Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

25 January 2011

ಸಹಕಲಿಕಾ ಶಿಬಿರ ಆರಂಭ


ಶಾಲೆ, ರಾತ್ರಿಯ ಪ್ರಶಾಂತ ವಾತಾವರಣದಲ್ಲಿಯೂ ಚಿಲಿಪಿಲಿಗುಟ್ಟುತ್ತಿದೆ. ಶಾಲೆಯಲ್ಲಿ ಗೂಡುಕಟ್ಟಿದ ವಿದ್ಯಾರ್ಥಿಗಳು ಶಿಬಿರಾಗ್ನಿಯ ಮಜಾ ಅನುಭವಿಸುತ್ತಿದ್ದಾರೆ. ಇಂದು ಬೆಳಗ್ಗೆ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಉದ್ಘಾಟಿಸಿದ ಶಿಬಿರ ಸಂಪನ್ಮೂಲ ವ್ಯಕ್ತಿಗಳಾದ ಗುರುಪ್ರಸಾದ ರೈ ಮತ್ತು ತಂಡದವರ ನೇತೃತ್ವದಲ್ಲಿ ಚೆನ್ನಾಗಿ ನಡೆಯುತ್ತಿದೆ. ನೂರೈವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಖುಷಿ ಇದೆ.
ನಾಳೆ ಗಣರಾಜ್ಯೋತ್ಸವ, ಎಲ್ಲರಿಗೂ ಶುಭಾಶಯಗಳು...

24 January 2011

ನಾಳೆ ಸಹವಾಸ ಶಿಬಿರ

ಏಳನೇ ತರಗತಿ ವಿದ್ಯಾರ್ಥಿಗಳ ಸಹವಾಸ ಶಿಬಿರ ಮತ್ತು ಶಾಲಾ ಸ್ಕೌಟ್ ಗೈಡ್ ದಳಗಳ ವಾರ್ಷಿಕ ಶಿಬಿರ ನಾಳೆ ಮತ್ತು ನಾಡಿದ್ದು ನಮ್ಮ ಶಾಲೆಯಲ್ಲಿ ಜರಗಲಿದೆ. ಸುಮಾರು ನೂರೈವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸುವ ಈ ಶಿಬಿರವೂ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತೇವೆ.

19 January 2011

ನಮಸ್ಕಾರ, ನಾವು ತೃತೀಯ ವರ್ಷಕ್ಕೆ ಕಾಲಿಡುತ್ತಿದ್ದೇವೆ...

ಒಂದು, ಎರಡು... ವರ್ಷಗಳು ಕಳೆದಿವೆ. ೨೦೦೯ ಜನವರಿ ೧೯ರಂದು ಈ ಬ್ಲಾಗನ್ನು ನಿಮ್ಮೆದುರು ತೆರೆದಿಡುವಾಗ ಇಷ್ಟೆಲ್ಲ ನಿರೀಕ್ಷೆಗಳಿರಲಿಲ್ಲ. ಆದರೆ ಎರಡು ವರ್ಷಗಳಲ್ಲಿ ಈ ಬ್ಲಾಗ್ ನಮಗೆ ಸಂವಹನದ ಹೊಸ ಮಜಲುಗಳನ್ನು ತೆರೆದು ತೋರಿಸಿದೆ. ಕಾಲಉರುಳಿದೆ,ನಿನ್ನೆ ಸಂಜೆ ಶಾಲೆಯಿಂದ ಹೊರಟ ವಿದ್ಯಾರ್ಥಿಗಳು ಕೇರಳ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ತಿರುಗಾಟ ನಿರತರಾಗಿದ್ದಾರೆ. ಎರಡು ವರ್ಷಗಳಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಶಾಲೆಯ ಇನ್ನಷ್ಟು ಪೂರ್ವ ಇದ್ಯಾರ್ಥಿಗಳನ್ನು ಹಿತೈಷಿಗಳನ್ನು ತಲಪಲು ನಮಗೆ ಸಾಧ್ಯವಾಗಿದೆ. ಹಾಗಾಗಿ ನಾವು ಅಂತರ್ಜಾಲದ ಮೂಲಕ ದೇಶ ವಿದೇಶಗಳನ್ನು ತಲಪಿದ್ದೇವೆ ಎಂಬುದನ್ನು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದೇವೆ. ಇದಕ್ಕೆ ಈ ಕ್ಷಣದ ಮಾಹಿತಿಯ ಪ್ರಕಾರ ೧೩೦ ಮಂದಿ ಫಾಲೋವರುಗಳು ಇದ್ದಾರೆ ಎಂಬುದಕ್ಕಿಂತ ಹೆಚ್ಚಿನ ದೃಷ್ಟಾಂತ ಬೇಕೇ...

ನಿಮಗೆಲ್ಲ ಈ ಸಂದರ್ಭದಲ್ಲಿ ನಮ್ಮ ಭಾವಪೂರ್ಣ ನಮನಗಳು. ನಮ್ಮನ್ನು ಈ ಹುಟ್ಟುಹಬ್ಬ ಸಂಭ್ರಮದ ತನಕ ಬೆಳೆಸಿದ ನಿಮಗೆ ನಾವು ಆಭಾರಿಗಳು. ಪ್ರೀತಿ ಇರಲಿ...

18 January 2011

ಶಾಲಾ ಪ್ರವಾಸ - ತಿರುವನಂತಪುರಕ್ಕೆ...

ಅಧ್ಯಯನ ವರ್ಷ ಅದರ ಒತ್ತಡದ ಉತ್ತುಂಗದಲ್ಲಿದೆ. ಈ ಮಧ್ಯೆ ಜಿಲ್ಲಾ ಕಲೋತ್ಸವಗಳಲ್ಲಿ ಭಾಗವಹಿಸಲು ಸಾಧ್ಯವಾದದ್ದು ನಮ್ಮ ವಿದ್ಯಾರ್ಥಿಗಳ ಹೆಮ್ಮೆಯನ್ನು ಹೆಚ್ಚಿಸಿದೆ. ಕಾರಣಾಂತರಗಳಿಂದ ಈ ಬಾರಿ ರಾಜ್ಯ ಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ. ಆದರೆ ಇದು ನಮ್ಮ ದೌರ್ಬಲ್ಯ ಅಲ್ಲ, ಸಾಧನೆಯ ಮೆಟ್ಟಿಲು ಎಂಬ ನಿಟ್ಟಿನಲ್ಲಿ ಸ್ವೀಕರಿಸುತ್ತೇವೆ.

ಇಂದು ಸಾಯಂಕಾಲ ಹೊರಡುವ ಮಲಬಾರ್ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ ನಮ್ಮ ಶಾಲೆಯ ೩೦ ಮಂದಿ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ರಾಜ್ಯ ರಾಜಧಾನಿ ತಿರುವನಂತಪುರಕ್ಕೆ ಪ್ರವಾಸ ಹೊರಡುತ್ತಿದ್ದಾರೆ. ನಾಳೆ ಅಲ್ಲೆಲ್ಲ ಶ್ರೀಅನಂತಪದ್ಮನಾಭ ಸ್ವಾಮಿ ದೇವಸ್ಥಾನ, ವಿಧಾನಸಭೆ, ಶಂಖುಮುಖಂ, ಕೋವಳಂ, ಮ್ಯೂಸಿಯಂ ಸುತ್ತಾಡಿ ಬರಲಿದ್ದಾರೆ. ಅವರಿಗೆ ಶುಭ ಪ್ರಯಾಣವನ್ನು ಹಾರೈಸುತ್ತಿದ್ದೇವೆ.

01 January 2011

ರಜಾಕಾಲದ ಕಂಪ್ಯೂಟರ್ ತರಬೇತಿ ಸಮಾರೋಪ

“ಕೇರಳ ವಿದ್ಯಾಭ್ಯಾಸ ಇಲಾಖೆ ಕಂಪ್ಯೂಟರ್ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಐಟಿ ಸ್ಕೂಲ್, ಪ್ರೋಜೆಕ್ಟ್ ವಿದ್ಯಾರ್ಥಿಗಳಿಗಾಗಿ ಗಣಕ ಯಂತ್ರದ ಆಧುನಿಕ ಮಾಹಿತಿಗಳನ್ನು ಒದಗಿಸುತ್ತಿದೆ. ಕಂಪ್ಯೂಟರ್ ರಂಗದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಕುರಿತಾದ ವಿವರಗಳನ್ನು ಹಂಚಿಕೊಳ್ಳುವುದಕ್ಕಾಗಿ ರಜಾಕಾಲದ ಈ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ಜಿಲ್ಲೆಯಲ್ಲೂ ಐದುಸಾವಿರ ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಈ ಬಾರಿ ಏರ್ಪಡಿಸಲಾಗಿದೆ. ಈ ಮೂಲಕ ಕೇರಳ ರಾಜ್ಯದ ಎಪ್ಪತ್ತುಸಾವಿರ ಮಂದಿ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಟೈಪ್ ಮಾಡುವುದು ಮತ್ತು ಇಂಟರ್‌ನೆಟ್ ಮೂಲಕ ವ್ಯವಹರಿಸಲು ಪ್ರಾಪ್ತರಾಗಲಿದ್ದಾರೆ” ಎಂದು ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ರಾಜೇಶ್ ಎಂ.ಪಿ ಹೇಳಿದರು. ಅವರು ನಮ್ಮ ಶಾಲೆಯಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಮೂರು ತಂಡಗಳ ಸ್ಟೂಡೆಂಟ್ ಸ್ಕೂಲ್ ಐಟಿ ಕೋ-ಓರ್ಡಿನೇಟರ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಇಂದು ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯದೇವ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಸಂಪನ್ಮೂಲ ವ್ಯಕ್ತಿ ಕಾನ ರವಿಶಂಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮುಕ್ತೇಶ.ಬಿ ಸ್ವಾಗತಿಸಿ ಉಮೈಮತ್ ವಂದಿಸಿದರು. ಗಿರಿಶಂಕರ.ಕೆ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಮಯ್ಯ ಹಾಗೂ ಶ್ರೀರಶ್ಮಿ. ಸಿ.ಎಸ್ ಪ್ರಾರ್ಥನೆ ಹಾಡಿದರು. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಒಟ್ಟು ೯೦ ಕೇಂದ್ರಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು ೫೦೩೨ ಮಂದಿ ವಿದ್ಯಾರ್ಥಿಗಳು ಈ ವಿಶೇಷ ತರಬೇತಿಯನ್ನು ಪಡೆದಿದ್ದಾರೆ.