Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 February 2010

ಸಾಬೂನು ತಯಾರಿ

ಹೊಸ ತರಹದ ಅಧ್ಯಯನ ಪದ್ಧತಿಯ ಆವಿಷ್ಕಾರ ಆಗಿರುವುದರಿಂದ ಹೊಸ ವಿಚಾರಗಳ ಅಧ್ಯಯನ ನೋಡಿ ಕಲಿ, ಮಾಡಿ ತಿಳಿ ಎಂಬ ಹಂತಕ್ಕೆ ತಲಪಿದೆ. ಮೊನ್ನೆ ಸಾಬೂನು ತಯಾರಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು ಅಧ್ಯಾಪಿಕೆ ಮೀನಾಕ್ಷಿ.ಎಚ್.ಎನ್.

23 February 2010

ಕಣ್ಣೂರು ಸಂದರ್ಶನ






ಶಾಲಾ ವಾರ್ಷಿಕ ತಿರುಗಾಟದ ಅಂಗವಾಗಿ ಕಳೆದ ವಾರ ಕಣ್ಣೂರು ಕೋಟೆ ಮತ್ತು ಸಾಧು ವಾಟರ್ ಪಾರ್ಕ್ ಸಂದರ್ಶಿಸಿದ್ದೆವು. ವಿದ್ಯಾರ್ಥಿಗಳಿಗೆ ಅದು ಮಜಾ ದಿನ, ಚಾರಿತ್ರಿಕ ಕೋಟೆಯನ್ನು ವೀಕ್ಷಿಸುವುದರ ಜೊತೆಗೆ ಸಂತಸದಲ್ಲಿ ವಾಟರ್ ಪಾರ್ಕ್ ಸಂದರ್ಶಿಸಲು ಸಾಧ್ಯವಾದ ದಿನ...

22 February 2010

ಶುಭಾಶಯಗಳು ರವಿಪ್ರಕಾಶ್ ಈಂದುಗುಳಿ...

ನಮ್ಮ ಶಾಲಾ ಹಳೆವಿದ್ಯಾರ್ಥಿ ರವಿಪ್ರಕಾಶ್ ಈಂದುಗುಳಿ, ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಪ್ರಿಪರೇಷನ್ ಏಂಡ್ ಇವ್ಯಾಲುಯೇಷನ್ ಓಫ್ ಸ್ಪ್ರೇ ಡಿಪಾಸಿಟೆಡ್ ಕ್ಯಾಡ್ಮಿಯಂ ಝಿಂಕ್ ಸಲ್ಫೈಡ್ ಥಿನ್ ಫಿಲ್ಮ್ಸ್’ ಎಂಬ ಮಹಾಪ್ರಬಂಧವನ್ನು ಬರೆದ ಇವರಿಗೆ ಈ ಪ್ರಶಸ್ತಿ ಅರ್ಹವಾಗಿ ಸಂದಿದೆ. ಪ್ರಸ್ತುತ ಮಂಗಳೂರು ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ಇವರು ಈಂದುಗುಳಿ ಮಹಾಲಿಂಗೇಶ್ವರ ಭಟ್ ಮತ್ತು ಲಕ್ಷ್ಮಿ ದಂಪತಿಗಳ ಪುತ್ರ. ಶುಭಾಶಯಗಳು...

18 February 2010

ಪರೀಕ್ಷೆಗಳೆಲ್ಲ ಕಾಯುತ್ತಿವೆ...

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳು ಜರಗುತ್ತಿವೆ. ಮುಂದಿನ ವಾರ ಮಾಹಿತಿ ತಂತ್ರಜ್ಞಾನ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ಅದು ಪಬ್ಲಿಕ್ ಪರೀಕ್ಷೆ. ಅವಿತೇಶ್ ಕಾಯುವಿಕೆಯನ್ನು ಸೂಚಿಸುವ ಈ ಚಿತ್ರವನ್ನು ನಿಮ್ಮ ಮುಂದೆ ಇರಿಸಿದ್ದಾನೆ...

10 February 2010

ಜಲಸಿರಿ 2010

ದೂರದ ತುಮಕೂರಿನಿಂದ ಜಲಮಾಹಿತಿಗಳನ್ನು ಹೊತ್ತ ಜಲಸಿರಿ ೨೦೧೦ ಕ್ಯಾಲೆಂಡರನ್ನು ಮಲ್ಲಿಕಾರ್ಜುನ ಹೊಸಪಾಳ್ಯ ಕಳುಹಿಸಿಕೊಟ್ಟಿದ್ದಾರೆ. ಆ ಕ್ಯಾಲೆಂಡರನ್ನು ಭಿತ್ತಿಫಲಕದ ತುಂಬ ಹರಡಿದ್ದೇವೆ. ಜಲಸಿರಿ ತ್ರೈಮಾಸಿಕ ಪತ್ರಿಕಾ ತಂಡದ ಈ ಪ್ರಯತ್ನ ಕನ್ನಡ ಪತ್ರಿಕಾ ಲೋಕದ ಅನನ್ಯ ಪ್ರಯತ್ನಗಳಲ್ಲಿ ಒಂದು. ಶಾಲಾ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ಕ್ಯಾಲೆಂಡರ್ ಅನೇಕ ಪ್ರಬಂಧ ರಚನೆಗೆ ವಸ್ತುವಾಗಬಲ್ಲದು ಎಂದು ನಮ್ಮ ಕನ್ನಡ ವಿಭಾಗ ಅಭಿಪ್ರಾಯಪಟ್ಟಿದೆ. ಧನ್ಯವಾದಗಳು, ಮಲ್ಲಿಕಾರ್ಜುನ ಮತ್ತು ತಂಡದವರಿಗೆ...

08 February 2010

ಶಾಲಾ ವಾರ್ಷಿಕೋತ್ಸವ

“ವಿದ್ಯಾರ್ಥಿಗಳ ಬಹುಮುಖಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ. ಅವರ ಬೆಳವಣಿಗೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಶಾಲಾ ಕಾರ್ಯಕ್ರಮಗಳು ನಡೆಯುತ್ತವೆ. ಹೆಸರಾಂತ ಮಹಾಜನ ವಿದ್ಯಾಸಂಸ್ಥೆ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ನಾಡಿನ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಶಂಕರ ಮೋಹನದಾಸ ಆಳ್ವ ಅಭಿಪ್ರಾಯಪಟ್ಟರು. ಅವರು ನೀರ್ಚಾಲಿನಲ್ಲಿ ೦೬.೦೨.೨೦೧೦ ಶನಿವಾರದಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೇರಳ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ರಮೇಶ ಮತ್ತು ತೊಂಭತ್ತು ವರ್ಷಗಳನ್ನು ಪೂರೈಸಿದ ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕರಾದ ಖಂಡಿಗೆ ಶ್ಯಾಮ ಭಟ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಶುಭಾಶಂಸನೆಗೈದರು.

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಶಾಲಾ ಹಿರಿಯ ಅಧ್ಯಾಪಕ ಎಸ್. ವಿ. ಭಟ್ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯನ್ನೂ ಏರ್ಪಡಿಸಲಾಗಿತ್ತು.

05 February 2010

ನಾಳೆ ಶಾಲಾ ವಾರ್ಷಿಕೋತ್ಸವ, ಬನ್ನಿ...

ಸಂಪ್ರದಾಯದಂತೆ ನಾಳೆ ಹಗಲು ಶಾಲಾ ವಾರ್ಷಿಕೋತ್ಸವ ರಂಗಮಂದಿರದಲ್ಲಿ ನಡೆಯಲಿದೆ. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಶಂಕರಮೋಹನದಾಸ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ರಮೇಶ ಮತ್ತು ಶಾಲಾ ವ್ಯವಸ್ಥಾಪಕರೂ ಹಿರಿಯರೂ ಆದ ಖಂಡಿಗೆ ಶಾಮ ಭಟ್ಟರು ತೊಂಭತ್ತು ವರ್ಷಗಳನ್ನು ಪೂರೈಸಿರುವುದನ್ನು ಜೊತೆಯಾಗಿ ಗೌರವಿಸುವುದರ ಮೂಲಕ ಆಚರಿಸಲಿದ್ದೇವೆ. ಇಂದು ಸಾಯಂಕಾಲ ನಾಲ್ಕು ಘಂಟೆಗೆ ಮಹಾಜನ ಹಳೆವಿದ್ಯಾರ್ಥಿ ಸಂಘದ ಮಹಾಸಭೆ ಜರಗಲಿದೆ. ಪ್ರೀತಿಯಿಟ್ಟು ಬನ್ನಿ....

03 February 2010

ಪ್ರವಾಸ ಕಥನ - ಚೈತಾಲಿ. ಕೆ.ಎನ್

ಮೊನ್ನೆ ಜನವರಿ ೨೫ರಂದು ಬೆಳಗ್ಗೆ ೯.೧೫ಕ್ಕೆ ಶಾಲೆಯ ಎದುರು ಸೇರಿದ್ದೆವು. ದಿನವೂ ಸಮವಸ್ತ್ರದಲ್ಲಿ ಶೋಭಿಸುತ್ತಿದ್ದ ಮಕ್ಕಳು ಬಣ್ಣಬಣ್ಣದ ಉಡುಗೆ ತೊಟ್ಟು ಪಾತರಗಿತ್ತಿಗಳಂತೆ ನಲಿಯುತ್ತಿದ್ದರು. “ಅದೋ.. ಸಾಜನ್ ಬಸ್ ಬಂತು. ಸರತಿ ಸಾಲಲ್ಲಿ ನಿಲ್ಲಿ" ವೇಣುಮಾಸ್ತರರ ಮಾತನ್ನು ವಿದ್ಯಾರ್ಥಿಗಳು ಶಿಸ್ತಿನಿಂದ ಪಾಲಿಸಿದರು. ಹುಡುಗರು ಒಂದು ಬಸ್ಸಿನಲ್ಲಿ ಮತ್ತು ನಾವು ಇನ್ನೊಂದರಲ್ಲಿ ಹತ್ತಿದೆವು. ನಮ್ಮೊಂದಿಗೆ ಶಿವಕುಮಾರ್ ಸರ್, ವೇಣು ಸರ್, ಕೃಷ್ಣಪ್ರಸಾದ್ ಸರ್, ಮೀನಾಕ್ಷಿ ಮೇಡಂ, ಮಾಲತಿ ಮೇಡಂ ಮತ್ತು ದುರ್ಗಾಪರಮೇಶ್ವರಿ ಮೇಡಂ ಇದ್ದರು. ಬಸ್ ನಿಧಾನವಾಗಿ ಚಲಿಸಲಾರಂಭಿಸಿದಾಗ ನಮ್ಮ ಉತ್ಸಾಹ ಇಮ್ಮಡಿಯಾಯಿತು. ಹಲವು ಗೀತೆಗಳನ್ನು ಹಾಡಿದ್ದರಿಂದ ದಾರಿ ಸಾಗಿದುದೇ ತಿಳಿಯಲಿಲ್ಲ.

“ಮಕ್ಕಳೇ ಇಳಿಯಿರಿ" ಎಂದು ಅಧ್ಯಾಪಕರು ಹೇಳಿದಾಗ ಹೊರಬಂದೆವು. “ಓಹ್, ಕೈಮಗ್ಗ ಕಾರ್ಖಾನೆ" ಎಂದು ಉದ್ಗರಿಸಿದೆವು. ಸಾಲಾಗಿ ಆ ಕಟ್ಟಡದ ಒಳಗೆ ಪ್ರವೇಶಿಸಿದೆವು. ಅಲ್ಲಿ ತುಂಬಾ ಜನ ಹೆಂಗಳೆಯರು ಬಣ್ಣದ ನೂಲನ್ನು ತಯಾರಿಸುತ್ತಿದ್ದರು. ಮುಂದೆ ಬಣ್ಣದ ನೂಲುಗಳಿಂದ ಬಟ್ಟೆ ತಯಾರಿ ನಡೆಯುತ್ತಿತ್ತು. ಗಾಂಧಿಯವರನ್ನು ನೆನೆದು ಹೆಮ್ಮೆ ಎನಿಸಿತು. ನಮ್ಮಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರ ಪಡೆದು ಹೊರಬಂದೆವು. ಅಲ್ಲಿಂದ ಸರಕಾರಿ ಅಂಧರ ಶಾಲೆಯ ಕಡೆಗೆ ಸಾಗಿದೆವು. ಅಂಧರನ್ನು ಹೀಯಾಳಿಸುವುದಾಗಲೀ ತಮಾಷೆ ಮಾಡುವುದಾಗಲೀ ಮಾಡಬಾರದು ಎಂದು ಅಧ್ಯಾಪಕರು ಎಚ್ಚರಿಸಿದ್ದು ಗಮನದಲ್ಲಿ ಇದ್ದುದರಿಂದ ಗಂಭೀರವಾಗಿ ನಡೆದೆವು. ಅಲ್ಲಿನ ರೀತಿ ನೀತಿಗಳನ್ನು ಆ ಶಾಲೆಯ ಅಧ್ಯಾಪಕರು ತಿಳಿಸಿದರು. ಅಲ್ಲಿನ ವಿದ್ಯಾರ್ಥಿಗಳನ್ನು ಕಂಡು ನಮ್ಮ ಕಣ್ಣಂಚಿನಲ್ಲಿ ನೀರೂಡಿತು. “ದೃಷ್ಟಿದಾನವೇ ಮಹಾದಾನ" ಅಂದುಕೊಂಡೆವು.

ಮುಂದೆ ನಾವು ಪಕ್ಕದಲ್ಲಿದ್ದ ನಾಲ್ಕು ಕಾರ್ಖಾನೆಗಳತ್ತ ನಡೆದೆವು. ಮೊದಲು ಪ್ಲಾಸ್ಟಿಕ್ ಬಾಲ್ ಹಾಗೂ ಕೇನ್ ತಯಾರಾಗುವ ಕಾರ್ಖಾನೆ ನೋಡಿದೆವು. ಅಲ್ಲಿ ಹಳದಿ ಬಣ್ಣದ ಬಾಲ್ ತಯಾರಾಗಿ ಉದುರುತ್ತಿದ್ದವು. ಮತ್ತೊಂದೆಡೆ ಕೇನುಗಳು ತಯಾರಾಗುತ್ತಿದ್ದವು. ನಂತರ ನಾವು ಪಾಲಿಥೀನ್ ಬೇಗ್ ತಯಾರಿಕಾ ಘಟಕದ ಕಡೆಗೆ ಸಾಗಿದೆವು. ಅಲ್ಲಿನ ಉಸಿರುಕಟ್ಟಿಸುವಂತಹ ಹೊಗೆ ನಮ್ಮನ್ನು ಕಂಗೆಡಿಸಿತು. ಆಗ ನಮ್ಮ ಮನದಲ್ಲಿ “ದಿನವೂ ಅಲ್ಲಿ ದುಡಿಯುವ ಕಾರ್ಮಿಕರ ಪಾಡು ಏನು?" ಎಂಬ ಪ್ರಶ್ನೆ ಮೂಡಿತು. ಆಧುನಿಕ ಜಗತ್ತಿನಲ್ಲಿ ಇದೆಲ್ಲಾ ಅನಿವಾರ್ಯ ಎಂದು ಸುಮ್ಮನಾದೆವು. ನಾವು ವಾಹನಗಳ ಬೇಟರಿ ತಯಾರಿಕಾ ಕೇಂದ್ರವನ್ನು ಪ್ರವೇಶಿಸಿದೆವು. ಅಲ್ಲಿನ ಕಾರ್ಮಿಕರು ನಮಗೆ ಅಗತ್ಯ ಮಾಹಿತಿಗಳನ್ನು ನೀಡಿದರು.

ಅನಂತರ ನಾವು ಹತ್ತಿರವೇ ಇದ್ದ ಕಾರವಲ್ ಸಂಜೆ ಪತ್ರಿಕೆಯ ಮುದ್ರಣಾಲಯದೊಳಗೆ ಸಾಗಿದೆವು. ಪತ್ರಿಕೆ ಮುದ್ರಣ ರೀತಿ, ಯಂತ್ರವನ್ನು ನೋಡಿ ನಮಗೆ ರೋಮಾಂಚನವಾಯಿತು. ಆಗತಾನೆ ಮುದ್ರಿಸಿದ ಪತ್ರಿಕೆಯನ್ನು ಅವರು ನಮಗೆ ಉಚಿತವಾಗಿ ವಿತರಿಸಿದರು. ಅಲ್ಲಿಂದ ನಾವು ಅಧ್ಯಾಪಕರ ನಿರ್ದೇಶನದ ಮೇರೆಗೆ ಜಿಲ್ಲಾ ನ್ಯಾಯಾಲಯದತ್ತ ಧಾವಿಸಿದೆವು. ಅಲ್ಲಿ ಒಂದು ವ್ಯಾಜ್ಯದ ತೀರ್ಪು ನಡೆಯುತ್ತಿತ್ತು. ಸಿನಿಮಾಗಳಲ್ಲಿ ಮಾತ್ರ ಕೋರ್ಟ್ ನೋಡಿದ್ದ ನಾವು ಪ್ರಥಮ ಬಾರಿಗೆ ಪ್ರತ್ಯಕ್ಷವಾಗಿ ನ್ಯಾಯಾಲಯವನ್ನು ನೋಡಿದೆವು. ಆಗ ಹಸಿವೆಯಾಗಲಾರಂಭಿಸಿದ್ದರಿಂದ ಮಧೂರು ದೇವಸ್ಥಾನದ ಕಡೆಗೆ ಸಾಗಿದೆವು. ಅಲ್ಲಿ ಭೋಜನ ಪ್ರಸಾದವನ್ನು ಸ್ವೀಕರಿಸಿದೆವು.

ಅಪರಾಹ್ನ ನಮ್ಮ ಬಸ್ಸು ಕಾಸರಗೋಡು ಕಡಲ ಕಿನಾರೆಯತ್ತ ಚಲಿಸಿತು. ತೆರೆಗಳೊಂದಿಗೆ ಆಡುತ್ತಾ ಕಡಲಿನಲ್ಲಿ ಹೆಜ್ಜೆಹಾಕಿದೆವು. ಮುಂದೆ ನಾವು ಲೈಟ್ ಹೌಸ್ ಕಡೆಗೆ ನಡೆದೆವು. ಅದರೊಳಗಿನ ೧೬೧ ಮೆಟ್ಟಿಲನ್ನು ಹತ್ತಿದಾಗ ನನಗೆ ಕೈಕಾಲು ನೋಯಲಾರಂಭಿಸಿತು. ಆದರೂ ಕಬ್ಬಿಣದ ಏಣಿಯನ್ನು ಏರಲು ಕುತೂಹಲದಿಂದ ಉತ್ಸುಕಳಾದೆ. ಅಲ್ಲಿಂದ ಸಮುದ್ರ, ಕಿನಾರೆ, ಹಚ್ಚಹಸಿರು, ಮೊಬೈಲ್ ಟವರುಗಳ ದೃಶ್ಯ ನನ್ನನ್ನು ಆನಂದ ತುಂದಿಲಳಾಗಿಸುತು. ಲೈಟ್ ಹೌಸಿನ ಕಾರ್ಯಗಳನ್ನು ತಿಳಿದು ಸಂದರ್ಶಿಸಿದ ಸ್ಥಳಗಳ ಮೆಲುಕು ಹಾಕುತ್ತಾ ಶಾಲೆಗೆ ಹಿಂತಿರುಗಿದೆವು. ಸೂರ್ಯ ಆಗ ತಾನೇ ಅಸ್ತಮಿಸಲಾರಂಭಿಸಿದ್ದ.


01 February 2010

ಚಿತ್ರ - ಆಶಿತ್ ಕೃಷ್ಣ ಉಪಾಧ್ಯಾಯ

ನಮ್ಮ ಶಾಲೆಗೆ ಸ್ಕ್ಯಾನರ್ ಯಂತ್ರ ಬಂದಿದೆ, ಹೊಸತಾಗಿ. ಈಗ ವಿದ್ಯಾರ್ಥಿಗಳು ಬಿಡಿಸಿದ ಚಿತ್ರವನ್ನು ಇಲ್ಲಿ ತಂದಿರಿಸುವ ಪ್ರಕ್ರಿಯೆ ಸರಳವಾಗಿದೆ...