Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

20 October 2010

ಇಂದು ಕ್ರೀಡಾ ದಿನ

ಶಾಲಾ ಮಟ್ಟದ ಕ್ರೀಡಾ ಚಟುವಟಿಕೆಗಳು ಇಂದು ಮತ್ತು ನಾಳೆ ನಡೆಯಲಿವೆ. ವಿದ್ಯಾರ್ಥಿಗಳು ಹೊಸ ಉನ್ಮೇಷದೊಂದಿಗೆ ಸ್ಪರ್ಧೆಗಳಲ್ಲಿ ತಲ್ಲೀನರಾಗಿದ್ದಾರೆ. ಆಟ, ಓಟ... ಹೀಗೆ ಮೈದಾನ ತುಂಬ ಚಟುವಟಿಕೆಗಳು... ಎಲ್ಲ ಸ್ಪರ್ಧಾಳುಗಳಿಗೆ ನಮ್ಮ ಶುಭಾಶಯಗಳು.

19 October 2010

ಹಾಲು ವಿತರಣೆ

ಕೇರಳ ಸರಕಾರ ರಾಜ್ಯ ಮಟ್ಟದಲ್ಲಿ ವಾರದ ಎರಡು ದಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸಲು ನಿರ್ಧರಿಸಿದೆ. ಆ ಪ್ರಕಾರ ಇಂದು ಈ ಕಾರ್ಯಕ್ರಮದ ಶಾಲಾ ಉದ್ಘಾಟನೆಯನ್ನು ನಮ್ಮ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಂ. ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ ನೆರವೇರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು.

ಶ್ರೀ ಶಾರದಾ ಪೂಜೆ

ಮೊನ್ನೆ ಭಾನುವಾರ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಶಾರದಾ ಪೂಜೆಯ ಸಂಭ್ರಮ. ಶ್ರೀಯುತ ಗೋಪಾಲಕೃಷ್ಣ ಭಟ್ಟರು ಶಾರದಾ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಅಷ್ಟಾವಧಾನ ಸೇವೆ ನಮ್ಮ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ಎಸ್. ವಿ. ಭಟ್ಟರ ನೇತೃತ್ವದಲ್ಲಿ ಶ್ರೀ ಶಾರದಾಂಬೆಗೆ ಅಷ್ಟಾವಧಾನ ಸೇವೆ ಜರಗಿತು. ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಒಂದು ಕಹಿ ನೆನಪು ನಮ್ಮನ್ನು ಕಾಡುತ್ತಿತ್ತು. ಕಳೆದ ವರ್ಷ ನಮ್ಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಇದೇ ದಿನ ೧೭.೧೦.೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದರು. ಅವರ ನೆನಪಿನಲ್ಲಿ ಎರಡು ದಿನ ಮ್ಲಾನವಾಗಿ ಕಳೆದು ಹೋಯಿತು. ಮೃತರ ಆತ್ಮಕ್ಕೆ ಮತ್ತೆ ನಮನಗಳನ್ನು ಸಲ್ಲಿಸುತ್ತೇವೆ...

13 October 2010

ಕೇರಳ ಕ್ರೀಡಾ ದಿನ ಆಚರಣೆ

ಕೇರಳ ರಾಜ್ಯ ಮಟ್ಟದ ಕ್ರೀಡಾ ದಿನಾಚರಣೆಯನ್ನು ಇಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ನಿವೃತ್ತ ಪೋಲೀಸ್ ಅಧಿಕಾರಿ ನಾರಾಯಣ ಸಾಮೂಹಿಕ ಓಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಷ್ಣುಮೂರ್ತಿ ನಗರದಿಂದ ನೀರ್ಚಾಲು ಶಾಲಾ ವಠಾರದ ತನಕ ನಡೆದ ಓಟದಲ್ಲಿ ಊರ ಉತ್ಸಾಹಿ ತರುಣರು, ಶಾಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು.

11 October 2010

ಶಾಲೆ ತುಂಬ ಕಲೋತ್ಸವದ ಕಲರವ

ನಮ್ಮ ಶಾಲಾ ಮಟ್ಟದ ಯುವಜನೋತ್ಸವ, ಸಂಸ್ಕೃತೋತ್ಸವ ಸ್ಪರ್ಧೆಗಳು ಇಂದು, ನಾಳೆ ನಡೆಯಲಿದೆ. ಎಲ್ಲ ವಿದ್ಯಾರ್ಥಿಗಳಿಗೂ ಶುಭಾಶಯಗಳು. ಇದು ವಿದ್ಯಾರ್ಥಿಗಳ ಪ್ರತಿಭೆ ಸಾರುವ ಚಿತ್ರ, ಎಂಟನೇ ತರಗತಿಯ ಗೌತಮ್ ಬಿಡಿಸಿದ್ದು.

07 October 2010

ಚೇತನಕೃಷ್ಣ ಬಿಡಿಸಿದ ಚಿತ್ರ

ಆರನೆ ತರಗತಿಯ ಚೇತನ ಕೃಷ್ಣ, ಚೇತನಡ್ಕದ ಹುಡುಗ, ಪ್ರತಿಭಾವಂತ. ಆತನ ಕುಂಚದಲ್ಲಿ ಮೂಡಿಬಂದ ಚೇತನ ಈ ಚಿತ್ರ.

05 October 2010

ಗರ್ತಿಕೆರೆ ರಾಘಣ್ಣ ಗಾನ ಸುಧೆ

ಖ್ಯಾತ ಗಾಯಕ, ರಾಜ್ಯ ಪ್ರಶಸ್ತಿ ವಿಜೇತ ಹೊ.ನಾ.ರಾಘವೇಂದ್ರ ರಾವ್ (ಗರ್ತಿಕೆರೆ ರಾಘಣ್ಣ) ಇವರಿಂದ ಗಾನ ಸುಧೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ೦೪.೧೦.೨೦೧೦ ಸೋಮವಾರ ಜರಗಿತು. ಶಾಲಾ ಹಿರಿಯ ವಿದ್ಯಾರ್ಥಿ, ಖ್ಯಾತ ಸಾಹಿತಿ ಎಂ.ವಿ.ಭಟ್ ಮಧುರಂಗಾನ, ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ನಿವೃತ್ತ ಚಿತ್ರಕಲಾ ಅಧ್ಯಾಪಕ ಬಾಲ ಮಧುರಕಾನನ ಗಾಯಕರನ್ನು ಪರಿಚಯಿಸಿ ಸ್ವಾಗತಿಸಿದರು. ಹಿರಿಯ ಅಧ್ಯಾಪಿಕೆ ವಾಣಿ. ಪಿ.ಎಸ್ ವಂದಿಸಿದರು.

04 October 2010

ನಮ್ಮ ತರಾವರಿ ತೋಟ

ಶಾಲಾ ಇಕೋ ಕ್ಲಬ್ ತನ್ನದೇ ಆದ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಇದೇ ಪ್ರಯತ್ನದಲ್ಲಿ ರೂಪುಗೊಂಡ ಗಾರ್ಡನ್ ಇದು. ಇಲ್ಲಿ ಹೂ ಗಿಡಗಳಿವೆ, ತರಕಾರಿ ಕೃಷಿಯಿದೆ. ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವ ಹೇಳುವ ಈ ಪ್ರಯತ್ನ ವಿದ್ಯಾರ್ಥಿಗಳಲ್ಲಿ ಒಂಚೂರು ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಸಹಕಾರಿಯಾಗಲಿ ಎಂಬುದು ಪ್ರಾರ್ಥನೆ.

02 October 2010

ಇಂದು ಗಾಂಧಿ ಜಯಂತಿ



ಇಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಗಳ ಜನ್ಮದಿನ, ಶಾಲೆಯಲ್ಲಿ ಸಂಭ್ರಮದ ಆಚರಣೆ. ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ನಂತರ ಅಧ್ಯಾಪಕ ವಿದ್ಯಾರ್ಥಿಗಳಿಂದ ಶಾಲಾ ಪರಿಸರ ಶುಚೀಕರಣ ಕಾರ್ಯಕ್ರಮವೂ ಜರಗಿತು.