Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

16 October 2009

ಬೇವು ಚಿಗುರಿತು...!

ಕರಾವಳಿಯ ಮಣ್ಣಿನಲ್ಲಿ ಕಹಿಬೇವಿನ ಗಿಡವನ್ನು ಬದುಕಿಸುವುದು ಮತ್ತು ಉಳಿಸಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸ. ಇಲ್ಲಿನ ಹವಾಗುಣ ಮತ್ತು ಮಣ್ಣಿನ ತರಗತಿ ಬೇವು ಬೆಳೆಗೆ ಅನುಕೂಲಕರವಾಗಿಲ್ಲ. ಆಯುರ್ವೇದ ಔಷಧ ಲೋಕಕ್ಕೂ ಕಹಿಬೇವು ಅನಿವಾರ್ಯವಾದ ಸಂಬಾರವಾದ್ದರಿಂದ ಕಹಿಬೇವಿಗೆ ಈ ನಾಡಿನಲ್ಲಿ ಭಾರೀ ಬೇಡಿಕೆ. ಇಂತಹಾ ಪರಿಸ್ಥಿತಿಯಲ್ಲೂ ನಮ್ಮ ಶಾಲೆಯಲ್ಲಿ ಕಳೆದ ಒಂದು ಶತಮಾನದಿಂದ ಕಹಿಬೇವಿನ ಮರವೊಂದು ಸೆಟೆದು ನಿಂತಿರುವುದು ಅನೇಕರ ಅಚ್ಚರಿಗೆ, ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಊರಮಂದಿಗೆಲ್ಲ ಔಷಧೀಯ ಗುಣಗಣಿಯಾಗಿ ಅಪಾರ ಸಹಾಯನೀಡಿದ ಈ ವೃಕ್ಷ ಅಂಗಳದಲ್ಲೇ ಸುತ್ತಾಡುತ್ತಿದ್ದ ಪುಟಾಣಿ ವಿದ್ಯಾರ್ಥಿಗಳನ್ನೂ, ನೆರೆಯವರನ್ನೂ ಬೇಸರದಲ್ಲಿ ಸಿಲುಕಿಸಿ ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಗಾಳಿಮಳೆಗೆ ಧರಾಶಾಯಿಯಾಯಿತು. ಪ್ರತಿಷ್ಟಿತ ‘ಮನೋರಮಾ’ ನ್ಯೂಸ್ ಚಾನಲ್ ಸಹಿತ ಅನೇಕ ಕನ್ನಡ, ಮಲಯಾಳ ಪತ್ರಿಕೆಗಳು ಆ ಸಂದರ್ಭದಲ್ಲಿ ವೃಕ್ಷ ಪಿತಾಮಹನಿಗೆ ಅಶ್ರುತರ್ಪಣಗೈದಿದ್ದವು.
ನಾಡಿನಾದ್ಯಂತದಿಂದ ಬಂದ ಒಕ್ಕೊರಲ ಅಭಿಪ್ರಾಯದಂತೆ ಶಾಲಾ ಆಡಳಿತ ಮಂಡಳಿಯು, ಆ ಮರದ ಜೊತೆ ಅವಿನಾಭಾವ ಸಂಬಂಧ ಹೊತ್ತಿದ್ದ ‘ಮಹಾಜನ’ ಖಂಡಿಗೆ ಶಾಮ ಭಟ್ಟರ ನಿರ್ದೇಶನದಂತೆ ಕಹಿಬೇವಿನ ಉಳಿವಿಗಾಗಿ ಚಿಕಿತ್ಸೆ ನೀಡಿತು. ಎಲ್ಲರ ಪ್ರಾರ್ಥನೆಯ ಪರಿಣಾಮವಾಗಿ ಈಗ ಒಂದೆರಡು ತಿಂಗಳ ನಂತರ ಬೇವು ಮತ್ತೆ ಚಿಗುರಿದೆ, ಇನ್ನಷ್ಟು ವರ್ಷ ಅನೇಕ ಮಂದಿಯ ಖಾಯಿಲೆಗಳನ್ನು ದೂರಮಾಡುವ ವಿಶ್ವಾಸವನ್ನು ಮೂಡಿಸಿದೆ.

No comments:

Post a Comment