13 August 2012
10 August 2012
“ಶ್ರೀಕೃಷ್ಣ ಆತ್ಮೀಯ ದೇವರು": ಕೆ.ಶಿವಕುಮಾರ್
“ಶ್ರೀಕೃಷ್ಣನ ಬಾಲಲೀಲೆಗಳು ಎಂದೆಂದಿಗೂ ಚೇತೋಹಾರಿ. ಧರ್ಮ ಸಂಸ್ಥಾಪನೆಗಾಗಿ ಅವನು ಕೈಗೊಂಡ ಕಾರ್ಯಗಳ ಸಮಾಜಕ್ಕೆ ಆದರ್ಶ. ಅವನ ಪಥ ಅನುಕರಣೀಯ, ಆದರಿಂದಲೇ ಆತ ಎಲ್ಲರಿಗೂ ಆತ್ಮೀಯ ದೇವರು ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ಅವರು ೦೯.೦೮.೨೦೧೨ ಗುರುವಾರ ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಸುಶೀಲಾ.ಎಸ್ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳಾದ ಹೇಮಶ್ರೀ ಕಾಕುಂಜೆ ಮತ್ತು ಶ್ರೀವಾಣಿ ಕಾಕುಂಜೆ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ಜರಗಿತು. ವಯಲಿನ್‌ನಲ್ಲಿ ಪ್ರಭಾಕರ ಕುಂಜಾರು ಮತ್ತು ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೇಕೆರೆ ಸಹಕರಿಸಿದರು.
11 July 2012
29 June 2012
ದಿ|ಖಂಡಿಗೆ ಶಾಮ ಭಟ್ಟರ ತೈಲ ಚಿತ್ರ ಅನಾವರಣ
“ದುಡ್ಡು ಬಟ್ಟೆಯಿಂದ ದೊಡ್ಡವರಾದವರಿಲ್ಲ, ದೊಡ್ಡ ಮನಸ್ಸಿನಿಂದ ದೊಡ್ಡವರಾದವರೇ ಎಲ್ಲ. ಲೋಕಕ್ಕೆ ಆದರ್ಶರೆನಿಸಿಕೊಂಡವರೆಲ್ಲ ಈ ತತ್ವವನ್ನು ಅನುಸರಿಸಿಕೊಂಡವರು. ‘ಮಹಾಜನ’ ಎಂಬ ಪದಕ್ಕೆ ಅನ್ವರ್ಥವಾಗಿ ಬೆಳೆದ ಖಂಡಿಗೆ ಶಾಮ ಭಟ್ಟರ ರೂಪವನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಈ ತೈಲ ವರ್ಣ ಚಿತ್ರ ಸಹಕಾರಿ. ಆ ಚಿತ್ರವೇ ಮುಂದಿನ ಪೀಳಿಗೆಗೆ ದಾರಿ ದೀಪವಾಗಬಲ್ಲದು" ಎಂದು ನಿವೃತ್ತ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರಗಿದ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ದಿ| ಖಂಡಿಗೆ ಶಾಮ ಭಟ್ಟರ ತೈಲ ವರ್ಣ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಿದ್ಯಾರ್ಥಿಗಳಾದ ಬಳ್ಳಪದವು ಶಂಕರನಾರಾಯಣ ಭಟ್, ಕುಂಜಾರು ಸುಬ್ರಾಯ ಭಟ್, ಚಿತ್ರ ಕಲಾವಿದ ರವಿ ಪಿಲಿಕ್ಕೋಡ್, ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಅರ್ಪಿಸಿದರು.

ಚಿತ್ರ ಕಲಾವಿದ ರವಿ ಪಿಲಿಕ್ಕೋಡ್ ಅವರನ್ನು ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ ಶಾಲು ಹೊದೆಸಿ ಫಲ ಸಮರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಗೋವಿಂದ ಶರ್ಮ ಕೋರಿಕ್ಕಾರು ಕಾರ್ಯಕ್ರಮ ನಿರೂಪಿಸಿದರು.
26 June 2012
11 June 2012
05 June 2012
04 June 2012
ಶಾಲಾ ಪ್ರವೇಶೋತ್ಸವ 2012
ಬೇಸಿಗೆ ರಜಾ ಕಾಲ ಕಳೆದಿದೆ, ಮುಂಗಾರು ಕೇರಳಕ್ಕೆ ಕಾಲಿಡುವ ಹೊತ್ತಿನಲ್ಲೇ ಹೊಸ ಅಧ್ಯಯನ ವರ್ಷ ಆರಂಭವಾಗಿದೆ. ಹೊಸ ಹೊಸ ಕನಸನ್ನು ಕಟ್ಟಿಕೊಂಡು ಶಾಲೆಯ ಕಡೆಗೆ ಬಂದ ಚಿಣ್ಣರನ್ನು ಸ್ವಾಗತಿಸುವ ಕಾರ್ಯವೂ ಇಂದು ನಡೆದಿದೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಸಿಹಿತಿಂಡಿ ವಿತರಿಸಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಆದರದಿಂದ ಬರಮಾಡಿಕೊಂಡಿದ್ದಾರೆ. ಈಗ ವಿದ್ಯಾರ್ಥಿಗಳ ಕನಸುಗಳು ಗರಿಗೆದರುತ್ತಿವೆ...
02 May 2012
27 April 2012
ಎಸ್ ಎಸ್ ಎಲ್ ಸಿ ಫಲಿತಾಂಶ ಬಂತು...
98% ಫಲಿತಾಂಶ ದಾಖಲಿಸಿದ್ದೇವೆ. ಈ ಬಾರಿಯ ಕೇರಳ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆ ಬರೆದ ೧೫೮ ಮಂದಿಯಲ್ಲಿ ೧೫೫ ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಲು ಸಂತೋಷಪಡುತ್ತಿದ್ದೇವೆ. ಕೇರಳ ರಾಜ್ಯ ಮಟ್ಟದ ಸರಾಸರಿ 93% ಆಗಿದ್ದು, ಅದಕ್ಕಿಂತ ಹೆಚ್ಚು ಫಲಿತಾಂಶ ನಮ್ಮ ಶಾಲೆಗೆ ಬಂದಿರುವುದು ಸಂತಸದ ಇನ್ನೊಂದು ವಿಷಯ. ಶಾಂತಿ.ಕೆ, ರಂಜನಾ.ಕೆ, ರಂಜಿತಾ.ಬಿ, ಗುರುವಿನಯ ಕೃಷ್ಣ ಕೆ.ಆರ್, ನಂದನ.ಎ, ಶಶಾಂಕ ಶರ್ಮ. ಎಸ್ ಈ ಆರು ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ+ ಗ್ರೇಡ್ ಪಡೆದು ಗೆಲುವಿನ ಕಿರೀಟಕ್ಕೆ ಗರಿಯನ್ನು ಸೇರಿಸಿದ್ದಾರೆ. ಶುಭಾಶಯಗಳು...
24 April 2012
ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಮುಂದಿನ ವಾರ
ಮೌಲ್ಯಮಾಪನ ಮೊನ್ನೆ ಇಪ್ಪತ್ತರಂದು ಕೊನೆಗೊಂಡಿದೆ. ಮುಂದಿನ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಿಸಿಲಿನ ಬೇಗೆಯ ನಡುವೆ, ಕಾಯುವಿಕೆ ವಿದ್ಯಾರ್ಥಿಗಳಿಗೂ, ನಮಗೂ ಅವರ್ಣನೀಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ಮುಂದಿನ ಕಲಿಯುವಿಕೆಯ ದಾರಿಯನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು...
30 March 2012
ನಾಳೆಯಿಂದ ರಜೆ...
ಬೇಸಗೆ ಪರೀಕ್ಷೆಗಳು ಇಂದು ಕೊನೆಗೊಳ್ಳುತ್ತವೆ. ಇನ್ನು ಅಧ್ಯಾಪಕ ಮಿತ್ರರಿಗೆ ‘ಉತ್ತರಕಾಂಡ’ ಆರಂಭವಾಗುತ್ತದೆ. ನಡುವೆಯೇ ಅಧ್ಯಾಪಕರಿಂದ ‘ಸೋಶಿಯೋ ಇಕೊನೊಮಿಕ್ ಸರ್ವೇ’ ಮತ್ತು ಜಾತಿವಾರು ಜನಗಣತಿ ಆರಂಭವಾಗಲಿದೆ. ಕಾಸರಗೋಡಿನ ಕನ್ನಡ ನೆಲದಲ್ಲಿ ಕನ್ನಡದ ಹೊಸ ಪೀಳಿಗೆಯನ್ನು ಹುಡುಕುತ್ತಾ ಮನೆ - ಮನೆ ಭೇಟಿ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಹೊಸ ಅನುವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅಂತಹ ಒಂದು ಪ್ರಯತ್ನವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ದರ್ಜಿಯನ್ನು ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡ ಸಂದರ್ಭದ ಫೋಟೋ ಒಂದನ್ನು ನಮ್ಮ ಕಡತದಿಂದ ಆರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ.ವಸಂತ ಕಾಲ ನಮ್ಮ ಮುಂದೆ ಇದೆ...
ಎಲ್ಲ ಚಿಂತೆ - ಚಿಂತನೆಗಳ ನಡುವೆ ನಮ್ಮ ಶುಭಾಶಯಗಳನ್ನೂ ಸ್ವೀಕರಿಸಿ...
23 March 2012
ಚಾಂದ್ರಮಾನ ಯುಗಾದಿಯ ಶುಭಾಶಯಗಳು...

ನಮ್ಮ ಶಾಲೆಯ ಪಡು ಸಭಾಂಗಣದಲ್ಲಿ ಇಂದು ಒಂದು ಆತ್ಮೀಯ ಕಾರ್ಯಕ್ರಮ. ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರ ಪ್ರಾಯೋಜಕತ್ವದಲ್ಲಿ ನಂದನ ಸಂವತ್ಸರದ ಆರಂಭದ ಈ ಸುದಿನದಂದು ಗಣಪತಿ ಪೂಜೆ ನಡೆಯಿತು. ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖಾ ಪ್ರಬಂಧಕ ಶಿವಕುಮಾರ್ ದೀಪ ಬೆಳಗಿಸಿ ‘ಮಹಾಜನ’ ಸಂಸ್ಥೆಯ ಶತಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು.
05 March 2012
ರಾಷ್ಟ್ರಪತಿ ಸ್ಕೌಟ್ ಪ್ರಶಸ್ತಿ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ೨೦೧೧-೧೨ನೇ ಸಾಲಿನಲ್ಲಿ ನೀಡುವ ‘ರಾಷ್ಟ್ರಪತಿ ಸ್ಕೌಟ್’ ಪ್ರಶಸ್ತಿಗೆ ನಮ್ಮ ಶಾಲೆಯ ಮೂರು ಮಂದಿ ಸ್ಕೌಟ್ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ಹತ್ತನೇ ತರಗತಿಯ ಗುರುವಿನಯಕೃಷ್ಣ. ಕೆ.ಆರ್ ( ಕಡವ ರಾಮಚಂದ್ರ ಭಟ್ ಮತ್ತು ನಮ್ಮ ಶಾಲಾ ಹಿಂದಿ ಶಿಕ್ಷಕಿ ಸಿ.ಎಚ್.ಸರಸ್ವತಿ ಇವರ ಪುತ್ರ), ನಂದನ.ಎ ( ಆರೋಳಿ ಕೃಷ್ಣ ಭಟ್ ಮತ್ತು ಮೂಕಾಂಬಿಕಾ ಇವರ ಪುತ್ರ) ಹಾಗೂ ಪೂರ್ವ ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ( ನಮ್ಮ ಶಾಲಾ ಶಿಕ್ಷಕ ಎಚ್.ಸೂರ್ಯನಾರಾಯಣ ಮತ್ತು ಶ್ಯಾಮಲಾ ಇವರ ಪುತ್ರ). ಇವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು...
07 February 2012
ಶಾಲಾ ವಾರ್ಷಿಕೋತ್ಸವ
“ಜೀವನದಲ್ಲಿ ನಿಷ್ಟೆಯಿಂದ,ಕಷ್ಟ ಪಟ್ಟು ನಾವು ಆದರ್ಶಪ್ರಾಯರಾಗಿ ಬೆಳೆಯಬೇಕು. ಸತ್ಯವನ್ನೇ ಉಸಿರಾಗಿಸಿಕೊಂಡು ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮರ್ಪಕ ವಿದ್ಯಾಭ್ಯಾಸವನ್ನು ಪಡೆಯುವುದು ವಿದ್ಯಾರ್ಥಿಗಳ ಹಕ್ಕು, ಅದನ್ನು ಒದಗಿಸುವುದು ಹಿರಿಯರ ಕರ್ತವ್ಯ. ಅಂತಹ ಅನುಪಮ ಸೇವೆ ಸಲ್ಲಿಸಿದ ನಾಡಿನ ಈ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಕೇರಳ ಸರಕಾರದ ಶಿಕ್ಷಣ ಇಲಾಖೆಯಿಂದ ಕಳೆದ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ಗೋಪಾಲ ಭಟ್ ಚುಕ್ಕಿನಡ್ಕ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಶುಭಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನ ವಿತರಿಸಿದರು. ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಚೇತನ ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಿತು.
06 February 2012
ನಾಳೆ ವಾರ್ಷಿಕೋತ್ಸವ, ಬನ್ನಿ...
ಈ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಔಪಚಾರಿಕ ಕಾರ್ಯಕ್ರಮಗಳನ್ನು ಮಾತ್ರ ಏರ್ಪಡಿಸಲಾಗಿದೆ. ಆದರ್ಶ ಶಿಕ್ಷಕರಿಗಾಗಿ ಕೇರಳ ಸರಕಾರ ಶಿಕ್ಷಣ ಇಲಾಖೆ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕನ್ನಡಿಗ ಶ್ರೀ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶಾಮ ಭಟ್ ಬಹುಮಾನಗಳನ್ನು ವಿತರಿಸಲಿದ್ದಾರೆ. ನಿಮಗೆಲ್ಲರಿಗೂ ಇದು ಆತ್ಮೀಯ ಹೇಳಿಕೆ, ಬನ್ನಿ...
03 February 2012
ಸಾಬೂನು ತಯಾರಿ ಪ್ರಾತ್ಯಕ್ಷಿಕೆ
Subscribe to:
Posts (Atom)













