Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

30 October 2009

ಹೆಮ್ಮೆ ಇದೆ ನಮಗೆ...


ಸೆಪ್ಟೆಂಬರ್ ೧ ರಿಂದ ೫ ರ ವರೆಗೆ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ೩೫ ದೇಶಗಳಿಂದ ಬಂದ ೫೦೦ ಸಂಸ್ಕೃತ ಜ್ಞರು ಭಾಗವಹಿಸಿದ್ದರು. ನಮ್ಮ ಹೆಮ್ಮೆಯ ಕಲೆಯನ್ನು ವಿಶ್ವಮಾನ್ಯ ಭಾಷೆಯಾದ ಸಂಸ್ಕೃತದಲ್ಲಿ ಪ್ರಸ್ತುತಿಪಡಿಸಿದವರು ಕನ್ನಡಿಗರಾದ ಶ್ರೀ ವೆಂಕಟೇಶ ಮೂರ್ತಿ. ಕಾಸರಗೋಡಿನವರು. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಗಳ ಈ ಸುಪುತ್ರ, ನೀರ್ಚಾಲಿನ ಮಹಾಜನ ಸಂಸ್ಕೃತ-ಕಾಲೇಜು-ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪಡೆಯುತ್ತಲೇ ಅಲ್ಲಿ ಯಕ್ಷಗಾನದ ನಾಟ್ಯದ ತರಬೇತಿಯನ್ನು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಗಳಿಸಿದರು. ತಮ್ಮ ಸಹಧರ್ಮಿಣಿ ಶುಭಲಕ್ಷ್ಮೀ ಹಾಗೂ ಪುತ್ರ ಈಶಾನ ನೊಂದಿಗೆ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ದಲ್ಲಿ ಉಪನ್ಯಾಸಕರಾಗಿದ್ದಾರೆ. ಸಂಸ್ಕೃತ ನಾಟಕದ ಸನ್ನಿವೇಶಗಳಿಗೆ ಯಕ್ಷಗಾನದ ರೂಪವನ್ನು ಕೊಟ್ಟು ಯಕ್ಷಗಾನ-ಏಕಪಾತ್ರಾಭಿನಯದ ಈ ಮನಮೋಹಕ ಪ್ರಯೋಗವನ್ನು ಮೆಚ್ಚಿದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಈ ಬಾರಿಯ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ರೋಚಕ ಅಭಿನಯವನ್ನು ಪ್ರದರ್ಶಿಸಲು ಆಹ್ವಾನವನ್ನಿತ್ತಿತು. ಮುಉರ್ತಿ ಯವರು ಪ್ರದರ್ಶಿಸಿದ ಕೌರವೌರವಮ್ (ಗದಾಯುದ್ಧ-ಊರುಭಂಗ) ಎಂಬ ಕಥಾ-ಪ್ರಸಂಗದ ದುರ್ಯೋಧನನ ರೌಷ-ವಿಲಾಪ ದ ಅಭಿನಯ ಪ್ರೇಕ್ಷಕರ ಹೃದಯ ಸ್ಪರ್ಶಿಯಾಗಿ ಮೂಡಿ ಬಂತು. ಭಾರತದ ವಿವಿಧ ರಾಜ್ಯಗಳಿಂದ ಬಂದ ನಾಟಕಾಭಿಮಾನಿಗಳಿಗೆ, ವಿವಿಧ ದೇಶಗಳಿಂದ ಬಂದ ಅನಿವಾಸಿ-ಭಾರತೀಯರಿಗೆ ಮತ್ತು ಭಾರತೀಯತೆಯನ್ನು ತಿಳಿಯುವ ತವಕದ ವಿದೇಶೀಯರಿಗೆ ಇದೊಂದು ರಸಭರಿತ ಔತಣವಾಯಿತು. ಈ ಮನೋಜ್ಞ ಭಾರತೀಯ ಅಭಿನಯವನ್ನು ವಿಶ್ವಮಾನ್ಯ ಭಾರತೀಯ ಭಾಷೆಯಿಂದಲೇ ನೋಡಿ ಆನಂದಿಸಿದ ವಿಶ್ವಸ್ತರದ ಪ್ರೇಕ್ಷಕರಿಂದ ತುಂಬು ಹೃದಯದ ಪ್ರಶಂಸೆ ವ್ಯಕ್ತವಾಯಿತು. ನಾವು ಬೇರೆ ರಾಜ್ಯಕ್ಕೆ, ದೇಶಕ್ಕೆ ಹೋದಾಗ ಅಲ್ಲಿನವರಿಗೆ ನಮ್ಮ ನೆಲದ ವೈಶಿಷ್ಟ್ಯವನ್ನು ಹೇಳುವ ಸಂಸ್ಕೃತಿಯ ವೈಭವಗಳನ್ನ ತೋರಿಸುವ ಒಂದು ರೀತಿಯ ತವಕ ನಮಗಿರುತ್ತದೆ ತಾನೇ? ಅದಕ್ಕೆ ಸಹಾಯ ಮಾಡುವ ಮಾಧ್ಯಮಗಳಲ್ಲೊಂದು ನಮ್ಮ ಜಾನಪದ-ಸಾಂಸ್ಕೃತಿಕ ಕಲೆಗಳ ಪ್ರದರ್ಶನ. ಕನ್ನಡೇತರರಿಗೆ ಕನ್ನಡಿಗರು ಕೊಡಬಹುದಾದ ಕೊಡುಗೆಗಳಲ್ಲಿ ಕನ್ನಡ ನೆಲದ ಕಲಾ ಪ್ರದರ್ಶನವು ಒಂದು. ಕನ್ನಡನಾಡಿನ ಕಲೆಯಾದ ಯಕ್ಷಗಾನದ ಸವಿಯನ್ನು ಕನ್ನಡ ತಿಳಿಯದವರಿಗೂ ಕೊಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದಕ್ಕಾಗಿ ಆಯಾಯ ಪ್ರದೇಶಗಳ ಭಾಷೆಗಳಲ್ಲಿ ( ಹಿಂದಿ ಹಾಗೂ ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ಇಂಗ್ಲೀಷಿನಲ್ಲಿ) ನಡೆಯುವ ಪ್ರದರ್ಶನದ ಬಗ್ಗೆ ನಾವು ಕೇಳಿದ್ದೇವೆ. ನಾಟ್ಯರಂಗಕ್ಕೆ ವಿಪುಲ ಸಾಹಿತ್ಯದ ಕೊಡುಗೆಯನ್ನೀಯುವ ಸಂಸ್ಕೃತಭಾಷೆಯಲ್ಲಿ ಯಕ್ಷಗಾನದ ಪ್ರದರ್ಶನ ವಾದರೆ ಹೇಗಿರಬಹುದು? ಇಂತಹ ಒಂದು ಪ್ರಯತ್ನ ಜಪಾನಿನಲ್ಲಿ ನಡೆಯಿತು. ಅಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕಲೆಗಳ ಪ್ರತೀಕವಾಗಿ ಕನ್ನಡನಾಡಿನ ಯಕ್ಷಗಾನ ಸಂಸ್ಕೃತದಲ್ಲಿ ಪ್ರದರ್ಶನಗೊಂಡಿತು. ತಮ್ಮಬಾಲ್ಯದಲ್ಲಿ ಪಡೆದ ಗ್ರಾಮೀಣ ಕಲೆಯನ್ನು ಸಂಸ್ಕೃತ ನಾಟಕ ರಂಗಕ್ಕೆ ಜೋಡಿಸಿ ದೆಹಲಿಯ ತಮ್ಮ ಸಂಸ್ಥೆಯ ವಸಂತೋತ್ಸವದಲ್ಲಿ , ಉಜ್ಜಯಿನಿಯ ನಾಟ್ಯ ಮಹೋತ್ಸವದಲ್ಲಿ, ಭೋಪಾಲದ ಸಂಸ್ಕೃತ ರಂಗಮಂಚ ದಲ್ಲೂ ಪ್ರದರ್ಶಿಸಿ ಸಂಸ್ಕೃತ-ವಿದ್ವಾಂಸರ, ಕಲಾ ರಸಿಕರ ಮನವನ್ನು ರಂಜಿಸಿದ್ದಾರೆ. ತಿರುಪತಿಯ ಸಂಸ್ಕೃತ ವಿದ್ಯಾಪೀಥದಿಂದ ಸಂಸ್ಕೃತದಲ್ಲಿ ಉನ್ನತ ವಿದ್ಯಾಬ್ಯಾಸವನ್ನು ಮಾಡಿದ ಈ ಕಲಾವಿದ ಸಂಸ್ಕೃತವನ್ನು ಜನಮಾನಸಕ್ಕೊಯ್ಯುವ ಕಾರ್ಯದಲ್ಲೂ ನಿರತರಾಗಿದ್ದಾರೆ. ಸಂಸ್ಕೃತದಿಂದ ಕನ್ನಡಿಗರಿಗೇನು ಪ್ರಯೋಜನ? ಕನ್ನಡದಿಂದ ಸಂಸ್ಕೃತ ಕ್ಕೇನು ಸಿಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಇದೊಂದು ಉದಾಹರಣೆಯಾಗಬಹುದೇನೋ?

No comments:

Post a Comment