Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 August 2013

‘ಶ್ರೀಕೃಷ್ಣ ಜಯಂತಿ’ - 2013

   


“ಶ್ರೀಕೃಷ್ಣ ಬೆಣ್ಣೆಕಳ್ಳ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಕೃಷ್ಣ ಆತನ ಜೊತೆಗಿದ್ದ ಅಶಕ್ತ ಮಕ್ಕಳಿಗಾಗಿ ಗೋಪಿಕೆಯರ ಬಳಿಯಲ್ಲಿದ್ದ ಬೆಣ್ಣೆಯನ್ನು ಕದ್ದು ಪುಟಾಣಿಗಳಿಗೆ ಪೌಷ್ಟಿಕ ಆಹಾರವನ್ನು ಕೊಡುತ್ತಿದ್ದ. ಆತನ ಜನನ, ಬಾಲ ಲೀಲೆಗಳೆಲ್ಲವೂ ಲೋಕ ಕಲ್ಯಾಣಕ್ಕಾಗಿ ಮುಡಿಪಾಗಿದ್ದವು. ಅಂತಹ ಪರಮಾತ್ಮನ ಲೀಲೆಗಳನ್ನು ಕೊಂಡಾಡುವುದಕ್ಕಾಗಿ ಇಂತಹ ಆಚರಣೆಗಳನ್ನು ಸಮಾಜದಲ್ಲಿ ನಡೆಸಲಾಗುತ್ತಿದೆ. ಇವು ಸಮಾಜದ ಅಭಿವೃದ್ಧಿಗೆ ದಾರಿದೀಪವಾಗುತ್ತವೆ.” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀರ್ಚಾಲು ಮೇಲಿನ ಪೇಟೆಯ ಸ್ವೀಕಾರ್ ಕಮ್ಯುನಿಕೇಷನ್ಸ್ ಮಾಲಕ ರವಿ.ಕೆ ಪ್ರಾಯೋಜಿಸಿದ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಅನುಶ್ರೀ. ಎಂ.ಪಿ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಳ್ಳಪದವು ನಟರಾಜ ಶರ್ಮ ಇವರಿಂದ ‘ಭಕ್ತಿಗೀತೆ’ ಗಾಯನ ಕಾರ್ಯಕ್ರಮ ಜರಗಿತು.

27 August 2013

ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆ - ಬಹುಮಾನಗಳು

21.08.2013 ಬುಧವಾರ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯಲ್ಲಿ ನಮ್ಮಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಶಾಲೆಯ ನೂತನ ಸಂಸ್ಕೃತ ಶಿಕ್ಷಕ ನಂದಕುಮಾರ್. ಕೆ, ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಶಿಕ್ಷಕಿ ಶೈಲಜಾ. ಬಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದರು.

23 August 2013

ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಗೆ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ’

   
ಸಂಸ್ಕೃತದ ಅಧ್ಯಯನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಯುವ ಸಾಧಕರಿಗಾಗಿ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳು ನೀಡುವ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ’ ಪುರಸ್ಕಾರಕ್ಕೆ ಈ ವರ್ಷ ಗಡಿನಾಡು ಕಾಸರಗೋಡಿನ ಕನ್ನಡಿಗ ಕೂಳಕ್ಕೋಡ್ಳು ವೆಂಕಟೇಶ ಮೂರ್ತಿ ಅರ್ಹರಾಗಿದ್ದಾರೆ. ಸ್ವಾತ೦ತ್ರ್ಯೋತ್ಸವದ ದಿನದಂದು ಭಾರತ ಸರಕಾರವು ಘೋಷಿಸುವ ಈ ಪ್ರಶಸ್ತಿಯು ಪ್ರಸ್ತುತ ಶತಮಾನೋತ್ಸವ ವರ್ಷದಲ್ಲಿರುವ ನಮ್ಮ ಶಾಲೆಯ ಹಳೆವಿದ್ಯಾರ್ಥಿಗೆ ದೊರೆತಿರುವುದು ಶಾಲೆಯ ಶತಮಾನೋತ್ಸವಕ್ಕೆ ಮತ್ತಷ್ಟು ಮೆರುಗು ತಂದಿದೆ.

 ಬದಿಯಡ್ಕ ಸನಿಹದ “ಕೂಳಕ್ಕೋಡ್ಳು-ಈಶಾವಾಸ್ಯಮ್” ಮನೆಯ ಸುಲೋಚನಾ ಮತ್ತು ಶಂಕರನಾರಾಯಣ ಭಟ್ಟರ ಹಿರಿಯ ಪುತ್ರ ವೆಂಕಟೇಶ ಮೂರ್ತಿ ಎಳವೆಯಲ್ಲಿಯೇ ಸಂಸ್ಕೃತದ ಕಡೆಗೆ ಆಸಕ್ತರಾಗಿದ್ದವರು. ಪ್ರಸ್ತುತ ದೆಹಲಿಯಲ್ಲಿರುವ ಅಂಗೀಕೃತ ವಿಶ್ವವಿದ್ಯಾಲಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಮುಕ್ತಸ್ವಾಧ್ಯಾಯ ಪೀಠ (ಇನ್ಸ್ಟಿಟ್ಯೂಟ್ ಒಫ್ ಡಿಸ್ಟೇನ್ಸ್ ಎಜುಕೇಶನ್)ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯ ಆಯೋಜಿಸುವ ರಾಷ್ಟ್ರೀಯ ಕಾರ್ಯಕ್ರಮಗಳ, ಪ್ರಶಿಕ್ಷಣ ಕಾರ್ಯಕ್ರಮಗಳ ಸಂಯೋಜಕರಾಗಿ ಇವರು ನಾಡಿನ ಎಲ್ಲ ವಿದ್ವಜ್ಜನರಿಗೆ ಸುಪರಿಚಿತರಾಗಿದ್ದಾರೆ. ವಿಶ್ವವಿದ್ಯಾಲಯ ತಯಾರಿಸುವ ಭಾಷಾಧ್ಯಯನದ ಡಿವಿಡಿಗಳಲ್ಲಿ ಇವರ ಪರಿಶ್ರಮ ಅಪಾರವಾಗಿದೆ. ದೂರದರ್ಶನದ ‘ಡಿಡಿ ಭಾರತಿ’ಯಲ್ಲಿ ಪ್ರಸಾರವಾಗುವ ‘ಭಾಷಾಮಂದಾಕಿನೀ’ ಕಾರ್ಯಕ್ರಮದಲ್ಲಿಯೂ ಇವರು ಶಿಕ್ಷಕರಾಗಿ ಪರಿಚಿತರಾಗಿದ್ದಾರೆ.

ಶಾಲಾಮಟ್ಟದ ಕಲಿಕೆಯ ಹಂತದಲ್ಲಿಯೇ ಕಲೆ, ಭಾಷಣ, ಕ್ರೀಡೆ, ನೇತೃತ್ವಗಳನ್ನು ಮೈಗೂಡಿಸಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಲ್ಲಿ ಅದ್ವೈತ ವೇದಾಂತದ ಕುರಿತು ವಿಶೇಷ ಅಧ್ಯಯನ ಪೂರೈಸಿದ್ದಾರೆ. 2009 ಸೆಪ್ಟೆಂಬರ್ 1 ರಿಂದ 5 ರ ತನಕ  ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ 14ನೆಯ ವಿಶ್ವಸಂಸ್ಕೃತ ಸಮ್ಮೇಳನದಲ್ಲಿ “ಕೌರವೌರವಮ್” ಎಂಬ ಏಕವ್ಯಕ್ತಿ-ಯಕ್ಷಗಾನವನ್ನು ಇವರು ಪ್ರದರ್ಶಿಸಿದ್ದರು. ಈ ಪ್ರಸಂಗದಲ್ಲಿ ಗದಾಯುದ್ಧದ ದುರ್ಯೋಧನನ ರೋಷ-ವಿಲಾಪದ ಮನೋಜ್ಞ ಅಭಿನಯ ಹಲವರ ಮನಸೂರೆಗೊಂಡಿತ್ತು.

ಇವರ ಮನೆ ‘ಸಂಸ್ಕೃತ ಗೃಹ’ವೆಂದೇ ಸುಪರಿಚಿತವಾಗಿದೆ. ಪತ್ನಿ ಶುಭಲಕ್ಷ್ಮೀ ಮತ್ತು ಮಗ ಈಶಾನ ಸಂಸ್ಕೃತದಲ್ಲಿಯೇ ವ್ಯವಹರಿಸುತ್ತಾರೆ. ಇತ್ತೀಚಿಗೆ ಜನಿಸಿದ ತಮ್ಮ ಸುಪುತ್ರಿಗೂ ಇವರು ಸಂಸ್ಕೃತದ ಬಾಲಪಾಠಗಳನ್ನು ಆರಂಭಿಸಿದ್ದಾರೆ! ವೆಂಕಟೇಶ ಮೂರ್ತಿಯವರ ತಮ್ಮ ಡಾ|ಮಹೇಶ್ ಕೂಳಕ್ಕೋಡ್ಳು ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

19 August 2013

ಶಾಸಕರ ನಿಧಿಯಿಂದ ಕಂಪ್ಯೂಟರ್ ಕೊಡುಗೆ

ನಮ್ಮ ಶಾಲೆಗೆ ಕಾಸರಗೋಡು ವಿಧಾನಸಭಾ ಸದಸ್ಯ ಎನ್.ಎ.ನೆಲ್ಲಿಕುನ್ನು ಇವರ ಪ್ರದೇಶ ಅಭಿವೃದ್ಧಿ ನಿಧಿಯಿಂದ ಕೊಡಮಾಡಿದ ಎರಡು ಕಂಪ್ಯೂಟರುಗಳನ್ನು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಇಂದು ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಉಪಸ್ಥಿತರಿದ್ದರು.

ಶತಮಾನೋತ್ಸವ ಕಟ್ಟಡ ಶಿಲಾನ್ಯಾಸ

   “ಸೂರ್ಯನ ಚಲನೆಗೆ ಸಂಬಂಧಿಸಿ ಕಟ್ಟಡ ನಿರ್ಮಾಣದ ಆರಂಭಕ್ಕೆ ಇಂದಿನ ಗ್ರಹಗತಿ ಅತ್ಯಂತ ಸೂಕ್ತ. ಇಂತಹ ಉತ್ತಮವಾದ ಘಳಿಗೆಯಲ್ಲಿ ನನ್ನ ಮಾತೃಶಾಲೆಯ ಶತಮಾನೋತ್ಸವಕ್ಕೆ ಸಂಬಂಧಿಸಿದ ಕಟ್ಟಡದ ಶಿಲಾನ್ಯಾಸ ನೆರವೇರಿಸುತ್ತಿರುವುದು ಸಂತೃಪ್ತಿ ತಂದಿದೆ. ಉತ್ತಮ ಮುಹೂರ್ತದಲ್ಲಿ ಆರಂಭವಾದ ಈ ಕಟ್ಟಡದ ನಿರ್ಮಾಣ ಅತ್ಯಂತ ವೇಗವಾಗಿ ಮುಂದುವರಿಯಲಿ" ಎಂದು ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಮಹಾಜನ ವಿದ್ಯಾಸಂಸ್ಥೆಗಳಲ್ಲಿ ಜರಗಿದ ಶತಮಾನೋತ್ಸವ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದರು.



ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಐ.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕದ ಉದ್ಯಮಿ ಬಿ.ವಸಂತ ಪೈ ದೇಣಿಗೆ ಸಂಗ್ರಹಣೆಗೆ ಚಾಲನೆ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು, ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್.ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.

15 August 2013

ಸ್ವಾತಂತ್ರ್ಯ ಯಾತ್ರೆ 2013

   



  “ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸ್ವಾತಂತ್ರ್ಯ ದಿನ ಕಾರ್ಯಕ್ರಮದ ಆಚರಣೆ ನೆರವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ, ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವು ಶ್ರಮಿಸಬೇಕಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಕೆ.ನಾರಾಯಣ ಭಟ್ ಮತ್ತು ಎಂ.ಸೂರ್ಯನಾರಾಯಣ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಶಿಕ್ಷಕ ಕೆ.ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

    ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ಮತ್ತು ಸ್ವಾತಂತ್ರ್ಯ ರೂಪಕಗಳು ನಡೆದವು.

ಹೂರಂಗವಲ್ಲಿ...




ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಮ್ಮ ಶಾಲಾ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹೂವಿನಲ್ಲಿ ಭಾರತದ ಭೂಪಟ ಮತ್ತು ಯು.ಪಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಕೇರಳದ ಭೂಪಟವನ್ನು ರಚಿಸುವ ಸ್ಪರ್ಧೆ ನಿನ್ನೆ ಜರಗಿತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಚಿತ್ರ ಇಲ್ಲಿ ನಿಮಗಾಗಿ...

12 August 2013

ಆಗಸ್ಟ್ 19ರಂದು ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ

ನಮ್ಮ ಶಾಲೆಗಳ ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿದ ಕಟ್ಟಡದ ಶಿಲಾನ್ಯಾಸ ಹಾಗೂ ಆರ್ಥಿಕ ಸಂಗ್ರಹದ ಪ್ರಾರಂಭೋತ್ಸವವನ್ನು ದಿನಾಂಕ 19.08.2013 ಸೋಮವಾರ ಬೆಳಗ್ಗೆ ಘ೦ಟೆ 9.30ಕ್ಕೆ ಶಾಲಾ ವಠಾರದಲ್ಲಿ ನೆರವೇರಿಸಲಾಗುವುದು. ಪೂರ್ವ ವಿದ್ಯಾರ್ಥಿ ಜ್ಯೋತಿಷ್ಯರತ್ನ ಬ್ರಹ್ಮಶ್ರೀ ಪದ್ಮನಾಭ ಶರ್ಮ ಬೇಳ, ಇರಿಂಞಾಲಕುಡ ಶಿಲಾನ್ಯಾಸ ಮತ್ತು ಬದಿಯಡ್ಕದ ಉದ್ಯಮಿ ಬಿ. ವಸಂತ ಪೈ ದೇಣಿಗೆ ಸಂಗ್ರಹದ ಉಧ್ಘಾಟನೆ ನಡೆಸಲಿದ್ದಾರೆ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಉಪಸ್ಥಿತಿ, ಸಹಕಾರವಿರಲಿ. ಪ್ರೀತಿಯಿಟ್ಟು ಬನ್ನಿ...