ಬೇಸಗೆ ಪರೀಕ್ಷೆಗಳು ಇಂದು ಕೊನೆಗೊಳ್ಳುತ್ತವೆ. ಇನ್ನು ಅಧ್ಯಾಪಕ ಮಿತ್ರರಿಗೆ ‘ಉತ್ತರಕಾಂಡ’ ಆರಂಭವಾಗುತ್ತದೆ. ನಡುವೆಯೇ ಅಧ್ಯಾಪಕರಿಂದ ‘ಸೋಶಿಯೋ ಇಕೊನೊಮಿಕ್ ಸರ್ವೇ’ ಮತ್ತು ಜಾತಿವಾರು ಜನಗಣತಿ ಆರಂಭವಾಗಲಿದೆ. ಕಾಸರಗೋಡಿನ ಕನ್ನಡ ನೆಲದಲ್ಲಿ ಕನ್ನಡದ ಹೊಸ ಪೀಳಿಗೆಯನ್ನು ಹುಡುಕುತ್ತಾ ಮನೆ - ಮನೆ ಭೇಟಿ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಹೊಸ ಅನುವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅಂತಹ ಒಂದು ಪ್ರಯತ್ನವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ದರ್ಜಿಯನ್ನು ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡ ಸಂದರ್ಭದ ಫೋಟೋ ಒಂದನ್ನು ನಮ್ಮ ಕಡತದಿಂದ ಆರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ. ವಸಂತ ಕಾಲ ನಮ್ಮ ಮುಂದೆ ಇದೆ... ಎಲ್ಲ ಚಿಂತೆ - ಚಿಂತನೆಗಳ ನಡುವೆ ನಮ್ಮ ಶುಭಾಶಯಗಳನ್ನೂ ಸ್ವೀಕರಿಸಿ...
ನಮ್ಮ ಶಾಲೆಯ ಪಡು ಸಭಾಂಗಣದಲ್ಲಿ ಇಂದು ಒಂದು ಆತ್ಮೀಯ ಕಾರ್ಯಕ್ರಮ. ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರ ಪ್ರಾಯೋಜಕತ್ವದಲ್ಲಿ ನಂದನ ಸಂವತ್ಸರದ ಆರಂಭದ ಈ ಸುದಿನದಂದು ಗಣಪತಿ ಪೂಜೆ ನಡೆಯಿತು. ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖಾ ಪ್ರಬಂಧಕ ಶಿವಕುಮಾರ್ ದೀಪ ಬೆಳಗಿಸಿ ‘ಮಹಾಜನ’ ಸಂಸ್ಥೆಯ ಶತಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ೨೦೧೧-೧೨ನೇ ಸಾಲಿನಲ್ಲಿ ನೀಡುವ ‘ರಾಷ್ಟ್ರಪತಿ ಸ್ಕೌಟ್’ ಪ್ರಶಸ್ತಿಗೆ ನಮ್ಮ ಶಾಲೆಯ ಮೂರು ಮಂದಿ ಸ್ಕೌಟ್ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ಹತ್ತನೇ ತರಗತಿಯ ಗುರುವಿನಯಕೃಷ್ಣ. ಕೆ.ಆರ್ ( ಕಡವ ರಾಮಚಂದ್ರ ಭಟ್ ಮತ್ತು ನಮ್ಮ ಶಾಲಾ ಹಿಂದಿ ಶಿಕ್ಷಕಿ ಸಿ.ಎಚ್.ಸರಸ್ವತಿ ಇವರ ಪುತ್ರ), ನಂದನ.ಎ ( ಆರೋಳಿ ಕೃಷ್ಣ ಭಟ್ ಮತ್ತು ಮೂಕಾಂಬಿಕಾ ಇವರ ಪುತ್ರ) ಹಾಗೂ ಪೂರ್ವ ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ( ನಮ್ಮ ಶಾಲಾ ಶಿಕ್ಷಕ ಎಚ್.ಸೂರ್ಯನಾರಾಯಣ ಮತ್ತು ಶ್ಯಾಮಲಾ ಇವರ ಪುತ್ರ). ಇವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು...