೂರ್ವ ವಿದ್ಯಾರ್ಥಿ. ಉಜಿರೆ ಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಥದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (2003), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (2003),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (2008--) ಗಳನ್ನೂ ಸಾಧಿಸಿದವರಾಗಿದ್ದಾರೆ. IIT Bombay ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ.

30 October 2009

ಹೆಮ್ಮೆ ಇದೆ ನಮಗೆ...


ಸೆಪ್ಟೆಂಬರ್ ೧ ರಿಂದ ೫ ರ ವರೆಗೆ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ೩೫ ದೇಶಗಳಿಂದ ಬಂದ ೫೦೦ ಸಂಸ್ಕೃತ ಜ್ಞರು ಭಾಗವಹಿಸಿದ್ದರು. ನಮ್ಮ ಹೆಮ್ಮೆಯ ಕಲೆಯನ್ನು ವಿಶ್ವಮಾನ್ಯ ಭಾಷೆಯಾದ ಸಂಸ್ಕೃತದಲ್ಲಿ ಪ್ರಸ್ತುತಿಪಡಿಸಿದವರು ಕನ್ನಡಿಗರಾದ ಶ್ರೀ ವೆಂಕಟೇಶ ಮೂರ್ತಿ. ಕಾಸರಗೋಡಿನವರು. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಗಳ ಈ ಸುಪುತ್ರ, ನೀರ್ಚಾಲಿನ ಮಹಾಜನ ಸಂಸ್ಕೃತ-ಕಾಲೇಜು-ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪಡೆಯುತ್ತಲೇ ಅಲ್ಲಿ ಯಕ್ಷಗಾನದ ನಾಟ್ಯದ ತರಬೇತಿಯನ್ನು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಗಳಿಸಿದರು. ತಮ್ಮ ಸಹಧರ್ಮಿಣಿ ಶುಭಲಕ್ಷ್ಮೀ ಹಾಗೂ ಪುತ್ರ ಈಶಾನ ನೊಂದಿಗೆ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ದಲ್ಲಿ ಉಪನ್ಯಾಸಕರಾಗಿದ್ದಾರೆ. ಸಂಸ್ಕೃತ ನಾಟಕದ ಸನ್ನಿವೇಶಗಳಿಗೆ ಯಕ್ಷಗಾನದ ರೂಪವನ್ನು ಕೊಟ್ಟು ಯಕ್ಷಗಾನ-ಏಕಪಾತ್ರಾಭಿನಯದ ಈ ಮನಮೋಹಕ ಪ್ರಯೋಗವನ್ನು ಮೆಚ್ಚಿದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಈ ಬಾರಿಯ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ರೋಚಕ ಅಭಿನಯವನ್ನು ಪ್ರದರ್ಶಿಸಲು ಆಹ್ವಾನವನ್ನಿತ್ತಿತು. ಮುಉರ್ತಿ ಯವರು ಪ್ರದರ್ಶಿಸಿದ ಕೌರವೌರವಮ್ (ಗದಾಯುದ್ಧ-ಊರುಭಂಗ) ಎಂಬ ಕಥಾ-ಪ್ರಸಂಗದ ದುರ್ಯೋಧನನ ರೌಷ-ವಿಲಾಪ ದ ಅಭಿನಯ ಪ್ರೇಕ್ಷಕರ ಹೃದಯ ಸ್ಪರ್ಶಿಯಾಗಿ ಮೂಡಿ ಬಂತು. ಭಾರತದ ವಿವಿಧ ರಾಜ್ಯಗಳಿಂದ ಬಂದ ನಾಟಕಾಭಿಮಾನಿಗಳಿಗೆ, ವಿವಿಧ ದೇಶಗಳಿಂದ ಬಂದ ಅನಿವಾಸಿ-ಭಾರತೀಯರಿಗೆ ಮತ್ತು ಭಾರತೀಯತೆಯನ್ನು ತಿಳಿಯುವ ತವಕದ ವಿದೇಶೀಯರಿಗೆ ಇದೊಂದು ರಸಭರಿತ ಔತಣವಾಯಿತು. ಈ ಮನೋಜ್ಞ ಭಾರತೀಯ ಅಭಿನಯವನ್ನು ವಿಶ್ವಮಾನ್ಯ ಭಾರತೀಯ ಭಾಷೆಯಿಂದಲೇ ನೋಡಿ ಆನಂದಿಸಿದ ವಿಶ್ವಸ್ತರದ ಪ್ರೇಕ್ಷಕರಿಂದ ತುಂಬು ಹೃದಯದ ಪ್ರಶಂಸೆ ವ್ಯಕ್ತವಾಯಿತು. ನಾವು ಬೇರೆ ರಾಜ್ಯಕ್ಕೆ, ದೇಶಕ್ಕೆ ಹೋದಾಗ ಅಲ್ಲಿನವರಿಗೆ ನಮ್ಮ ನೆಲದ ವೈಶಿಷ್ಟ್ಯವನ್ನು ಹೇಳುವ ಸಂಸ್ಕೃತಿಯ ವೈಭವಗಳನ್ನ ತೋರಿಸುವ ಒಂದು ರೀತಿಯ ತವಕ ನಮಗಿರುತ್ತದೆ ತಾನೇ? ಅದಕ್ಕೆ ಸಹಾಯ ಮಾಡುವ ಮಾಧ್ಯಮಗಳಲ್ಲೊಂದು ನಮ್ಮ ಜಾನಪದ-ಸಾಂಸ್ಕೃತಿಕ ಕಲೆಗಳ ಪ್ರದರ್ಶನ. ಕನ್ನಡೇತರರಿಗೆ ಕನ್ನಡಿಗರು ಕೊಡಬಹುದಾದ ಕೊಡುಗೆಗಳಲ್ಲಿ ಕನ್ನಡ ನೆಲದ ಕಲಾ ಪ್ರದರ್ಶನವು ಒಂದು. ಕನ್ನಡನಾಡಿನ ಕಲೆಯಾದ ಯಕ್ಷಗಾನದ ಸವಿಯನ್ನು ಕನ್ನಡ ತಿಳಿಯದವರಿಗೂ ಕೊಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದಕ್ಕಾಗಿ ಆಯಾಯ ಪ್ರದೇಶಗಳ ಭಾಷೆಗಳಲ್ಲಿ ( ಹಿಂದಿ ಹಾಗೂ ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ಇಂಗ್ಲೀಷಿನಲ್ಲಿ) ನಡೆಯುವ ಪ್ರದರ್ಶನದ ಬಗ್ಗೆ ನಾವು ಕೇಳಿದ್ದೇವೆ. ನಾಟ್ಯರಂಗಕ್ಕೆ ವಿಪುಲ ಸಾಹಿತ್ಯದ ಕೊಡುಗೆಯನ್ನೀಯುವ ಸಂಸ್ಕೃತಭಾಷೆಯಲ್ಲಿ ಯಕ್ಷಗಾನದ ಪ್ರದರ್ಶನ ವಾದರೆ ಹೇಗಿರಬಹುದು? ಇಂತಹ ಒಂದು ಪ್ರಯತ್ನ ಜಪಾನಿನಲ್ಲಿ ನಡೆಯಿತು. ಅಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕಲೆಗಳ ಪ್ರತೀಕವಾಗಿ ಕನ್ನಡನಾಡಿನ ಯಕ್ಷಗಾನ ಸಂಸ್ಕೃತದಲ್ಲಿ ಪ್ರದರ್ಶನಗೊಂಡಿತು. ತಮ್ಮಬಾಲ್ಯದಲ್ಲಿ ಪಡೆದ ಗ್ರಾಮೀಣ ಕಲೆಯನ್ನು ಸಂಸ್ಕೃತ ನಾಟಕ ರಂಗಕ್ಕೆ ಜೋಡಿಸಿ ದೆಹಲಿಯ ತಮ್ಮ ಸಂಸ್ಥೆಯ ವಸಂತೋತ್ಸವದಲ್ಲಿ , ಉಜ್ಜಯಿನಿಯ ನಾಟ್ಯ ಮಹೋತ್ಸವದಲ್ಲಿ, ಭೋಪಾಲದ ಸಂಸ್ಕೃತ ರಂಗಮಂಚ ದಲ್ಲೂ ಪ್ರದರ್ಶಿಸಿ ಸಂಸ್ಕೃತ-ವಿದ್ವಾಂಸರ, ಕಲಾ ರಸಿಕರ ಮನವನ್ನು ರಂಜಿಸಿದ್ದಾರೆ. ತಿರುಪತಿಯ ಸಂಸ್ಕೃತ ವಿದ್ಯಾಪೀಥದಿಂದ ಸಂಸ್ಕೃತದಲ್ಲಿ ಉನ್ನತ ವಿದ್ಯಾಬ್ಯಾಸವನ್ನು ಮಾಡಿದ ಈ ಕಲಾವಿದ ಸಂಸ್ಕೃತವನ್ನು ಜನಮಾನಸಕ್ಕೊಯ್ಯುವ ಕಾರ್ಯದಲ್ಲೂ ನಿರತರಾಗಿದ್ದಾರೆ. ಸಂಸ್ಕೃತದಿಂದ ಕನ್ನಡಿಗರಿಗೇನು ಪ್ರಯೋಜನ? ಕನ್ನಡದಿಂದ ಸಂಸ್ಕೃತ ಕ್ಕೇನು ಸಿಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಇದೊಂದು ಉದಾಹರಣೆಯಾಗಬಹುದೇನೋ?

23 October 2009

ಕೊನೆಯ ಚಿತ್ರ...

ಮೊನ್ನೆ ಅಸುನೀಗಿದ ನಾಲ್ವರು ಬಾಲಕರಲ್ಲಿ ಕಿರಿಯವನಾದ ಅಜಿತ್ ಬಿ.ಟಿ ಬಿಡಿಸಿದ ಚಿತ್ರ ಇದು. ಈಗ ನಿಮ್ಮ ಮುಂದೆ ಇದೆ. ಇದು ಆ ಹುಡುಗ ಬಿಡಿಸಿದ ಕೊನೆಯ ಚಿತ್ರ. ಗುರುವಾರ ಶಾಲೆಯಲ್ಲಿ ಜರಗಿದ ಕಲೋತ್ಸವ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಬಿಡಿಸಿದ ಪೆನ್ಸಿಲ್ ಡ್ರಾಯಿಂಗ್ ಇದು. ಶುಕ್ರವಾರ ಶಾಲಾ ಕ್ರೀಡಾಕೂಟ ಜರಗಿತ್ತು. ಈತ ಮತ್ತು ಅಣ್ಣಂದಿರು ಆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶನಿವಾರ ದೇವರು ಬಿಡಿಸಿದ ಆ ನಾಲ್ಕು ಪುಟಾಣಿಗಳ ಚಿತ್ರವನ್ನು ಯಮ ಬಲಿ ತೆಗೆದುಕೊಂಡ...
ಅತ್ಯಂತ ಬಡ ಕುಟುಂಬದ ಈ ಬಾಲಕರ ಪೈಕಿ ಇನ್ನುಳಿದವರಿಗೆ ಆಶ್ರಯ ನೀಡುವುದು ಸಮಾಜದ ಕರ್ತವ್ಯ ಎನ್ನುವ ದೃಷ್ಟಿಯಿಂದ ಕುಟುಂಬ ಸಹಾಯ ನಿಧಿಯನ್ನು ಸ್ಥಾಪಿಸಿದ್ದೇವೆ. ಇದಕ್ಕಾಗಿ ಹಳೆ ವಿದ್ಯಾರ್ಥಿಗಳ, ರಕ್ಷಕ ಶಿಕ್ಷಕ ಸಂಘದ ಸಹಾಯ ಸಮಿತಿಯನ್ನೂ ರೂಪೀಕರಿಸಲಾಗಿದೆ. ಅಜಿತ್ ಕುಟುಂಬದಲ್ಲಿ ತಾಯಿ ತಂದೆಯರ ಹೊರತಾಗಿ ಉಳಿದಿರುವುದು ಮಾನಸಿಕ ವಿಕಲ ಚೇತನೆ ತಂಗಿ ಮಾತ್ರ....
ಆಸಕ್ತರು ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾದ ಚಾಲ್ತಿ ಖಾತೆ ಸಂಖ್ಯೆ ೭೧೬೦ಕ್ಕೆ ದೇಣಿಗೆ ಸಲ್ಲಿಸಬೇಕಾಗಿ ಅಪೇಕ್ಷೆ.

19 October 2009

.... ಅಶ್ರುತರ್ಪಣ

ಕ್ಷಮೆ ಇರಲಿ, ಬೇವು ಚಿಗುರೊಡೆದ ಸಂತಸದ ಸುದ್ದಿಯ ಹಿಂದೆ, ಬೆಳೆಯುತ್ತಿರುವ ನಾಲ್ಕು ಚಿಗುರುಗಳು ಮುರುಟಿಹೋದ ಸುದ್ದಿ ಬರೆಯಲು ದುಃಖದ ಕಟ್ಟೆ ಸಮ್ಮತಿಸುವುದಿಲ್ಲ. ನಿಮ್ಮ ಮುಂದೆ ಇಡುವ ವಿಚಾರ ಮೌನ ಮಾತ್ರ.... ಮೊನ್ನೆ ನರಕ ಚತುರ್ದಶಿಯ ಹಬ್ಬದ ದಿನ, ೧೭.೧೦.೨೦೦೯ ಶನಿವಾರ ಕಲ್ಲಕಟ್ಟ ಸಮೀಪದ ಬಾರಿಕ್ಕಾಡು, ಅಜ್ಜಾವರ ಕ್ಷೇತ್ರದ ಬಳಿಯಲ್ಲಿ ಹರಿಯುವ ಮಧುವಾಹಿನಿ ನದಿಯಲ್ಲಿ ಸ್ನಾನಕ್ಕಿಳಿದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಲಾಶ್, ರತನ್ ಕುಮಾರ್ ಮತ್ತು ಅಜಿತ್ ಹಾಗೂ ಕಳೆದ ವರ್ಷ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಜೀಶ್ ಹೀಗೆ... ನಾಲ್ವರು ವಿದ್ಯಾರ್ಥಿಗಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ತಲಪುವ ಮುನ್ನವೇ ಅಸುನೀಗಿದ ಈ ನಾಲ್ವರು ಬಾಲಕರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ತಂದೆತಾಯಿ, ಕುಟುಂಬ ಹಾಗೂ ಮಿತ್ರವರ್ಗಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಪರಮಾತ್ಮನು ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

16 October 2009

ಬೇವು ಚಿಗುರಿತು...!

ಕರಾವಳಿಯ ಮಣ್ಣಿನಲ್ಲಿ ಕಹಿಬೇವಿನ ಗಿಡವನ್ನು ಬದುಕಿಸುವುದು ಮತ್ತು ಉಳಿಸಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸ. ಇಲ್ಲಿನ ಹವಾಗುಣ ಮತ್ತು ಮಣ್ಣಿನ ತರಗತಿ ಬೇವು ಬೆಳೆಗೆ ಅನುಕೂಲಕರವಾಗಿಲ್ಲ. ಆಯುರ್ವೇದ ಔಷಧ ಲೋಕಕ್ಕೂ ಕಹಿಬೇವು ಅನಿವಾರ್ಯವಾದ ಸಂಬಾರವಾದ್ದರಿಂದ ಕಹಿಬೇವಿಗೆ ಈ ನಾಡಿನಲ್ಲಿ ಭಾರೀ ಬೇಡಿಕೆ. ಇಂತಹಾ ಪರಿಸ್ಥಿತಿಯಲ್ಲೂ ನಮ್ಮ ಶಾಲೆಯಲ್ಲಿ ಕಳೆದ ಒಂದು ಶತಮಾನದಿಂದ ಕಹಿಬೇವಿನ ಮರವೊಂದು ಸೆಟೆದು ನಿಂತಿರುವುದು ಅನೇಕರ ಅಚ್ಚರಿಗೆ, ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಊರಮಂದಿಗೆಲ್ಲ ಔಷಧೀಯ ಗುಣಗಣಿಯಾಗಿ ಅಪಾರ ಸಹಾಯನೀಡಿದ ಈ ವೃಕ್ಷ ಅಂಗಳದಲ್ಲೇ ಸುತ್ತಾಡುತ್ತಿದ್ದ ಪುಟಾಣಿ ವಿದ್ಯಾರ್ಥಿಗಳನ್ನೂ, ನೆರೆಯವರನ್ನೂ ಬೇಸರದಲ್ಲಿ ಸಿಲುಕಿಸಿ ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಗಾಳಿಮಳೆಗೆ ಧರಾಶಾಯಿಯಾಯಿತು. ಪ್ರತಿಷ್ಟಿತ ‘ಮನೋರಮಾ’ ನ್ಯೂಸ್ ಚಾನಲ್ ಸಹಿತ ಅನೇಕ ಕನ್ನಡ, ಮಲಯಾಳ ಪತ್ರಿಕೆಗಳು ಆ ಸಂದರ್ಭದಲ್ಲಿ ವೃಕ್ಷ ಪಿತಾಮಹನಿಗೆ ಅಶ್ರುತರ್ಪಣಗೈದಿದ್ದವು.
ನಾಡಿನಾದ್ಯಂತದಿಂದ ಬಂದ ಒಕ್ಕೊರಲ ಅಭಿಪ್ರಾಯದಂತೆ ಶಾಲಾ ಆಡಳಿತ ಮಂಡಳಿಯು, ಆ ಮರದ ಜೊತೆ ಅವಿನಾಭಾವ ಸಂಬಂಧ ಹೊತ್ತಿದ್ದ ‘ಮಹಾಜನ’ ಖಂಡಿಗೆ ಶಾಮ ಭಟ್ಟರ ನಿರ್ದೇಶನದಂತೆ ಕಹಿಬೇವಿನ ಉಳಿವಿಗಾಗಿ ಚಿಕಿತ್ಸೆ ನೀಡಿತು. ಎಲ್ಲರ ಪ್ರಾರ್ಥನೆಯ ಪರಿಣಾಮವಾಗಿ ಈಗ ಒಂದೆರಡು ತಿಂಗಳ ನಂತರ ಬೇವು ಮತ್ತೆ ಚಿಗುರಿದೆ, ಇನ್ನಷ್ಟು ವರ್ಷ ಅನೇಕ ಮಂದಿಯ ಖಾಯಿಲೆಗಳನ್ನು ದೂರಮಾಡುವ ವಿಶ್ವಾಸವನ್ನು ಮೂಡಿಸಿದೆ.

15 October 2009

ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿ

ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಷೇಕ್.ಎಸ್.ಎನ್, ನವನೀತಕೃಷ್ಣ.ಯು, ಅನುತೇಜ್.ಎಸ್, ದೀಪಕ್.ಎಂ, ಗೋವಿಂದಪ್ರಕಾಶ.ಪಿ.ಜಿ, ಅವಿತೇಶ್.ಬಿ, ಪ್ರಶಾಂತಕೃಷ್ಣ, ರಾಮಕಿಶನ್.ಎಂ, ಶ್ರೀನಿಧಿ, ನಿತಿನ್.ಎಂ.ಡಿ, ಶ್ರೀನಿವಾಸ.ಎಚ್.ಎನ್ ಮತ್ತು ವಿನೀತ್ ಶಂಕರ್.ಎಚ್ ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

13 October 2009

‘ಗೋವಿಂದಣ್ಣ’ ಅಸ್ತಂಗತ - ಶ್ರದ್ಧಾಂಜಲಿ

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಜವಾನನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನ ‘ಗೋವಿಂದಣ್ಣ’ನಾಗಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಗೋವಿಂದ ಭಟ್(೫೨) ನಿನ್ನೆ ರಾತ್ರಿ ೧.೩೦ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ೧೫.೦೫.೧೯೫೭ ರಂದು ಕೃಷ್ಣ ಭಟ್ಟರ ಪುತ್ರನಾಗಿ ಜನಿಸಿದ ಅವರು ೧.೧೧.೧೯೮೯ ರಂದು ನೀರ್ಚಾಲಿನಲ್ಲಿ ಉದ್ಯೋಗಿಯಾಗಿ ಸೇವೆ ಆರಂಭಿಸಿದ್ದರು. ಅವರು ಪತ್ನಿ ರಾಜೇಶ್ವರಿ, ತಾಯಿ, ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳಿಗೆ ರಜೆಸಾರಲಾಗಿದೆ. ಮೃತರ ಆತ್ಮಕ್ಕೆ `ಮಹಾಜನ' ಶ್ರದ್ಧಾಂಜಲಿಗಳನ್ನೂ ಸಮರ್ಪಿಸುತ್ತದೆ.

08 October 2009

ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿ

ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ವಿದ್ಯಾ.ಕೆ.ಎನ್, ಸುಶ್ಮಿತಾ.ಬಿ, ಮಾನಸ.ಪಿ.ಎಸ್, ಕೃತಿ.ಪಿ.ಕೆ, ಅಕ್ಷತಾ ದುರ್ಗಾ ಮತ್ತು ಐಶ್ವರ್ಯಾ ಆಳ್ವಾ.ಬಿ ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

06 October 2009

ಯು.ಎಸ್.ಎಸ್. ಪ್ರಶಸ್ತಿ

೨೦೦೮-೦೯ನೇ ಸಾಲಿನ ಯು.ಎಸ್.ಎಸ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಕೃಷ್ಣ. ಎನ್.ಕೆ, ರಂಜಿತಾ ಮತ್ತು ಸುಬ್ರಹ್ಮಣ್ಯ ಪ್ರಸಾದ ತೇರ್ಗಡೆಹೊಂದಿ ಸ್ಕಾಲರ್‌ಶಿಪ್ ಪಡೆಯಲು ಅರ್ಹತೆಹೊಂದಿದ್ದಾರೆ.

03 October 2009

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮಲ್ಲಿ... ಬನ್ನಿ...

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ವತಿಯಿಂದ ಜನವರಿ ಮೊದಲ ವಾರದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ನಡೆಸಲು ತೀರ್ಮಾನಿಸಿದ ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ಅವರು ೦೩.೧೦.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೆಜು ಪ್ರೌಢಶಾಲೆಯಲ್ಲಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಶಕ್ತಿಯನ್ನು ಈ ಸಮ್ಮೇಳನ ಪ್ರತಿಬಿಂಬಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಒತ್ತು ಕೊಡುವ ಕಾರ್ಯಕ್ರಮಗಳು ಈ ಸಮ್ಮೇಳನದಲ್ಲಿ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲ ಕನ್ನಡಿಗರು ಒಂದಾಗಿ ನಿಂತು ದುಡಿಯಬೇಕಾಗಿದೆ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷ ಎಸ್.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಜನೋತ್ಸವದ ರೂಪುರೇಷೆಯ ಬಗೆಗೆ ಯುವಜನೋತ್ಸವ ಸಮಿತಿ ಅಧ್ಯಕ್ಷ ಮಾಯಿಪ್ಪಾಡಿ ವಿಶ್ವನಾಥ ರೈ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಖೆಯ ಬಗ್ಗೆ ಸಮಿತಿ ಸಂಚಾಲಕ ಶ್ರೀಕೃಷ್ಣಯ್ಯ ಅನಂತಪುರ ವಿವರಿಸಿದರು.
ಎಂ.ವಿ.ಭಟ್ ಮಧುರಂಗಾನ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಸುಕುಮಾರ ಆಲಂಪಾಡಿ, ಜಯದೇವ ಖಂಡಿಗೆ ಹಾಗೂ ಸ್ವಾಗತ ಸಮಿತಿಯ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಎಂ.ವಿ ಸ್ವಾಗತಿಸಿ ತಾಲೂಕು ಕಾರ್ಯದರ್ಶಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಗೌರವ ಕಾರ್ಯದರ್ಶಿ ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು.

30 September 2009

ಜಿಲ್ಲಾ ಥ್ರೋ ಬಾಲ್ ಪ್ರಶಸ್ತಿ

ಕಾಸರಗೋಡು ಜಿಲ್ಲಾ ಮಟ್ಟದ ಥ್ರೋ ಬಾಲ್ ಸ್ಪರ್ಧೆಯ ಹುಡುಗರ ಮತ್ತು ಹುಡುಗಿಯರ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಬಂದಿದ್ದೇವೆ.

28 September 2009

ಸರಸ್ವತೀ ನಮಸ್ತುಭ್ಯಂ...

ಇಂದು ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಪೂಜೆ, ಪೂರ್ವವಿದ್ಯಾರ್ಥಿ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ಜರಗಿತು. ಅಷ್ಟಾವಧಾನ ಸೇವೆ ಪೂಜಾಕಾರ್ಯಕ್ರಮದ ವಿಶೇಷ ಆಕರ್ಷಣೆ. ವ್ಯವಸ್ಥಾಪಕರು, ನಿವೃತ್ತ ಅಧ್ಯಾಪಕರು, ಊರ ಮಹನೀಯರು, ಅಧ್ಯಾಪಕ - ವಿದ್ಯಾರ್ಥಿ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.

26 September 2009

ಜಿಲ್ಲಾ ಸ್ವತಂತ್ರ ಸಾಫ್ಟ್‌ವೇರ್ ಪ್ರಬಂಧ ಸ್ಪರ್ಧೆ - ಶಾಂತಿ.ಕೆ ಪ್ರಥಮ

ಸ್ವತಂತ್ರ ಸಾಫ್ಟ್‌ವೇರ್ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಐಟಿ ಸ್ಕೂಲ್ ಆಶ್ರಯದಲ್ಲಿ ೨೪.೦೯.೨೦೦೯ ಗುರುವಾರ ಕಾಸರಗೋಡಿನಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಶಾಂತಿ.ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಕೆ. ಗಣೇಶ್ ಭಟ್ ಇವರ ಪುತ್ರಿ. ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಪ್ರಶಸ್ತಿ ವಿತರಿಸಿದರು.

24 September 2009

ಚಿತ್ರ - ಅನುಶ್ರೀ

ಅಕ್ಟೋಬರ್ ೨೧ ರಿಂದ ೩೦ ರ ತನಕ ಶಾಲಾ ಮದ್ಯಾವಧಿ ಪರೀಕ್ಷೆ. ಇನ್ನು ಆ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ.

23 September 2009

ಶಟಲ್ ಬ್ಯಾಡ್ಮಿಂಟನ್ - ಪ್ರಶಸ್ತಿ

ಕಾಸರಗೋಡು ಜಿಲ್ಲಾ ಮಟ್ಟದ ಹುಡುಗಿಯರ ಜೂನಿಯರ್ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಬಂದಿದ್ದಾರೆ.

22 September 2009

ದಟ್ಸ್ ಕನ್ನಡದಲ್ಲಿ ನಮ್ಮ ಶಾಲೆ

ದಟ್ಸ್ ಕನ್ನಡದ ಪರಿಚಯ ನಿಮಗೆಲ್ಲ ಇರಬಹುದು. ನಮ್ಮ ಬ್ಲಾಗ್ ಓದಿ ದಟ್ಸ್ ಕನ್ನಡದ ಸಂಪಾದಕ ಶ್ಯಾಮ್ ಸುಂದರ್ ಶಾಲೆಯ ಬಗ್ಗೆ ಪರಿಚಯ ಲೇಖನವನ್ನು ಕೇಳಿದ್ದರು ಮತ್ತು ಸಕಾಲದಲ್ಲಿ ಆ ಲೇಖನವನ್ನು ಪ್ರಕಟಿಸಿದ್ದರು. ಧನ್ಯವಾದಗಳು ಅವರಿಗೆ... ನಿಮ್ಮೆಲ್ಲರ ಓದಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ. http://thatskannada.oneindia.in/literature/my-karnataka/2009/0910-neerchalu-mahajan-sanskrit-college-kasargod.html

18 September 2009

ಚಿತ್ರ - ಅನುಶ್ರೀ

ಅನುಶ್ರೀ ಬಿಡಿಸಿದ ಹಾಸ್ಯ ಚಿತ್ರ ಇರಿಸಿದ್ದೇವೆ, ನಿಮ್ಮ ಮುಂದೆ...

17 September 2009

ಬಯಲು ಪ್ರವಾಸ

ಬಯಲು ಪ್ರವಾಸದ ಅಂಗವಾಗಿ ಮೊನ್ನೆ ನಮ್ಮ ವಿದ್ಯಾರ್ಥಿಗಳು ನೀರ್ಚಾಲು ವಾಷೆ ಸತ್ಯನಾರಾಯಣ ಭಟ್ಟರ ಮನೆ ಸಂದರ್ಶಿಸಿ ಹಳೆಯ ಕಾಲದ ಅಳತೆ ಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

16 September 2009

ಶಾಲಾ ಸಂದರ್ಶನ

ಸನ್ಮಾನ್ಯ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಎನ್. ಕೆ. ಮೋಹನದಾಸ್ ಇಂದು ನಮ್ಮ ಶಾಲಾ ಸಂದರ್ಶನದಲ್ಲಿದ್ದಾರೆ. ನಮ್ಮ ಬೆಳವಣಿಗೆಗಾಗಿ ಇನ್ನಷ್ಟು ಸಲಹೆಗಳನ್ನೂ ನೀಡಿದ್ದಾರೆ. ಧನ್ಯವಾದಗಳು... ಅವರಿಗೂ, ಅವರ ತಂಡಕ್ಕೂ...

14 September 2009

ಕ್ರೀಡಾ ವಿಶೇಷಾಂಕ ಬಿಡುಗಡೆ

ಶಾಲಾ ಚಟುವಟಿಕೆಯ ಅಂಗವಾಗಿ ೧೦ಎ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ ಕ್ರೀಡಾ ವಿಶೇಷಾಂಕವನ್ನು ಶಾರೀರಿಕ ಶಿಕ್ಷಣ ಶಿಕ್ಷಕ ಎಂ. ಸೂರ್ಯನಾರಾಯಣ ಬಿಡುಗಡೆಗೊಳಿಸಿದರು. ಕನ್ನಡ ಅಧ್ಯಾಪಿಕೆ ಶೈಲಜ.ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವಾತಿ.ಕೆ ಸ್ವಾಗತಿಸಿ ವಿಜೇತ ಬಿ.ಕೆ ವಂದಿಸಿದರು. ಪ್ರೀತಿ.ಎನ್ ಕಾರ್ಯಕ್ರಮ ನಿರೂಪಿಸಿದರು.

10 September 2009

ಚಿತ್ರ - ಅವಿತೇಶ್. ಬಿ

ನಮ್ಮ ಪ್ರಯತ್ನಗಳು ಮುಂದುವರಿಯುತ್ತಿವೆ. ಹತ್ತನೇ ತರಗತಿ ಪರೀಕ್ಷೆಗೆ ತಯಾರಾಗುತ್ತಿರುವ ಹುಡುಗ ಬಿಡಿಸಿದ ಚಿತ್ರ ಇದು.

09 September 2009

“ಯಕ್ಷಗಾನ ಗಂಡುಕಲೆ”:- ಮಾಧವ ತಲ್ಪಣಾಜೆ

“ಕರಾವಳಿ ಮಲೆನಾಡಿನ ಗಂಡುಕಲೆ ಯಕ್ಷಗಾನವು ಕಲಾಲೋಕಕ್ಕೆ ನೀಡಿದ ಸಂಭಾವನೆ ಅನನ್ಯವಾದುದು, ಈ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು” ಎಂದು ಯಕ್ಷಗಾನ ಕಲಾವಿದ ಮಾಧವ ತಲ್ಪಣಾಜೆ ಅಭಿಪ್ರಾಯಪಟ್ಟರು. ಅವರು ೦೮.೦೯.೨೦೦೯ ಮಂಗಳವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಭಟ್.ಪಿ ಅಧ್ಯಕ್ಷತೆ ವಹಿಸಿದ್ದರು. ನಾಲ್ಕನೇ ತರಗತಿ ವಿದ್ಯಾರ್ಥಿಗಳು ಯಕ್ಷಗಾನ ಕುರಿತಾದ ಸಂವಾದ ನಡೆಸಿದರು. ಶಿಕ್ಷಕಿ ಮಾಲತಿ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಸಂದೇಶ ರೈ ವಂದಿಸಿದರು.

07 September 2009

ಸುಧಾ ಪತ್ರಿಕೆಗೆ ನಮ್ಮ ನಮನಗಳು

ಆರಂಭದಿಂದಲೂ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಬೇದ್ರೆ ಮಂಜುನಾಥ್ ಈ ಬಾರಿ ಸುಧಾ ಪತ್ರಿಕೆಯಲ್ಲಿ ಬದಲಾದ ಶಿಕ್ಷಕರ ಬಗ್ಗೆ 'ಶಿಕ್ಷಕರು ಬದಲಾಗಿದ್ದಾರೆ!' ಎಂಬ ಲೇಖನ ಬರೆದಿದ್ದಾರೆ. ಜೊತೆಯಲ್ಲಿ ನಮ್ಮ ಬ್ಲಾಗ್ ಕುರಿತ ಪ್ರಶಂಸೆಗಳನ್ನು ಬಾಕ್ಸ್ ಆಗಿ ದಾಖಲಿಸಿದ್ದಾರೆ. ನಮ್ಮ ನಮನಗಳು ಅವರಿಗೂ, ಸುಧಾ ಪತ್ರಿಕೆಗೂ...

ನೀರ್ಚಾಲಿನಲ್ಲಿ ಶಿಕ್ಷಕರ ದಿನಾಚರಣೆ

“ಅಧ್ಯಾಪಕರ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿ, ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ಜನಸಾಮಾನ್ಯರ ಮನದಲ್ಲೂ ಅಚ್ಚಳಿಯದ ನೆನಪು ಉಳಿಸಿದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ನಾವು ಇಂದು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸೂಕ್ತ ಕಿವಿ ಮಾತುಗಳನ್ನು ಹೇಳಿ ಅವರನ್ನು ತಿದ್ದಿ ತೀಡುವ ಅಧ್ಯಾಪಕರಿಗೆ ಗೌರವ ಸಲ್ಲಿಸುವುದು ನಾಳಿನ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಉಪಯುಕ್ತವಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ದಿನಾಂಕ ೦೭.೦೯.೨೦೦೯ ಸೋಮವಾರದಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಎಂ.ವಿ.ಗೋಪಾಲಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್, ಹಿರಿಯ ಅಧ್ಯಾಪಕರಾದ ಕನ್ನೆಪ್ಪಾಡಿ ನಾರಾಯಣ ಭಟ್, ಭುವನೇಶ್ವರಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಅವಿತೇಶ್.ಬಿ ಶುಭಾಶಯಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಮುರಳಿಕೃಷ್ಣ ಶರ್ಮ ಸ್ವಾಗತಿಸಿ ಲತಾಶಂಕರಿ.ಕೆ ವಂದಿಸಿದರು. ಚೈತ್ರಾ. ಟಿ. ಎಸ್ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಕುಮಾರ್ ಪ್ರಾರ್ಥಿಸಿದರು.

29 August 2009

ಓಣಂ ಹಬ್ಬದ ಶುಭಾಶಯಗಳು

ನಮಗೆ ಮತ್ತೆ ರಜಾ ಪರ್ವ. ಈ ಬಾರಿ ಕೇರಳದ ನಾಡಹಬ್ಬ ಓಣಂ. ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ರಜೆ ಮುಗಿಸಿ ವಿದ್ಯಾರ್ಥಿಗಳೆಲ್ಲ ಸೆಪ್ಟೆಂಬರ್ ಏಳರಂದು ಶಾಲೆಗೆ ಹಾಜರಾಗಲಿದ್ದಾರೆ. ಹೊಸ ಉತ್ಸಾಹದೊಂದಿಗೆ...

27 August 2009

ಕವನ - ಸಂಧ್ಯಾ ಸಮಯ :ಮಾನಸ. ಪಿ.ಯಸ್

ಸಂಜೆಯ ಸಮಯದಿ ಮುಳುಗುವ ಸೂರ್ಯನ

ಕಿರಣದ ಸೊಬಗನು ನೋಡಿದೆಯಾ

ಕಡಲಲಿ ನರ್ತನವಾಡುವ ಕಿರಣದ

ಅಲೆಗಳ ಅಂದವ ಸವಿಯುವೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ಕೆಂಬಣ್ಣದ ಬಾನಲಿ ಹೊಳೆಯುವ ಮೇಘದಿ

ಹರಿಯುವ ರಕ್ತವ ನೋಡಿದೆಯಾ

ಸಂಜೆಯ ಕಂಪಲಿ ಮಕ್ಕಳ ಆಟದ

ಅಂದವ ನೀನು ಸವಿಯುವೆಯ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ಚಿಲಿಪಿಲಿಗುಟ್ಟುವ ಹಕ್ಕಿಯು ತನ್ನಯ

ಗೂಡನು ಸೇರುವ ಸಂತಸ ಸವಿಯುವೆಯಾ

ಮೆಲ್ಲನೆ ತನ್ನಯ ಮರಿಗಳ ಮುದ್ದಿಸಿ

ಹಣ್ಣನು ಕೊಡುವುದ ನೋಡಿದೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ತಣ್ಣನೆ ಗಾಳಿಯು ಬೀಸುತ ಮೆಲ್ಲಗೆ

ಕಂಪನು ತರುವುದ ಸವಿಯುವೆಯಾ

ಗಾಳಿಯ ರಭಸಕೆ ಮಾಮರ ಚಾಮರ

ಮಾಡುವ ನರ್ತನ ನೋಡಿದೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

21 August 2009

ಹೂ ರಂಗವಲ್ಲಿ

ಓಣಂ ಔತಣದ ಸಡಗರದ ಜೊತೆಗೆ ಶಾಲಾ ಗಣಿತ ಸಂಘದ ಆಶ್ರಯದಲ್ಲಿ ಹೂ ರಂಗವಲ್ಲಿ ಸ್ಪರ್ಧೆ. ಎಂಟನೇ ತರಗತಿಯ ಕುಸುಮಾ ಮತ್ತು ತಂಡದವರು ಪ್ರಥಮ ಸ್ಥಾನ ಗಳಿಸಿದರು.

ಇಂದು ಓಣಂ ಔತಣ


ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಇಂದು ಸಂಭ್ರಮದ ದಿನ. ರಂಝಾನ್ ಹಬ್ಬದ ನಿಮಿತ್ತ ವಾರ ಮುಂಚಿತವಾಗಿ ಓಣಂ ಔತಣ ಸವಿಯುವ ಸೌಭಾಗ್ಯ. ಹಗ್ಗ ಜಗ್ಗಾಟ, ಹೂ ರಂಗವಲ್ಲಿ ಇತ್ಯಾದಿ ಸ್ಪರ್ಧೆಗಳು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಅವರಿಂದ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರ ಉಪಸ್ಥಿತಿಯಲ್ಲಿ ಉದ್ಘಾಟನೆ.

20 August 2009

ಹೊಸ ಪ್ರಯತ್ನದ ಕಡೆಗೆ...

ನಮ್ಮ ಬ್ಲಾಗ್ ಈ ತನಕ ವಿಂಡೋಸ್ ನಲ್ಲಿ ನಡೆದು ಬರುತ್ತಿತ್ತು. ನಮ್ಮ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಳಕೆ ಕಡ್ಡಾಯವಾಗಿ ಎಂಟನೇ ತರಗತಿಯಿಂದಲೇ ಆರಂಭವಾಗುತ್ತಿದೆ. ಆದರೆ ಅವರೆಲ್ಲ ಲಿನಕ್ಸ್ ತಂತ್ರಾಂಶವನ್ನು ಇದಕ್ಕಾಗಿ ಬಳಸಿಕೊಳ್ಳುತ್ತಾರೆ. ನಮ್ಮ ನಡುವಿನ ಈ ತೊಂದರೆಯನ್ನು ಈಗ ಪರಿಹರಿಸಿಕೊಂಡಿದ್ದೇವೆ. ಈಗ ಲಿನಕ್ಸ್ ನಲ್ಲಿ ಟೈಪು ಮಾಡಿದ ಕನ್ನಡವನ್ನು ಬ್ಲಾಗ್ ನಲ್ಲಿ ಅಪ್ ಡೇಟ್ ಮಾಡಿಕೊಳ್ಳುವಲ್ಲಿ ನಾವು ಮತ್ತು ವಿದ್ಯಾರ್ಥಿಗಳು ಸಮರ್ಥರಾಗಿದ್ದೇವೆ. ಇನ್ನು ನಮ್ಮ ಬ್ಲಾಗ್ ಟೈಪಿಂಗ್ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ಹೊತ್ತುಕೊಳ್ಳುತ್ತಾರೆ. ನಿಮ್ಮ ಸಲಹೆ, ಸಹಕಾರಗಳು ಇನ್ನೂ ಮುಂದುವರಿಯಲಿ ಎಂದು ಅಪೇಕ್ಷಿಸುತ್ತೇವೆ...

19 August 2009

ಜಲಮಾಲಿನ್ಯ

ಜಲಮಾಲಿನ್ಯವು ಹಲವು ರೀತಿಯಲ್ಲಿ ಉಂಟಾಗುತ್ತದೆ. ಹೇಗೆಂದರೆ ಜಲಾಶಯಗಳ ಸಮೀಪ ಬಟ್ಟೆ, ಪಾತ್ರೆ, ವಾಹನ ಇತ್ಯಾದಿಗಳನ್ನು ತೊಳೆಯುವುದರಿಂದ ನೀರು ಮಲಿನಗೊಳ್ಳುವುದು. ಇದೆ ರೀತಿ ಜಲಾಶಯಗಳ ಸಮೀಪ ಸ್ನಾನ ಮಾಡುವುದರಿಂದ ಚರಂಡಿ ನೀರುಗಳನ್ನು ನದಿಗಳಿಗೆ ಬಿಡುವುದರಿಂದ ಕಾಖಾ೯ನೆಗಳ ತ್ಯಾಜ್ಯವಸ್ತುಗಳನ್ನು ಜಲಾಶಯಗಳಿಗೆ ಎಸೆಯುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಮಣ್ಣಿನ ಕೊರೆತದಿಂದ ಜಲಮಾಲಿನ್ಯ ಉಂಟಾಗುತ್ತದೆ.

ಒಂದು ಕಥೆ - ಸ್ವಾತಿ ಸಿ.ವಿ.

ಒಂದು ಊರಿನಲ್ಲಿ ರವಿ ಎಂಬ ಒಬ್ಬ ಹುಡುಗನಿದ್ದನು. ಅವನು ಕೆಟ್ಟವನಾಗಿದ್ದನು. ಸ್ನೇಹಾ ಅವನ ತಂಗಿಯಾಗಿದ್ದಳು. ರವಿ ಸ್ನೇಹಾಳಿಂದ ಒಂದು ವರ್ಷ ದೊಡ್ಡವನಾಗಿದ್ದನು. ಅವನು ೯ನೇ ತರಗತಿಯಲ್ಲೂ ಸ್ನೇಹಾ ೮ನೇ ತರಗತಿಯಲ್ಲೂ ಓದುತ್ತಿದ್ದರು. ರವಿ ಶಾಲೆಯಿಂದ ಬಂದ ನಂತರ ಆಟವಾಡಲು ಹೋಗುತ್ತಿದ್ದನು. ಆಗ ಸ್ನೇಹಾ ತನ್ನ ಶಾಲೆ ಕೆಲಸಗಳನ್ನು ಮಾಡುತ್ತಿದ್ದಳು. ಆಟ ಆಡಿ ಬಂದ ನಂತರ ಸ್ನೇಹಾಳಲ್ಲಿ ಅವನ ಶಾಲೆಕೆಲಸಗಳನ್ನು ಮಾಡಿಸುತ್ತಿದ್ದನು.

ಈ ವರ್ಷದ ಕಲಿಯುವಿಕೆಯಲ್ಲಿ ಸ್ನೇಹಾಳಿಗೆ ಪ್ರಥಮ ಸ್ಥಾನ ದೊರೆಯಿತು. ಆಗ ಅವಳ ತಂದೆ ತಾಯಿ ಬಹಳ ಖುಶಿಪಟ್ಟರು. ರವಿಗೆ ಬಹಳ ಬೇಸರವಾಯಿತು. ಅವನು ತಂದೆ ತಾಯಿಯರ ಬಳಿ ಹೋದಾಗ ಅವರು ಮುಖ ಎತ್ತಿ ಇವನನ್ನು ನೋಡುತ್ತಿರಲಿಲ್ಲ. ಒಂದು ದಿನ ರವಿ ಸ್ನೇಹಾಳಲ್ಲಿ ಈ ವಿಷಯದ ಬಗ್ಗೆ ಪ್ರಶ್ನಿಸಿದನು. ಆಗ ಅವಳು “ನೀನು ಕೂಡಾ ಕಲಿಯುವುದರಲ್ಲಿ ಪ್ರಥಮ ಸ್ಥಾನ ಪಡೆದುಕೊ, ಒಳ್ಳೆಯ ರೀತಿಯಲ್ಲಿ ನಡೆದುಕೊ” ಎಂದಳು. ಇದರಿಂದಾಗಿ ರವಿಯ ಮನಪರಿವರ್ತನೆಯಾಗಿ ನಂತರ ಒಳ್ಳೆಯ ವಿದ್ಯಾರ್ಥಿಯಾದನು. ಅದರಂತೆಯೇ ನಾವೂ ಒಳ್ಳೆಯ ವಿದ್ಯಾರ್ಥಿಯಾಗಿ ಎಲ್ಲರೊಡನೆ ಸ್ನೇಹದಿಂದಿರಬೇಕು.

15 August 2009

ನೀರ್ಚಾಲಿನಲ್ಲಿ ಸ್ವಾತಂತ್ರ್ಯೋತ್ಸವ

“ಮಹಾಪುರುಷರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೬೩ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ನಾವು ಆ ಮಹಾನ್ ತ್ಯಾಗಿಗಳ ಬಲಿದಾನವನ್ನು ನೆನಪಿಸಿಕೊಳ್ಳಬೇಕು. ಬಡವರ ಸೇವೆ, ಪರೋಪಕಾರ, ಅಹಿಂಸೆ, ಸತ್ಯ, ಶಾಂತಿ ನಮ್ಮ ಮಂತ್ರವಾಗಬೇಕು. ಆ ಮೂಲಕ ನಮ್ಮ ದೇಶದ ಉದ್ಧಾರ ಆಗಬೇಕು" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕಾನ ಈಶ್ವರ ಭಟ್ ಹೇಳಿದರು. ಅವರು ೧೫.೦೮.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು. ಕೆ.ನಾರಾಯಣ ಭಟ್, ಎಂ.ಸೂರ್ಯನಾರಾಯಣ, ಪ್ರವೀಣ್ ಕುಮಾರ್, ಅವಿತೇಶ್.ಬಿ, ಕೀರ್ತಿ. ಬಿ ಮತ್ತು ಶ್ರೀಶ.ಕೆ ಸ್ವಾತಂತ್ರ್ಯ ದಿನದ ಮಹತ್ವ ಕುರಿತು ಮಾತನಾಡಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವಿಕೃಷ್ಣ.ಯು ವಂದಿಸಿದರು. ಕಾರ್ಯಕ್ರಮ ಸಂಚಾಲಕ, ಶಾಲಾ ಅಧ್ಯಾಪಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ‘ಸ್ವಾತಂತ್ರ್ಯದ ಸ್ಮೃತಿ’ ಹಸ್ತಪ್ರತಿ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಉಪ್ಪಿನ ಸತ್ಯಾಗ್ರಹದ ಕುರಿತಾದ ಪ್ರಾತ್ಯಕ್ಷಿಕೆ, ಸ್ವಾತಂತ್ರ್ಯ ರೂಪಕ, ದೇಶಭಕ್ತಿಗೀತೆ, ನೃತ್ಯ ಕಾರ್ಯಕ್ರಮಗಳು ಜರಗಿದವು.

14 August 2009

ಲೋಕಕಲ್ಯಾಣಕ್ಕಾಗಿ ಕೃಷ್ಣಾವತಾರ: ಸಿ.ಎಚ್.ರಾಮ ಭಟ್


“ಅಧರ್ಮದ ಮೇರೆ ಮೀರಿದಾಗ ಅವತಾರವೆತ್ತಿದ ಕೃಷ್ಣ ಪರಮಾತ್ಮನು ಧರ್ಮದ ಪುನಸ್ಥಾಪನೆ ಮಾಡಿದನು. ಸತ್ಯ, ಧರ್ಮದಿಂದ ಬಾಳಿ ಬದುಕುವ ಜನರ ಏಳಿಗೆಗಾಗಿ ಶ್ರಮಿಸಿದನು. ದೇವತಾರಾಧನೆ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾಲಯಗಳಲ್ಲಿ ಅಂತಹ ಧಾರ್ಮಿಕ ಮೌಲ್ಯದ ದಿನಗಳನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ" ಎಂದು ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಹೇಳಿದರು. ಅವರು ೧೩.೦೮.೨೦೦೯ ಗುರುವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ವಿದ್ಯಾರ್ಥಿ ಮುಖಂಡ ಪ್ರವೀಣ್ ಕುಮಾರ್ ವರದಿ ವಾಚಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ಲೀಲೆ’ ಎಂಬ ಯಕ್ಷಗಾನ ಬಯಲಾಟ ಜರಗಿತು. ವಿದ್ಯಾರ್ಥಿಗಳಾದ ನವನೀತ ಕೃಷ್ಣ.ಯು, ವಿಜೇಶ.ಬಿ, ಅನೀಶ್, ವಿನೀತ್ ಶಂಕರ್.ಎಚ್, ಪ್ರವೀಣ್ ಕುಮಾರ, ಅವಿನಾಶ್, ಅಭಿಲಾಷ್, ರಾಮ ನಾಯ್ಕ, ಶಂಕರ ತೇಜಸ್ವಿ, ಯಜ್ಞೇಶ.ಎಂ, ವಿನಾಯಕ.ಎಂ, ಮಂಜುನಾಥ, ಮನೀಶ್.ಬಿ, ಶಬರೀಶ ಪಾತ್ರವರ್ಗದಲ್ಲಿ ಮಿಂಚಿದರು. ಸುರೇಶ ಆಚಾರ್ಯ ನೀರ್ಚಾಲ್ ಮತ್ತು ಉಂಡೆಮನೆ ಕೃಷ್ಣ ಭಟ್ ಭಾಗವತರಾಗಿ ಸಹಕರಿಸಿದರು. ಬಾಲಕೃಷ್ಣ ಆಚೆಗೋಳಿ, ಈಶ್ವರ ಮಲ್ಲ, ಪ್ರಕಾಶ ನೀರ್ಚಾಲು ಮತ್ತು ಭಾಸ್ಕರ ಕಲ್ಲಕಟ್ಟ ಹಿಮ್ಮೇಳದಲ್ಲಿ ಸಹಕರಿಸಿದರು. ದಿವಾಣ ಶಿವಶಂಕರ ಭಟ್ ನಿರ್ದೇಶಿಸಿದರು, ದೇವಕಾನ ಕೃಷ್ಣ ಭಟ್ ವಸ್ತ್ರಾಲಂಕಾರದಲ್ಲಿ ಸಹಕರಿಸಿದರು.

13 August 2009

ಶ್ರೀಕೃಷ್ಣ ಲೀಲೆ

ಇಂದು ಶ್ರೀಕೃಷ್ಣ ಜಯಂತಿ ಉತ್ಸವ ನಮ್ಮ ಶಾಲೆಯಲ್ಲಿ ಆಚರಿಸಲ್ಪಟ್ಟಿತು. ಮನರಂಜನಾ ಕಾರ್ಯಕ್ರಮದ ಅಂಗವಾಗಿ ನಮ್ಮ ವಿದ್ಯಾರ್ಥಿಗಳು ನಡೆಸಿಕೊಟ್ಟ `ಶ್ರೀಕೃಷ್ಣ ಲೀಲೆ' ಯಕ್ಷಗಾನ ಬಯಲಾಟದ ಚಿತ್ರವನ್ನು ನಿಮ್ಮ ಮುಂದೆ ಇರಿಸಿದ್ದೇವೆ...

ಕವಿತೆ - ಕೃಷಿ


-ಸೀಮಾ ಎಂ.ಬಿ.

ಧರೆಯ ಮನುಜರೆಲ್ಲ ಬನ್ನಿ

ಹೊಲದಕಡೆಗೆ ಹೋಗುವ

ಮಳೆಯ ಸಮಯದಲ್ಲಿ ಬೆಳೆವ

ಕೃಷಿಗೆ ನಾವು ತೊಡಗುವ

ಎತ್ತುಗಳನು ನೊಗಕೆ ಬಗೆದು

ನೇಗಿಲುಗಳನು ಒತ್ತಿ ಹಿಡಿದು

ಗದ್ದೆಗಳನು ಉತ್ತು ಬಿತ್ತಿ

ಕೃಷಿಯ ನಾವು ಮಾಡುವ

ಮುಂಜಾನೆ ಹೊಲಕೆ ಹೋಗಿ

ಪೈರು ಭತ್ತ ಬೆಳೆಸುವ

ಸಂಜೆ ತನಕ ಕೆಲಸ ಮಾಡಿ

ಊರಿಗನ್ನ ನೀಡುವ

ಒಣಗಿ ಇರುವ ಭೂಮಿಯನ್ನು

ಹಚ್ಚ ಹಸಿರು ಮಾಡುವ

ನಮ್ಮ ಮುಂದಿನ ಜೀವನಕ್ಕಾಗಿ

ಕೃಷಿಯ ನಾವು ಬೆಳೆಸುವ.

11 August 2009

ಶ್ರೀಕೃಷ್ಣ ಜಯಂತಿ ಉತ್ಸವ - ಬನ್ನಿ

ಮಹಾಜನ ವಿದ್ಯಾಭಿವರ್ಧಕ ಸಂಘದ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವವು ಆಗಸ್ಟ್ ೧೩ರಂದು ಜರಗಲಿದೆ. ಆ ಪ್ರಯುಕ್ತ ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ರಾಮ ಭಟ್ ಸಿ.ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ. ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ದಿವಾಣ ಶಿವಶಂಕರ ಭಟ್ ದಿಗ್ದರ್ಶನದಲ್ಲಿ“ಶ್ರೀಕೃಷ್ಣ ಲೀಲೆ" ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಬನ್ನಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಎರಡು ಕವನಗಳು

ತುಂತುರು ಮಳೆ ಹನಿ

- ಮಾನಸ ಪಿ.ಎಸ್

ತುಂತುರು ಮಳೆ ಹನಿ ಬೀಳುತಿದೆ

ತರತರ ಶಬ್ದವು ಕೇಳುತಿದೆ

ಗಾಳಿಯು ಜೋರು ಬೀಸುತಿದೆ

ತೆಂಗು ಕಂಗು ಬಾಗುತಿದೆ

ಗುಡು ಗುಡು ಗುಡುಗು ಗುಡುಗುತಿದೆ

ಫಳ ಫಳ ಮಿಂಚು ಮಿಂಚುತಿದೆ

ಮಳೆಯದು ಜೋರು ಬರುತಲಿದೆ

ಭೂಮಿಗೆ ತಂಪನು ತರುತಲಿದೆ

ನಕ್ಷತ್ರ

ಫಳ ಫಳ ಮಿನುಗುವ ನಕ್ಷತ್ರ

ಬಾನಲಿ ನಗುತಿಹ ನಕ್ಷತ್ರ

ಚಂದ್ರನ ಬಳಿಯಲಿ ನಗುತಲಿ ನಿಂತಿಹ

ಬೆಳ್ಳಿಯ ಬಣ್ಣದ ನಕ್ಷತ್ರ

ರಾತ್ರಿಲಿ ಕಂಡು ಬೆಳಗಲಿ ಕಾಣದೆ

ಆಟವನಾಡುವ ನಕ್ಷತ್ರ

ಮೆಲ್ಲನೆ ಮಕ್ಕಳ ಮನಸನು ಸೆಳೆಯುತ

ಅಂದದ ಚಂದದ ನಕ್ಷತ್ರ

ಬಾನಲಿ ಮೋಡಗಳೆಡೆಯಲಿ ಅಡಗುವ

ಬಿಳಿ ಬಣ್ಣದ ಅಂದದ ನಕ್ಷತ್ರ

ನನ್ನಯ ಮುದ್ದಿನ ನಕ್ಷತ್ರ

08 August 2009

ಜಿಲ್ಲಾ ಸಂಸ್ಕೃತ ದಿನಾಚರಣೆ

ಇಂದು ನಮ್ಮ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು....ಈ ಸಂದರ್ಭದಲ್ಲಿ ಸಂಸ್ಕೃತ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಅವರನ್ನು ಗೌರವಿಸುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಿಂದ ೩೦೦ಕ್ಕೂ ಅಧಿಕ ಮಂದಿ ಭಾಗವಹಿಸಿದರು.

07 August 2009

ಚಿತ್ರ - ಚಂದ್ರಶೇಖರ

ನಾಳೆ ನಮ್ಮ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯನ್ನು ಆಯೋಜಿಸಲಾಗಿದೆ. ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರನ್ನು ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಸಂಸ್ಕೃತ ಕೌನ್ಸಿಲ್ ವತಿಯಿಂದ ಗೌರವಿಸಲಾಗುವುದು. ನೀವೂ ಬನ್ನಿ... ಶಾಲೆಗೆ ಹೊಸತಾಗಿ ಎರಡು ಲ್ಯಾಪ್ ಟಾಪ್ ಮತ್ತು ಒಂದು ಲೇಸರ್ ಪ್ರಿಂಟರ್ ಬಂದಿದೆ...

06 August 2009

ಚಿತ್ರ - ಅವಿತೇಶ್. ಬಿ

ಚಿತ್ರಗಳು ಸಾಲು ಕಟ್ಟಿ ನಿಂತಿವೆ.... ನಿಮ್ಮ ಮುಂದೆ ತೆರೆದುಕೊಳ್ಳಲು.03 August 2009

ಚಿತ್ರ - ಚಂದ್ರಶೇಖರ

ಪೆನ್ಸಿಲ್ ಹಿಡಿದು ಬಣ್ಣಗಳನ್ನು ಉಜ್ಜಿ ಗೀಚಿದರೆ ಪ್ರತಿಯೊಂದೂ ಚಿತ್ರವೇ ನಮಗೆ...

31 July 2009

ಬಯಲು ಪ್ರವಾಸ - ಮುಖಾರಿಕಂಡ ಮದಕ

ಪುತ್ತಿಗೆ ಪಂಚಾಯತು ವ್ಯಾಪ್ತಿಯ ಕಟ್ಟತ್ತಡ್ಕ ಬಳಿಯ ಮುಖಾರಿಕಂಡದಲ್ಲಿ ಒಂದು ಬೃಹತ್ ಜಲಾಶಯವಿದೆ. ಪಕ್ಕದಲ್ಲೇ ಆನಾಡಿಪಳ್ಳ. ಎರಡೂ ಕಡೆಗೆ ನಮ್ಮ ಸವಾರಿ ಕಳೆದ ವಾರದ ವಿಶೇಷ. ಸುತ್ತಾಡುವುದು ಎಂದರೆ ನಮಗೂ ವಿದ್ಯಾರ್ಥಿಗಳಿಗೂ ಖುಷಿ. ಸರಕಾರ ಸಿದ್ಧ ಪಡಿಸಿದ ಪಠ್ಯ ಪುಸ್ತಕ ಪ್ರಣಾಳಿಕೆಯೂ ಅದನ್ನೇ ಹೇಳುತ್ತದೆ. ನೋಡಿ ಕಲಿ, ಮಾಡಿ ನಲಿ...

ಚಿತ್ರ - ವಿಜೇಶ್. ಬಿ


ಮಳೆಗಾಲ ಈ ದಿನಗಳಲ್ಲಿ ಚಿತ್ರಗಳು ಮತ್ತೆ ನಮಗೆ ಮುದನೀಡುತ್ತಿವೆ. ಹುಡುಗರು ಗೀಚಿದ ಪುಟ್ಟ ಚಿತ್ರಗಳನ್ನೂ ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಪ್ರಯತ್ನ ಮಾಡುತ್ತೇವೆ.

28 July 2009

ಬಯಲು ಪ್ರವಾಸ - ಆನಾಡಿ ಪಳ್ಳ

ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಆನಾಡಿ ಪಳ್ಳ ಎಂಬ ಪ್ರದೇಶವಿದೆ. ಅಲ್ಲಿ ಒಂದು ಜಲಾಶಯ ವರ್ಷಪೂರ್ತಿ ತುಂಬಿರುತ್ತದೆ. ಮೊನ್ನೆ ಬಯಲು ಪ್ರವಾಸದ ಅಂಗವಾಗಿ ಶಾಲೆಯಿಂದ ಸುಮಾರು ೮ ಕಿಲೋ ಮೀಟರು ದೂರದ ಆ ಪ್ರದೇಶಕ್ಕೆ ಹೋಗಿ ಬಂದೆವು.

ಚಿತ್ರ - ಆಶಿತ್ ಕೃಷ್ಣ ಉಪಾಧ್ಯಾಯ

ನಮ್ಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಆಶಿತ್ ಕೃಷ್ಣನೂ ಒಬ್ಬ. ಅವನು ಬಿಡಿಸುವ ಚಿತ್ರಗಳೇ ಕೆಲವೊಮ್ಮೆ ನಮ್ಮನ್ನು ಹೆಚ್ಚು ಸೆಳೆಯುತ್ತವೆ.

26 July 2009

ಮತ್ತೆ ಶೇಖರಕಾನ ಜಲಪಾತ


ಶೇಖರಕಾನ ಜಲಪಾತ ಮತ್ತೆ ನಮ್ಮಆಸಕ್ತಿಯ ವಿಷಯ. ಅಲ್ಲಿ ಹುಡುಕಿದಷ್ಟೂ ಆನಂದ, ಸಂತೋಷ, ನಮ್ಮ ವಿದ್ಯಾರ್ಥಿಗಳಿಗೆ ಅದು ಅಗಣಿತ ಸೌಂದರ್ಯದ ಅಬ್ಬಿ, ಇಲ್ಲಿದೆ ಆ ಜಲಪಾತದ ಇನ್ನೊಂದು ನೋಟ...

22 July 2009

ಮನೋರಮಾ ನ್ಯೂಸ್ ಮತ್ತು ನಮ್ಮ ಬೇವಿನ ಮರ

ಮೊನ್ನೆ ಬೇವಿನ ಮರ ಬಿದ್ದ ವಾರ್ತೆ ಸಿಕ್ಕಿದ ತಕ್ಷಣ ಮಲಯಾಳದ ಪ್ರಸಿದ್ಧ ಚಾನೆಲ್ ಮನೋರಮಾ ನ್ಯೂಸ್ ಪ್ರತಿನಿಧಿಗಳು ಶಾಲೆಗೆ ಬಂದಿದ್ದರು. ಆ ವಾರ್ತೆ ಮೊನ್ನೆ ಬೆಳಗ್ಗೆ ಪ್ರಸಾರವಾಗಿದೆ. ನಿಮಗಾಗಿ ಇಲ್ಲಿ ಅದನ್ನೇ ಪ್ರಸ್ತುತ ಪಡಿಸುತ್ತಿದ್ದೇವೆ.

ಶೇಖರಕಾನಕ್ಕೆ ಬಯಲು ಪ್ರವಾಸ

ವರ್ಷಧಾರೆಯ ನಡುವೆ ಮೈದುಂಬಿ ಹರಿದ ಶೇಖರಕಾನ ಅಬ್ಬಿಯನ್ನು ವೀಕ್ಷಿಸಲು ಹೋಗಿದ್ದೆವು, ಮೊನ್ನೆ...

16 July 2009

ಕುಂಭ ದ್ರೋಣ ಮಳೆಗೆ ಕಹಿಬೇವಿನ ಮರ ಧರಾಶಾಯಿ...

ನೀರ್ಚಾಲಿನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಬೇರೂರಿದ್ದ, ನಮ್ಮ ಶಾಲೆಯ ಐಡೆಂಟಿಟಿಯಾಗಿದ್ದ ಸುಮಾರು ಶಾಲೆಯಷ್ಟೇ ಆಯುಸ್ಸು ಹೊಂದಿದ್ದ ಸರ್ವ ರೋಗ ನಿವಾರಕ ಕಹಿಬೇವಿನ ಮರ ನಿನ್ನೆ ಸುರಿದ ಮಳೆಗೆ ಧರಾಶಾಯಿಯಾಗಿದೆ. ನೀರ್ಚಾಲಿನ ಖ್ಯಾತ 'ಉಬ್ಬಾನ ಡಾಕ್ಟ್ರ' ಮದ್ದು ಮಾಡಿಕೊಳ್ಳುತ್ತಿದ್ದ, ಚಿಕನ್ ಪಾಕ್ಸ್ ಹಾಗೂ ಇತರ ಚರ್ಮರೋಗ ಬಾಧಿತರೆಲ್ಲ ಈ ಮರದ ಎಲೆಯನ್ನು ಅರೆದು ಮೈಗೆ ಹಚ್ಚಿಕೊಂಡವರೇ...ಶಾಲಾ ಪರಿಸರದಲ್ಲಿ ಸ್ವಚ್ಚ ವಾಯುವನ್ನು ನೀಡುತ್ತಿದ್ದ ಆ ಮರ ನಮ್ಮ ನಡುವೆ ಮೌನವನ್ನು ಉಳಿಸಿ ಹೋಗಿದೆ. ಇನ್ನು ಊರವರೆಲ್ಲ ಕಹಿಬೇವಿನ ಗಿಡಕ್ಕಾಗಿ ಎಲ್ಲಿ ಅಲೆದಾಡುವುದೋ... ಎಂದು ದಾರಿ ತೋರಿಸದೆ....

15 July 2009

ಇಕೋ ಕ್ಲಬ್ ಉದ್ಘಾಟನೆ

“ ನಮ್ಮ ಪರಿಸರವನ್ನು ಯಾವತ್ತೂ ಶುಚಿಯಾಗಿ ಇರಿಸಿಕೊಳ್ಳಬೇಕು. ಆ ಮೂಲಕ ಸ್ವಚ್ಚ ವಾತಾವರಣದ ನಿರ್ಮಾಣವಾಗಬೇಕು. ಶುದ್ಧ ಗಾಳಿ ನಮ್ಮ ಉಸಿರಾಗಬೇಕು. ಆರೋಗ್ಯದ ದೃಷ್ಟಿಯಿಂದ ಮಹಾಮಾರಿಗಳಾದ ಡೆಂಗ್ಯು, ಮಲೇರಿಯಾ, ಹಂದಿ ಜ್ವರದಂತಹ ಖಾಯಿಲೆಗಳನ್ನು ನಾವು ಹೊಡೆದೋಡಿಸಬೇಕು"ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೧೦.೦೭.೨೦೦೯ ಶುಕ್ರವಾರದಂದು ಆರೋಗ್ಯ ಮತ್ತು ಪರಿಸರ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಹಿರಿಯ ಅಧ್ಯಾಪಿಕೆ ಎ.ಭುವನೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಎಂ.ಕೆ.ಶಿವಪ್ರಕಾಶ್ ವಂದಿಸಿದರು. ವಿದ್ಯಾರ್ಥಿ ಅನುತೇಜ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ - ಅನುತೇಜ್

ಕ್ಷಮೆ ಇರಲಿ, ಕೆಲ ದಿನಗಳು ಅನಿವಾರ್ಯವಾಗಿ ನೆಟ್ ಲೋಕದಿಂದ ಹೊರಗಿರಬೇಕಾಗಿ ಬಂತು, ಮಳೆಗಾಲದ ಅಬ್ಬರಕ್ಕೆ ನಮ್ಮ ಬ್ರಾಡ್ ಬ್ಯಾಂಡ್ ಸತ್ತು ಮಲಗಿತ್ತು, ಒಂದು ವಾರ. ಈಗ ಮತ್ತೆ ಎದ್ದು ಬಂದಿದ್ದೇವೆ, ಅನುತೇಜ್ ಬಿಡಿಸಿದ ಚಿತ್ರದೊಂದಿಗೆ. ಸಾಧ್ಯವಾದಷ್ಟು ಅಕ್ಷರ ತಪ್ಪುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ, ಆದರೂ ಕೆಲವೊಮ್ಮೆ ತಪ್ಪುಗಳು ನುಸುಳಿಬಿಡುತ್ತವೆ. ನಿಮ್ಮ ಪ್ರೋತ್ಸಾಹ ಇರಲಿ, ಸದಾ....

07 July 2009

ಚಿತ್ರ - ಆಧಿಶ್. ಎನ್.ಕೆ

ಶಾಲೆ ಪೂರ್ತಿ ಈಗ ಕ್ಲಬ್ ಉದ್ಘಾಟನೆಗಳ ಕಾಲ. ಈ ಗೌಜಿಯಲ್ಲಿ ಆಧಿಶ್ ಹೊತ್ತು ತಂದ ಪಾರಿವಾಳವನ್ನು ಹಾರಿ ಬಿಡುತ್ತಿದ್ದೇವೆ...