Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 February 2009

ಹೊರನಾಡಿನಲ್ಲೊಂದು ಕನ್ನಡದ ಅಂತರಜಾಲ ಶಾಲಾಪತ್ರಿಕೆ

-ಬೇದ್ರೆ ಮಂಜುನಾಥ
ಪ್ರಸಾರ ನಿರ್ವಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ.

ಕನ್ನಡದ ಉದ್ಧಾರದ ಬಗ್ಗೆ ಉದ್ದುದ್ದುದ್ದುದ್ದುದ್ದುದ್ದುದ್ದ...............ಭಾಷಣಗಳನ್ನು ಬಿಗಿಯುವ ಬಹುತೇಕರು ಕನ್ನಡಕ್ಕಾಗಿ ಕೈ ಎತ್ತುವ ಕೆಲಸ ಬಂದಾಗಲೆಲ್ಲಾ ಕೈ ಎತ್ತಿ ಹೋಗಿಬಿಡುತ್ತಾರೆ! ನಿಜವಾಗಿಯೂ ಟೊಂಕಬಿಗಿದು ಕನ್ನಡದ ತೇರನೆಳೆಯುವವರು ಅಲ್ಲಲ್ಲಿ ಎಲೆ ಮರೆಯ ಕಾಯಿಯಾಗಿ ಸೇವಾ ಕೈಂಕರ್ಯ ನಡೆಸುತ್ತಾ, ಹಾರ ತುರಾಯಿಗಳಿಗೆ ಹಾತೊರೆಯದೆ, ತಮ್ಮಷ್ಟಕ್ಕೆ ತಾವೇ ಸಂತೃಪ್ತರಾಗಿರುತ್ತಾರೆ. ಕೇರಳದ ಕಾಸರಗೋಡಿನ ನೀರ್ಚಾಲಿನಲ್ಲಿರುವ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಈ ವರ್ಷ ಇ-ಸಂಭ್ರಮ. ಮಹಾಜನ - ಪುಟಾಣಿಗಳ ಇ-ಪತ್ರಿಕೆ ಮೂಲಕ ಶತಮಾನಗಳಿಂದ ವಿದ್ಯಾದಾನದಲ್ಲಿ ತೊಡಗಿರುವ ಕಾಸರಗೋಡಿನ ಮೂಲೆಯೊಂದರ ಶಾಲೆಗೆ ಜಗತ್ತಿನ ಬ್ಲಾಗ್ ಭೂಪಟದಲ್ಲಿ ಗುರುತಿಸಿಕೊಳ್ಳುವ ಅಪರೂಪದ ಅವಕಾಶ. ಇಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿದ್ಯಾಸಂಸ್ಥೆಯ ಸತತ ಪ್ರೋತ್ಸಾಹದಿಂದ ಅಧ್ಯಾಪಕ ರವಿಶಂಕರ್ ದೊಡ್ಡಮಾಣಿಯವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಪರಿಶ್ರಮಕ್ಕೆ ಐದು ಕೋಟಿ ಕನ್ನಡಿಗರ ಅಭಿನಂದನೆಗಳು.

ಕರ್ನಾಟಕದಲ್ಲಿ ನಿಮ್ಮ ಶಾಲೆ, ಕಾಲೇಜು, ಯುವಕ ಸಂಘಗಳಲ್ಲಿ - ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಆರಂಭಿಸಿ ಅಭಿಯಾನ ಸಣ್ಣ ಪ್ರಮಾಣದಲ್ಲಿ ನಡೆದಿದೆ. ಯಾವುದೇ ಖರ್ಚಿಲ್ಲದೇ, ಶಾಲೆ/ಕಾಲೇಜಿನಲ್ಲಿರುವ ಕಛೇರಿಯ ಕಂಪ್ಯೂಟರ್, ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್‌ನೆಟ್ ಸೌಲಭ್ಯ ಬಳಸಿಕೊಂಡು ಇಲೆಕ್ಟ್ರಾನಿಕ್ ಮ್ಯಾಗಜಿನ್ ಆರಂಭಿಸಬಹುದು. ಸಾಮಾನ್ಯವಾಗಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಾರ್ಷಿಕ ಸಂಚಿಕೆಗಾಗಿ ಸಿದ್ಧಪಡಿಸಿಕೊಂಡ ಲೇಖನಗಳನ್ನು ನಿಮ್ಮದೇ ಬ್ಲಾಗ್‌ನಲ್ಲಿ ಪ್ರಕಟಿಸಬಹುದು. ಸಂಘದ ಸಮಾರೋಪ ಸಮಾರಂಭದಲ್ಲಿ ಒಪ್ಪಿಸಲು ಸಿದ್ಧಪಡಿಸಿರುವ ಶಾಲೆ/ಕಾಲೇಜಿನ ವಾರ್ಷಿಕ ವರದಿಯನ್ನು ಕೂಡ ಇದರಲ್ಲಿ ಅಳವಡಿಸಿ, ಫೋಟೋಗಳನ್ನು ಜೋಡಿಸಬಹುದು. ಸಂಘದ ಚಟುವಟಿಕೆಗಳನ್ನು ಹಾಗೆಯೇ ಶಾಲೆಯ ಫಲಿತಾಂಶವನ್ನು ಕೂಡ ಇಲ್ಲಿಯೇ ಪ್ರಕಟಿಸಬಹುದು. ಅಂಕಪಟ್ಟಿಗಳನ್ನೂ ಅಳವಡಿಸಬಹುದು. ಅತಿ ಹೆಚ್ಚು ಅಂಕಗಳಿಸಿದವರ ಫೋಟೋಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಫೋಟೋ ಸಹಿತ ವರದಿ, ಶಾಲೆಗೆ ಅಥವಾ ಸಂಘಕ್ಕೆ ದೊರೆತಿರುವ ಪ್ರಶಸ್ತಿ ಪುರಸ್ಕಾರಗಳ ಕುರಿತ ಮಾಹಿತಿ ಇತ್ಯಾದಿಗಳನ್ನು ಕೂಡ ಪ್ರಕಟಿಸಬಹುದು.

1 comment:

 1. ಆತ್ಮೀಯ ದೊಡ್ಡಮಾಣಿಯವರಿಗೆ,
  ನಮಸ್ಕಾರಗಳು. ನಾನು ನಿಮ್ಮ ಬ್ಲಾಗ್ ನೋಡಿದ ಅರ್ಧಗಂಟೆಯೊಳಗೇ ಒಂದು ಪುಟ್ಟ ಲೇಖನ ಹೊಸೆಯಲು ಸಾಧ್ಯವಾಗಿದ್ದು ಮತ್ತು ಅದಕ್ಕೆ ಕಾರಣವಾದ ನಿಮ್ಮ ಪರಿಶ್ರಮ, ಎಲ್ಲಕ್ಕೂ ಥ್ಯಾಂಕ್ಸ್. ನಾನು ಕಳಿಸಿದ್ದನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿ ಬೆನ್ನು ತಟ್ಟಿದ್ದೀರಿ. ಅದಕ್ಕೂ ಥ್ಯಾಂಕ್ಸ್. ತಮ್ಮ ಹೆಸರನ್ನು ತಪ್ಪಾಗಿ ಓದಿದೆ. ಕ್ಷಮಿಸಿರಿ. ಸರಿಪಡಿಸಿ ಕಳಿಸುತ್ತೇನೆ.
  ನಿಮ್ಮ ಬ್ಲಾಗ್ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ.
  ಶುಭಾಶಯಗಳೊಂದಿಗೆ,
  ತಮ್ಮವ,
  ಬೇದ್ರೆ ಮಂಜುನಾಥ

  ReplyDelete