Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

28 February 2009

ಹೊರನಾಡಿನಲ್ಲೊಂದು ಕನ್ನಡದ ಅಂತರಜಾಲ ಶಾಲಾಪತ್ರಿಕೆ

-ಬೇದ್ರೆ ಮಂಜುನಾಥ
ಪ್ರಸಾರ ನಿರ್ವಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ.

ಕನ್ನಡದ ಉದ್ಧಾರದ ಬಗ್ಗೆ ಉದ್ದುದ್ದುದ್ದುದ್ದುದ್ದುದ್ದುದ್ದ...............ಭಾಷಣಗಳನ್ನು ಬಿಗಿಯುವ ಬಹುತೇಕರು ಕನ್ನಡಕ್ಕಾಗಿ ಕೈ ಎತ್ತುವ ಕೆಲಸ ಬಂದಾಗಲೆಲ್ಲಾ ಕೈ ಎತ್ತಿ ಹೋಗಿಬಿಡುತ್ತಾರೆ! ನಿಜವಾಗಿಯೂ ಟೊಂಕಬಿಗಿದು ಕನ್ನಡದ ತೇರನೆಳೆಯುವವರು ಅಲ್ಲಲ್ಲಿ ಎಲೆ ಮರೆಯ ಕಾಯಿಯಾಗಿ ಸೇವಾ ಕೈಂಕರ್ಯ ನಡೆಸುತ್ತಾ, ಹಾರ ತುರಾಯಿಗಳಿಗೆ ಹಾತೊರೆಯದೆ, ತಮ್ಮಷ್ಟಕ್ಕೆ ತಾವೇ ಸಂತೃಪ್ತರಾಗಿರುತ್ತಾರೆ. ಕೇರಳದ ಕಾಸರಗೋಡಿನ ನೀರ್ಚಾಲಿನಲ್ಲಿರುವ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಈ ವರ್ಷ ಇ-ಸಂಭ್ರಮ. ಮಹಾಜನ - ಪುಟಾಣಿಗಳ ಇ-ಪತ್ರಿಕೆ ಮೂಲಕ ಶತಮಾನಗಳಿಂದ ವಿದ್ಯಾದಾನದಲ್ಲಿ ತೊಡಗಿರುವ ಕಾಸರಗೋಡಿನ ಮೂಲೆಯೊಂದರ ಶಾಲೆಗೆ ಜಗತ್ತಿನ ಬ್ಲಾಗ್ ಭೂಪಟದಲ್ಲಿ ಗುರುತಿಸಿಕೊಳ್ಳುವ ಅಪರೂಪದ ಅವಕಾಶ. ಇಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿದ್ಯಾಸಂಸ್ಥೆಯ ಸತತ ಪ್ರೋತ್ಸಾಹದಿಂದ ಅಧ್ಯಾಪಕ ರವಿಶಂಕರ್ ದೊಡ್ಡಮಾಣಿಯವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಪರಿಶ್ರಮಕ್ಕೆ ಐದು ಕೋಟಿ ಕನ್ನಡಿಗರ ಅಭಿನಂದನೆಗಳು.

ಕರ್ನಾಟಕದಲ್ಲಿ ನಿಮ್ಮ ಶಾಲೆ, ಕಾಲೇಜು, ಯುವಕ ಸಂಘಗಳಲ್ಲಿ - ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಆರಂಭಿಸಿ ಅಭಿಯಾನ ಸಣ್ಣ ಪ್ರಮಾಣದಲ್ಲಿ ನಡೆದಿದೆ. ಯಾವುದೇ ಖರ್ಚಿಲ್ಲದೇ, ಶಾಲೆ/ಕಾಲೇಜಿನಲ್ಲಿರುವ ಕಛೇರಿಯ ಕಂಪ್ಯೂಟರ್, ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್‌ನೆಟ್ ಸೌಲಭ್ಯ ಬಳಸಿಕೊಂಡು ಇಲೆಕ್ಟ್ರಾನಿಕ್ ಮ್ಯಾಗಜಿನ್ ಆರಂಭಿಸಬಹುದು. ಸಾಮಾನ್ಯವಾಗಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಾರ್ಷಿಕ ಸಂಚಿಕೆಗಾಗಿ ಸಿದ್ಧಪಡಿಸಿಕೊಂಡ ಲೇಖನಗಳನ್ನು ನಿಮ್ಮದೇ ಬ್ಲಾಗ್‌ನಲ್ಲಿ ಪ್ರಕಟಿಸಬಹುದು. ಸಂಘದ ಸಮಾರೋಪ ಸಮಾರಂಭದಲ್ಲಿ ಒಪ್ಪಿಸಲು ಸಿದ್ಧಪಡಿಸಿರುವ ಶಾಲೆ/ಕಾಲೇಜಿನ ವಾರ್ಷಿಕ ವರದಿಯನ್ನು ಕೂಡ ಇದರಲ್ಲಿ ಅಳವಡಿಸಿ, ಫೋಟೋಗಳನ್ನು ಜೋಡಿಸಬಹುದು. ಸಂಘದ ಚಟುವಟಿಕೆಗಳನ್ನು ಹಾಗೆಯೇ ಶಾಲೆಯ ಫಲಿತಾಂಶವನ್ನು ಕೂಡ ಇಲ್ಲಿಯೇ ಪ್ರಕಟಿಸಬಹುದು. ಅಂಕಪಟ್ಟಿಗಳನ್ನೂ ಅಳವಡಿಸಬಹುದು. ಅತಿ ಹೆಚ್ಚು ಅಂಕಗಳಿಸಿದವರ ಫೋಟೋಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಫೋಟೋ ಸಹಿತ ವರದಿ, ಶಾಲೆಗೆ ಅಥವಾ ಸಂಘಕ್ಕೆ ದೊರೆತಿರುವ ಪ್ರಶಸ್ತಿ ಪುರಸ್ಕಾರಗಳ ಕುರಿತ ಮಾಹಿತಿ ಇತ್ಯಾದಿಗಳನ್ನು ಕೂಡ ಪ್ರಕಟಿಸಬಹುದು.

ಮಿನಿ ಕ್ಯಾಂಬೂರಿ - ಪ್ರಶಸ್ತಿ ಪಡೆದ ಶಾಲಾ ತಂಡ

ಫೆಬ್ರವರಿಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಿನಿ ಕ್ಯಾಂಬೂರಿಯಲ್ಲಿ ನಮ್ಮ ಶಾಲಾ ತಂಡ ಗೈಡ್ಸ್ ವಿಭಾಗದಲ್ಲಿ ಪ್ರಥಮ ಮತ್ತು ಸ್ಕೌಟ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿತು. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನಮ್ಮ ಶಾಲಾ ವಿದ್ಯಾರ್ಥಿಗಳು ಈ ಯಶಸ್ಸನ್ನು ಗಳಿಸಿದ್ದಾರೆ.

27 February 2009

ಮಂಗಳೂರು ಮೇಯರ್ - ಶಂಕರ ಭಟ್

ಮಂಗಳೂರಿನ ಹೊಸ ಮೇಯರ್ ಆಗಿ ಆಯ್ಕೆಯಾದ ಶಂಕರ ಭಟ್ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ. ಅವರಿಗೆ ನಮ್ಮ ತುಂಬು ಹೃದಯದ ಶುಭಾಶಯಗಳು. ಖಂಡಿಗೆ ಕೃಷ್ಣ ಭಟ್ಟರ ಮೊಮ್ಮಗ, ಮಿಂಚಿನಡ್ಕ ಮೂಲದ ಕೃಷಿಕ ಕುಟುಂಬದ ಇವರನ್ನು ನಮ್ಮ ಹೆಚ್ಚಿನ ಹಳೆವಿದ್ಯಾರ್ಥಿಗಳಿಗೂ ಪರಿಚಯವಿರಬಹುದು. ಶಂಕರ ಭಟ್ಟರ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ.

ಪ್ರಬಂಧ ೦೩ - ಗೊರಿಲ್ಲಾ

ಅಜೇಯಕೃಷ್ಣ. ಕೆ
ವಾನರ ಜಾತಿಯ ಪ್ರಾಣಿಗಳಲ್ಲಿ ದೊಡ್ಡದಾಗಿರುವ ಗೊರಿಲ್ಲಾ ಸುಮಾರು ೧೪೦ ರಿಂದ ೨೦೦ ಕಿ.ಗ್ರಾಂ. ಭಾರವಿರುತ್ತದೆ. ಅವುಗಳು ೩೦ರಿಂದ ೫೦ ವರ್ಷಗಳ ಕಾಲ ಬದುಕುತ್ತವೆ. ಗೊರಿಲ್ಲಾಗಳಿಗೆ ವಿಭಿನ್ನ ಬೆರಳಚ್ಚುಗಳಿರುತ್ತವೆ. ಇವುಗಳು ಹೆಚ್ಚಾಗಿ ಆಫ್ರಿಕಾದ ಕಾಡುಗಳಲ್ಲಿ ಜೀವಿಸುವ ಸಸ್ಯಾಹಾರಿ ಪ್ರಾಣಿಗಳಾಗಿವೆ.

21 February 2009

ಚಿತ್ರ ೦೪ - ನಮೃತಾ ಎಂ.ಎಸ್

ನಮೃತಾ ಎಂ.ಎಸ್ ಹತ್ತನೇ ತರಗತಿಯ ಹುಡುಗಿ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕ ಶ್ರೀ ಎಸ್. ವಿ. ಭಟ್ ಇವರ ಪುತ್ರಿ. ತುಂಬಾ ಪ್ರತಿಭಾನ್ವಿತ ಹುಡುಗಿ. ಓದಿನಲ್ಲೂ ಚಟುವಟಿಕೆಗಳಲ್ಲೂ ಬಹಳ ಆಸಕ್ತಿ. ಚಿತ್ರಕಲೆ ಅವಳ ಇಷ್ಟದ ವಿಷಯಗಳಲ್ಲಿ ಒಂದು. ನಮ್ಮ ಸಂಗ್ರಹದಲ್ಲಿ ಅವಳು ಬಿಡಿಸಿದ ಇನ್ನಷ್ಟು ಚಿತ್ರಗಳಿವೆ.

19 February 2009

ಕವಿತೆ ೦೧ - ನಮ್ಮಯ ಹೂದೋಟ

ನಿಶಾಂತ್. ಕೆ

ಬನ್ನಿರಿ ಬನ್ನಿರಿ ಹೋಗೋಣ

ನಮ್ಮಯ ಹೂದೋಟ ನೋಡೋಣ

ಬಣ್ಣ ಬಣ್ಣದ ಹೂಗಳಿವೆ

ಸೊಬಗಿನ ಸೇವಂತಿಗೆ ಹೂಗಳಿವೆ

ಬೆಡಗಿನ ಗುಲಾಬಿ ಹೂಗಳಿವೆ

ಸುಗಂಧ ಪರಿಮಳ ಹೂಗಳಿವೆ

ಬಣ್ಣ ಬಣ್ಣದ ದುಂಬಿಗಳು

ಹೂವಿನ ಮಕರಂದ ಹೀರುತಿವೆ

ಜಾಜಿ ಮಲ್ಲಿಗೆ ಅರಳುತಿದೆ

ಸುಗಂಧ ಪರಿಮಳ ಬೀರುತಿದೆ

ನೋಡೋಣ ಬನ್ನಿರಿ ಹೂದೋಟ

ಅಂದ ಚಂದದಿ ಮೆರೆಯುತಿದೆ

ಬನ್ನಿರಿ ಬನ್ನಿರಿ ನೋಡೋಣ

ನಮ್ಮಯ ಹೂದೋಟ ನೋಡೋಣ

ಪ್ರಬಂಧ ೦೨ - ಪಾರ್ತಿಸುಬ್ಬ

ಗಮ್ಯಾ. ಕೆ
ಯಕ್ಷಗಾನವನ್ನು ರೂಪಿಸಿ ಬೆಳೆಸಿದ ಮಹಾಮಹಿಮ ‘ಪಾರ್ತಿಸುಬ್ಬ’. ಈತನ ಕಾಲದೇಶಗಳ ಬಗ್ಗೆ ಅನೇಕ ವಾದಗಳಿದ್ದರೂ ಯಕ್ಷಗಾನದ ಬೆಳವಣಿಗೆ ಆತನ ಕಾಲದಲ್ಲಿಯೇ ಆಯಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆತ ಅನೇಕ ಪ್ರಸಂಗಗಳನ್ನು ರಚಿಸುವುದರ ಜೊತೆಗೆ ‘ಸಭಾ ಲಕ್ಷಣ’ ಎಂಬ ಗ್ರಂಥವನ್ನೂ ಬರೆದು ತನ್ನ ಆರಾಧ್ಯ ದೈವ ಕಣಿಪುರ ಗೋಪಾಲಕೃಷ್ಣನ ಸನ್ನಿಧಿಗೆ ಸಮರ್ಪಿಸಿದ್ದಾನೆ.
ಪಾರ್ತಿಸುಬ್ಬನು ರಾಮಾಯಣ, ಮಹಾಭಾರತಗಳಿಂದ ಪ್ರಸಂಗಕ್ಕೆ ಅನುಕೂಲವಾಗುವಂತಹ ಸಂದರ್ಭಗಳನ್ನು ಆಯುದು ಜನಪದ ಸೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಅವನ ಪದಗಳು ಸರಳ ಮತ್ತು ಗಾಂಭೀರ್ಯತೆಗಳಿಂದ ಕೂಡಿದೆ. ಆತನ ನೆನಪಿಗಾಗಿ ಕುಂಬಳೆಯ ಶೇಡಿಕಾವು ದೇವಾಲಯದ ಬಳಿ ಪಾರ್ತಿಸುಬ್ಬನ ಕಟ್ಟೆ ಇದೆ. ಈಗ ಕುಂಬಳೆಯಲ್ಲಿ ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರ ರೂಪುಗೊಂಡಿದೆ.

18 February 2009

ಚಿತ್ರ ೦೩ - ಅನುತೇಜ್. ಎಸ್.

ಇದು ಅನುತೇಜ್ ಬಿಡಿಸಿದ ಕಾರಿನ ಚಿತ್ರ. ನಮ್ಮ ಶಾಲೆಯಲ್ಲಿ ಇಂತಹ ಚಿತ್ರ ಬರೆಯುವ ಮಂದಿ ಅನೇಕರಿದ್ದಾರೆ. ಸಾಧ್ಯವಾದ ಸಂದರ್ಭಗಳಲ್ಲಿ ಅವರೆಲ್ಲರನ್ನೂ ನಿಮಗೆ ಪರಿಚಯಿಸುತ್ತೇವೆ. ನೀವೂ ನಮ್ಮ ಬೆನ್ನು ತಟ್ಟುತ್ತೀರಿ ಎಂಬ ನಂಬಿಕೆ ನಮಗಿದೆ.

ಪ್ರಬಂಧ ೦೧ - ಆದರ್ಶ ವಿದ್ಯಾರ್ಥಿ

ಸ್ವಾತಿ. ಸಿ.ವಿ.
ವಿದ್ಯಾ ಸಂಪಾದನೆಯೇ ವಿದ್ಯಾರ್ಥಿಯ ಮುಖ್ಯ ಗುರಿ. ವಿದ್ಯಾರ್ಥಿ ಜೀವನವು ಒಂದು ತಪಸ್ಸು. ವಿದ್ಯೆಯ ಮಹತ್ವವನ್ನು ಅರಿತುಕೊಂಡ ವಿದ್ಯಾರ್ಥಿಯು ತನ್ನ ನಡೆ, ನುಡಿ ಸದ್ವರ್ತನೆಗಳಿಂದ ಆದರ್ಶಪ್ರಾಯನಾಗುತ್ತಾನೆ. ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದರಷ್ಟೇ ಸಾಲದು. ಅವನ ಓದು, ಜೀವನ ಕ್ರಮಗಳುಒಂದು ಶಿಸ್ತಿಗೆ ಒಳಪಡಬೇಕು. ಗುರಿಮುಟ್ಟೂವ ಹಾದಿಯಲ್ಲಿ ಪ್ರಗತಿಪರ ವಿಚಾರಧೋರಣೆ ಅವನದಾಗಬೇಕು. ಅಂಥವನು ನಿಜವಾಗಿ ಆದರ್ಶ ಎನಿಸಿಕೊಳ್ಳುತ್ತಾನೆ. ಅವನ ಜೀವನವು ಇತರರಿಗೆ ಮಾದರಿಯಾಗಿರುತ್ತದೆ.ಆದರ್ಶವಿದ್ಯಾರ್ಥಿಯು ವಿಶೇಷ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಸಮಯದ ಕಡೆಗೆ ಸದಾ ಗಮನವಿಟ್ಟಿರುತ್ತಾನೆ. ವ್ಯರ್ಥವಾಗಿ ವೇಳೆ ಕಳೆಯುವುದಿಲ್ಲ. ನಿಯಮಿತವಾಗಿ ಶಾಲೆಗೆ ಹೋಗುತ್ತಾನೆ. ಶಾಲೆ ನಿಯಮಗಳನ್ನು ಪಾಲಿಸುತ್ತಾನೆ. ಲಕ್ಷ್ಯವಿಟ್ಟು ನಿಷ್ಟೆಯಿಂದ ಓದುತ್ತಾನೆ. ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ಮಾತ್ರ ಅವನಿಗೆ ಸಮಾಧಾನ ದೊರೆಯುವುದಿಲ್ಲ. ಉನ್ನತ ಅಂಕಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಳ್ಳಲು ಸತತ ಪರಿಶ್ರಮ ಪಡುತ್ತಾನೆ.ಗುರುಹಿರಿಯರಲ್ಲಿ ಅಪಾರ ಭಕ್ತಿ ಇಟ್ಟಿರುತ್ತಾನೆ. ಅವರ ಜೊತೆ ವಿಧೇಯತೆಯಿಂದ ನಡೆದುಕೊಳ್ಳುತ್ತಾನೆ.
ವಿನಯವು ಆದರ್ಶ ವಿದ್ಯಾರ್ಥಿಯ ಮುಖ್ಯಲಕ್ಷಣವಾಗಿದೆ. ತಂದೆ ತಾಯಿಯರ ಮಾತಿಗೆ ವಿರುದ್ಧವಾಗಿ ಅವನೆಂದೂ ವರ್ತಿಸುವುದಿಲ್ಲ. ಕೆಟ್ಟ ಹುಡುಗರ ಗೆಳೆತನ ಮಾಡುವುದಿಲ್ಲ. ಒಳ್ಳೆಯದನ್ನು ಓದುತ್ತಾನೆ. ಒಳ್ಳೆಯದನ್ನು ನೋಡುತ್ತಾನೆ. ಸಜ್ಜನರ ಸಂಗಕ್ಕೆ ಹಾತೊರೆಯುತ್ತಾನೆ. ಸತ್ಯವನ್ನು ಪಾಲಿಸುತ್ತಾನೆ. ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾನೆ. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗುತ್ತಾನೆ.ಇಂಥ ಆದರ್ಶ ವಿದ್ಯಾರ್ಥಿಯೇ ಮುಂದೆ ಆದರ್ಶ ಪುರುಷನಾಗುತ್ತಾನೆ. ಇತಿಹಾಸ ಪ್ರಸಿದ್ಧನಾಗುತ್ತಾನೆ. ಆದರ್ಶ ಎನಿಸಿಕೊಳ್ಳುವುದು ಸಾಮಾನ್ಯ ಸಾಧನೆಯೇನಲ್ಲ. ಹಾಗೆಂದು ಪರಿಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ. ಆದ್ದರಿಂದ ನಾವೆಲ್ಲರೂ ಆದರ್ಶ ವ್ಯಕ್ತಿಗಳಾಗುವತ್ತ ಪ್ರಯತ್ನ ಮಾಡಬೇಕಾಗಿದೆ.

11 February 2009

ಕಾರ್ಟೂನ್ ೦೧ - ಚಂದ್ರಶೇಖರ. ಬಿ

ಒಂಭತ್ತನೇ ತರಗತಿಯ ಚಂದ್ರಶೇಖರ ಬಿಡಿಸಿದ ಕಾರ್ಟೂನ್ ಇದು. ಅವನ ಚಿಂತನೆಯಲ್ಲಿ ೨೦೦೮ನೆ ಇಸವಿ ಹೇಗೆ ಕಳೆಯಿತು, ನೋಡಿ.


10 February 2009

ಚಿತ್ರ ೦೨ - ಸುಶ್ಮಿತಾ. ಕೆ

ಈ ಚಿತ್ರಗಳು ನಿಮಗೆ ಇಷ್ಟವಾಗುತ್ತವೆಯೋ ಗೊತ್ತಿಲ್ಲ. ಅಂತೂ ನಮ್ಮ ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಕ್ಯಾನ್‌ವಾಸ್‌ನಲ್ಲಿ ಬಿಡಿಸಲು ಆರಂಭಿಸಿದ್ದಾರೆ. ನಮ್ಮ ನಿಗಮನದಲ್ಲಿ ಈ ಚಿತ್ರಗಳು ಚೆನ್ನಾಗಿಯೇ ಇವೆ.

09 February 2009

ಚಿತ್ರ ೦೧ - ಆಶಿತ್ ಕೃಷ್ಣ ಉಪಾಧ್ಯಾಯ


ಆಶಿತ್ ಕೃಷ್ಣ ಉಪಾಧ್ಯಾಯ ಕೊಲ್ಲಂಗಾನದ ಹುಡುಗ. ಚೆನ್ನಾಗಿ ಚಿತ್ರಗಳನ್ನು ಬಿಡಿಸುತ್ತಾನೆ. ಜಲವರ್ಣ ಚಿತ್ರ ರಚನೆ ಅವನ ಇಷ್ಟದ ವಿಷಯ. ಸತತ ಎರಡು ಬಾರಿ ಗಣೇಶ ಚತುರ್ಥಿಯಂದು ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಧೂರು ದೇವಸ್ಥಾನದಲ್ಲಿ ಪ್ರಶಸ್ತಿ ಗಳಿಸಿದ್ದಾನೆ. ಅಂದ ಹಾಗೆ ಕೊಲ್ಲಂಗಾನ ಕಲಾವಿದರ ‘ಶ್ರೀ’ನಿಲಯ.

04 February 2009

ಕಥೆ ೦೨ - ಬೋರನ ಅವಾಂತರ

- ಚೈತ್ರ ಟಿ.ಎಸ್

ನಮ್ಮಲ್ಲಿ ಅಡಿಕೆ ತೋಟವೇ ಹೆಚ್ಚು. ಆದರೆ ಇಲ್ಲಿಯ ಕೃಷಿ ಶಿವಮೊಗ್ಗದಂತಲ್ಲ. ಮಳೆಗಾಲದಲ್ಲಿ ನೀರೋ ನೀರು, ಬೇಸಿಗೆಯಲ್ಲಿ ತತ್ವಾರ. ಮಳೆಗಾಲವಿಡೀ ತೋಟದಲ್ಲಿ ಬೆಳೆದ ಕಳೆಗಿಡಗಳನ್ನು ಕಡಿದು ಮರಗಳ ಬುಡಕ್ಕೆ ಇಡುವುದು ವಾಡಿಕೆ. ಮಳೆಗಾಲದ ನಂತರದ ಮೊದಲ ಕೆಲಸ ಇದು.

ಬೋರ ನಮ್ಮ ಕೆಲಸದಾಳು. ಸುಮಾರು ವರ್ಷಗಳಿಂದ ನಮ್ಮಲ್ಲೇ ಕೆಲಸ ಮಾಡುತ್ತಿದ್ದ. ಆತನ ಚುರುಕುತನಕ್ಕೆ ಎಲ್ಲರೂ ತಲೆದೂಗಿದರೂ ಆತನೊಬ್ಬ ಪುಕ್ಕಲ. ದೇವರು, ದೆವ್ವ, ಭೂತಗಳ ಬಗ್ಗೆ ಆತನಿಗೆ ಅಪಾರ ನಂಬಿಕೆ. ಕಳೆದ ವರ್ಷವೂ ನಮ್ಮ ತೋಟದ ಕಳೆ ತೆಗೆಯುವ ಕೆಲಸಕ್ಕೆ ಆತನೆ ಬಂದಿದ್ದ. ಏಳೇ ದಿನಗಳಲ್ಲಿ ತೋಟದ ಕಳೆ ಖಾಲಿ ಮಾಡಿದ್ದ. ಇವತ್ತು ಕೆಲಸ ಮುಗಿಯುತ್ತದೆ ಎಂದು ಅಂದುಕೊಂಡಿದ್ದಾಗ ಮುಸ್ಸಂಜೆಯ ಹೊತ್ತಿನಲ್ಲಿ ತೋಟದಿಂದ ಕೇಳಿತು ಬೋರನ ಧ್ವನಿ. “ಅಯ್ಯಯ್ಯೋ, ಹಾವು ಕಚ್ಚಿತಪ್ಪೋ, ಓ ದೇವರೇ, ಯಾರಾದರೂ ಕಾಪಾಡೀ...” ಹೀಗೆ ಸಾಗಿತು ಆತನ ಬೊಬ್ಬೆ.

ನಾವು ಓಡೋಡಿ ಆತನ ಬಳಿಗೆ ಸಾಗಿದೆವು. ಆತ ಅಲ್ಲೇ ನೆಲದಲ್ಲಿ ಹೊರಳಾಡುತ್ತಿದ್ದ. ಮಾತಿಲ್ಲ, ಕತೆಯಿಲ್ಲ, ನಾವಂತೂ ಭಯದಿಂದ ಶೆಟ್ರ ಜೀಪಿಗೆ ಹೇಳಿ ಕಳುಹಿಸಿದೆವು. ಬೋರನನ್ನು ಜೀಪಿಗೆ ಹಾಕಿ ಕಾಸರಗೋಡಿನ ನರ್ಸಿಂಗ್ ಹೋಮ್ ತಲಪಿಸಿದೆವು.

ವೈದ್ಯರು ತಕ್ಷಣ ಸ್ಪಂದಿಸಿದರು. ನಮಗಂತೂ ಈತನ ಜೀವ ಉಳಿದರೆ ಸಾಕಪ್ಪಾ ಎನಿಸಿತ್ತು. ಆದರೆ ಡಾಕ್ಟರು ಹೇಳಿದ್ದು ಕೇಳಿ ನಮಗೆ ನಗುವುದೋ, ಅಳುವುದೋ ತಿಳಿಯಲಿಲ್ಲ. ತೋಟದ ಕತ್ತಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಏನೋ ಕಚ್ಚಿದಂತಾಗಿ ಬೋರ ಹಾವು ಎಂದು ಕಿರುಚಿದ್ದಂತೆ. ಅದೇನೆಂದು ಆತನಿಗೆ ಕಾಣಿಸಲಿಲ್ಲ. ಪುಕ್ಕಲನಾದ ಆತ ಅದನ್ನು ಹಾವೆಂದೇ ತಿಳಿದು ಬೊಬ್ಬಿರಿದಿದ್ದ.

ಕೊನೆಗೆ ವೈದ್ಯರು ಹೇಳಿದರು, ಆತನಿಗೆ ಕಚ್ಚಿದ್ದು ಕೆಂಪಿರುವೆ!

02 February 2009

ತೈಲ ಭಾವಚಿತ್ರ ಅನಾವರಣ

ನಮ್ಮ ಶಾಲೆ ಹಿಂದೆ ಸಂಸ್ಕೃತ ಕಾಲೇಜು ಆಗಿದ್ದಾಗ ಅಧ್ಯಾಪಕರಾಗಿದ್ದ ದಿ.ಪಡಿಯದ್ಪು ಮಹಾಲಿಂಗ ಭಟ್ಟರ ತೈಲ ಭಾವಚಿತ್ರದ ಅನಾವರಣ ಕಾರ್ಯಕ್ರಮವು ಮೊನ್ನೆ ೩೦.೦೧.೨೦೦೯ ರಂದು ವಾರ್ಷಿಕೋತ್ಸವದ ನಡುವೆ ನಡೆಯಿತು. ಶಾಲಾ ವ್ಯವಸ್ಥಾಪಕರು ಚಿತ್ರವನ್ನು ಅನಾವರಣಗೊಳಿಸಿದರು. ಈ ಚಿತ್ರವನ್ನು ಬಿಡಿಸಿದವರು ಬಾಲ ಬೊಳುಂಬು. ಚಿತ್ರವನ್ನು ಪಡಿಯದ್ಪು ಶಂಕರ ಭಟ್ ಮತ್ತು ಸಹೋದರರು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.