Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

24 December 2013

ಮಂಗಳಯಾನ ಆಕಾಶನೌಕೆಯ ಮಾದರಿ

ನಮ್ಮ ಶಾಲೆಗಳ ಶತಮಾನೋತ್ಸವಕ್ಕೆ ಭೇಟಿ ನೀಡಿದ ಇಸ್ರೋ ಅಧ್ಯಕ್ಷ ಡಾ|ಕೆ.ರಾಧಾಕೃಷ್ಣನ್ ತಮ್ಮ ಭೇಟಿಯ ನೆನಪಿಗಾಗಿ ನೀಡಿದ ಮಂಗಳಯಾನ ಆಕಾಶನೌಕೆಯ ಮಾದರಿ

23 December 2013

ಯಶಸ್ವಿಯಾಗಿ ಮೂಡಿ ಬಂದ ಶತಮಾನೋತ್ಸವ‘ಮಹಾಜನ’ರ ಸಹಕಾರದಿಂದ ಆಕರ್ಷಣೀಯವಾಗಿ, ಜನಸಾಗರ ಸೇರಿದ ಅಚ್ಚುಕಟ್ಟು ಕಾರ್ಯಕ್ರಮ ಎಂಬ ನೆಲೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವ ಕಾರ್ಯಕ್ರಮವು ನಾಡಿನ ಜನರು ಚಿರಕಾಲ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂತು. 1974ರಲ್ಲಿ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮದ ನಂತರ ಇಷ್ಟು ವ್ಯವಸ್ಥಿತವಾದ ಬೃಹತ್ ಕಾರ್ಯಕ್ರಮ ಇದೇ ಪ್ರಥಮ ಬಾರಿಯಾಗಿ ನಡೆಯಿತು ಎಂದು ಆ ಕಾಲದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರು ನೆನಪಿಸಿಕೊಳ್ಳುವಂತಾಯಿತು.
ಸಮಾರಂಭದ ವೇದಿಕೆಗೆ ಆಹ್ವಾನಿಸಿದ್ದ ಹೆಚ್ಚಿನ ಎಲ್ಲ ಅತಿಥಿಗಳೂ ಕ್ಲಪ್ತ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಗೌರವವನ್ನು ಉಳಿಸಿಕೊಂಡದ್ದು ನಾಡಿನ ಹೆಮ್ಮೆಯಾಗಿ ಮೂಡಿಬಂತು.ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸಿದ್ದಾರೆ. ಕಾವ್ಯಾಮಾಧವನ್ ಉಪಸ್ಥಿತರಿದ್ದ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರೂ ಯಾವುದೇ ನೂಕುನುಗ್ಗಲು, ಅಹಿತಕರ ಘಟನೆಗಳು ನಡೆಯಲಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದರೂ ಉತ್ತಮ ಪ್ರತಿಭಾನ್ವಿತ ಕಲಾವಿದರಿಗೆ ಸಮಾರಂಭದ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಅವಕಾಶ ಸಿಕ್ಕಿದುದು ಹೆಮ್ಮೆ ಎನಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿದ್ದ ವೈವಿಧ್ಯತೆ ಜನಾಕರ್ಷಣೆಗೆ ಕಾರಣವಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪವಾಗಿ ಅಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ ಬಯಲಾಟ ‘ಕಾರ್ತವೀರ್ಯಾರ್ಜುನ ಕಾಳಗ’ ಮತ್ತು ‘ಶ್ರೀ ಏಕಾದಶೀ ದೇವಿ ಮಹಾತ್ಮೆ’ ಗಳು ಚೆನ್ನಾಗಿ ಮೂಡಿಬಂದವು.
“ನಾಡಿನ ಎಲ್ಲ ಮಹಾಜನರ, ವಿದ್ಯಾಭಿಮಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ತಿಳಿಸಿದ್ದಾರೆ.

22 December 2013

“ಕನ್ನಡ ನನ್ನ ಪ್ರೀತಿಯ ಭಾಷೆ: ಕಾವ್ಯಾ ಮಾಧವನ್”


“ಭಾಷೆ ಸಂವಹನೆಯ ಮಾಧ್ಯಮ. ಮಾತುಗಳಲ್ಲಿ ಸ್ವಲ್ಪ ತಪ್ಪಿದರೂ ವಸ್ತುವನ್ನು ಅರ್ಥಮಾಡಿಕೊಳ್ಳಬಹುದು. ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದುದರಿಂದ ಕನ್ನಡ ಭಾಷೆಯ ಬಗ್ಗೆ ನನಗೆ ಪ್ರೀತಿ ಇದೆ ಮತ್ತು ಅದನ್ನು ಅರ್ಥಮಾಡಿಕೊಳ್ಲಲು ಸಾಧ್ಯವಾಗುತ್ತಿದೆ. ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸುವ ಆಸೆ ಇದೆ. ಅದಕ್ಕೆ ಶೀಘ್ರದಲ್ಲೇ ಅವಕಾಶ ದೊರೆಯಬಹುದೆಂಬ ವಿಶ್ವಾಸವಿದೆ. ಖ್ಯಾತ ಜ್ಯೋತಿಷಿಗಳಾಗಿರುವ ಬೇಳ ಪದ್ಮನಾಭ ಶರ್ಮರು ನನಗೆ ಮಾರ್ಗದರ್ಶಕರು. ಅವರು ಕಲಿತು ಬೆಳೆದ ಈ ಶಾಲೆಯ ಭವಿಷ್ಯ ಉಜ್ವಲವಾಗಲಿ ಎಂದು ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರನಟಿ ಕಾವ್ಯಾ ಮಾಧವನ್ ಅಭಿಪ್ರಾಯಪಟ್ಟರು. ಅವರು ಇಂದು 22.12.2013 ಭಾನುವಾರ ಅಪರಾಹ್ನ ನಮ್ಮ ಶಾಲೆಗಳ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶ್ರೀರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಆಡಳಿತ ಮೊಕ್ತೇಸರರಾದ ಯು.ಟಿ. ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ, ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ, ಬಜ್ಪೆಯ ಕಾಮತ್ ಕಾಶ್ಯೂ ಕಂಪೆನಿ ಮಾಲಕ ಸೇವಗೂರು ಉಮೇಶ್ ಕಾಮತ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಖ್ಯಾತ ಕವಿ ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಮತ್ತು ವಿಶ್ವವಿಖ್ಯಾತ ಬೊಂಬೆಯಾಟ ಕಲಾವಿದರಾದ ಕೆ.ವಿ.ರಮೇಶ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರಗಳನ್ನು ಶಾಲಾ ಶಿಕ್ಷಕರಾದ ವಾಣಿ.ಪಿ.ಎಸ್ ಮತ್ತು ರವಿಶಂಕರ ದೊಡ್ಡಮಾಣಿ ವಾಚಿಸಿದರು.
ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಿ|ಖಂಡಿಗೆ ಶಾಮ ಭಟ್ಟರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಂದಿಸಿದರು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು.
ಸಂಜೆ 7 ರಿಂದ  ವಿವಿಧ ವಿನೋದಾವಳಿಗಳು ಮತ್ತು ಅಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟವ ‘ಕಾರ್ತವೀರ್ಯಾರ್ಜುನ ಕಾಳಗ’ ಮತ್ತು ‘ಶ್ರೀ ಏಕಾದಶೀ ದೇವಿ ಮಹಾತ್ಮೆ’ ಕಥಾನಕಗಳನ್ನು ಆಡಿತೋರಿಸಲಾಯಿತು.“ಸಮಾಜವು ಜೀವನಪಾಠವನ್ನು ಕಲಿಸುತ್ತದೆ: ಡಾ|ಡಿ.ಸದಾಶಿವ ಭಟ್”


“ಜೀವನಪಾಠಗಳನ್ನು ಸಮಾಜ ಕಲಿಸಿಕೊಡುತ್ತದೆ. ಅಧ್ಯಾಪಕರಿಗೆ ಎಲ್ಲವನ್ನೂ ಕಲಿಸಲು ಸಾಧ್ಯವಾಗುವುದಿಲ್ಲ. ನಮ್ಮ ಅನುಭವಗಳಿಂದ ಕಲಿತ ಪಾಠಗಳನ್ನು ಜೀವನದಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕು. ಅನುಭವವು ಸವಿಯಲ್ಲ, ಅದರ ನೆನಪೇ ಸವಿ. ಆದ್ದರಿಂದ ಲಲಿತ ಜೀವನವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ವಿದ್ವಾಂಸ ಡಾ| ಡಿ. ಸದಾಶಿವ ಭಟ್ ಅಭಿಪ್ರಾಯಪಟ್ಟರು. ಅವರು ಇಂದು 22.12.2013 ಭಾನುವಾರ ಬೆಳಗ್ಗೆ ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ಜರಗಿದ ‘ಗುರುವಂದನೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬ್ರಹ್ಮಶ್ರೀ ವೇ|ಮೂ| ಮಾಧವ ಉಪಾಧ್ಯಾಯ ಬಳ್ಳಪದವು, ಖ್ಯಾತ ಚಿತ್ರಕಲಾವಿದ ಪಿ.ಯಸ್. ಪುಣಿಂಚತ್ತಾಯ, ಕಾಸರಗೋಡು ತಹಶೀಲ್ದಾರರಾದ ಕೆ. ಶಿವಕುಮಾರ್, ಮಂಗಳೂರು ಎಂಸಿಎಫ್ ಜನರಲ್ ಮೇನೇಜರ್ ಪಿ. ಜಯಶಂಕರ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಗುರುವಂದನೆ ಸಲ್ಲಿಸಿದರು. ಶಾಲೆಯ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಸೇವೆ ಸಲ್ಲಿಸಿದ ದಿ|ಖಂಡಿಗೆ ಶಾಮ ಭಟ್ಟರ ಪಂಚಲೋಹದ ಪ್ರತಿಮೆಯನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮತ್ತು ಎಲ್ಲರೂ ಈ ಕಾರ್ಯದಲ್ಲಿ ಸಹಕರಿಸಬೇಕಾಗಿ ಚಿತ್ರಕಲಾವಿದ ಪಿ.ಯಸ್. ಪುಣಿಂಚತ್ತಾಯ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿ ಕೆ.ನಾರಾಯಣ ಭಟ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್.ಶಿವಕುಮಾರ ವಂದಿಸಿದರು. ಪೂರ್ವ ವಿದ್ಯಾರ್ಥಿ ಶೇಂತಾರು ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಳೆ ವಿದ್ಯಾರ್ಥಿನಿ ಧನ್ಯಶ್ರೀ ಹಳೆಮನೆ ಇವರಿಂದ ಭಾವಗೀತೆ ಮತ್ತು ಕಾಕುಂಜೆ ಸಹೋದರಿಯರಾದ ಹೇಮಶ್ರೀ-ಶ್ರೀವಾಣಿ ಇವರಿಂದ ಶಾಸ್ತ್ರೀಯ ಸಂಗೀತ ಗಾಯನ ಜರಗಿತು.

ಶಾಲೆಯ ಆಕರ್ಷಕ ಮಾದರಿ:


ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಹರಿಪ್ರಸಾದ್.ಕೆ.ಬಿ ಮತ್ತು ನವೀನ್ ಕುಮಾರ್ ಥರ್ಮೋಕೋಲ್‌ನಲ್ಲಿ ರಚಿಸಿದ ಮಹಾಜನ ವಿದ್ಯಾ ಸಂಸ್ಥೆಗಳ ಕಟ್ಟಡದ ಮಾದರಿ ಜನಮೆಚ್ಚುಗೆ ಗಳಿಸಿತು.

21 December 2013

“ಶತಮಾನೋತ್ಸವದ ಜೊತೆ ನೂರು ಶೇಕಡಾ ಫಲಿತಾಂಶ ಬರಲಿ: ಐ.ಸತ್ಯನಾರಾಯಣ ಭಟ್”


“ಸಂಸ್ಕೃತ ವಿದ್ವಾಂಸರನ್ನು, ಸಜ್ಜನರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಈ ಮಹಾಜನ ಸಂಸ್ಥೆಯ ಹಳೆ ವಿದ್ಯಾರ್ಥಿ ನಾನು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಗ್ರಾಮೀಣ ಪ್ರದೇಶದ ಪ್ರಗತಿಯಲ್ಲಿ ಮಹಾಜನ ವಿದ್ಯಾಸಂಸ್ಥೆಗಳ ಸೇವೆ ಗಣನೀಯವಾದುದು. ಸಂಸ್ಕೃತದ ಹಿನ್ನೆಲೆಯಲ್ಲಿ ಬೆಳೆದು ಬಂದ ಈ ಶಾಲೆ ಪ್ರಸಕ್ತ ತಂತ್ರಜ್ಞಾನವನ್ನೂ ಚೆನ್ನಾಗಿ ಅಳವಡಿಸಿಕೊಂಡು ಜನಪ್ರೀತಿ ಗಳಿಸುತ್ತಿದೆ. ಅದಕ್ಕೆ ನಿದರ್ಶನವಾಗಿ ಅತ್ಯಂತ ಶೀಘ್ರದಲ್ಲಿ ಶಾಲೆಯ ಶತಮಾನೋತ್ಸವ ಕಟ್ಟಡ ತಲೆ ಎತ್ತಿದೆ. ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ನೂರು ಶೇಕಡಾ ಫಲಿತಾಂಶವನ್ನು ಗಳಿಸಿ ಶಾಲೆಗೂ, ನಾಡಿಗೂ ಹೆಮ್ಮೆ ತರಲಿ ಎಂದು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಐ.ಸತ್ಯನಾರಾಯಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು 21.12.2013 ಶನಿವಾರ ಸಾಯಂಕಾಲ ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ಶೈಕ್ಷಣಿಕ ಸಂಗಮ - ವರ್ಧಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶತಮಾನೋತ್ಸವದ ಅಂಗವಾಗಿ ಹೊರತಂದ ‘ಶತಮಾನ ಪ್ರಭಾ’ ಸ್ಮರಣ ಸಂಚಿಕೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬಿಡುಗಡೆಗೊಳಿಸಿದರು. ಶಾಲಾ ವಿದ್ಯಾರ್ಥಿನಿ ವಿನಯಾ. ಕೆ ಬರೆದ ಕವನ ಸಂಕಲನ ‘ನನಗೂ ಎರಡು ರೆಕ್ಕೆಗಳಿದ್ದರೆ’ಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಬಿಡುಗಡೆಗೊಳಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಹೇಶ್ ವಳಕ್ಕುಂಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ.ಕೆ, ಕಿರಿಯ ಪ್ರಾಥಮಿಕ ಶಾಲಾ ಮಾತೃಸಂಘದ ಅಧ್ಯಕ್ಷೆ ಅನ್ನಪೂರ್ಣ ಕುಳಮರ್ವ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನಡೆಸಲಾದ ವಿವಿಧ ಕಲೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾಲಾ ಶಿಕ್ಷಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.
`ವಾಲಿಮೋಕ್ಷ' ತಾಳಮದ್ದಳೆ


ನಮ್ಮ ಶಾಲಾ ಶತಮಾನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ‘ವಾಲಿ ಮೋಕ್ಷ’ ತಾಳಮದ್ದಳೆ ಇಂದು 21.12.2013 ಶನಿವಾರ ಜರಗಿತು. ಹಿಮ್ಮೇಳದಲ್ಲಿ ವೆಂಕಟ್ರಾಜ ಕುಂಟಿಕಾನಮಠ, ಶಿವಶಂಕರ ತಲ್ಪಣಾಜೆ, ಸುರೇಶ ಆಚಾರ್ಯ ನೀರ್ಚಾಲು, ಅಡ್ಕ ಕೃಷ್ಣ ಭಟ್, ಮಹಾಲಿಂಗ ಭಟ್ ಕುಂಟಿಕಾನ ಮಠ ಮತ್ತು ಅರ್ಥಧಾರಿಗಳಾಗಿ ಕೇಶವಕೃಷ್ಣ ಕುಳಮರ್ವ, ಮೀಸೆಬೈಲು ಸುಬ್ರಹ್ಮಣ್ಯ ಶರ್ಮ, ರಾಜಾರಾಮ ಕುಂಜಾರು, ಬಾಲಕೃಷ್ಣ ಆಚಾರ್ಯ ನೀರ್ಚಾಲು, ವಿಷ್ಣುಪ್ರಕಾಶ ಪೆರ್ವ ಮತ್ತು ಎಚ್.ಸೂರ್ಯನಾರಾಯಣ ಸಹಕರಿಸಿದರು.

ಗುರುವಂದನೆ

ಇಂದು ಬೆಳಗ್ಗೆ ಗುರುವಂದನೆ ಕಾರ್ಯಕ್ರಮ, ನಮ್ಮ ವಿದ್ಯಾರ್ಥಿಗಳು ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರನ್ನೂ ಗೌರವಿಸಿದರು. ನಮಗೂ ಅದು ಖುಷಿಯ ಕ್ಷಣ. ಇರಲಿ, ವಿದ್ಯಾರ್ಥಿಗಳ ಪ್ರೀತಿ ಹೀಗೆಯೇ, ಸದಾ...
ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯುತ್ತಿವೆ, ಉಲ್ಲಾಸದಲ್ಲಿ...

20 December 2013

ಕಾರ್ಯಕ್ರಮದ ನೇರ ಪ್ರಸಾರ

                                               

 
 
 
 
 
 
 

ಶತಮಾನೋತ್ಸವ ಮೊದಲ ದಿನ - ಸಾಂಸ್ಕೃತಿಕ ಕಾರ್ಯಕ್ರಮಗಳು
ನಮ್ಮ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯ ಅಂಗವಾಗಿ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು. ಶಾಲಾ ವಿದ್ಯಾರ್ಥಿಗಳ ನೃತ್ಯ, ನಾಟಕ, ಹಾಡು ಇತ್ಯಾದಿಗಳು ಪ್ರೇಕ್ಷಕರಿಗೆ ರಸವೈವಿಧ್ಯವನ್ನು ನೀಡಿದವು. ಸಂಜೆ ಪ್ರದರ್ಶನಗೊಂಡ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆ, ಶಾಲಾ ವಿದ್ಯಾರ್ಥಿನಿ ಭಾಗ್ಯಶ್ರೀ ಮತ್ತು ತಂಡದವರ ಭರತನಾಟ್ಯ ಕಾರ್ಯಕ್ರಮವೂ ಆಕರ್ಷಕವಾಗಿ ಜನಮನಸೆಳೆದಿದೆ. ದಶಂಬರ 21 ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ, ನೃತ್ಯ ಮತ್ತು ಶಾಲಾ ಹಳೆ ವಿದ್ಯಾರ್ಥಿ ಕೆ.ವಿ.ರಮೇಶ್ ತಂಡದಿಂದ ಯಕ್ಷಗಾನ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ.

“ಮಂಗಳಯಾನದ ಹಿಂದೆ ಸಂಸ್ಕೃತದ ಹಿನ್ನೆಲೆಯಿದೆ: ಡಾ|ಕೆ.ರಾಧಾಕೃಷ್ಣನ್''
ಭಾರತದ ಭಾಷಾ ವೈವಿಧ್ಯವನ್ನು ಅರ್ಥಮಾಡಿ ಚೆನ್ನಾಗಿ ತಿಳಿದುಕೊಳ್ಳಲು ದೇವಭಾಷೆ ಸಂಸ್ಕೃತದ ಕಲಿಕೆ ಅಗತ್ಯ. ಅಂತಹ ಸಂಸ್ಕೃತದ ಮಹಾಕಾವ್ಯಗಳಲ್ಲಿ ತಿಳಿಸಿದ ಅಂಶಗಳನ್ನು ಸಾಕಾರಗೊಳಿಸಲು ನಮ್ಮ ಸಂಸ್ಥೆ ಇಸ್ರೋ ಪ್ರಯತ್ನಿಸುತ್ತಿದೆ. ಮಂಗಳಯಾನ ಅಂತಹ ಒಂದು ಮಹತ್ವದ ಘಟ್ಟ. ಮಂಗಳಯಾನದ ಹೆಜ್ಜೆಯನ್ನು ಕೈಗೊಳ್ಳುವುದರೊಂದಿಗೆ ನಾವು ಜಗತ್ತಿನ ನಾಲ್ಕನೆಯ ದೇಶವಾಗಿ ಬೆಳೆದಿದ್ದೇವೆ. ಈ ಪ್ರಯತ್ನ ಪೂರ್ಣ ಯಶಸ್ಸು ಗಳಿಸಿದರೆ ನಾವು ಪ್ರಪ್ರಥಮ ರಾಷ್ಟ್ರವೆಂಬ ಗೌರವಕ್ಕೆ ಪಾತ್ರರಾಗಲಿದ್ದೇವೆ, ಆ ಮೂಲಕ ನಾವು ಎಲ್ಲರಿಗೂ ಮಾದರಿಯಾಗಲಿದ್ದೇವೆ. ಶಾಲೆಗಳು ನಮಗೆಲ್ಲ ಜ್ಞಾನಾರ್ಜನೆಯ ಹಂತಗಳನ್ನು ಕಲಿಸುತ್ತವೆ. ಅವುಗಳ ತತ್ವವನ್ನು ಅಳವಡಿಸಿಕೊಂಡು ನಾವು ಪ್ರಗತಿಶೀಲರಾಗಬೇಕು. ನಮ್ಮೆಲ್ಲರ ಬೆಳವಣಿಗೆಗೆ ಸಂಸ್ಕೃತದ ಆಧಾರವಿದೆ, ಭಾರತದ ಸಾಂಪ್ರದಾಯಿಕ ಇತಿಹಾಸದ ಬೆನ್ನೆಲುಬು ಇದೆ. ಸಂಸ್ಥೆಯ ಬೆಳವಣಿಗೆಯ ಹಿಂದೆ ಅದರ ಸ್ಥಾಪಕರ ಅದ್ಭುತ ಕಲ್ಪನೆ ಇದೆ. ಈ ಕಲ್ಪನೆ ಸಾಕಾರಗೊಂಡಾಗ ಮೇಧಾವಿಗಳಾದ ಸಹಸ್ರಾರು ಮಂದಿ ನಾಡಿಗೆ ಕೊಡುಗೆಯಾಗಿ ದೊರೆಯುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಬೆಳೆದು ಅವರೆಲ್ಲರೂ ತಮ್ಮ ಸೇವೆಯು ನಾಡಿನ ಪ್ರಗತಿಗೆ ನೆರವಾಗುವಂತಹ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲಿ.” ಎಂದು ಇಸ್ರೋ ಅಧ್ಯಕ್ಷ ಡಾ| ಕೆ.ರಾಧಾಕೃಷ್ಣನ್ ಅಭಿಪ್ರಾಯಪಟ್ಟರು. ಅವರು 20.12.2013 ಶುಕ್ರವಾರ ಅಪರಾಹ್ಣ 4 ಗಂಟೆಗೆ ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ನಿರ್ಮಿಸಿದ ’ಶತಮಾನೋತ್ಸವ ಸೌಧ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು “ಸಂಸ್ಕೃತದ ಹೆಸರಿನಿಂದಲೇ ಗುರುತಿಸಲ್ಪಡುವ ಈ ಸಂಸ್ಥೆ ನಾಡಿನಾದ್ಯಂತ ಗೌರವಿಸಲ್ಪಡುತ್ತಿದೆ. ಖಂಡಿಗೆ ಶಾಮ ಭಟ್ಟರ ಶಿಸ್ತು, ಪ್ರಯತ್ನ ಈ ಶಾಲೆಯ ಬೆಳವಣಿಗೆಯ ಹಿಂದೆ ಪ್ರಧಾನ ಪಾತ್ರ ವಹಿಸಿದೆ. ಶಾಲೆ ಇನ್ನಷ್ಟು ಬೆಳಗಲಿ ಎಂದು ಅನುಗ್ರಹಿಸಿದರು.

ಚೆನ್ನೈಯ ಅಪಲೋ ಹೋಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿ. ನ ಆಡಳಿತ ನಿರ್ದೇಶಕಿ ಶ್ರೀಮತಿ ಪ್ರೀತಾ ರೆಡ್ಡಿ ಅಧ್ಯಕ್ಷತೆ ವಹಿಸಿದರು. ಕೊಯಂಬತ್ತೂರು ಆರ್ಯವೈದ್ಯ ಫಾರ್ಮಸಿಯ ಆಡಳಿತ ನಿರ್ದೇಶಕ, ‘ಪದ್ಮಶ್ರೀ’ ಪ್ರಶಸ್ತಿ ವಿಜೇತ ಕೆ. ಕೃಷ್ಣಕುಮಾರ್, ಕೇರಳ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಂ. ಶರೀಫ್, ಇಸ್ರೋ ವಿಜ್ಞಾನಿ ಡಾ|ಗಣೇಶ್ ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ, ಪ್ರಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ, ಇರಿಂಞಾಲಕುಡ ಇವರನ್ನು ಗೌರವಿಸಲಾಯಿತು. ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಸ್ವಾಗತಿಸಿದರು. ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ ವಂದಿಸಿದರು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ನೇರ ಪ್ರಸಾರ

                                                 

 
 
 
 
 
 
 

ನಾಡಿನ ಪ್ರಗತಿಯಲ್ಲಿ `ಮಹಾಜನ'ದ ಕೊಡುಗೆ ಅಪಾರ: ಎನ್.ಎ.ನೆಲ್ಲಿಕುನ್ನು


“ಗ್ರಾಮೀಣ ಪ್ರದೇಶದ ಪ್ರಗತಿಯಲ್ಲಿ ವಿದ್ಯಾಸಂಸ್ಥೆಗಳ ಕೊಡುಗೆ ಗಣನೀಯವಾದುದು. ನೂರು ವರ್ಷಗಳ ಹಿಂದೆ ಮಹಾಜನರಿಂದ ಆರಂಭವಾದ ಈ ಶಾಲೆ ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿದೆ. ಮುಂದೆಯೂ ಈ ವಿದ್ಯಾಲಯವು ನಾಡಿನ ಪ್ರಗತಿಗೆ ನೆರವಾಗುವಂತೆ ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಪ್ರಯತ್ನಿಸುತ್ತೇನೆ ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು. ಅವರು 20.12.2013 ಶುಕ್ರವಾರ ಬೆಳಗ್ಗೆ ನಮ್ಮ ಶಾಲೆಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಸುಧಾ ಜಯರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಸ್ತು ಪ್ರದರ್ಶನವನ್ನು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪ್ರಮೀಳ ಸಿ.ನಾಯಕ್, ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯೆ ರಜನಿ, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಗಂಗಾಧರ ಗೋಳಿಯಡ್ಕ, ಶೀಲಾ ಕೆ.ಎನ್.ಭಟ್. ಮಂಜುನಾಥ ಮಾನ್ಯ ಶುಭ ಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾಲಾ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ವಸ್ತು ಪ್ರದರ್ಶನ:
ಹಳೆಯ ಕಾಲದಲ್ಲಿ ಉಪಯೋಗದಲ್ಲಿದ್ದ ಕಳಸೆ, ನೊಗ, ಎತ್ತಿನ ಗಾಡಿಯ ಚಕ್ರ, ಗೋಡೆ ಗಡಿಯಾರ, ಏತ, ದೀಪಗಳು, ಪಾತ್ರೆಗಳು, ಅಳತೆ ಸಾಧನಗಳು, ತೂಕದ ಕಲ್ಲುಗಳು, ಬೆಳ್ಳಿಯ ಕಡಗಗಳು, ಮಾನಸ ಸರೋವರ, ಯಾಣ ಸಹಿತ ದೇಶದ ವಿವಿಧ ಪ್ರದೇಶದಿಂದ ಸಂಗ್ರಹಿಸಿದ ಕಲ್ಲುಗಳು, ಶತಮಾನದ ಹಿಂದಿನ ಕೈಗಡಿಯಾರ, ಮುಡಿಗುದ್ದುವ ಕೋಲು, ಕಂಚಿನ ಇಸ್ತ್ರಿ ಪೆಟ್ಟಿಗೆ, ಕಂಚಿನ ಕೂಜಾವು, ಕಬ್ಬಿಣದ ತೂಗುದೀಪ, ನಾಣ್ಯ ಸಂಗ್ರಹ, ಠಸೆಕಾಗದಗಳ ಪ್ರದರ್ಶಿನಿ, ಚಿತ್ರಕಲೆ, ಕರಕುಶಲ ಉತ್ಪನ್ನಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತಿದೆ. ಪರಿಸರದ ಕಲ್ಲಕಟ್ಟ, ಬಡಗಮೂಲೆ, ಖಂಡಿಗೆ, ಕಾಂತಿಲ, ಹೊಸಮನೆ, ಚಾಳೆತ್ತಡ್ಕ ಇತ್ಯಾದಿ ಹಳೆಯ ಸಾಂಪ್ರದಾಯಿಕ ಮನೆಗಳಲ್ಲಿದ್ದ ಈ ಸಂಗ್ರಹಗಳು ಶತಮಾನದ ಮೌಲ್ಯವುಳ್ಳವುಗಳು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ನವೀನ್ ಕುಮಾರ್ ಮತ್ತು ತಂಡದವರು ತಯಾರಿಸಿದ ಶಾಲೆಯ ಪ್ರಸ್ತುತ ಕಟ್ಟಡಗಳ ಮಾದರಿ ಹೆಚ್ಚಿನ ಗಮನ ಸೆಳೆಯುತ್ತಿದೆ. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಈ ಪ್ರದರ್ಶಿನಿಯನ್ನು ವ್ಯವಸ್ಥೆಗೊಳಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.
ಆಕರ್ಷಕ ಸನ್ಮಾನ ಪತ್ರ:
ಮೂರು ದಿನಗಳ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಇರಿಞ್ಞಾಲಕ್ಕುಡ, ಖ್ಯಾತ ಕವಿ ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈ, ಖ್ಯಾತ ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಇವರನ್ನು ಸನ್ಮಾನಿಸಲಾಗುವುದು. ಈ ಸನ್ಮಾನ ಪತ್ರವು ಅತ್ಯಂತ ಆಕರ್ಷಕವಾಗಿದ್ದು, ಒಂದು ಗ್ರಾಂ ಚಿನ್ನವನ್ನು ಯಥಾವತ್ತಾಗಿ ಇದರಲ್ಲಿ ಅಳವಡಿಸಲಾಗಿದೆ. ಪಾರದರ್ಶಕವಾಗಿರುವ ಈ ಸನ್ಮಾನ ಪತ್ರವು ಸನ್ಮಾನ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಲಿದೆ.

ಧ್ವಜಾರೋಹಣದೊಂದಿಗೆ ಶತಮಾನೋತ್ಸವಕ್ಕೆ ಚಾಲನೆ
ಗ್ರಾಮ್ಯ ವಾತಾವರಣದ ಪೆರಡಾಲದಿಂದ ಬೆಳೆಯುತ್ತಾ ಬಂದು ನೀರ್ಚಾಲಿಗೆ ಸೇರಿದ ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವಕ್ಕೆ ನೀರ್ಚಾಲು ಶೃಂಗಾರದಿಂದ ಸಜ್ಜುಗೊಂಡಿದೆ. ಬಿದಿರಿನಿಂದ ರಚಿಸಿದ ಆಕರ್ಷಕ ಸ್ವಾಗತ ಕಮಾನು, ವೇದಿಕೆ, ಚಪ್ಪರ ವಿದ್ಯಾಭಿಮಾನಿಗಳ ಸಂಭ್ರಮದ ಸಾಕ್ಷಿಗಳಾಗಿವೆ. ಇಂದು ದಶಂಬರ 20ರಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಖಂಡಿಗೆ ಮನೆತನದ ಹಿರಿಯರಾದ ಗೋವಿಂದ ಭಟ್ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್, ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಇರಿಞ್ಞಾಲಕ್ಕುಡ, ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ಇನ್ನು ಈ ದಿವಸಗಳಲ್ಲಿ ವಿದ್ವಾಂಸರ ಗೋಷ್ಟಿ, ಉಪಸ್ಥಿತಿ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಲಿವೆ.

19 December 2013

ಶತಮಾನೋತ್ಸವಕ್ಕೆ ಸಂಭ್ರಮದ ತಯಾರಿ


ಶತಮಾನೋತ್ಸವದ ಸಡಗರದಲ್ಲಿರುವ ನಮ್ಮ ವಿದ್ಯಾಸಂಸ್ಥೆಗಳಿಗೆ ಹಳೆವಿದ್ಯಾರ್ಥಿಗಳ ಸಾಧನೆಗಳ ಸುದ್ದಿಗಳು ಸಂಭ್ರಮವನ್ನು ಹೆಚ್ಚಿಸಿದೆ. ನಮ್ಮ ಶಾಲೆಯ  ಹಳೆವಿದ್ಯಾರ್ಥಿಗಳಾದ ಮಮತಾ.ಎ, ಮಮತಾ. ಸಿ.ಎನ್ ಮತ್ತು ಸುಧಾ. ಕೆ.ಎಂ ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ರೇಂಕ್ ಗಳಿಸಿದ್ದಾರೆ. ಪ್ರಥಮ ಮೂರು ರೇಂಕ್‌ಗಳನ್ನು ನಾಲ್ಕು ಮಂದಿ ಹಂಚಿಕೊಂಡಿದ್ದು ಈ ನಾಲ್ವರಲ್ಲಿ ಮೂರು ಮಂದಿ ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವುದು ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸಂಭ್ರಮದ ಕಡಲಲ್ಲಿ ತೇಲಿಸಿದೆ. ಇದರ ಹೊರತಾಗಿ ಇತ್ತೀಚೆಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ಆನ್ವಯಿಕ ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟವಾಗಿದ್ದು ಇದರ ಪ್ರಥಮ ರೇಂಕ್ ಕೂಡಾ ಈ ಶಾಲೆಯ ಹಳೆವಿದ್ಯಾರ್ಥಿನಿ ಕಾಕುಂಜೆ ಹೇಮಶ್ರೀಗೆ ಲಭಿಸಿದೆ. ಈಕೆ ಶಾಸ್ತ್ರೀಯ ಸಂಗೀತದಲ್ಲೂ ಭರವಸೆಯ ಕಲಾವಿದೆಯಾಗಿದ್ದು, ಶತಮಾನೋತ್ಸವದ ವೇದಿಕೆಯಲ್ಲಿ 22.12.2013 ಭಾನುವಾರ 12 ಗಂಟೆಗೆ ಸಹೋದರಿ ಶ್ರೀವಾಣಿ ಕಾಕುಂಜೆಯೊಂದಿಗೆ ಶಾಸ್ತ್ರೀಯ ಸಂಗೀತ ಕಚೇರಿ ನೀಡಲಿದ್ದಾಳೆ. ಶತಮಾನೋತ್ಸವದ ಸಡಗರದ ನಡುವೆ ಹಳೆ ವಿದ್ಯಾರ್ಥಿಗಳು ಗಳಿಸಿದ ಈ ಗೌರವಗಳು ಕಾರ್ಯಕ್ರಮದ ಘನತೆಯನ್ನು ಎತ್ತರಕ್ಕೇರಿಸಿದೆ.

ಶಾಲಾ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು ಒಂದು ಸಾವಿರ ಮಂದಿ ಆಸೀನರಾಗಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. 20.12.2013 ಶುಕ್ರವಾರ ಅಪರಾಹ್ನ 4 ಗಂಟೆಗೆ ಜರಗುವ ಉದ್ಘಾಟನಾ ಕಾರ್ಯಕ್ರಮವನ್ನು ಮತ್ತು 22.12.2013 ಅಪರಾಹ್ನ 4 ಗಂಟೆಗೆ ಜರಗುವ ಸಮಾರೋಪ ಸಮಾರಂಭವನ್ನುhttp://mahajanaschools.com/ ಮತ್ತು http://www.oppanna.com/ ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ವಿದ್ಯಾಭಿಮಾನಿಗಳಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಚಪ್ಪರ ಸಿದ್ಧಪಡಿಸಲಾಗಿದೆ. ವಸ್ತು ಪ್ರದರ್ಶನ ಮಳಿಗೆಯ ಸಿದ್ಧತೆ ಭರದಿಂದ ಸಾಗುತ್ತಿದ್ದು ಹಳೆಯ ಗ್ರಾಮ್ಯ ಪರಿಕರಗಳು, ಕರಕುಶಲ ಉತ್ಪನ್ನಗಳನ್ನು, ಚಿತ್ರಗಳನ್ನು ಇರಿಸಲಾಗಿದೆ. 

ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶಾಲಾ ಶಿಕ್ಷಕರು ಮತ್ತು ಹಳೆವಿದ್ಯಾರ್ಥಿಗಳಿಂದ ಜರಗುವ ಯಕ್ಷಗಾನ ಬಯಲಾಟವನ್ನು ಬೆಳಗ್ಗಿನ ತನಕ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ‘ಕಾರ್ತವೀರ್ಯಾರ್ಜುನ ಕಾಳಗ’ ಮತ್ತು ‘ಶ್ರೀ ಏಕಾದಶೀ ದೇವಿ ಮಹಾತ್ಮೆ’ ಕಥಾನಕಗಳು ಪ್ರಸ್ತುತಿಗೊಳ್ಳಲಿವೆ.

17 December 2013

ಶತಮಾನೋತ್ಸವದ ತಯಾರಿಯಲ್ಲಿ...


ಇಂದು ರಾತ್ರಿ ಶಾಲೆಯ ನೂತನ ಕಟ್ಟಡದ ಪ್ರವೇಶದ ತಯಾರಿ ಆರಂಭವಾಗಿದೆ. ವಾಸ್ತು ರಕ್ಷೋಘ್ನ ಹವನ, ಶ್ರೀದುರ್ಗಾ ಪೂಜಾ ನಡೆದಿದೆ. ನಾಳೆ ಬೆಳಗ್ಗೆ ಶಿವಪೂಜೆ.

ಇಂದು ಪ್ರೆಸ್ ಮೀಟ್, ಕಾಸರಗೋಡಿನ ಪ್ರೆಸ್ ಕ್ಲಬ್‍ನಲ್ಲಿ ಬೆಳಗ್ಗೆ 11 ಗಂಟೆಗೆ ನಮ್ಮ ಮತ್ತು ಕಾಸರಗೋಡಿನ ಪತ್ರಕರ್ತರ ಭೆಟಿ ನಡೆಯಿತು. ಎಲ್ಲರನ್ನೂ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಆಮಂತ್ರಿಸಿದ್ದೇವೆ. ಶಾಲಾ ವ್ಯವಸ್ಥಾಪಕರಾದ ಜಯದೇವ ಖಂಡಿಗೆ, ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್, ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ನಮ್ಮ ಪರವಾದ ಆಮಂತ್ರಣವನ್ನು ಪ್ರೆಸ್ ಮೀಟ್‍ನಲ್ಲಿ ನೀಡಿದ್ದಾರೆ. ಎಲ್ಲರ ಜತೆ ನೀವೂ ಬನ್ನಿ...

10 December 2013

ಇಸ್ರೋ ಅಧ್ಯಕ್ಷರಿಂದ ‘ಶತಮಾನೋತ್ಸವ ಸೌಧ’ದ ಲೋಕಾರ್ಪಣೆ, ನೀವೂ ಬನ್ನಿ...


         ನಮ್ಮ ಶಾಲೆಗಳ  ಶತಮಾನೋತ್ಸವಕ್ಕೆ ಭರದ ಸಿದ್ಧತೆ ಆರಂಭವಾಗಿದೆ. ಶತಮಾನೋತ್ಸವ ಸೌಧ ಮತ್ತು ವಿಶಾಲ ಸಭಾಂಗಣದ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ. ಮಳೆಗಾಲದಲ್ಲೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮುಕ್ತವಾಗಿ ವೇದಿಕೆಯಾಗಬಲ್ಲ ವಿಶಾಲ ಸಭಾಂಗಣದ ಚಾವಣಿಯ ಕಾಮಗಾರಿ ಆರಂಭವಾಗಿದೆ. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸಭಾಂಗಣವನ್ನು ಮಂಗಳಯಾನದ ಹರಿಕಾರ, ಇಸ್ರೋ ಅಧ್ಯಕ್ಷ ಡಾ| ಕೆ.ರಾಧಾಕೃಷ್ಣನ್ ನಿರ್ವಹಿಸಲಿದ್ದಾರೆ. ದಶಂಬರ 20, ಶುಕ್ರವಾರದಂದು ಆರಂಭವಾಗುವ ಸಭಾ ಕಾರ್ಯಕ್ರಮಗಳು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ 22 ನೇ ತಾರೀಕು ಭಾನುವಾರದ ತನಕ ಮುಂದುವರಿಯಲಿವೆ.

ದಶಂಬರ 20, ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅಡ್ವಕೇಟ್ ಶ್ಯಾಮಲಾದೇವಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಅಡ್ವಕೇಟ್ ಮುಮ್ತಾಜ್ ಶುಕೂರ್, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಧಾ ಜಯರಾಂ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರಮೀಳ ಸಿ.ನಾಯಕ್, ಕಾಸರಗೋಡು ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ರಜನಿ, ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಯನ್. ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್, ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಗೋಳಿಯಡ್ಕ, ಶ್ರೀಮತಿ ಶೀಲಾ ಕೆ.ಯನ್. ಭಟ್, ಮಹೇಶ ವಳಕ್ಕುಂಜ, ಮಂಜುನಾಥ ಮಾನ್ಯ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ಮಳಿಗೆಯನ್ನು ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸೌಮ್ಯ ಮಹೇಶ್ ಉದ್ಘಾಟಿಸಲಿದ್ದಾರೆ. ಅಪರಾಹ್ಣ 2 ರಿಂದ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರಗಲಿವೆ.

ದಶಂಬರ 20, ಶುಕ್ರವಾರ ಅಪರಾಹ್ಣ 4 ಗಂಟೆಗೆ ’ಶತಮಾನೋತ್ಸವ ಸೌಧ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಇಸ್ರೋ ಅಧ್ಯಕ್ಷ ಡಾ| ಕೆ.ರಾಧಾಕೃಷ್ಣನ್ ಶತಮಾನೋತ್ಸವ ಸೌಧವನ್ನು ಉದ್ಘಾಟಿಸುವರು. ಚೆನ್ನೈಯ ಅಪಲೋ ಹೋಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿ. ನ ಆಡಳಿತ ನಿರ್ದೇಶಕಿ ಶ್ರೀಮತಿ ಪ್ರೀತಾ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಯಂಬತ್ತೂರು ಆರ್ಯವೈದ್ಯ ಫಾರ್ಮಸಿಯ ಆಡಳಿತ ನಿರ್ದೇಶಕ, ‘ಪದ್ಮಶ್ರೀ’ ಪ್ರಶಸ್ತಿ ವಿಜೇತ ಕೆ. ಕೃಷ್ಣಕುಮಾರ್, ಕೇರಳ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಂ. ಶರೀಫ್, ಬದಿಯಡ್ಕದ ಉದ್ಯಮಿ ಬಿ. ವಸಂತ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ಶತಮಾನ ಪ್ರಭಾ’ ಸ್ಮರಣ ಸಂಚಿಕೆಯ ಬಿಡುಗಡೆ ಹಾಗೂ ಶಾಲಾ ಹಳೆ ವಿದ್ಯಾರ್ಥಿ, ಪ್ರಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ, ಇರಿಂಞಲಕುಡ ಇವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಯಿಂದ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆಯರ ಭರತನಾಟ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

          ದಶಂಬರ 21, ಶನಿವಾರ ಬೆಳಗ್ಗೆ 10ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರಾರಂಭವಾಗುವುದು. 11.30ರಿಂದ ಶಾಲಾ ಹಳೆ ವಿದ್ಯಾರ್ಥಿಗಳು ‘ಯಕ್ಷಗಾನ ತಾಳಮದ್ದಳೆ’ಯನ್ನು ಪ್ರಸ್ತುತಪಡಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ‘ಶೈಕ್ಷಣಿಕ ಸಂಗಮ-ವರ್ಧಂತ್ಯುತ್ಸವ’ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾಧಿಕಾರಿ ಪಿ.ಯಸ್. ಮಹಮ್ಮದ್ ಸಗೀರ್ ಉದ್ಘಾಟಿಸಲಿದ್ದಾರೆ. ಕಾಸರಗೋಡು ಡಿಡಿಇ (ಇನ್‌ಚಾರ್ಜ್) ಬಿ. ಜಯಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಐ. ಸತ್ಯನಾರಾಯಣ ಭಟ್ ಬಹುಮಾನ ವಿತರಣೆ  ನಡೆಸುವರು. ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ, ಕಾಸರಗೋಡು ಬ್ಲೋಕ್ ಪಂಚಾಯತು ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀಸಮಿತಿ ಅಧ್ಯಕ್ಷೆ ಶ್ರೀಮತಿ ತಸ್ಲಿಮಾ ಹ್ಯಾರಿಸ್, ಬದಿಯಡ್ಕ ಗ್ರಾಮ ಪಂಚಾಯತು ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀಸಮಿತಿ ಅಧ್ಯಕ್ಷೆ ಶ್ರೀಮತಿ ಸಮೀರಾ  ಇಬ್ರಾಹಿಂ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಇಬ್ರಾಹಿಂ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವಿನಯಾ.ಕೆ ವಿರಚಿತ ಕವನ ಸಂಕಲನವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಸಂಜೆ 5ರಿಂದ ವಿವಿಧ ವಿನೋದಾವಳಿಗಳು ಮತ್ತು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ಯಕ್ಷಗಾನ ಬೊಂಬೆಯಾಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ದಶಂಬರ 22, ಭಾನುವಾರ ಬೆಳಗ್ಗೆ 10 ರಿಂದ ಪೂರ್ವ ಅಧ್ಯಾಪಕ ವಿದ್ಯಾರ್ಥಿ ಸಂಗಮದ ಅಂಗವಾಗಿ ‘ಗುರುವಂದನೆ’ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಡಿ. ಸದಾಶಿವ ಭಟ್ ವಹಿಸಲಿದ್ದಾರೆ. ಬ್ರಹ್ಮಶ್ರೀ ವೇ|ಮೂ| ಮಾಧವ ಉಪಾಧ್ಯಾಯ ಬಳ್ಳಪದವು, ಖ್ಯಾತ ಚಿತ್ರಕಲಾವಿದ ಪಿ.ಯಸ್. ಪುಣಿಂಚತ್ತಾಯ, ಕಾಸರಗೋಡು ತಹಶೀಲ್ದಾರರಾದ ಕೆ. ಶಿವಕುಮಾರ್, ಮಂಗಳೂರು ಎಂಸಿಎಫ್ ಜನರಲ್ ಮೇನೇಜರ್ ಪಿ. ಜಯಶಂಕರ ರೈ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11.30ರಿಂದ ಹಳೆ ವಿದ್ಯಾರ್ಥಿನಿ ಧನ್ಯಶ್ರೀ ಹಳೆಮನೆ ಇವರಿಂದ ಭಾವಗೀತೆ ಮತ್ತು ಕಾಕುಂಜೆ ಸಹೋದರಿಯರಾದ ಹೇಮಶ್ರೀ-ಶ್ರೀವಾಣಿ ಇವರಿಂದ ಶಾಸ್ತ್ರೀಯ ಸಂಗೀತ ಗಾಯನ ಜರಗಲಿರುವುದು.

        ಅಪರಾಹ್ನ 4ರಿಂದ ಆರಂಭವಾಗುವ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಟಿವಿಎಸ್ ಮೋಟರ್ ಕಂಪೆನಿಯ ಅಧ್ಯಕ್ಷ ಕೆ.ಯನ್. ರಾಧಾಕೃಷ್ಣನ್ ಉದ್ಘಾಟಿಸಲಿದ್ದಾರೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಆಡಳಿತ ಮೊಕ್ತೇಸರರಾದ ಯು.ಟಿ. ಆಳ್ವ ವಹಿಸಲಿದ್ದಾರೆ. ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ನಟಿ ಕಾವ್ಯಾ ಮಾಧವನ್, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ, ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ, ಬಜ್ಪೆಯ ಕಾಮತ್ ಕಾಶ್ಯೂ ಕಂಪೆನಿ ಮಾಲಕ ಸೇವಗೂರು ಉಮೇಶ್ ಕಾಮತ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಖ್ಯಾತ ಕವಿ ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಮತ್ತು ವಿಶ್ವವಿಖ್ಯಾತ ಬೊಂಬೆಯಾಟ ಕಲಾವಿದರಾದ ಕೆ.ವಿ.ರಮೇಶ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಸಂಜೆ 7 ರಿಂದ  ವಿವಿಧ ವಿನೋದಾವಳಿಗಳು ಮತ್ತು ಅಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟವನ್ನೂ ಏರ್ಪಡಿಸಲಾಗಿದೆ.

      ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ...

ದಶಂಬರ 15ರಂದು ಹಳೆವಿದ್ಯಾರ್ಥಿಗಳ ಕಲಾ ಸ್ಪರ್ಧೆಗಳು, ಬನ್ನಿ...


ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳಿಗೆ ಭಾವಗೀತೆ, ಜಾನಪದ ಗೀತೆ, ದಾಸರ ಪದ ಮತ್ತು ಭಾಷಣ ಸ್ಪರ್ಧೆಗಳನ್ನು ದಿನಾಂಕ 15.12.2013 ಭಾನುವಾರ ಬೆಳಗ್ಗೆ 10 ಗಂಟೆಗೆ ಶಾಲಾ ಪರಿಸರದಲ್ಲಿ ನಡೆಸಲಾಗುವುದು. 30 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 30 ವರ್ಷಕ್ಕಿಂತ ಕೆಳಗಿನವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಗುವುದು. ಹಳೆ ವಿದ್ಯಾರ್ಥಿಗಳು ಯಾವುದಾದರೂ ಎರಡು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್. ಶಿವಕುಮಾರ (+91 9567293094) ಅವರನ್ನು ಸಂಪರ್ಕಿಸಬಹುದು. ಬನ್ನಿ, ಭಾಗವಹಿಸಿ.

06 December 2013

ದಶಂಬರ 14ರಂದು ಶತಮಾನೋತ್ಸವ ಪೂರ್ವಭಾವಿ ಸಭೆ


ನಮ್ಮ ಶಾಲೆಗಳ ಶತಮಾನೋತ್ಸವ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ಮತ್ತು ಪೂರ್ವಭಾವಿ ಸಿದ್ಧತೆಗಾಗಿ ಶತಮಾನೋತ್ಸವದ ವಿವಿಧ ಸಮಿತಿಗಳು, ಪೂರ್ವ ವಿದ್ಯಾರ್ಥಿಗಳು ಮತ್ತು ಆಸಕ್ತರ ಸಭೆಯನ್ನು 14.12.2013 ಶನಿವಾರ ಅಪರಾಹ್ನ 3 ಗಂಟೆಗೆ ಕರೆಯಲಾಗಿದೆ. ಎಲ್ಲ ವಿದ್ಯಾಭಿಮಾನಿಗಳು ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶತಮಾನೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ. ಬನ್ನಿ...

03 December 2013

ಶತಮಾನೋತ್ಸವ ಆಮಂತ್ರಣ, ಬನ್ನಿ...

ಶಾಲಾ ಶತಮಾನೋತ್ಸವದ ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ದಶಂಬರ 20,21 ಮತ್ತು 22 ನಮ್ಮ ಶಾಲೆಯನ್ನು ಪ್ರೀತಿಸುವ ಎಲ್ಲರ ಹಬ್ಬ ಇದು, ಬನ್ನಿ... ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ...

28 November 2013

ಶ್ರೀಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ಕೊಡುಗೆ


“ಸಮಾಜದ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಕ್ಷೇತ್ರ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ರೂಪಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡಿನಲ್ಲೂ ಸಂಘಟನೆಯನ್ನು ರೂಪಿಸಿ ಸಂಸ್ಥೆಯು ಜನಪ್ರೀತಿಯನ್ನು ಗಳಿಸುತ್ತಿದೆ. ಈ ನಿಟ್ಟಿನಲ್ಲಿ ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಕೈಜೋಡಿಸುತ್ತಿದೆ. ಆ ಮೂಲಕ ಧರ್ಮಸ್ಥಳದ ಖಾವಂದರಾದ ಸನ್ಮಾನ್ಯ ವೀರೇಂದ್ರ ಹೆಗ್ಗಡೆಯವರು ಈ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ತಮ್ಮ ಅಚ್ಚಳಿಯದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಡಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತಿರುವ ರೂಪಾಯಿ ಐದು ಲಕ್ಷ ದೇಣಿಗೆಯನ್ನು ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊ| ಕಾನತ್ತಿಲ ಮಹಾಲಿಂಗ ಭಟ್ಟರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್, ಪಡಿಯಡ್ಪು ಶಂಕರ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಮಂಜುನಾಥ ಮಾನ್ಯ ಮತ್ತು ಶ್ರೀಮತಿ ಸೌಮ್ಯಾ ಮಹೇಶ್ ನಿಡುಗಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಶಾಲಾ ಶಿಕ್ಷಕ ಎಚ್. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.

26 November 2013

ಮಹಾಜನ ಶತಮಾನೋತ್ಸವ ಭವನ ‘ಸಮರ್ಪಣೆ’ಗೆ ಸಿದ್ಧ


ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೇ ವರ್ಷದ ಅಗೋಸ್ತು 19 ರಂದು ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಆ ದಿನದ ಗ್ರಹಗತಿ ಅತ್ಯುತ್ತಮವಾಗಿದ್ದು ಕಟ್ಟಡದ ಕಾಮಗಾರಿ ಅತ್ಯಂತ ವೇಗವಾಗಿ ಪೂರ್ತಿಗೊಳ್ಳಲಿದೆ ಎಂದು ಶುಭ ಹಾರೈಸಿದ್ದರು. ಅವರ ನುಡಿಯಂತೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಈಗ ಪೂರ್ಣಗೊಳ್ಳುವ ಹಂತ ತಲಪಿದೆ.

ಕನ್ನಡ ಕರಾವಳಿಯ ನಾಡಿಗೆ ಸುಸಂಸ್ಕೃತ ವಿದ್ವಾಂಸ ಪರಂಪರೆಯ ಶ್ರೇಷ್ಠ ಸಾಂಸ್ಕೃತಿಕ, ಸಾಮಾಜಿಕ, ನಾಗರಿಕ ಪರಂಪರೆಯನ್ನೊದಗಿಸಿದ ಈ ಶಾಲೆ ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಲೆಗೆ ಬೆನ್ನೆಲುಬಾಗಿ ಬೆಳೆದಿರುವುದು ಕಟ್ಟಡ ನಿರ್ಮಾಣದ ಕಾರ್ಯ ವೇಗ ಪಡೆದುಕೊಳ್ಳಲು ಮೂಲ ಕಾರಣವಾಗಿದೆ. ಪೆರಡಾಲ ದೇವಸ್ಥಾನದಲ್ಲಿ ಪ್ರಾರಂಭಗೊಂಡು 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತ್ತು. ಶಾಲಾ ಕಟ್ಟಡವೂ ಸುಮಾರು ಅಷ್ಟೇ ಹಳೆಯದಾಗಿರುವುದರಿಂದ ಆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲು ಶಾಲಾ ಆಡಳಿತ ಸಮಿತಿ ತೀರ್ಮಾನಿಸಿತ್ತು. ಶಾಲಾ ಆಡಳಿತ ಮಂಡಳಿಯ ವಿನಂತಿ ಮೇರೆಗೆ ಸೆಪ್ಟೆಂಬರ್ 2 ರಂದು ಶಾಲೆಗೆ ಭೇಟಿ ನೀಡಿದ ನೂತನ ಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿ ಐ. ಸತ್ಯನಾರಾಯಣ ಭಟ್ ಹಳೆಯ ಕಟ್ಟಡವನ್ನು ಕೆಡವಲು ಅನುಮತಿ ನೀಡಿದ್ದರು.

        ಸರಕಾರೀ ಅಂಗೀಕಾರ ಗಳಿಸಿಕೊಂಡು ಹಳೆಯ ನಾಲ್ಕಂಕಣದ ಕಟ್ಟಡವನ್ನು ಕೆಡಹುವ ಕಾರ್ಯ ಓಣಂ ರಜೆಯ ಜೊತೆಗೆ ಸೆಪ್ಟೆಂಬರ್ 11 ರಂದು ಆರಂಭವಾಗಿತ್ತು. ಇತರ ಕಟ್ಟಡಗಳು ಸಾಕಷ್ಟು ಲಭ್ಯವಿರುವುದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡವನ್ನು ಕೆಡಹುವ ಕಾರ್ಯಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಶಾಲಾ ತರಗತಿಗಳನ್ನು ಪುನರ್ ವಿನ್ಯಾಸಗೊಳಿಸಿ, ಶಾಲಾ ಅಧ್ಯಯನ ವರ್ಷದ ದ್ವಿತೀಯಾರ್ಧ ಆರಂಭವಾಗುವಾಗ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವೇಗದ ಚಾಲನೆ ದೊರೆತಿತ್ತು. ಸಮಾಜದ ಎಲ್ಲ ಸಜ್ಜನರ ಆಶಯದಂತೆ, ಅತ್ಯಂತ ವೇಗವಾಗಿ ಸಾಗಿದ ಈ ಕಾರ್ಯ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಆ ಮೂಲಕ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳು ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕೆ ದೊರೆಯಲಿದೆ. ಪ್ರಸ್ತುತ ಒಂದು ಸಾವಿರ ಮಂದಿ ಮಳೆಗಾಲದಲ್ಲೂ ಆರಾಮವಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ವಿಶಾಲ ಸಭಾಂಗಣ ನಿರ್ಮಾಣ ಕಾರ್ಯ ಆರಂಭವಾಗಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮತ್ತು ಸಭಾಂಗಣಕ್ಕೆ ಅಂದಾಜು 2 ಕೋಟಿ ರೂಪಾಯಿ ಖರ್ಚು ನಿರೀಕ್ಷಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚವಾಗಿದೆ.

        ಅಂದ ಹಾಗೆ ದಶಂಬರ 20,21 ಮತ್ತು 22 ರಂದು ವೈಭವದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾವು ಕುಟುಂಬ ಸಮೇತರಾಗಿ ಬನ್ನಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಡಿ...

25 November 2013

ದಶಂಬರ 7 ರಂದು ಹಳೆವಿದ್ಯಾರ್ಥಿಗಳ ಕ್ರೀಡಾಕೂಟ, ಬನ್ನಿ...


ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು 2013 ದಶಂಬರ್ 7, ಶನಿವಾರ ಶಾಲಾ ಮೈದಾನದಲ್ಲಿ ನಡೆಸಲಾಗುವುದು. 25 ವರ್ಷಕ್ಕಿಂತ ಕೆಳಗಿನ ಪ್ರಾಯದ ಹಳೆ ವಿದ್ಯಾರ್ಥಿಗಳಿಗೆ 100 ಮೀ ಓಟ, 200 ಮೀ ಓಟ, 400 ಮೀ. ಓಟ, ಶೋಟ್‌ಪುಟ್, ಲೋಂಗ್ ಜಂಪ್, ಹೈಜಂಪ್ ಸ್ಪರ್ಧೆಗಳನ್ನು ನಡೆಸಲಾಗುವುದು. 25 ವರ್ಷಕ್ಕಿಂತ ಹಿರಿಯರಿಗೆ 100 ಮೀ ಓಟ, 200 ಮೀ ಓಟ, ಶೋಟ್‌ಪುಟ್ ಮತ್ತು ಲೋಂಗ್ ಜಂಪ್ ಸ್ಪರ್ಧೆಗಳು ನಡೆಯುವುದು. ಹಳೆ ವಿದ್ಯಾರ್ಥಿಗಳಿಗೆ ಯಾವುದಾದರೂ ಮೂರು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ. ಸೂರ್ಯನಾರಾಯಣ (9446034086) ಅವರನ್ನು ಸಂಪರ್ಕಿಸಬಹುದು.

19 November 2013

ವೃತ್ತಿ ಪರಿಚಯ ಮೇಳ - ರಾಜ್ಯ ಮಟ್ಟಕ್ಕೆ ಮನೋಜ್ ಕುಮಾರ್

ಪಿಲಿಕ್ಕೋಡಿನಲ್ಲಿ ಜರಗಿದ 2013-14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಪೌಷ್ಟಿಕಾಂಶಯುಕ್ತ ಆಹಾರ ತಯಾರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮನೋಜ್ ಕುಮಾರ್. ಈತ ನಾರಾಯಣಮಂಗಲ ನಿವಾಸಿ ನಾರಾಯಣ ಪ್ರಕಾಶ್ ಮತ್ತು ಸಾವಿತ್ರಿ ಇವರ ಪುತ್ರ. ಶುಭಾಶಯಗಳು...

ವಿಜ್ಞಾನ ಮೇಳ ರಾಜ್ಯ ಮಟ್ಟಕ್ಕೆ ಆಯ್ಕೆ

ಪಿಲಿಕ್ಕೋಡಿನಲ್ಲಿ ಜರಗಿದ 2013-14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಪ್ರೌಢಶಾಲಾ ವಿಭಾಗದ ಸ್ಥಿರ ಮಾದರಿಯಲ್ಲಿ ‘ಪ್ಲಾಸ್ಟಿಕ್‌ನಿಂದ ಪಾಲಿಸ್ಟರ್ ತಯಾರಿ - ಪರಿಸರ ಸಹ್ಯ ಪ್ಲಾಸ್ಟಿಕ್ ವಿಲೇವಾರಿ ವಿಧಾನ ಮತ್ತು ನಗರ ಮಾಲಿನ್ಯ ನಿವಾರಣೆಯ ವ್ಯವಸ್ಥೆಗೆ’ಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ಶಾಲೆಯ  ಎಂಟನೇ ತರಗತಿಯ ನಿಸರ್ಗ.ಕೆ(ಕೇಶವಪ್ರಸಾದ್ ಕೊಡ್ವಕೆರೆ - ಭಾರತಿ. ಎಂ.ಜಿ ಇವರ ಪುತ್ರಿ) ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ.ಬಿ (ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ). ಶುಭಾಶಯಗಳು...

15 November 2013

ಕಬಡ್ಡಿ ರಾಜ್ಯ ತಂಡಕ್ಕೆ ಆಯ್ಕೆ - ರಮ್ಯಾ. ಆರ್ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಬಾಲಕಿಯರ ಕಬಡ್ಡಿ ಚಾಂಪಿಯನ್‍ಶಿಪ್ (ಪೈಕ) ನಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ರಮ್ಯಾ. ಆರ್ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಶುಭಾಶಯಗಳು...

21 October 2013

ಶಾಲಾ ಕರಕುಶಲ ಮೇಳ - 2013

ವಿದ್ಯಾರ್ಥಿಗಳ ಕರಕುಶಲ ಸಾಮರ್ಥ್ಯ, ವೈಜ್ಞಾನಿಕ ಬೆಳವಣಿಗೆಗಳನ್ನು ಪರೀಕ್ಷಿಸಲು ಮೊನ್ನೆ ಅಕ್ಟೋಬರ್ 18ರಂದು ಶಾಲಾ ಮಟ್ಟದ ಕರಕುಶಲ ಮೆಳವನ್ನು ಆಯೋಜಿಸಿದ್ದೆವು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಅಕ್ಟೋಬರ್ 30 ಮತ್ತು 31ರಂದು ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆಯಲ್ಲಿ ಜರಗಲಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು...