Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

19 November 2014

ವೃತ್ತಿ ಪರಿಚಯ ಮೇಳ - ಬಾಗಿ.ಎಂ ರಾಜ್ಯ ಮಟ್ಟಕ್ಕೆ ಆಯ್ಕೆ

ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಬಾಗಿ.ಎಂ.17.11.2014 ಸೋಮವಾರ ನಾಯಮ್ಮಾರಮೂಲೆಯಲ್ಲಿ ಜರಗಿದ 2014-15 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಬಿದಿರು ಉತ್ಪನ್ನಗಳ ತಯಾರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾಳೆ. ಅವಳಿಗೆ ಶುಭಾಶಯಗಳು...

ವಿಜ್ಞಾನ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


17.11.2014 ಸೋಮವಾರ ನಾಯಮ್ಮಾರಮೂಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳದಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ. ಬಿ (ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ) ಮತ್ತು ಒಂಭತ್ತನೇ ತರಗತಿ ವಿದ್ಯಾರ್ಥಿನಿ ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕೆರೆ - ಭಾರತಿ. ಎಂ.ಜಿ ಇವರ ಪುತ್ರಿ) ಪ್ರದರ್ಶಿಸಿದ ಸ್ಥಿರ ಮಾದರಿಯು ‘ಎ’ ಗ್ರೇಡ್ ಸಹಿತ ಪ್ರಥಮ ಬಹುಮಾನ ಗಳಿಸಿ ನವೆಂಬರ್ 26ರಿಂದ 30ರ ತನಕ ಮಲಪ್ಪುರಂ ಜಿಲ್ಲೆಯ ತಿರೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ ಸ್ಪರ್ಧೆಗೆ ಆಯ್ಕೆಯಾಗಿದೆ. ಬಹುಮಾನ ವಿಜೇತರಿಗೆ ಶುಭಾಶಯಗಳು...

14 November 2014

ರಕ್ಷಕರ ಸಮ್ಮೇಳನ 2014


“ವಿದ್ಯಾರ್ಥಿಗಳ ಪ್ರಗತಿಗೆ ರಕ್ಷಕರು ಮತ್ತು ಶಿಕ್ಷಕರ ಹೊಂದಾಣಿಕೆ ಅಗತ್ಯ. ಸೌಹಾರ್ದಯುತ ವಾತಾವರಣವಿರುವ ಮನೆಗಳಲ್ಲಿ ಬೆಳೆದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳಗುತ್ತಾರೆ. ಆ ರೀತಿಯ ಸುಸಂಸ್ಕೃತ ವಾತಾವರಣವಿರುವ ಮನೆ ಮನಗಳನ್ನು ರೂಪಿಸಲು ನಾವು ಪ್ರಯತ್ನಿಸಬೇಕು ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಭಿಪ್ರಾಯಪಟ್ಟರು. ಅವರು ಸರ್ವಶಿಕ್ಷಾ ಅಭಿಯಾನದ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಜರಗಿದ ರಕ್ಷಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯ  ಶಿಕ್ಷಕಿ ಎ.ಭುವನೇಶ್ವರಿಯವರು ಮಕ್ಕಳಲ್ಲಿ ವಿನಯ ವಿಧೇಯತೆಗಳನ್ನು ಬೆಳೆಸುವಲ್ಲಿ ಮಾತೆಯರ ಪಾತ್ರವು ಮಹತ್ತರವಾದುದು. ಎಲ್ಲ ಮಾತೆಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ಎಚ್.ಸೂರ್ಯನಾರಾಯಣ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶೈಲಜಾ.ಎ ಮತ್ತು ವೇಣುಗೋಪಾಲಕೃಷ್ಣ.ಇ ರಕ್ಷಕರಿಗೆ ತರಗತಿ ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಮೀನಾಕ್ಷಿ.ಎಚ್.ಎನ್ ಸ್ವಾಗತಿಸಿ ಮಾಲತಿ.ಪಿ ವಂದಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಬಿಡುಗಡೆಗೊಳಿಸಿದ ಡೈರಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

13 November 2014

ಅಧ್ಯಾಪಕ ಹುದ್ದೆಗೆ ಸಂದರ್ಶನ


ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ನ್ಯಾಚುರಲ್ ಸಯನ್ಸ್(ವಿಜ್ಞಾನ ಪದವಿ, ಬಿ.ಎಡ್) ಮತ್ತು ಹೈಯರ್ ಸೆಕೆಂಡರಿ ವಿಭಾಗದ ರಸಾಯನ ಶಾಸ್ತ್ರ (ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿ, ಬಿ.ಎಡ್ ಮತ್ತು ಸೆಟ್ ಅಥವಾ ನೆಟ್) ಶಿಕ್ಷಕರ ಆಯ್ಕೆಗಾಗಿ 17.11.2014 ಸೋಮವಾರ ಬೆಳಗ್ಗೆ 10.30ಕ್ಕೆ ಶಾಲೆಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಸಕಾಲದಲ್ಲಿ ಹಾಜರಿರಬೇಕಾಗಿ ವಿನಂತಿ. ಹೆಚ್ಚಿನ ವಿವರಗಳಿಗಾಗಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ (9446283131, 9846575909) ಇವರನ್ನು ಸಂಪರ್ಕಿಸಬಹುದು.

08 November 2014

ನಮ್ಮ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್

ದಿನಾಂಕ 05.11.2014 ಬುಧವಾರದಿಂದ 07.11.2014 ಶುಕ್ರವಾರದ ತನಕ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ವಿಭಾಗಗಳಲ್ಲಿ ಅತ್ಯಧಿಕ ಅಂಕ ಸಹಿತ ಚಾಂಪಿಯನ್‌ಶಿಪ್ ಮತ್ತು ಒಟ್ಟು 14 ಚಿನ್ನ, 16 ಬೆಳ್ಳಿ, 7 ಕಂಚು ಪಡೆದು ಅತ್ಯಧಿಕ 132 ಅಂಕ ಸಂಪಾದಿಸಿ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ನೇತೃತ್ವದ ನಮ್ಮ ಶಾಲೆಯ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೆ ನಮ್ಮ ಶುಭಾಶಯಗಳು...