Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

28 November 2013

ಶ್ರೀಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ಕೊಡುಗೆ


“ಸಮಾಜದ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಕ್ಷೇತ್ರ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ರೂಪಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡಿನಲ್ಲೂ ಸಂಘಟನೆಯನ್ನು ರೂಪಿಸಿ ಸಂಸ್ಥೆಯು ಜನಪ್ರೀತಿಯನ್ನು ಗಳಿಸುತ್ತಿದೆ. ಈ ನಿಟ್ಟಿನಲ್ಲಿ ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಕೈಜೋಡಿಸುತ್ತಿದೆ. ಆ ಮೂಲಕ ಧರ್ಮಸ್ಥಳದ ಖಾವಂದರಾದ ಸನ್ಮಾನ್ಯ ವೀರೇಂದ್ರ ಹೆಗ್ಗಡೆಯವರು ಈ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ತಮ್ಮ ಅಚ್ಚಳಿಯದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಡಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಶತಮಾನೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತಿರುವ ರೂಪಾಯಿ ಐದು ಲಕ್ಷ ದೇಣಿಗೆಯನ್ನು ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊ| ಕಾನತ್ತಿಲ ಮಹಾಲಿಂಗ ಭಟ್ಟರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್, ಪಡಿಯಡ್ಪು ಶಂಕರ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಮಂಜುನಾಥ ಮಾನ್ಯ ಮತ್ತು ಶ್ರೀಮತಿ ಸೌಮ್ಯಾ ಮಹೇಶ್ ನಿಡುಗಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಶಾಲಾ ಶಿಕ್ಷಕ ಎಚ್. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment