ನಿನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ. ಪ್ರತೀ ವರ್ಷವೂ ಉಪಜಿಲ್ಲಾ ಮಟ್ಟದಲ್ಲಿ ನಡೆಯುವ ವೃತ್ತಿ ಪರಿಚಯ ಮೇಳಕ್ಕೆ ಪೂರ್ವಭಾವಿಯಾಗಿ ನಮ್ಮ ಶಾಲಾ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ನಿನ್ನೆ ವೃತ್ತಿಪರಿಚಯ ಮೇಳವನ್ನು ಆಯೋಜಿಸಲಾಯಿತು. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಇವರ ಮುಂದಾಳ್ತನದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದ ಒಂದು ನೋಟವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸ್ಪರ್ಧೆಗಳು ವಿವಿಧ ವಿಭಾಗಳಲ್ಲಿ ನಡೆದಿದ್ದು ವಿಜೇತ ವಿದ್ಯಾರ್ಥಿಗಳು ಮುಂದಿನ ತಿಂಗಳು ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಶುಭಾಶಯಗಳು...
27 September 2012
22 September 2012
ಸಾಹಿತ್ಯ ಶಿಬಿರ 2012
ನಮ್ಮ ಶಾಲೆಯಲ್ಲಿ 21.09.2012 ಶುಕ್ರವಾರ ಜರಗಿದ ‘ಸಾಹಿತ್ಯ ಶಿಬಿರ’ದಲ್ಲಿ ಸಾಹಿತಿ ವಿ.ಬಿ.ಕುಳಮರ್ವ ಕಥಾ ರಚನೆ ಮತ್ತು ಸಾಹಿತಿ ಬಾಲ ಮಧುರಕಾನನ ಕವನ ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಅರವಿಂದ ಎಸ್.ವಿ ಸ್ವಾಗತಿಸಿ ಸುಷ್ಮಾ.ಕೆ ವಂದಿಸಿದರು. ರಮ್ಯಶ್ರೀ. ಎ ಪ್ರಾರ್ಥಿಸಿದಳು. ಕ್ಷಮಾದೇವಿ.ಕೆ ಕಾರ್ಯಕ್ರಮ ನಿರೂಪಿಸಿದಳು.
ಚೈತನ್ಯ ಸಂರಕ್ಷಣೆ - ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ
ಕನ್ನಡ, ಮಲಯಾಳ ಮತ್ತು ಆಂಗ್ಲ ಭಾಷಾ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ಸ್ಪರ್ಧೆ ನಡೆಸುವ ಕ್ರಮ ತೀರಾ ಸರಿಯಲ್ಲ. ಯಾಕೆಂದರೆ ವಿವಿಧ ಭಾಷೆಗಳನ್ನು, ಶೈಲಿಯನ್ನು ಒಂದೇ ತಕ್ಕ್ಡಿಯಲ್ಲಿ ಇರಿಸಿ ತೂಗುವುದು ಸುಲಭವಲ್ಲ, ಹಾಗೂ ಅನೇಕ ಸಂದರ್ಭದಲ್ಲಿ ಬಹುಮಾನ ಮಲಯಾಳಿ ಪ್ರಾಬಲ್ಯಕ್ಕೆ ಒಳಗಾಗುತ್ತದೆ. ಈ ರೀತಿಯ ಪ್ರಸಂಗಗಳು ನಮ್ಮ ಕಾಸರಗೋಡಿನಲ್ಲಿ ಪದೇ ಪದೇ ಎದುರಾಗುತ್ತದೆ. ಆದರೆ ಮೊನ್ನೆ 20.09.2012 ಗುರುವಾರದಂದು ಬಹುಮಾನ ನಮ್ಮ ಕನ್ನಡದ ಪಾಲಿಗೆ ಒಲಿಯಿತು. ಕೇರಳ ಸರಕಾರದ ಕ್ರೀಡಾ ಮತ್ತು ಯುವಜನ ಖಾತೆಯು ‘ಚೈತನ್ಯ ಸಂರಕ್ಷಣೆ’ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಳ್ಳೇರಿಯಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಕ್ಷಮಾದೇವಿ.ಕೆ ಕನ್ನಡದಲ್ಲಿ ಮಾತನಾಡಿ ಪ್ರಥಮ ಬಹುಮಾನ ‘ಸೈಕಲ್’ ಪಡೆದುಕೊಂಡಳು. ಬೇಳ ಕುಮಾರಮಂಗಲ ನಿವಾಸಿ ಬಾಲಕೃಷ್ಣಮೂರ್ತಿ ಮತ್ತು ಸತ್ಯಶೀಲಾ ಇವರ ಪುತ್ರಿಯಾದ ಈಕೆಗೆ ನಮ್ಮ ಶುಭ ಹಾರೈಕೆಗಳು.
14 September 2012
ಏಣಿಯರ್ಪು ಕಡೆಗೆ ಪ್ರಯಾಣ...

06 September 2012
ಶಿಕ್ಷಕ ದಿನಾಚರಣೆ
ವಿದ್ಯಾರ್ಥಿಗಳ ಕಾಲುವಾರ್ಷಿಕ ಪರೀಕ್ಷೆ ಇನ್ನೂ ಮುಗಿದಿಲ್ಲ. ಮುಂದಿನ ಸೋಮವಾರ ಮತ್ತು ಮಂಗಳವಾರ ಮತ್ತೆ ಪರೀಕ್ಷೆಗಳಿವೆ. ಈ ಒತ್ತಡಗಳ ನಡುವೆ ನಾವು ಸರಳವಾಗಿ ಶಿಕ್ಷಕರ ದಿನವನ್ನು ಆಚರಿಸಿಕೊಂಡೆವು. ಒಂಬತ್ತನೆಯ ತರಗತಿ ಹುಡುಗ ಆದರ್ಶ ಪೆನ್ಸಿಲ್ ಚಿತ್ರಗಳನ್ನು ಬಿಡಿಸುವುದರಲ್ಲಿ ಚೆನ್ನಾಗಿ ಪಳಗುತ್ತಿದ್ದಾನೆ. ಅವನು ಬಿಡಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ರೇಖಾಚಿತ್ರವನ್ನು ಒಂಬತ್ತನೆಯ ತರಗತಿ ಹುಡುಗರು ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅವರಿಗೆ ಸಮರ್ಪಿಸಿದರು.
05 September 2012
ಮಕ್ಕಳ ಧ್ವನಿ - 2012
ಮೂಡುಬಿದಿರೆ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಮೊನ್ನೆ ಸೆಪ್ಟೆಂಬರ್ 1 ಮತ್ತು 2 ನೇ ತಾರೀಕಿನಂದು ಜರಗಿದ ಉಡುಪಿ - ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಹತ್ತೊಂಬತ್ತನೆಯ ‘ಮಕ್ಕಳ ಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು ರಸಪ್ರಶ್ನೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.
04 September 2012
Subscribe to:
Posts (Atom)