Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 December 2009

ಕಾಸರಗೋಡು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ, ಬನ್ನಿ..

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ೨೦೧೦ನೇ ಜನವರಿ ೯ ಮತ್ತು ೧೦ರಂದು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಸಲು ತೀರ್ಮಾನಿಸಿದ್ದು ಅದಕ್ಕಾಗಿ ನಾಡಿನ ಹಿರಿಯ ಖ್ಯಾತ ವಿದ್ವಾಂಸರಾದ ಶ್ರೀ ಖಂಡಿಗೆ ಶಾಮ ಭಟ್ಟರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರೂಪೀಕರಿಸಿ ಕಾರ್ಯಪ್ರವೃತ್ತರಾಗಿರುವ ವಿಚಾರ ಕಾಸರಗೋಡಿನ ಕನ್ನಡಾಭಿಮಾನಿಗಳಿಗೆ ಸಂತಸ ತಂದಿದೆ.
ಕನ್ನಡ ಮಾಧ್ಯಮದ ಬಾಲವಾಡಿಯಿಂದ ಪದವಿ ತನಕದ ವಿದ್ಯಾರ್ಥಿಗಳಿಗಾಗಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ೧೫೦೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಹಿರಿಯ ವಿದ್ವಾಂಸರೂ ಖ್ಯಾತ ಯಕ್ಷಗಾನ ಅರ್ಥಧಾರಿಗಳೂ ನಿವೃತ್ತ ಅಧ್ಯಾಪಕರೂ ಆದ ಶ್ರೀ ಪೆರ್ಲ ಕೃಷ್ಣ ಭಟ್ಟರು ಆಯ್ಕೆಯಾಗಿರುವುದು ತುಂಬ ಸಂತಸದ ವಿಷಯ. ಸಮ್ಮೇಳನದ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿದ್ವಾಂಸ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನಡೆಸಲಿದ್ದು ಹಾಸ್ಯಗೋಷ್ಟಿ, ಕವಿಗೋಷ್ಟಿ, ಭಾಷಾ ಸೌಹಾರ್ದ ಗೋಷ್ಟಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಸಂಪನ್ನವಾಗಲಿದೆ.
ಕಾಸರಗೋಡಿನ ಕನ್ನಡಕ್ಕೆ ಕಂಪು ಇದೆ, ಇಂಪು ಇದೆ, ತನ್ನತನವಿದೆ. ಕರ್ನಾಟಕದ ಗಣ್ಯವ್ಯಕ್ತಿಗಳೆಲ್ಲ ಕಾಸರಗೋಡನ್ನು ಸಂದರ್ಶಿಸಿದಾಗಲೆಲ್ಲ ಇಲ್ಲಿಯ ಕನ್ನಡ ಚಟುವಟಿಕೆಗಳ ಕುರಿತು ಭಾಷಾ ಶುದ್ಧತೆಯ ಕುರಿತು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಅದು ಈ ನೆಲದ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಶ್ರೀ ಕ್ಷೇತ್ರ ಅನಂತಪುರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭೇಟಿ ಇತ್ತಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ನೆಲದ ಕನ್ನಡ ಭಾಷೆಯ ಅಚ್ಚತನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವುದು ಖಂಡಿತವಾಗಿಯೂ ಕನ್ನಡಿಗರಿಗೆ ಪ್ರೋತ್ಸಾಹಕರ. ಕಾಸರಗೋಡಿನಲ್ಲಿ ಕನ್ನಡ ನಶಿಸಿಹೋಗುತ್ತಿದೆ ಎನ್ನುವಂತಹ ಕೂಗು ಕೇಳಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಎಲ್ಲ ಸಹೃದಯರೂ ಸಹರಿಸಬೇಕಾಗಿ ಕೇಳಿಕೊಳ್ಳುತ್ತೇವೆ.

No comments:

Post a Comment