Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

03 February 2010

ಪ್ರವಾಸ ಕಥನ - ಚೈತಾಲಿ. ಕೆ.ಎನ್

ಮೊನ್ನೆ ಜನವರಿ ೨೫ರಂದು ಬೆಳಗ್ಗೆ ೯.೧೫ಕ್ಕೆ ಶಾಲೆಯ ಎದುರು ಸೇರಿದ್ದೆವು. ದಿನವೂ ಸಮವಸ್ತ್ರದಲ್ಲಿ ಶೋಭಿಸುತ್ತಿದ್ದ ಮಕ್ಕಳು ಬಣ್ಣಬಣ್ಣದ ಉಡುಗೆ ತೊಟ್ಟು ಪಾತರಗಿತ್ತಿಗಳಂತೆ ನಲಿಯುತ್ತಿದ್ದರು. “ಅದೋ.. ಸಾಜನ್ ಬಸ್ ಬಂತು. ಸರತಿ ಸಾಲಲ್ಲಿ ನಿಲ್ಲಿ" ವೇಣುಮಾಸ್ತರರ ಮಾತನ್ನು ವಿದ್ಯಾರ್ಥಿಗಳು ಶಿಸ್ತಿನಿಂದ ಪಾಲಿಸಿದರು. ಹುಡುಗರು ಒಂದು ಬಸ್ಸಿನಲ್ಲಿ ಮತ್ತು ನಾವು ಇನ್ನೊಂದರಲ್ಲಿ ಹತ್ತಿದೆವು. ನಮ್ಮೊಂದಿಗೆ ಶಿವಕುಮಾರ್ ಸರ್, ವೇಣು ಸರ್, ಕೃಷ್ಣಪ್ರಸಾದ್ ಸರ್, ಮೀನಾಕ್ಷಿ ಮೇಡಂ, ಮಾಲತಿ ಮೇಡಂ ಮತ್ತು ದುರ್ಗಾಪರಮೇಶ್ವರಿ ಮೇಡಂ ಇದ್ದರು. ಬಸ್ ನಿಧಾನವಾಗಿ ಚಲಿಸಲಾರಂಭಿಸಿದಾಗ ನಮ್ಮ ಉತ್ಸಾಹ ಇಮ್ಮಡಿಯಾಯಿತು. ಹಲವು ಗೀತೆಗಳನ್ನು ಹಾಡಿದ್ದರಿಂದ ದಾರಿ ಸಾಗಿದುದೇ ತಿಳಿಯಲಿಲ್ಲ.

“ಮಕ್ಕಳೇ ಇಳಿಯಿರಿ" ಎಂದು ಅಧ್ಯಾಪಕರು ಹೇಳಿದಾಗ ಹೊರಬಂದೆವು. “ಓಹ್, ಕೈಮಗ್ಗ ಕಾರ್ಖಾನೆ" ಎಂದು ಉದ್ಗರಿಸಿದೆವು. ಸಾಲಾಗಿ ಆ ಕಟ್ಟಡದ ಒಳಗೆ ಪ್ರವೇಶಿಸಿದೆವು. ಅಲ್ಲಿ ತುಂಬಾ ಜನ ಹೆಂಗಳೆಯರು ಬಣ್ಣದ ನೂಲನ್ನು ತಯಾರಿಸುತ್ತಿದ್ದರು. ಮುಂದೆ ಬಣ್ಣದ ನೂಲುಗಳಿಂದ ಬಟ್ಟೆ ತಯಾರಿ ನಡೆಯುತ್ತಿತ್ತು. ಗಾಂಧಿಯವರನ್ನು ನೆನೆದು ಹೆಮ್ಮೆ ಎನಿಸಿತು. ನಮ್ಮಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರ ಪಡೆದು ಹೊರಬಂದೆವು. ಅಲ್ಲಿಂದ ಸರಕಾರಿ ಅಂಧರ ಶಾಲೆಯ ಕಡೆಗೆ ಸಾಗಿದೆವು. ಅಂಧರನ್ನು ಹೀಯಾಳಿಸುವುದಾಗಲೀ ತಮಾಷೆ ಮಾಡುವುದಾಗಲೀ ಮಾಡಬಾರದು ಎಂದು ಅಧ್ಯಾಪಕರು ಎಚ್ಚರಿಸಿದ್ದು ಗಮನದಲ್ಲಿ ಇದ್ದುದರಿಂದ ಗಂಭೀರವಾಗಿ ನಡೆದೆವು. ಅಲ್ಲಿನ ರೀತಿ ನೀತಿಗಳನ್ನು ಆ ಶಾಲೆಯ ಅಧ್ಯಾಪಕರು ತಿಳಿಸಿದರು. ಅಲ್ಲಿನ ವಿದ್ಯಾರ್ಥಿಗಳನ್ನು ಕಂಡು ನಮ್ಮ ಕಣ್ಣಂಚಿನಲ್ಲಿ ನೀರೂಡಿತು. “ದೃಷ್ಟಿದಾನವೇ ಮಹಾದಾನ" ಅಂದುಕೊಂಡೆವು.

ಮುಂದೆ ನಾವು ಪಕ್ಕದಲ್ಲಿದ್ದ ನಾಲ್ಕು ಕಾರ್ಖಾನೆಗಳತ್ತ ನಡೆದೆವು. ಮೊದಲು ಪ್ಲಾಸ್ಟಿಕ್ ಬಾಲ್ ಹಾಗೂ ಕೇನ್ ತಯಾರಾಗುವ ಕಾರ್ಖಾನೆ ನೋಡಿದೆವು. ಅಲ್ಲಿ ಹಳದಿ ಬಣ್ಣದ ಬಾಲ್ ತಯಾರಾಗಿ ಉದುರುತ್ತಿದ್ದವು. ಮತ್ತೊಂದೆಡೆ ಕೇನುಗಳು ತಯಾರಾಗುತ್ತಿದ್ದವು. ನಂತರ ನಾವು ಪಾಲಿಥೀನ್ ಬೇಗ್ ತಯಾರಿಕಾ ಘಟಕದ ಕಡೆಗೆ ಸಾಗಿದೆವು. ಅಲ್ಲಿನ ಉಸಿರುಕಟ್ಟಿಸುವಂತಹ ಹೊಗೆ ನಮ್ಮನ್ನು ಕಂಗೆಡಿಸಿತು. ಆಗ ನಮ್ಮ ಮನದಲ್ಲಿ “ದಿನವೂ ಅಲ್ಲಿ ದುಡಿಯುವ ಕಾರ್ಮಿಕರ ಪಾಡು ಏನು?" ಎಂಬ ಪ್ರಶ್ನೆ ಮೂಡಿತು. ಆಧುನಿಕ ಜಗತ್ತಿನಲ್ಲಿ ಇದೆಲ್ಲಾ ಅನಿವಾರ್ಯ ಎಂದು ಸುಮ್ಮನಾದೆವು. ನಾವು ವಾಹನಗಳ ಬೇಟರಿ ತಯಾರಿಕಾ ಕೇಂದ್ರವನ್ನು ಪ್ರವೇಶಿಸಿದೆವು. ಅಲ್ಲಿನ ಕಾರ್ಮಿಕರು ನಮಗೆ ಅಗತ್ಯ ಮಾಹಿತಿಗಳನ್ನು ನೀಡಿದರು.

ಅನಂತರ ನಾವು ಹತ್ತಿರವೇ ಇದ್ದ ಕಾರವಲ್ ಸಂಜೆ ಪತ್ರಿಕೆಯ ಮುದ್ರಣಾಲಯದೊಳಗೆ ಸಾಗಿದೆವು. ಪತ್ರಿಕೆ ಮುದ್ರಣ ರೀತಿ, ಯಂತ್ರವನ್ನು ನೋಡಿ ನಮಗೆ ರೋಮಾಂಚನವಾಯಿತು. ಆಗತಾನೆ ಮುದ್ರಿಸಿದ ಪತ್ರಿಕೆಯನ್ನು ಅವರು ನಮಗೆ ಉಚಿತವಾಗಿ ವಿತರಿಸಿದರು. ಅಲ್ಲಿಂದ ನಾವು ಅಧ್ಯಾಪಕರ ನಿರ್ದೇಶನದ ಮೇರೆಗೆ ಜಿಲ್ಲಾ ನ್ಯಾಯಾಲಯದತ್ತ ಧಾವಿಸಿದೆವು. ಅಲ್ಲಿ ಒಂದು ವ್ಯಾಜ್ಯದ ತೀರ್ಪು ನಡೆಯುತ್ತಿತ್ತು. ಸಿನಿಮಾಗಳಲ್ಲಿ ಮಾತ್ರ ಕೋರ್ಟ್ ನೋಡಿದ್ದ ನಾವು ಪ್ರಥಮ ಬಾರಿಗೆ ಪ್ರತ್ಯಕ್ಷವಾಗಿ ನ್ಯಾಯಾಲಯವನ್ನು ನೋಡಿದೆವು. ಆಗ ಹಸಿವೆಯಾಗಲಾರಂಭಿಸಿದ್ದರಿಂದ ಮಧೂರು ದೇವಸ್ಥಾನದ ಕಡೆಗೆ ಸಾಗಿದೆವು. ಅಲ್ಲಿ ಭೋಜನ ಪ್ರಸಾದವನ್ನು ಸ್ವೀಕರಿಸಿದೆವು.

ಅಪರಾಹ್ನ ನಮ್ಮ ಬಸ್ಸು ಕಾಸರಗೋಡು ಕಡಲ ಕಿನಾರೆಯತ್ತ ಚಲಿಸಿತು. ತೆರೆಗಳೊಂದಿಗೆ ಆಡುತ್ತಾ ಕಡಲಿನಲ್ಲಿ ಹೆಜ್ಜೆಹಾಕಿದೆವು. ಮುಂದೆ ನಾವು ಲೈಟ್ ಹೌಸ್ ಕಡೆಗೆ ನಡೆದೆವು. ಅದರೊಳಗಿನ ೧೬೧ ಮೆಟ್ಟಿಲನ್ನು ಹತ್ತಿದಾಗ ನನಗೆ ಕೈಕಾಲು ನೋಯಲಾರಂಭಿಸಿತು. ಆದರೂ ಕಬ್ಬಿಣದ ಏಣಿಯನ್ನು ಏರಲು ಕುತೂಹಲದಿಂದ ಉತ್ಸುಕಳಾದೆ. ಅಲ್ಲಿಂದ ಸಮುದ್ರ, ಕಿನಾರೆ, ಹಚ್ಚಹಸಿರು, ಮೊಬೈಲ್ ಟವರುಗಳ ದೃಶ್ಯ ನನ್ನನ್ನು ಆನಂದ ತುಂದಿಲಳಾಗಿಸುತು. ಲೈಟ್ ಹೌಸಿನ ಕಾರ್ಯಗಳನ್ನು ತಿಳಿದು ಸಂದರ್ಶಿಸಿದ ಸ್ಥಳಗಳ ಮೆಲುಕು ಹಾಕುತ್ತಾ ಶಾಲೆಗೆ ಹಿಂತಿರುಗಿದೆವು. ಸೂರ್ಯ ಆಗ ತಾನೇ ಅಸ್ತಮಿಸಲಾರಂಭಿಸಿದ್ದ.


2 comments:

 1. Chaitali, what a nice itinerary! You have learnt so much in one day!

  ReplyDelete
 2. ತಮ್ಮ,ತಂಗಿಯರೇ,
  ಪಾಲಿಥೀನ್ ಬೇಗ್ ತಯಾರಿಕಾ ಘಟಕದಲ್ಲಿನ ಉಸಿರುಕಟ್ಟಿಸುವಂತಹ ಹೊಗೆ ಕಂಡು ಬೇಜಾರಾಯಿತು ಅಲ್ಲ್ವ? ಇದು (ಪಾಲಿಥಿನ್ ಬೇಗ್ ನಿರ್ಮಾಣ) ನಿಮಗೆ ಅನಿವಾರ್ಯ ಅಂತ ಕಂಡರೂ ಇದನ್ನು ಕಡಿಮೆ ಮಾಡಬಹುದು ಅಂತ ಯೋಚಿಸಿದ್ದೀರಾ?
  ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು ಆದಷ್ಟು ಕಡಿಮೆ ಮಾಡಬಹುದು, ಹೌದಾ?
  ಎಲ್ಲೆಲ್ಲಿ ಕಡಿಮೆ ಮಾಡಬಹುದು?
  ಒಂದು ಉದಾಹರಣೆ:
  ಪೇಟೆಗೆ ಹೋಗುವಾಗ ನಮ್ಮದೇ ಚೀಲವನ್ನು ಒಯ್ಯಬಹುದು. ಇದರಿಂದ ಅಂಗಡಿಯಿಂದ ಪ್ಲಾಸ್ಟಿಕ್ ಬೇಗ್ ಕೇಳಿ ತಕ್ಕೊಳ್ಳುವ ಅಗತ್ಯ ಬರುವುದಿಲ್ಲ, ಇಲ್ಲದಿದ್ದರೆ ಪ್ರತಿಯೊಂದು ವಸ್ತುವಿಗೂ, ತರಕಾರಿ ತರುವುದಕ್ಕೂ ಪಾಲಿಥಿನ್ ತೊಟ್ಟೆ ಕೇಳಿ ತಕ್ಕೊಳ್ಳುವ ಅಭ್ಯಾಸದಿಂದ, ತೊಟ್ಟೆಯ ಮೇಲೆ ನಮ್ಮ ಅವಲಂಬನ ಹೆಚ್ಚಾಗುತ್ತ ಹೋಗುತ್ತೆ. ನಮ್ಮ ಪರಿಸರವನ್ನು ನಾವೇ ಹಾಳು ಮಾಡುವ ಹಾಗಾಗುತ್ತದೆ!!
  ಇನ್ನು ಬೇರೇನಾದರೂ ಮಾಡಬಹುದಾ? ಯೋಚಿಸಿ,
  --
  ಮಹೇಶಣ್ಣ.

  ReplyDelete