Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

19 February 2011

ಗುರುವಂದನೆ

“ಭಜನೆಯು ವಿದ್ಯಾರ್ಥಿಗಳ ಭಾವೋದ್ವೇಗವನ್ನು ನಿಯಂತ್ರಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಒಂದು ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ಕಾಟುಕುಕ್ಕೆಯವರ ಪ್ರಯತ್ನ ಸ್ತುತ್ಯರ್ಹವಾಗಿದೆ” ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿದ್ದ ‘ದಾಸವಾಣಿ ಕೀರ್ತನಾ ತರಗತಿ’ಗಳ ಸಮಾರೋಪ ಮತ್ತು ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಳೆದ ಆರು ತಿಂಗಳಿನಿಂದ ತರಗತಿಗಳನ್ನು ನಡೆಸಿಕೊಟ್ಟ ಗಾಯಕ ರಾಮಕೃಷ್ಣ ಕಾಟುಕುಕ್ಕೆಯವರನ್ನು ವಿದ್ಯಾರ್ಥಿಗಳು ಮತ್ತು ಹಿರಿಯರು ಶಾಲು,ಫಲ,ಸ್ಮರಣಿಕೆ ನೀಡಿ ವಂದಿಸಿದರು. ಈ ಸಂದರ್ಭದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಕಾಟುಕುಕ್ಕೆಯವರು “ವಿದ್ಯಾರ್ಥಿಗಳ ಕಂಠದಿಂದ ದೇವರ ನಾಮವು ಮೊಳಗಿದರೆ ಅದೇ ನನಗೆ ಶ್ರೀನಿವಾಸನ ಸೇವೆ, ದೊರೆಯುವ ಸಂತೃಪ್ತಿ" ಎಂದು ಹೇಳಿದರು.


ಹಿರಿಯ ಅಂಕಣಕಾರ ಎಂ.ವಿ.ಭಟ್ ಮಧುರಂಗಾನ ಮತ್ತು ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕಿ ವಾಣಿ. ಪಿ.ಎಸ್ ಸ್ವಾಗತಿಸಿ ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ವಂದಿಸಿದರು.

04 February 2011

ಶಾಲಾ ವಾರ್ಷಿಕೋತ್ಸವ

“ಖಂಡಿಗೆ ಮನೆತನ ಕಾಸರಗೋಡಿನ ಬೆಳವಣಿಗೆಯಲ್ಲಿ ನೀಡಿದ ಸೇವೆ ಅನನ್ಯ. ನೂರು ವರ್ಷಗಳ ಹಿಂದೆಯೇ ನೀರ್ಚಾಲಿನಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವಂತೆ ಖಂಡಿಗೆಯವರು ಪ್ರಯತ್ನಿಸಿದ್ದರಿಂದಾಗಿ ನಾಡಿಗೊಂದು ಉತ್ತಮ ವಿದ್ಯಾಸಂಸ್ಥೆ ದೊರೆಯಿತು. ವಿದ್ಯಾರ್ಥಿಗಳ ಬಹುಮುಖಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ. ಅವರ ಬೆಳವಣಿಗೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಶಾಲಾ ಕಾರ್ಯಕ್ರಮಗಳು ನಡೆಯುತ್ತವೆ. ಹೆಸರಾಂತ ಮಹಾಜನ ವಿದ್ಯಾಸಂಸ್ಥೆ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ನಾಡಿನ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಮುಗು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ನಾರಾಯಣ ನಂಬ್ಯಾರ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ನಮ್ಮ ಶಾಲಾ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ ಶುಭಹಾರೈಸಿದರು.

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಶಾಲಾ ಸಂಸ್ಕೃತ ಅಧ್ಯಾಪಕ ಎಸ್. ವಿ. ಭಟ್ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯನ್ನೂ ಏರ್ಪಡಿಸಲಾಗಿತ್ತು.


03 February 2011

ನಾಳೆ ಶಾಲಾ ವಾರ್ಷಿಕೋತ್ಸವ

ನಮ್ಮ ಶಾಲಾ ವಾರ್ಷಿಕೋತ್ಸವವು ನಾಳೆ ೦೪.೦೨.೨೦೧೧ ಶುಕ್ರವಾರ ಅಪರಾಹ್ನ ೨ ಗಂಟೆಗೆ ನಡೆಯಲಿದೆ. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಗು ಸೇವಾ ಸಹಕಾರೀ ಬ್ಯಾಂಕ್ ಕಾರ್ಯದರ್ಶಿ ನಾರಾಯಣ ನಂಬ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಮಹಾಜನ ಹಳೆವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಲಿದೆ. ಎಲ್ಲರಿಗೂ ಸ್ವಾಗತ...

ತಲಪಿದ ಪುಸ್ತಕಗಳು: ವಿದ್ಯಾರ್ಥಿಗಳಲ್ಲಿ ಸಂತಸ

ಒಂಭತ್ತನೇ ತರಗತಿಯ ಫಿಸಿಕಲ್ ಸಯನ್ಸ್, ಗಣಿತ ಮತ್ತು ಆಂಗ್ಲ ಭಾಷಾ ಪಠ್ಯ ಪುಸ್ತಕಗಳ ಎರಡನೇ ವೋಲ್ಯಮ್ ಪುಸ್ತಕ ದೊರೆಯದೆ ಕಂಗಾಲಾಗಿದ್ದ ಕುಂಬಳೆ ಮತ್ತು ಕಾಸರಗೋಡು ಉಪಜಿಲ್ಲಾ ವಿದ್ಯಾರ್ಥಿಗಳು ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ಫೆಬ್ರವರಿ ಬಂದರೂ ಪಠ್ಯಪುಸ್ತಕಗಳು ದೊರೆಯದೆ ಗೊಂದಲಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ತಲಪಿಸುವಲ್ಲಿ ವಿಶೇಷ ಶ್ರಮವಹಿಸಿದ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಪುಂಡರೀಕಾಕ್ಷ ಆಚಾರ್ಯ ಮತ್ತು ತಂಡದವರ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಪಠ್ಯಪುಸ್ತಕಗಳನ್ನು ತಲಪಿಸುವಲ್ಲಿ ಅವಿರತವಾಗಿ ಪ್ರಯತ್ನಿಸಿದ ಹಿರಿಯ ಅಧಿಕಾರಿಗಳನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿನಂದಿಸಿದ್ದಾರೆ.

ಶಿಬಿರದ ನೋಟಗಳು...

ಕಳೆದ ವಾರ ಜರಗಿದ ಸ್ಕೌಟ್-ಗೈಡ್ ದಳಗಳ ವಾರ್ಷಿಕ ಶಿಬಿರದ ಇನ್ನಷ್ಟು ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸ್ಥಳೀಯ ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಬಂಧಕ ಶಿವಕುಮಾರ್ ಬ್ಯಾಂಕಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅವರಿಗೆ ಕೃತಜ್ಞತೆಗಳು...