Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

23 August 2013

ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಗೆ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ’

   
ಸಂಸ್ಕೃತದ ಅಧ್ಯಯನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಯುವ ಸಾಧಕರಿಗಾಗಿ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳು ನೀಡುವ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ’ ಪುರಸ್ಕಾರಕ್ಕೆ ಈ ವರ್ಷ ಗಡಿನಾಡು ಕಾಸರಗೋಡಿನ ಕನ್ನಡಿಗ ಕೂಳಕ್ಕೋಡ್ಳು ವೆಂಕಟೇಶ ಮೂರ್ತಿ ಅರ್ಹರಾಗಿದ್ದಾರೆ. ಸ್ವಾತ೦ತ್ರ್ಯೋತ್ಸವದ ದಿನದಂದು ಭಾರತ ಸರಕಾರವು ಘೋಷಿಸುವ ಈ ಪ್ರಶಸ್ತಿಯು ಪ್ರಸ್ತುತ ಶತಮಾನೋತ್ಸವ ವರ್ಷದಲ್ಲಿರುವ ನಮ್ಮ ಶಾಲೆಯ ಹಳೆವಿದ್ಯಾರ್ಥಿಗೆ ದೊರೆತಿರುವುದು ಶಾಲೆಯ ಶತಮಾನೋತ್ಸವಕ್ಕೆ ಮತ್ತಷ್ಟು ಮೆರುಗು ತಂದಿದೆ.

 ಬದಿಯಡ್ಕ ಸನಿಹದ “ಕೂಳಕ್ಕೋಡ್ಳು-ಈಶಾವಾಸ್ಯಮ್” ಮನೆಯ ಸುಲೋಚನಾ ಮತ್ತು ಶಂಕರನಾರಾಯಣ ಭಟ್ಟರ ಹಿರಿಯ ಪುತ್ರ ವೆಂಕಟೇಶ ಮೂರ್ತಿ ಎಳವೆಯಲ್ಲಿಯೇ ಸಂಸ್ಕೃತದ ಕಡೆಗೆ ಆಸಕ್ತರಾಗಿದ್ದವರು. ಪ್ರಸ್ತುತ ದೆಹಲಿಯಲ್ಲಿರುವ ಅಂಗೀಕೃತ ವಿಶ್ವವಿದ್ಯಾಲಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಮುಕ್ತಸ್ವಾಧ್ಯಾಯ ಪೀಠ (ಇನ್ಸ್ಟಿಟ್ಯೂಟ್ ಒಫ್ ಡಿಸ್ಟೇನ್ಸ್ ಎಜುಕೇಶನ್)ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯ ಆಯೋಜಿಸುವ ರಾಷ್ಟ್ರೀಯ ಕಾರ್ಯಕ್ರಮಗಳ, ಪ್ರಶಿಕ್ಷಣ ಕಾರ್ಯಕ್ರಮಗಳ ಸಂಯೋಜಕರಾಗಿ ಇವರು ನಾಡಿನ ಎಲ್ಲ ವಿದ್ವಜ್ಜನರಿಗೆ ಸುಪರಿಚಿತರಾಗಿದ್ದಾರೆ. ವಿಶ್ವವಿದ್ಯಾಲಯ ತಯಾರಿಸುವ ಭಾಷಾಧ್ಯಯನದ ಡಿವಿಡಿಗಳಲ್ಲಿ ಇವರ ಪರಿಶ್ರಮ ಅಪಾರವಾಗಿದೆ. ದೂರದರ್ಶನದ ‘ಡಿಡಿ ಭಾರತಿ’ಯಲ್ಲಿ ಪ್ರಸಾರವಾಗುವ ‘ಭಾಷಾಮಂದಾಕಿನೀ’ ಕಾರ್ಯಕ್ರಮದಲ್ಲಿಯೂ ಇವರು ಶಿಕ್ಷಕರಾಗಿ ಪರಿಚಿತರಾಗಿದ್ದಾರೆ.

ಶಾಲಾಮಟ್ಟದ ಕಲಿಕೆಯ ಹಂತದಲ್ಲಿಯೇ ಕಲೆ, ಭಾಷಣ, ಕ್ರೀಡೆ, ನೇತೃತ್ವಗಳನ್ನು ಮೈಗೂಡಿಸಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಲ್ಲಿ ಅದ್ವೈತ ವೇದಾಂತದ ಕುರಿತು ವಿಶೇಷ ಅಧ್ಯಯನ ಪೂರೈಸಿದ್ದಾರೆ. 2009 ಸೆಪ್ಟೆಂಬರ್ 1 ರಿಂದ 5 ರ ತನಕ  ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ 14ನೆಯ ವಿಶ್ವಸಂಸ್ಕೃತ ಸಮ್ಮೇಳನದಲ್ಲಿ “ಕೌರವೌರವಮ್” ಎಂಬ ಏಕವ್ಯಕ್ತಿ-ಯಕ್ಷಗಾನವನ್ನು ಇವರು ಪ್ರದರ್ಶಿಸಿದ್ದರು. ಈ ಪ್ರಸಂಗದಲ್ಲಿ ಗದಾಯುದ್ಧದ ದುರ್ಯೋಧನನ ರೋಷ-ವಿಲಾಪದ ಮನೋಜ್ಞ ಅಭಿನಯ ಹಲವರ ಮನಸೂರೆಗೊಂಡಿತ್ತು.

ಇವರ ಮನೆ ‘ಸಂಸ್ಕೃತ ಗೃಹ’ವೆಂದೇ ಸುಪರಿಚಿತವಾಗಿದೆ. ಪತ್ನಿ ಶುಭಲಕ್ಷ್ಮೀ ಮತ್ತು ಮಗ ಈಶಾನ ಸಂಸ್ಕೃತದಲ್ಲಿಯೇ ವ್ಯವಹರಿಸುತ್ತಾರೆ. ಇತ್ತೀಚಿಗೆ ಜನಿಸಿದ ತಮ್ಮ ಸುಪುತ್ರಿಗೂ ಇವರು ಸಂಸ್ಕೃತದ ಬಾಲಪಾಠಗಳನ್ನು ಆರಂಭಿಸಿದ್ದಾರೆ! ವೆಂಕಟೇಶ ಮೂರ್ತಿಯವರ ತಮ್ಮ ಡಾ|ಮಹೇಶ್ ಕೂಳಕ್ಕೋಡ್ಳು ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

No comments:

Post a Comment