Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

21 December 2013

“ಶತಮಾನೋತ್ಸವದ ಜೊತೆ ನೂರು ಶೇಕಡಾ ಫಲಿತಾಂಶ ಬರಲಿ: ಐ.ಸತ್ಯನಾರಾಯಣ ಭಟ್”


“ಸಂಸ್ಕೃತ ವಿದ್ವಾಂಸರನ್ನು, ಸಜ್ಜನರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಈ ಮಹಾಜನ ಸಂಸ್ಥೆಯ ಹಳೆ ವಿದ್ಯಾರ್ಥಿ ನಾನು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಗ್ರಾಮೀಣ ಪ್ರದೇಶದ ಪ್ರಗತಿಯಲ್ಲಿ ಮಹಾಜನ ವಿದ್ಯಾಸಂಸ್ಥೆಗಳ ಸೇವೆ ಗಣನೀಯವಾದುದು. ಸಂಸ್ಕೃತದ ಹಿನ್ನೆಲೆಯಲ್ಲಿ ಬೆಳೆದು ಬಂದ ಈ ಶಾಲೆ ಪ್ರಸಕ್ತ ತಂತ್ರಜ್ಞಾನವನ್ನೂ ಚೆನ್ನಾಗಿ ಅಳವಡಿಸಿಕೊಂಡು ಜನಪ್ರೀತಿ ಗಳಿಸುತ್ತಿದೆ. ಅದಕ್ಕೆ ನಿದರ್ಶನವಾಗಿ ಅತ್ಯಂತ ಶೀಘ್ರದಲ್ಲಿ ಶಾಲೆಯ ಶತಮಾನೋತ್ಸವ ಕಟ್ಟಡ ತಲೆ ಎತ್ತಿದೆ. ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ನೂರು ಶೇಕಡಾ ಫಲಿತಾಂಶವನ್ನು ಗಳಿಸಿ ಶಾಲೆಗೂ, ನಾಡಿಗೂ ಹೆಮ್ಮೆ ತರಲಿ ಎಂದು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಐ.ಸತ್ಯನಾರಾಯಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು 21.12.2013 ಶನಿವಾರ ಸಾಯಂಕಾಲ ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ಶೈಕ್ಷಣಿಕ ಸಂಗಮ - ವರ್ಧಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶತಮಾನೋತ್ಸವದ ಅಂಗವಾಗಿ ಹೊರತಂದ ‘ಶತಮಾನ ಪ್ರಭಾ’ ಸ್ಮರಣ ಸಂಚಿಕೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬಿಡುಗಡೆಗೊಳಿಸಿದರು. ಶಾಲಾ ವಿದ್ಯಾರ್ಥಿನಿ ವಿನಯಾ. ಕೆ ಬರೆದ ಕವನ ಸಂಕಲನ ‘ನನಗೂ ಎರಡು ರೆಕ್ಕೆಗಳಿದ್ದರೆ’ಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಬಿಡುಗಡೆಗೊಳಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಹೇಶ್ ವಳಕ್ಕುಂಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ.ಕೆ, ಕಿರಿಯ ಪ್ರಾಥಮಿಕ ಶಾಲಾ ಮಾತೃಸಂಘದ ಅಧ್ಯಕ್ಷೆ ಅನ್ನಪೂರ್ಣ ಕುಳಮರ್ವ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನಡೆಸಲಾದ ವಿವಿಧ ಕಲೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾಲಾ ಶಿಕ್ಷಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.
No comments:

Post a Comment