Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

29 November 2010

ಡಾ| ಮಹೇಶ್ - ಅಭಿನಂದನೆಗಳು

ನಿನ್ನೆ ಬದಿಯಡ್ಕ ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ. ನಮ್ಮ ಶಾಲಾ ಹಳೆ ವಿದ್ಯಾರ್ಥಿ ಡಾ ಕೂಳಕ್ಕೋಡ್ಳು ಮಹೇಶ್‍ಗೆ ಅಭಿನಂದನಾ ಸಮಾರಂಭ. ಮನ ತುಂಬಿ ಹರಸಿದ ಸಭಾಸದರ ಮಧ್ಯೆ ಹಿರಿಯ ಸಂಸ್ಕೃತ ತಜ್ಞ ಡಾ ನಿಟಿಲಾಪುರ ಕೃಷ್ಣಮೂರ್ತಿ ಊರ ನಾಗರಿಕರ ಪರವಾಗಿ ಮಹೇಶರನ್ನು ಅಭಿನಂದಿಸಿದರು. ಮಹೇಶ್‍ಗೆ ನಮ್ಮೆಲ್ಲರ ಪ್ರೀತಿಯ ಹಾರೈಕೆಗಳು... ಚಂದದ ಫೋಟೋ ಒದಗಿಸಿದ ಯೇನಂಕೂಡ್ಳು ಕಿಶೋರ್ ಇವರಿಗೂ ಕೃತಜ್ಞತೆಗಳು...

26 November 2010

ಕೂಳಕ್ಕೋಡ್ಳು ಮಹೇಶ್‌ಗೆ ಅಭಿನಂದನೆ - ಬನ್ನ್ರಿ...

ನಮ್ಮ ಶಾಲಾ ಹಳೆವಿದ್ಯಾರ್ಥಿ ಕೂಳಕ್ಕೋಡ್ಳು ಮಹೇಶ್ ಡಾಕ್ಟರೇಟ್ ಗೌರವ ಪಡೆದ ಸುದ್ದಿಯನ್ನು ಈ ಹಿಂದೆಯೇ ಹೇಳಿದ್ದೇವೆ. ಊರವರೆಲ್ಲ ಸೇರಿಕೊಂಡು ಡಾಕೂಳಕ್ಕೋಡ್ಳು ಮಹೇಶ್ ಅಭಿನಂದನಾ ಸಮಿತಿ ರೂಪಿಸಿ, ನಾಡಿದ್ದು ಭಾನುವಾರ ನವೆಂಬರ್ ೨೮ ರಂದು ಅಪರಾಹ್ನ ೩.೩೦ಕ್ಕೆ ಬದಿಯಡ್ಕ ನವಜೀವನ ಪ್ರೌಢಶಾಲಾ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾವೆಲ್ಲರೂ ಬರಬೇಕಾಗಿ ಅಪೇಕ್ಷೆ.

24 November 2010

ವಿದ್ಯಾರಂಗ ಕಲಾ ಸಾಹಿತ್ಯೋತ್ಸವ
“ಸಾಹಿತ್ಯ ಮತ್ತು ಕಲೆ ಶರೀರದ ಮಾನಸಿಕ ನೆಮ್ಮದಿಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುವುದು ವೈಜ್ಞಾನಿಕ ಸತ್ಯ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಚಿಗುರುವ ಸಾಹಿತ್ಯದ ಮೊಳಕೆ ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರಂಗ ಕಲಾ ಸಾಹಿತ್ಯವೇದಿಕೆಯ ಪ್ರಯತ್ನ ಶ್ಲಾಘನೀಯ” ಎಂದು ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯಪಟ್ಟರು. ಅವರು ನಿನ್ನೆ ಬೆಳಗ್ಗೆ ನಮ್ಮ ಶಾಲೆಗಳಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯೋತ್ಸವ - ೨೦೧೦ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಧ್ವಜಾರೋಹಣ ನೆರವೇರಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಸೌಮ್ಯಾ ಮಹೇಶ್, ಗಂಗಾಧರ ಗೋಳಿಯಡ್ಕ, ಮಂಜುನಾಥ, ಮಹಾಜನ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ, ಕಾರ್ಯಕಾರೀ ಸಮಿತಿ ಸದಸ್ಯ ಶಂಕರನಾರಾಯಣ ಭಟ್ ದೇವಸ್ಯ ಶುಭಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಿಕ್ಷಕಿ ವಾಣಿ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಬಂದ ೬೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ೧೭ ವೇದಿಕೆಗಳಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಜೋನಿ ಕ್ರಾಸ್ತಾ, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ಅಶೋಕನ್ ಕುಣಿಯೇರಿ, ಕೇರಳ ವ್ಯಾಪಾರೀ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶೀಲಾ ಕೆ.ಎನ್. ಭಟ್ ಬಹುಮಾನ ವಿತರಿಸಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಸ್ವಾಗತಿಸಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉಪಜಿಲ್ಲಾ ಕಾರ್ಯದರ್ಶಿ ಜಯನ್ ಮಾಸ್ತರ್ ವಂದಿಸಿದರು. ಶಿಕ್ಷಕಿ ಶೈಲಜಾ.ಎ ಕಾರ್ಯಕ್ರಮ ನಿರೂಪಿಸಿದರು.

08 November 2010

೨೩ ಕ್ಕೆ ಉಪಜಿಲ್ಲಾ ವಿದ್ಯಾರಂಗ ಕಲೋತ್ಸವ, ಬನ್ನಿ...

ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಲೋತ್ಸವ-೨೦೧೦ ನಮ್ಮ ಶಾಲೆಯಲ್ಲಿ ೨೩.೧೧.೨೦೧೦ ಮಂಗಳವಾರ ಜರಗಲಿರುವುದು. ದಿನಪೂರ್ತಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಗೆಡವಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ.

01 November 2010

ರಾಜ್ಯೋತ್ಸವ ಶುಭಾಶಯಗಳು...

ಇಂದು ಕೇರಳ, ಕರ್ನಾಟಕ ರಾಜ್ಯಗಳಿಗೆ ಹುಟ್ಟಿದ ಹಬ್ಬ. ಈ ಶುಭ ಮುಹೂರ್ತದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾವಧಿ ಪರೀಕ್ಷೆಗಳು ಆರಂಭವಾಗಿವೆ. ಎಲ್ಲರಿಗೂ ಶುಭಾಶಯಗಳು.