Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

29 June 2012

ದಿ|ಖಂಡಿಗೆ ಶಾಮ ಭಟ್ಟರ ತೈಲ ಚಿತ್ರ ಅನಾವರಣ

    “ದುಡ್ಡು ಬಟ್ಟೆಯಿಂದ ದೊಡ್ಡವರಾದವರಿಲ್ಲ, ದೊಡ್ಡ ಮನಸ್ಸಿನಿಂದ ದೊಡ್ಡವರಾದವರೇ ಎಲ್ಲ. ಲೋಕಕ್ಕೆ ಆದರ್ಶರೆನಿಸಿಕೊಂಡವರೆಲ್ಲ ಈ ತತ್ವವನ್ನು ಅನುಸರಿಸಿಕೊಂಡವರು. ‘ಮಹಾಜನ’ ಎಂಬ ಪದಕ್ಕೆ ಅನ್ವರ್ಥವಾಗಿ ಬೆಳೆದ ಖಂಡಿಗೆ ಶಾಮ ಭಟ್ಟರ ರೂಪವನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಈ ತೈಲ ವರ್ಣ ಚಿತ್ರ ಸಹಕಾರಿ. ಆ ಚಿತ್ರವೇ ಮುಂದಿನ ಪೀಳಿಗೆಗೆ ದಾರಿ ದೀಪವಾಗಬಲ್ಲದು" ಎಂದು ನಿವೃತ್ತ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ದಿ| ಖಂಡಿಗೆ ಶಾಮ ಭಟ್ಟರ ತೈಲ ವರ್ಣ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಿದ್ಯಾರ್ಥಿಗಳಾದ ಬಳ್ಳಪದವು ಶಂಕರನಾರಾಯಣ ಭಟ್, ಕುಂಜಾರು ಸುಬ್ರಾಯ ಭಟ್, ಚಿತ್ರ ಕಲಾವಿದ ರವಿ ಪಿಲಿಕ್ಕೋಡ್, ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಅರ್ಪಿಸಿದರು.


    ಚಿತ್ರ ಕಲಾವಿದ ರವಿ ಪಿಲಿಕ್ಕೋಡ್ ಅವರನ್ನು ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ ಶಾಲು ಹೊದೆಸಿ ಫಲ ಸಮರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಗೋವಿಂದ ಶರ್ಮ ಕೋರಿಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಮಾದಕ ದ್ರವ್ಯ ವಿರುದ್ಧ ಭಿತ್ತಿ ಚಿತ್ರಗಳು

ಮೊನ್ನೆ ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಾಲಾ ‘ಆರ್ಟ್ಸ್ ಕ್ಲಬ್’ ಸದಸ್ಯರು ರಚಿಸಿದ ಪೋಸ್ಟರುಗಳು, ವಿದ್ಯಾರ್ಥಿಗಳನ್ನು ಆಕರ್ಷಿಸಿದವು.

26 June 2012

ಮಾದಕ ದ್ರವ್ಯ ವಿರುದ್ಧ ದಿನ

ಇಂದು 26.06.2012 ಮಂಗಳವಾರ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನ. ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಗೃತಿಯನ್ನು ಬೆಳೆಸುವ ದೃಷ್ಟಿಯಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ನೀರ್ಚಾಲು ಪೇಟೆಯಲ್ಲಿ ಮೆರವಣಿಗೆ ನಡೆಸಿದರು.

ವಾಚನ ಸಪ್ತಾಹ

ಓದುವ ಅಭ್ಯಾಸವನ್ನು ಬೆಳಿಸಿಕೊಳ್ಳುವ ದೃಷ್ಟಿಯಿಂದ ನಮ್ಮ ಶಾಲಾ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ತಾಳೆಗರಿ ಸಹಿತ ವಿವಿಧ ಗ್ರಂಥಗಳ ಪ್ರದರ್ಶನ ಕಳೆದ ವಾರ ಜರಗಿತು.

11 June 2012

‘ಪ್ರಾಂಶುಪಾಲ’ರ ತೈಲ ವರ್ಣ ಚಿತ್ರ

ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾಗಿದ್ದು, ‘ಪ್ರಾಂಶುಪಾಲರೆಂದೇ ಖ್ಯಾತರಾಗಿದ್ದ ಶ್ರೀ ಖಂಡಿಗೆ ಶಾಮ ಭಟ್ಟರ ಚಿರಸ್ಮರಣೆಗಾಗಿ ಬೋವಿಕ್ಕಾನ ಪ್ರೌಢಶಾಲೆಯ ಖ್ಯಾತ ಚಿತ್ರ ಕಲಾವಿದ ಶ್ರೀ ರವಿ ಪಿಲಿಕ್ಕೋಡ್ ತಾವು ಚಿತ್ರಿಸುತ್ತಿರುವ ತೈಲವರ್ಣ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಈ ಚಿತ್ರವನ್ನು ಶಾಲಾ ಶಿಕ್ಷಕ ವರ್ಗವು ಶಾಲೆಗೆ ಸಮರ್ಪಿಸಲಿದೆ.

05 June 2012

ವಿಶ್ವ ಪರಿಸರ ದಿನ

ಇಂದು ವಿಶ್ವ ಪರಿಸರ ದಿನ. ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರಾಮುಖ್ಯತೆಯನ್ನು ನೆನಪಿಸಿಕೊಡುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಅರಣ್ಯ ಬೆಳೆಸುವ ‘ನನ್ನ ಮರ’ ಯೋಜನೆಗೆ ಪೂರಕವಾದ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ವಿದ್ಯಾರ್ಥಿಗಳಿಗೆ ವಿತರಿಸಿದರು.

04 June 2012

ಶಾಲಾ ಪ್ರವೇಶೋತ್ಸವ 2012

ಬೇಸಿಗೆ ರಜಾ ಕಾಲ ಕಳೆದಿದೆ, ಮುಂಗಾರು ಕೇರಳಕ್ಕೆ ಕಾಲಿಡುವ ಹೊತ್ತಿನಲ್ಲೇ ಹೊಸ ಅಧ್ಯಯನ ವರ್ಷ ಆರಂಭವಾಗಿದೆ. ಹೊಸ ಹೊಸ ಕನಸನ್ನು ಕಟ್ಟಿಕೊಂಡು ಶಾಲೆಯ ಕಡೆಗೆ ಬಂದ ಚಿಣ್ಣರನ್ನು ಸ್ವಾಗತಿಸುವ ಕಾರ್ಯವೂ ಇಂದು ನಡೆದಿದೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಸಿಹಿತಿಂಡಿ ವಿತರಿಸಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಆದರದಿಂದ ಬರಮಾಡಿಕೊಂಡಿದ್ದಾರೆ. ಈಗ ವಿದ್ಯಾರ್ಥಿಗಳ ಕನಸುಗಳು ಗರಿಗೆದರುತ್ತಿವೆ...